ವಿಚಿತ್ರ ತಿರುವುಗಳ ನಡುವೆ ಕ್ಲೈಮ್ಯಾಕ್ಸ್‌ನತ್ತ ಮಧ್ಯಪ್ರದೇಶ ರಾಜಕಾರಣ
ರಾಷ್ಟ್ರೀಯ

ವಿಚಿತ್ರ ತಿರುವುಗಳ ನಡುವೆ ಕ್ಲೈಮ್ಯಾಕ್ಸ್‌ನತ್ತ ಮಧ್ಯಪ್ರದೇಶ ರಾಜಕಾರಣ

ಸದ್ಯದ ಸ್ಥಿತಿಯಲ್ಲಿ ಸ್ಪೀಕರ್ ತೀರ್ಮಾನದ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದರೂ, ತೆರೆಮರೆಯ ರಾಜಕೀಯ ತಂತ್ರಗಳು, ತಯಾರಿಗಳು ಮಾತ್ರ ಬಿರುಸಿನಿಂದ ಮುಂದುವರಿದಿದೆ! ನೈತಿಕ ರಾಜಕಾರಣ, ಅನೈತಿಕ ನಡೆ, ಸಂವಿಧಾನದ ಕಗ್ಗೊಲೆ, ಪ್ರಜಾಪ್ರಭುತ್ವದ ಮಾರಣಹೋಮದಂತಹ ಟೀಕೆ, ಆತಂಕಗಳ ನಡುವೆ ಆಪರೇಷನ್ ಕಮಲ ಮುಂದುವರಿದಿದೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರದ ಭವಿಷ್ಯ ಡೋಲಾಯಮಾನವಾಗಿರುವ ನಡುವೆಯೇ, ಬುಧವಾರ ಬರೋಬ್ಬರಿ 18 ವರ್ಷಗಳ ಕಾಂಗ್ರೆಸ್ ನಂಟನ್ನು ಕಡಿದುಕೊಂಡಿದ್ದ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಅಧಿಕೃತವಾಗಿ ಬಿಜೆಪಿಗೆ ಸೇರಿದ್ದಾರೆ.

ಆದರೆ, ಅತ್ತ ದೆಹಲಿಯಲ್ಲಿ ಗ್ವಾಲಿಯರ್ ರಾಜಕುಮಾರ ‘ಮೋದಿಯವರ ಕೈಯಲ್ಲಿ ದೇಶದ ಭವಿಷ್ಯ ಸುರಕ್ಷಿತವಾಗಿದೆ’ ಪ್ರಧಾನಿಯವರ ಗುಣಗಾನ ಮಾಡುತ್ತಾ, ಹಸ್ತದ ಗುರುತಿನಿಂದ ಕಮಲದ ಚಿಹ್ನೆಗೆ ‘ಹಸ್ತಾಂತರ’ ಮಾಡುತ್ತಿರುವ ಹೊತ್ತಿಗೇ, ಇತ್ತ ಅವರ ಬೆಂಬಲಿಗರೆಂದು ಬೆಂಗಳೂರಿನ ರೆಸಾರ್ಟ್ ಸೇರಿದ್ದ ಸಚಿವರು ಮತ್ತು ಶಾಸಕರಲ್ಲಿ ಕೆಲವರಿಗೆ ಮರಳಿ ಮನೆಯ ನೆನಪು ಕಾಡತೊಡಗಿದೆ. ಹಾಗಾಗಿ ಅವರು ಬಿಜೆಪಿ ಸೇರುವುದು ಅನುಮಾನಾಸ್ಪದ ಎಂಬ ಸುದ್ದಿಗಳು ಬಂದವು. ಮತ್ತೊಂದು ಕಡೆ, ಭೋಪಾಲ್ ನಲ್ಲಿ ಕಾಂಗ್ರೆಸ್ ಸರ್ಕಾರದ ಪತನದ ತಂತ್ರಗಾರರು ಎನ್ನಲಾದ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಶಾಸಕ ನರೋತ್ತಮ ಮಿಶ್ರಾ ನಡುವೆ ಸಿಎಂ ಕುರ್ಚಿಗಾಗಿ ಬಹಿರಂಗ ಸಮರವೇ ಮಂಗಳವಾರ ಸಂಜೆ ಹೊತ್ತಿಗೆ ಭುಗಿಲೆದ್ದಿತು. ಇಬ್ಬರ ಬೆಂಬಲಿಗ ಶಾಸಕರು ಪರಸ್ಪರರ ಪರ- ವಿರೋಧ ಘೋಷಣೆ ಕೂಗುವ ಮೂಲಕ ಹಾದಿಬೀದಿ ರಂಪ ಮಾಡಿದರು. ಇಡೀ ತಂತ್ರಗಾರಿಕೆ ರೂಪಿಸಿ ಶಾಸಕರ ರಾಜೀನಾಮೆ ಕೊಡಿಸಿ ಸರ್ಕಾರ ಪತನಕ್ಕೆ ಮುಹೂರ್ತ ಇಟ್ಟದ್ದು ತಾವೇ, ಈಗ ಸಿಎಂ ಕುರ್ಚಿಗೆ ಮಾತ್ರ ಮೂರು ಭಾರಿ ಸಿಎಂ ಆಗಿ ಅಧಿಕಾರ ಅನುಭವಿಸಿರುವ ಶಿವರಾಜ್ ಸಿಂಗ್ ಅವರನ್ನೇ ಕೂರಿಸುವುದು ಎಷ್ಟು ಸರಿ ಎಂಬುದು ಮಿಶ್ರಾ ವಾದವಾಗಿದ್ದರೆ, ಚೌಹಾಣ್ ಅವರದ್ದು ಅದಕ್ಕೆ ತದ್ವಿರುದ್ಧವಾಗಿ ಸರ್ಕಾರ ಕೆಡವಲು ತಂತ್ರ ಹೆಣೆದಿದ್ದೇ ತಾವು. ಹಾಗಾಗಿ ಅದರ ಫಲ ತಮಗೇ ಸಿಗಬೇಕು ಎಂಬುದಾಗಿತ್ತು ಎಂದು ವರದಿಗಳು ಹೇಳಿವೆ.

ಭೋಪಾಲ್ ನಲ್ಲಿ ಬಿಜೆಪಿ ನಾಯಕರ ನಡುವಿನ ಕೂಸು ಹುಟ್ಟುವ ಮುನ್ನವೇ ಕುಲಾವಿಗಾಗಿನ ಹೋರಾಟದ ಪರಿಣಾಮ ಬೆಂಗಳೂರಿನ ರೆಸಾರ್ಟಿನ ಮೇಲೂ ಆಗಿದ್ದು, ಆ ಹಿನ್ನೆಲೆಯಲ್ಲಿಯೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದ ಶಾಸಕರ ಪೈಕಿ ಹತ್ತಕ್ಕೂ ಹೆಚ್ಚು ಮಂದಿ ತಾವು ಬಿಜೆಪಿ ಸೇರುವ ಉದ್ದೇಶದಿಂದ ರಾಜೀನಾಮೆ ನೀಡಿ ಬೆಂಗಳೂರಿಗೆ ಬಂದಿಲ್ಲ. ಬದಲಾಗಿ ತಮ್ಮ ನಾಯಕ ಸಿಂಧಿಯಾ ಅವರಿಗೆ ಪಕ್ಷದಲ್ಲಿ ಆಗಿರುವ ಅನ್ಯಾಯ ಸರಿಪಡಿಸಿ ಅವರಿಗೆ ಸೂಕ್ತಸ್ಥಾನ ನೀಡಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಲು ಬಂದಿದ್ದೆವು ಅಷ್ಟೇ. ತಮಗೆ ಬಿಜೆಪಿ ಸೇರಲು ಮನಸ್ಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.

ಈ ನಡುವೆ, ಸಿಎಂ ಕಮಲ್ ನಾಥ್ ಅವರು ಅದೇ ವಿಶ್ವಾಸದಿಂದ ಮಾಧ್ಯಮಗಳನ್ನು ಎದುರಿಸಿದ್ದು, ಸರಳ ಬಹುಮತಕ್ಕೆ ಕುಸಿದಿರುವ ತಮ್ಮ ಸರ್ಕಾರ ವಿಶ್ವಾಸಮತ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿಕೊಂಡಿದ್ದಾರೆ. ಈ ನಡುವೆ ಕಾಂಗ್ರೆಸ್ ಕೂಡ ಅಳಿದುಳಿದ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಯತ್ನ ಆರಂಭಿಸಿದ್ದು, ಹಲವು ಶಾಸಕರನ್ನು ಬುಧವಾರ ಮಧ್ಯಾಹ್ನ ಕಾಂಗ್ರೆಸ್ ಆಡಳಿತವಿರುವ ರಾಜಸ್ತಾನದ ಜೈಪುರಕ್ಕೆ ಕಳಿಸಿಕೊಡಲಾಗಿದೆ.

ಆದರೆ, ಒಟ್ಟು 230 ಸ್ಥಾನಬಲದ ವಿಧಾನಸಭೆಯಲ್ಲಿ ಸದ್ಯ ಎರಡು ಶಾಸಕ ಸ್ಥಾನಗಳು ಖಾಲಿ ಇದ್ದು, ಸದ್ಯದ ಸ್ಥಾನ ಬಲ 228. ಆ ಹಿನ್ನೆಲೆಯಲ್ಲಿ ಸದ್ಯದ ಸರಳ ಬಹುಮತದ ಮ್ಯಾಜಿಕ್ ಸಂಖ್ಯೆ 115. ಸದ್ಯ ರಾಜೀನಾಮೆ ನೀಡಿರುವ ಶಾಸಕರ ಸಂಖ್ಯೆಯೂ ಸೇರಿ ಕಾಂಗ್ರೆಸ್ ಒಟ್ಟು ಬಲ 114. ಹಾಗಾಗಿ ಬಿಎಸ್ಪಿಯ ಇಬ್ಬರು, ಎಸ್ಪಿಯ ಒಬ್ಬರು ಶಾಸಕರ ಬೆಂಬಲದೊಂದಿಗೆ ಕಾಂಗ್ರೆಸ್ ಈವರೆಗೆ ಅಧಿಕಾರದಲ್ಲಿದೆ. ಜೊತೆಗೆ ಸದನದಲ್ಲಿ ನಾಲ್ವರು ಪಕ್ಷೇತರ ಶಾಸಕರೂ ಇದ್ದಾರೆ. ಒಂದು ವೇಳೆ ಸ್ಪೀಕರ್ ಶಾಸಕರ ರಾಜೀನಾಮೆ ಅಂಗೀಕರಿಸಿದರೆ ಸದನದ ಸಂಖ್ಯಾಬಲ 207ಕ್ಕೆ ಕುಸಿಯಲಿದೆ. ಆಗ ಸರಳಬಹುಮತದ ಮ್ಯಾಜಿಕ್ ಸಂಖ್ಯೆ 104 ಆಗಲಿದೆ. ಹಾಗಾಗಿ 109 ಸ್ಥಾನ ಬಲಹೊಂದಿರುವ ಬಿಜೆಪಿಗೆ ಸರ್ಕಾರ ರಚಿಸುವುದು ಸರಳವಾದರೆ, 93 ಸ್ಥಾನಕ್ಕೆ ಕುಸಿಯುವ ಕಾಂಗ್ರೆಸ್ಸಿಗೆ ಮೂವರು ಎಸ್ಪಿ-ಬಿಎಸ್ಪಿ ಶಾಸಕರ ಬೆಂಬಲ ಪಡೆದರೂ ಸರಳ ಬಹುಮತದ ಮ್ಯಾಜಿಕ್ ನಂಬರ್ ಗೆ ತಲುಪಲಾಗದು!

ಈ ಸಂಖ್ಯಾಬಲದ ಹಿನ್ನೆಲೆಯಲ್ಲಿ ಮೇಲ್ನೋಟಕ್ಕೆ ಸರ್ಕಾರ ಪತನದ ಕ್ಷಣಗಣನೆ ಆರಂಭವಾಗಿದೆ. ಹಾಗಾಗಿ ರಾಜೀನಾಮೆ ನೀಡಿರುವ 21 ಮಂದಿ ಶಾಸಕರ ವಿಷಯದಲ್ಲಿ ಸ್ಪೀಕರ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಮತ್ತು ಎಷ್ಟು ಸಮಯದಲ್ಲಿ ಆ ಕುರಿತ ತಮ್ಮ ತೀರ್ಮಾನ ಘೋಷಿಸುತ್ತಾರೆ ಎಂಬುದರ ಮೇಲೆ ಎಲ್ಲವೂ ನಿಂತಿದೆ. ಬಹುತೇಕ ಇದೇ ಆಪರೇಷನ್ ಕಮಲದ ಮಾದರಿ ಕರ್ನಾಟಕದಲ್ಲೂ ಆರು ತಿಂಗಳ ಹಿಂದೆ ಪ್ರಯೋಗವಾಗಿತ್ತು. ಆಗಲೂ ಆಡಳಿತರೂಢ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ 17 ಶಾಸಕರು ರಾಜೀನಾಮೆ  ನೀಡಿ ಮುಂಬೈ ರೆಸಾರ್ಟ್ ಸೇರಿಕೊಂಡಿದ್ದರು. ಸ್ಪೀಕರ್ ಅವರ ರಾಜೀನಾಮೆಗಳನ್ನು ತಳ್ಳಿಹಾಕಿ ಪಕ್ಷ ವಿರೋಧಿ ಕಾಯ್ದೆಯಡಿ ಅಮಾನತು ಮಾಡಿದ್ದರು. ಆದರೆ, ಸ್ಪೀಕರ್ ಅವರ ತೀರ್ಮಾನವನ್ನು ಅನರ್ಹ ಶಾಸಕರು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ್ದರು ಮತ್ತು ಅಂತಿಮವಾಗಿ ಕೆಲವು ತಿಂಗಳ ಬಳಿಕ ಕೋರ್ಟ್ ಅಮಾನತು ರದ್ದು ಮಾಡಿ, ಅವರಿಗೆ ಹೊಸದಾಗಿ ಜನಾದೇಶ ಪಡೆದು ಆಯ್ಕೆಯಾಗಲು, ಉಪಚುನಾವಣೆಯಲ್ಲಿ ಕಣಕ್ಕಿಳಿಯಲು ಹಸಿರುನಿಶಾನೆ ತೋರಿತ್ತು.

ಆ ಹಿನ್ನೆಲೆಯಲ್ಲಿ ನೋಡಿದರೆ, ಸ್ಪೀಕರ್ ಅವರ ತೀರ್ಮಾನ ಮತ್ತು ಅದರ ಸಂವಿಧಾನಿಕ ಮಾನ್ಯತೆಯ ಮೇಲೆ ಕಮಲ್ ನಾಥ್ ಅವರ ಸರ್ಕಾರದ ಭವಿಷ್ಯ ನಿಂತಿದೆ.

ಈ ನಡುವೆ, ಮತ್ತೊಂದು ಮಹತ್ವದ ಬದಲಾವಣೆಯಲ್ಲಿ; ಕಳೆದ ಎರಡೂವರೆ ತಿಂಗಳಿಂದ ನೆನಗುದಿಗೆ ಬಿದ್ದಿದ್ದ ಕರ್ನಾಟಕ ಕಾಂಗ್ರೆಸ್ ಪ್ರದೇಶ ಸಮಿತಿ ಅಧ್ಯಕ್ಷರ ಆಯ್ಕೆಯನ್ನು ಎಐಸಿಸಿ ಅಂತಿಮಗೊಳಿಸಿ ಅಧಿಕೃತ ಘೋಷಣೆ ಹೊರಡಿಸಿದ್ದು, ಕಾಂಗ್ರೆಸ್ಸಿನ ಆಪತ್ಬಾಂಧವ ಎಂದೇ ಬಣ್ಣಿಸಲಾಗುವ ಪ್ರಭಾವಿ ನಾಯಕ ಡಿ ಕೆ ಶಿವಕುಮಾರ್ ಅವರಿಗೆ ಚುಕ್ಕಾಣಿ ನೀಡಲಾಗಿದೆ. ಕಾಕತಾಳೀಯವೆಂಬಂತೆ ಮಧ್ಯಪ್ರದೇಶದ ಸಿಂಧಿಯಾ ಬಣದ ಶಾಸಕರು ಕೂಡ ಬೆಂಗಳೂರಿನ ರೆಸಾರ್ಟಿನಲ್ಲೇ ಇದ್ದಾರೆ. ಜೊತೆಗೆ ಮಧ್ಯಪ್ರದೇಶದ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ನೂತನ ಕೆಪಿಸಿಸಿ ಅಧ್ಯಕ್ಷರು, ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಹೋದವರೆಲ್ಲಾ ವಾಪಸು ಬರಲಿದ್ದಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಮುಂದುವರಿಯಲಿದೆ, ಯಾವುದೇ ತೊಂದರೆ ಇಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಈ ನಡುವೆ ದೆಹಲಿಯಲ್ಲಿ ಮಧ್ಯಪ್ರದೇಶದ ರಾಜಕೀಯ ಬೆಳವಣಿಗೆಗಳ ಕುರಿತ ಚಟುವಟಿಕೆಗಳು ಬಿರುಸುಗೊಂಡಿದ್ದು, ಸ್ವತಃ ಪ್ರಧಾನಿ ಮೋದಿ ಮತ್ತು ಹೈಕಮಾಂಡ್ ಅಮಿತ್ ಶಾ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಜೊತೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಕೂಡ ಖುದ್ದು ಜ್ಯೋತಿರಾಧಿತ್ಯ ಸಿಂಧಿಯಾ ಅವರೊಂದಿಗೆ ಕೂತು ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ. ಸರ್ಕಾರ ರಚನೆಗೆ ಸಾಕಷ್ಟು ಅವಕಾಶವಿದೆ ಮತ್ತು ಯಾವುದೇ ಅನುಮಾನಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವೇ ಅಮಿತ್ ಶಾ ಅವರು, ಸಿಂಧಿಯಾಗೆ ರಾಜ್ಯಸಭೆ ಟಿಕೆಟ್ ನೀಡುವುದು ಮತ್ತು ಬಳಿಕ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡುವ ಬಗ್ಗೆ ಅಂತಿಮವಾಗಿ ಮಾತುಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಸದ್ಯದ ಸ್ಥಿತಿಯಲ್ಲಿ ಸ್ಪೀಕರ್ ತೀರ್ಮಾನದ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದರೂ, ತೆರೆಮರೆಯ ರಾಜಕೀಯ ತಂತ್ರಗಳು, ತಯಾರಿಗಳು ಮಾತ್ರ ಬಿರುಸಿನಿಂದ ಮುಂದುವರಿದಿದೆ! ನೈತಿಕ ರಾಜಕಾರಣ, ಅನೈತಿಕ ನಡೆ, ಸಂವಿಧಾನದ ಕಗ್ಗೊಲೆ, ಪ್ರಜಾಪ್ರಭುತ್ವದ ಮಾರಣಹೋಮದಂತಹ ಟೀಕೆ, ಆತಂಕಗಳ ನಡುವೆ ಆಪರೇಷನ್ ಕಮಲ ಮುಂದುವರಿದಿದೆ. ಅಧಿಕಾರ ಹಿಡಿಯಲು ತಾನು ಏನೂ ಮಾಡಲು ಸಿದ್ಧ ಎಂಬುದನ್ನು ಬಿಜೆಪಿಯೂ, ಏನೇ ಆದರೂ ತಾನು ತನ್ನ ಹಳೆಯ ಜಮಾನದ ರಾಜಕೀಯ ವರಸೆಗಳನ್ನು ಬಿಟ್ಟು ಮೈಕೊಡವಿ ಏಳುವುದಿಲ್ಲ ಎಂಬುದನ್ನು ಕಾಂಗ್ರೆಸ್ಸೂ ಸಾಬೀತು ಮಾಡುತ್ತಲೆ ಇವೆ!

Click here Support Free Press and Independent Journalism

Pratidhvani
www.pratidhvani.com