ಕಚ್ಚಾ ತೈಲ ದರ ಎಷ್ಟೇ ಕುಸಿದರೂ ದೇಶದಲ್ಲಿ ಪೆಟ್ರೋಲ್, ಡಿಸೇಲ್ ದರ ಇಳಿಯೋದಿಲ್ಲಾ!
ರಾಷ್ಟ್ರೀಯ

ಕಚ್ಚಾ ತೈಲ ದರ ಎಷ್ಟೇ ಕುಸಿದರೂ ದೇಶದಲ್ಲಿ ಪೆಟ್ರೋಲ್, ಡಿಸೇಲ್ ದರ ಇಳಿಯೋದಿಲ್ಲಾ!

ರಷ್ಯಾ ಸುಮಾರು 18 ಡಾಲರ್ ವೆಚ್ಚದಲ್ಲಿ ಮಾಡಿ ಒಂದು ಬ್ಯಾರೆಲ್ ಉತ್ಪಾದಿಸಿ 20 ಡಾಲರ್ ಗೆ ಮಾರಾಟ ಮಾಡಿದರೆ ನಿಧಾನವಾಗಿ ನಷ್ಟದ ಸುಳಿಗೆ ತಲುಪುತ್ತದೆ. ದರ ಸಮರ ತೀವ್ರವಾದರೆ ಯಾರಿಗೂ ಉಳಿಗಾಲ ಇಲ್ಲವೆಂಬುದನ್ನು ನಂಬಿರುವ ಒಪೆಕ್ ರಾಷ್ಟ್ರಗಳು ದರ ಸಮರದ ಜ್ವಾಲೆ ಆರಿಸಲು ಶಾಂತಿ- ಸಂಧಾನಕ್ಕೆ ಮುಂದಾಗಿವೆ. ಸೌದಿ ಅರೇಬಿಯಾ ಸದ್ಯಕ್ಕೆ ಶಾಂತಿಗಾಗಲೀ ಸಂಧಾನಕ್ಕಾಗಲೀ ಸಿದ್ಧವಾದಂತೆ ಕಾಣುತ್ತಿಲ್ಲ.

ರೇಣುಕಾ ಪ್ರಸಾದ್ ಹಾಡ್ಯ

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲೀಗ ದರಸಮರದ ಜ್ವಾಲೆ ಎದ್ದಿದೆ. ಒಂದೇ ದಿನ ಕಚ್ಚಾ ತೈಲ ದರ ಶೇ.30ರಷ್ಟು ಕುಸಿದಿದೆ. 1991ರಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧ ಆರಂಭವಾದಾಗ ಒಂದೇ ದಿನ ಕಚ್ಚಾ ತೈಲ ದರ ಶೇ.31ರಷ್ಟು ಕುಸಿದಿತ್ತು. ಈಗ ಶೇ.30ರಷ್ಟು ಕುಸಿದಿದೆ. ಈ ಕುಸಿತಕ್ಕೆ ಕಾರಣವಾಗಿರುವುದು ಯುದ್ಧವಲ್ಲ. ದರ ಸಮರ! ಸೌದಿ ಅರೇಬಿಯಾವು ರಷ್ಯಾದ ವಿರುದ್ಧ  ದರ ಸಮರಕ್ಕೆ ಇಳಿದಿದೆ. ಒಂದೇ ದಿನ ಶೇ.30ರಷ್ಟು ದರ ತಗ್ಗಿಸಿದೆ. ಮಾರ್ಚ್ 8ರ ವಹಿವಾಟಿನಲ್ಲಿ ವೆಕ್ಸ್ ಟೆಕ್ಸಾಸ್ ಇಂಟರ್ಮಿಡಿಯೇಟ್ (ಡಬ್ಲ್ಯೂಟಿಐ) ಕಚ್ಚಾ ತೈಲ ದರವು 27.60 ಡಾಲರ್ ಗೆ ಕುಸಿದು ಈಗ 30 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ಬ್ರೆಂಟ್ (ಕ್ರೂಡ್) 31.50 ಡಾಲರ್ ಗೆ ಕುಸಿದು ಪ್ರಸ್ತುತ 34 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ಮಾರ್ಚ್ 2ರಂದು ಡಬ್ಲ್ಯೂಟಿಐ ಮತ್ತು ಬ್ರೆಂಟ್ ಕ್ರೂಡ್ ಕ್ರಮವಾಗಿ 49 ಮತ್ತು 54 ಡಾಲರ್ ದರದಲ್ಲಿ ವಹಿವಾಟಾಗುತ್ತಿದ್ದವು.

ಈ ಏಕಾಏಕಿ ಕುಸಿತಕ್ಕೆ ಮುಖ್ಯ ಕಾರಣ ಸೌದಿ ಅರೇಬಿಯಾ ತನ್ನ ಮಾರುಕಟ್ಟೆ ಪಾಲನ್ನು ವಿಸ್ತರಿಸಿಕೊಳ್ಳಲು ಮುಂದಾಗಿರುವುದು. ಈ ಕಾರಣಕ್ಕಾಗಿ ಗರಿಷ್ಠ ಪ್ರಮಾಣದ ದರ ಕಡಿತಕ್ಕೆ ಮುಂದಾಗಿದೆ. ಪ್ರಸ್ತುತ ದರಸಮರದ ತೀವ್ರತೆ ಎಷ್ಟಿದೆ ಎಂದರೆ ಕಚ್ಚಾ ತೈಲದರವು 20 ಡಾಲರ್ ಆಜುಬಾಜಿಗೆ ಕುಸಿಯುವ ಸಾಧ್ಯತೆ ಇದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಸೌದಿ ಅರೇಬಿಯಾ ಇಷ್ಟೊಂದು ತೀವ್ರ ಪೈಪೋಟಿಗೆ ಇಳಿಯಲು ಮುಖ್ಯ ಕಾರಣವೆಂದರೆ ಆ ದೇಶ ಜಗತ್ತಿನಲ್ಲಿ ಅತಿ ಕಡಮೆ ದರದಲ್ಲಿ ತೈಲ ಉತ್ಪಾದಿಸುತ್ತದೆ. ರಷ್ಯಾ, ಅಮೆರಿಕಾ ಮತ್ತಿತರ ದೇಶಗಳ ಉತ್ಪಾದನಾ ವೆಚ್ಚ ಸೌದಿಅರೇಬಿಯಾದ ವೆಚ್ಚದ ದುಪ್ಪಟ್ಟಾಗುತ್ತದೆ.

ಹೀಗಾಗಿ ಒಂದು ವೇಳೆ ಕಚ್ಚಾ ತೈಲ ದರ 20 ಡಾಲರ್ ಗೆ ಇಳಿದರೂ ಸೌದಿ ಅರೇಬಿಯಾ ಲಾಭದಲ್ಲೇ ಇರುತ್ತದೆ. ಪ್ರತಿ ಬ್ಯಾರೆಲ್ ಗೆ 9 ಡಾಲರ್ ವೆಚ್ಚ ಮಾಡುವ ಸೌದಿ ಅರೇಬಿಯಾ ತನ್ನ ಮಾರುಕಟ್ಟೆ ಎದುರಾಳಿಗಳನ್ನು ಹೊಡೆದುರುಳಿಸಲು ತೊಡೆತಟ್ಟಿ ನಿಂತಿದೆ. ರಷ್ಯಾ ಸುಮಾರು 18 ಡಾಲರ್ ವೆಚ್ಚದಲ್ಲಿ ಮಾಡಿ ಒಂದು ಬ್ಯಾರೆಲ್ ಉತ್ಪಾದಿಸಿ 20 ಡಾಲರ್ ಗೆ ಮಾರಾಟ ಮಾಡಿದರೆ ನಿಧಾನವಾಗಿ ನಷ್ಟದ ಸುಳಿಗೆ ತಲುಪುತ್ತದೆ. ದರ ಸಮರ ತೀವ್ರವಾದರೆ ಯಾರಿಗೂ ಉಳಿಗಾಲ ಇಲ್ಲವೆಂಬುದನ್ನು ನಂಬಿರುವ ಒಪೆಕ್ ರಾಷ್ಟ್ರಗಳು ದರ ಸಮರದ ಜ್ವಾಲೆ ಆರಿಸಲು ಶಾಂತಿ- ಸಂಧಾನಕ್ಕೆ ಮುಂದಾಗಿವೆ. ಸೌದಿ ಅರೇಬಿಯಾ ಸದ್ಯಕ್ಕೆ ಶಾಂತಿಗಾಗಲೀ ಸಂಧಾನಕ್ಕಾಗಲೀ ಸಿದ್ಧವಾದಂತೆ ಕಾಣುತ್ತಿಲ್ಲ.

2020 ರಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 25 ಡಾಲರ್ ಗೆ ಕುಸಿಯುವ ಸಾಧ್ಯತೆ ಇದೆ ಎಂದು 2019ರ ನವೆಂಬರ್ ತಿಂಗಳಲ್ಲಿ ರಷ್ಯಾ ಕೇಂದ್ರೀಯ ಬ್ಯಾಂಕ್ (ಸೆಂಟ್ರಲ್ ಬ್ಯಾಂಕ್ ಆಫ್ ರಷ್ಯಾ) ಮುನ್ನಂದಾಜು ಮಾಡಿತ್ತು. ತನ್ನ ತ್ರೈಮಾಸಿಕ ಜಾಗತಿಕ ಆರ್ಥಿಕತೆಯ ಮುನ್ನಂದಾಜಿನಲ್ಲಿ ಕಚ್ಚಾ ತೈಲ ಬೆಲೆ 25 ಡಾಲರ್ ಗೆ ಕುಸಿಯಬಹುದು ಎಂದು ಹೇಳಿತ್ತು. ಅದಕ್ಕೆ ಗವರ್ನರ್ ಎಲ್ವಿರಾ ಸಖಿಸದೊವ್ನಾ ನಬಿವುಲಿನಾ ಅವರು ನೀಡಿದ್ದ ಕಾರಣಗಳೆಂದರೆ- ಜಾಗತಿಕ ಬೃಹದಾರ್ಥಿಕತೆಯು ಕುಸಿತದ ಹಾದಿಯಲ್ಲಿದ್ದು, ವಿಶ್ವಾದ್ಯಂತ ತೈಲ ಮತ್ತು ತೈಲ ಉತ್ಪನ್ನಗಳ ಬೇಡಿಕೆ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಕಚ್ಚಾ ತೈಲ ಬೆಲೆ ಕಸಿಯಬಹುದು ಎಂಬುದಾಗಿತ್ತು. ಎಲ್ವಿರಾ ಸಖಿಸದೊವ್ನಾ ನಬಿವುಲಿನಾ ಅವರು 2020ರ ಉತ್ತರಾರ್ಧದಲ್ಲಿ ಅಂದರೆ ಜುಲೈ ನಂತರದಲ್ಲಿ ದರ ಕುಸಿಯುವ ಮುನ್ನಂದಾಜು ಮಾಡಿದ್ದರು. ಆದರೆ, ಮೂರ್ನಾಲ್ಕು ತಿಂಗಳು ಮುಂಚಿತವಾಗಿಯೇ ಕಚ್ಚಾ ತೈಲದರ ಕುಸಿಯಲಾರಂಭಿಸಿದೆ.

ಎಲ್ವಿರಾ ಸಖಿಸದೊವ್ನಾ ನಬಿವುಲಿನಾ ತೈಲದರ ಮುನ್ನಂದಾಜು ಮಾಡುವ ಸಮಯದಲ್ಲಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಡಬ್ಲ್ಯೂಟಿಐ ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ 54.60 ಡಾಲರ್ ಮತ್ತು ಬ್ರೆಂಟ್ ಕ್ರೂಡ್ 60 ಡಾಲರ್ ಗಳ ಆಜುಬಾಜಿನಲ್ಲಿ ವಹಿವಾಟಾಗುತ್ತಿತ್ತು. ಸೌದಿ ತೈಲ ಕ್ಷೇತ್ರ ಮತ್ತು ಸಂಸ್ಕರಣಾ ವ್ಯವಸ್ಥೆ ಮೇಲೆ ಡ್ರೋಣ್ ದಾಳಿ ನಡೆದ ನಂತರ ಕಚ್ಚಾ ತೈಲ ದರ ಸುಮಾರು ಶೇ.15ರಷ್ಟು ತ್ವರಿತ ಏರಿಕೆ ಕಂಡಿತ್ತು. ಡ್ರೋಣ್ ದಾಳಿಯಿಂದ ನಿತ್ಯ 6 ದಶಲಕ್ಷ ಬ್ಯಾರೆಲ್ ಉತ್ಪಾದನೆ ಕುಂಠಿತಗೊಂಡಿತ್ತು. ಡ್ರೋಣ್ ದಾಳಿಯ ನಂತರ ಸೌದಿ ಅರೆಬಿಯಾವು ಮಾರುಕಟ್ಟೆ ಮೇಲಿನ ನಿಯಂತ್ರಣ ಸಾಧಿಸುವ ತನ್ನ ಕಾರ್ಯತಂತ್ರಗಳನ್ನು ಬದಲಾಯಿಸಿಕೊಂಡಿದೆ. ಡ್ರೋಣ್ ದಾಳಿ ಪ್ರಕರಣ ಹೊರತು ಪಡಿಸಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 2018ರ ಅಕ್ಟೋಬರ್ ತಿಂಗಳಿಂದ ಕಚ್ಚಾ ತೈಲದರ ಇಳಿಜಾರಿನಲ್ಲಿ ಸಾಗಿದೆ. ಆಗ 77 ಡಾಲರ್ ಇದ್ದ ಡಬ್ಲ್ಯುಟಿಐ ಕಚ್ಚಾ ತೈಲ ಕುಸಿತದ ಹಾದಿಯಲ್ಲಿ 42.50 ಡಾಲರ್ ಗೆ ಇಳಿದಿತ್ತು. ಡ್ರೋಣ್ ದಾಳಿಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಏರಿಕೆ ಕಂಡಿತ್ತು.

ಭಾರತದ ಗ್ರಾಹಕರು ಖುಷಿ ಪಡಬಹುದೇ?

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ತೀವ್ರವಾಗಿ ಕುಸಿದಿರುವುದರಿಂದ ಭಾರತದ ಬಡಪಾಯಿ ಗ್ರಾಹಕರು ಖುಷಿಪಡಬಹುದೇ? ಖಂಡಿತಾ ಇಲ್ಲ. ನರೇಂದ್ರ ಮೋದಿ ಸರ್ಕಾರ ಇದುವರೆಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ ಕುಸಿದಾಗ ಅದರ ಲಾಭವನ್ನು ಎಂದೂ ಗ್ರಾಹಕರಿಗೆ ವರ್ಗಾಹಿಸಿಲ್ಲ. ಬದಲಿಗೆ ತೈಲದ ಮೇಲೆ ಸುಂಕ ಹೇರುವ ಮೂಲಕ ಮಾರುಕಟ್ಟೆಯಲ್ಲಿ ಗರಿಷ್ಠ ದರವನ್ನು ಯಥಾಸ್ಥಿತಿ ಕಾಯ್ದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಚ್ಚಾ ತೈಲದರ ಏರಿಕೆ ಆದಾಗಲೂ ದೇಶಿಯ ಮಾರುಕಟ್ಟೆಯಲ್ಲಿ ಮಾತ್ರ ದರ ಏರಿಸದೇ ಇದ್ದ ಸಂದರ್ಭಗಳೂ ಇವೆ. ಅದು 2019ರ ಸಾರ್ವತ್ರಿಕ ಚುನಾವಣೆಯ ಸಂದರ್ಭ ಮತ್ತು ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಸಂದರ್ಭ.

2019 ಮಾರ್ಚ್ 10 ರಂದು ಚುನಾವಣೆ ಘೋಷಣೆ ಆದ ನಂತರ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ ದರ 9.25 ಡಾಲರ್ ಏರಿಕೆಯಾಗಿತ್ತು. ಮಾರ್ಚ್ 8ರಂದು ವಹಿವಾಟು ಮುಕ್ತಾಯಗೊಂಡಾಗ ಕಚ್ಚಾ ತೈಲ ದರ 65.75 ಡಾಲರ್ ಇತ್ತು. ಏಪ್ರಿಲ್ 25 ರಂದು 75 ಡಾಲರ್ ಮುಟ್ಟಿತ್ತು. ಈ 45 ದಿನಗಳಲ್ಲಿ ಕಚ್ಚಾ ತೈಲ ದರ ಶೇ.14ರಷ್ಟು ಏರಿಕೆಯಾಗಿತ್ತು.

ಆದರೆ, ಚುನಾವಣೆ ಘೋಷಣೆ ಆದ ನಂತರ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರ ಶೇ. 0.75ರಷ್ಟು ಮತ್ತು ಡಿಸೇಲ್ ದರ ಶೇ.1.50ರಷ್ಟು ಮಾತ್ರ ಏರಿಕೆಯಾಗಿತ್ತು! ಮಾರ್ಚ್ 11 ರಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ 74.90 ರುಪಾಯಿ ಇದ್ದದ್ದು ಏಪ್ರಿಲ್ 25ರಂದು 75.40 ರುಪಾಯಿಗೆ ಏರಿತ್ತು. ಅಂದರೆ, ಈ ನಲ್ವತ್ತೈದು ದಿನಗಳಲ್ಲಿ ಏರಿಕೆಯಾಗಿರುವುದು ಕೇವಲ 50 ಪೈಸೆ ಮಾತ್ರ. ಡಿಸೇಲ್ ದರ ಸಹ ಬೆಂಗಳೂರಿನಲ್ಲಿ ಮಾರ್ಚ್ 11 ರಂದು 68.70 ರುಪಾಯಿ ಇದ್ದದ್ದು ಏಪ್ರಿಲ್ 25ರಂದು 69.70ಕ್ಕೆ ಏರಿತ್ತು. ಒಟ್ಟು ಏರಿಕೆ ಕೇವಲ ಒಂದು ರುಪಾಯಿ. ಆದರೆ, ಚುನಾವಣೆ ಮುಗಿದು ಫಲಿತಾಂಶ ಬಂದ ನಂತರ ಪೆಟ್ರೋಲ್ ದರ ಏರಿಕೆ ಕಂಡಿತ್ತು.

ಬ್ರೆಂಟ್ 75 ಡಾಲರ್ ಮತ್ತು ಡಬ್ಲ್ಯುಟಿಐ 65 ಡಾಲರ್ ಇದ್ದಾಗ ಪೆಟ್ರೋಲ್ ದರ 75.40 ರುಪಾಯಿ ಇತ್ತು. ಪ್ರಸ್ತುತ ಬ್ರೆಂಟ್ ಹಾಗೂ ಡಬ್ಲ್ಯೂಟಿಐ ಕ್ರೂಡ್ ದರ 35 ಮತ್ತು 30 ಆಜುಬಾಜಿನಲ್ಲಿವೆ. ಆ ಲೆಕ್ಕದಲ್ಲಿ ಪೆಟ್ರೋಲ್ ದರ 60 ರುಪಾಯಿ ಆಜುಬಾಜಿನಲ್ಲಿರಬೇಕಿತ್ತು. ಆದರೆ, ಮಾರ್ಚ್ 9 ರಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ 73 ರುಪಾಯಿ ಇದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಲಿ- ಇಳಿಯಲಿ ಕೇಂದ್ರ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 19.48 ರುಪಾಯಿ ಡಿಸೇಲ್ ಮೇಲೆ 15.33 ರುಪಾಯಿ ಸುಂಕ ವಸೂಲಿ ಮಾಡಿಕೊಳ್ಳುತ್ತದೆ. ರಾಜ್ಯ ಸರ್ಕಾರ ಇದುವರೆಗೆ ಪೆಟ್ರೋಲ್ ಮೇಲೆ ಶೇ.32 ಮತ್ತು ಡಿಸೆಲೇ ಮೇಲೆ 21ರಷ್ಟು ತೆರಿಗೆ ವಿಧಿಸುತ್ತಿದ್ದು, ಏಪ್ರಿಲ್ 1ರಿಂದ ಈ ತೆರಿಗೆ ಪ್ರಮಾಣವು ಕ್ರಮವಾಗಿ ಶೇ.35 ಮತ್ತು 24ಕ್ಕೆ ಏರಲಿದೆ.

ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದರ ತೀವ್ರವಾಗಿ ಕುಸಿದರೂ ಅದಕ್ಕೆ ಅನುಗುಣವಾಗಿ ದೇಶೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಯುವುದಿಲ್ಲ.

ಬೊಕ್ಕಸಕ್ಕೆ ಬಂಪರ್ ಹರಿವು:

ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ ಗೆ ಒಂದು ಡಾಲರ್ ತಗ್ಗಿದರೂ ಭಾರತದ ಬೊಕ್ಕಸಕ್ಕೆ ಭಾರಿ ಪ್ರಮಾಣದಲ್ಲಿ ಲಾಭ ಆಗಲಿದೆ. ಪ್ರತಿ ಒಂದು ಡಾಲರ್ ಇಳಿಯುವುದರಿಂದ ವಾರ್ಷಿಕ 10,000 ಕೋಟಿ ರುಪಾಯಿ ಉಳಿತಾಯವಾಗುತ್ತದೆ. ಪ್ರಸ್ತುತ 50 ಡಾಲರ್ ಆಜುಬಾಜಿನಿಂದ 35 ಡಾಲರ್ ಆಜುಬಾಜಿಗೆ ಇಳಿದಿರುವ ತೈಲ ದರವು ಆ ಮಟ್ಟದಲ್ಲೇ ಸ್ಥಿರವಾಗಿ ಉಳಿದರೆ ಅಥವಾ ಮತ್ತಷ್ಟು ಇಳಿದರೆ, ಭಾರತದ ತೈಲ ಪಾವತಿಯ ವಾರ್ಷಿಕ ಬಿಲ್ ನಲ್ಲೇ ಸುಮಾರು ₹1.50 ಲಕ್ಷ ಕೋಟಿ ಉಳಿತಾಯವಾಗುತ್ತದೆ.

ಈ ಮೊತ್ತವನ್ನು ಜನರಿಗೆ ವರ್ಗಾಹಿಸಲಾಗುತ್ತದೆಯೇ? ಖಂಡಿತಾ ಇಲ್ಲಾ! ಮೋದಿ ಸರ್ಕಾರ ಕಾರ್ಪೊರೆಟ್ ತೆರಿಗೆ ತಗ್ಗಿಸಿದ್ದರಿಂದ ಬೊಕ್ಕಸಕ್ಕೆ ಆಗಿರುವ ₹1.40 ಲಕ್ಷ ಕೋಟಿ ರುಪಾಯಿ ಕೊರತೆಯನ್ನು ಸರಿದೂಗಿಸಲು ಬಳಸಲಾಗುತ್ತದೆ! ಕಚ್ಚಾ ತೈಲ ಅದೆಷ್ಟೇ ಇಳಿದರೂ ಪೆಟ್ರೋಲ್ ಮಾತ್ರ ₹70ಕ್ಕಿಂತ ಕೆಳಮಟ್ಟಕ್ಕೆ ಇಳಿಯುವುದಿಲ್ಲಾ!!

Click here Support Free Press and Independent Journalism

Pratidhvani
www.pratidhvani.com