ಮಧ್ಯಂತರಕ್ಕೆ ಬಂದು ನಿಂತ ಮಧ್ಯಪ್ರದೇಶ ಸರ್ಕಾರ..!
ರಾಷ್ಟ್ರೀಯ

ಮಧ್ಯಂತರಕ್ಕೆ ಬಂದು ನಿಂತ ಮಧ್ಯಪ್ರದೇಶ ಸರ್ಕಾರ..!

ಮಧ್ಯಪ್ರದೇಶದಲ್ಲಿ ಸರ್ಕಾರ ಉರುಳಿಸಲು ಬಿಜೆಪಿ ಹೈಕಮಾಂಡ್ ನೇರ​ ಅಖಾಡಕ್ಕೆ ಇಳಿದಿದ್ದು, ಜೋತಿರಾದಿತ್ಯ ಸಿಂಧಿಯಾಗೆ ಕೇಂದ್ರದಲ್ಲಿ ಮಂತ್ರಿಸ್ಥಾನ ಕೊಡಲಿದ್ದಾರೆ ಎಂದು ಈಗಾಗಲೇವರದಿಯಾಗಿದೆ. ಕರ್ನಾಟಕದಲ್ಲಿ ಅನುಸರಿಸಿದ ನೀತಿಯನ್ನೇ ಮಧ್ಯಪ್ರದೇಶದಲ್ಲೂ ಅನುಸರಿಸಿರುವ ಕಾಂಗ್ರೆಸ್​, ಎಲ್ಲಾ ಸಚಿವರಿಂದಲೂ ರಾಜೀನಾಮೆ ಪಡೆದಿದೆ. ಹೊಸದಾಗಿ ಸಚಿವ ಸಂಪುಟ ವಿಸ್ತರಣೆ ಮಾಡುವ ಇಂಗಿತ ವ್ಯಕ್ತಪಡಿಸಿದೆ.

ಕೃಷ್ಣಮಣಿ

ಕರ್ನಾಟಕದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಸರ್ಕಾರವನ್ನು ಉರುಳಿಸಲು ಆರೇಳು ಬಾರಿ ಆಪರೇಷನ್‌ ಕಮಲ ವಿಫಲವಾದ ಬಳಿಕ ಬಿಜೆಪಿ ಮಾಡಿದ ಮಾಸ್ಟರ್‌ ಪ್ಲಾನ್‌ ಸಕ್ಸಸ್‌ ಆಗಿತ್ತು. ಕಾಂಗ್ರೆಸ್‌ನ ಉನ್ನತ ಮಟ್ಟದ ನಾಯಕರನ್ನೇ ಮನವೊಲಿಸಿ ಆಪರೇಷನ್‌ ಮಾಡಲಾಗಿತ್ತು ಎನ್ನುವ ಮಾತುಗಳು ಕೇಳಿಬಂದಿದ್ದವು. ಇದೀಗ ಮಧ್ಯಪ್ರದೇಶದಲ್ಲೂ ಅದೇ ತಂತ್ರಗಾರಿಕೆ ಉಪಯೋಗಿಸಿ ಹಿಂಬಾಗಿಲಿನಿಂದ ಅಧಿಕಾರ ಪಡೆಯುವ ಪ್ರಯತ್ನ ಬಿಜೆಪಿ ನಡೆಸುತ್ತಿದೆಯೇ? ಎನ್ನುವ ಅನುಮಾನ ದಟ್ಟವಾಗಿದೆ. ಕಳೆದ ವಾರ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಲು ಬಿಜೆಪಿ ಆಪರೇಷನ್‌ ಕಮಲ ಮಾಡಲು ಮುಂದಾಗಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆ ಬಳಿಕ ಬಿಜೆಪಿ ನಾಯಕರ ಸಂಪರ್ಕದಲ್ಲಿ ಶಾಸಕರು ವಾಪಸ್‌ ಆಗಿದ್ದರು. ಆಪರೇಷನ್‌ ಕಮಲ ಠುಸ್‌ ಆಯ್ತು ಎನ್ನುವ ಮಾತುಗಳು ಕೇಳಿಬಂದಿದ್ದವು. ಇದೀಗ ದೊಡ್ಡ ಮಟ್ಟದಲ್ಲಿ ಆಪರೇಷನ್‌ ನಡೆದಿರುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಮಾಡಿದಂತೆ ಕಾಂಗ್ರೆಸ್‌ ನಾಯಕರನ್ನೇ ಬುಟ್ಟಿಗೆ ಹಾಕಿಕೊಂಡಿರುವ ಎಲ್ಲಾ ಸಾಧ್ಯತೆಗಳೂ ಕಂಡು ಬರುತ್ತಿದೆ.

ಕಳೆದ ವರ್ಷ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬರುವಾಗ ಜ್ಯೋತಿರಾಧಿತ್ಯ ಸಿಂದಿಯಾ ಮುಖ್ಯಮಂತ್ರಿ ಆಗಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ, ಕಾಂಗ್ರೆಸ್‌ ಹೈಕಮಾಂಡ್ ಕಮಲ್‌ನಾಥ್‌ ಮುಖ್ಯಮಂತ್ರಿ ಆಗಲು ಗ್ರೀನ್‌ ಸಿಗ್ನಲ್‌ ಕೊಟ್ಟ ಕಾರಣಕ್ಕೆ ಜ್ಯೋತಿರಾಧಿತ್ಯ ಸಿಂದಿಯಾಗೆ ಅವಕಾಶ ತಪ್ಪಿತ್ತು. ಇದೀಗ ಅದೇ ಜ್ಯೋತಿರಾಧಿತ್ಯ ಸಿಂದಿಯಾ ಆಪ್ತರು ಎನ್ನಲಾದ 18 ಮಂದಿ ಶಾಸಕರು ಕಾಂಗ್ರೆಸ್‌ ಪಕ್ಷದ ವಿರುದ್ಧವೇ ಬಂಡಾಯ ಎದ್ದಿದ್ದಾರೆ. ಈ 18 ಜನ ಜ್ಯೋತಿರಾಧಿತ್ಯ ಸಿಂದಿಯಾ ಆಪ್ತರಲ್ಲಿ ಐವರು ಸಚಿವರೂ ಸೇರಿದ್ದು, ಎಲ್ಲರೂ ಬೆಂಗಳೂರಿಗೆ ಸ್ಥಳಾಂತರ ಆಗಿದ್ದಾರೆ ಎನ್ನುವ ಮಾಹಿತಿ ಕಾಂಗ್ರೆಸ್‌ ಹೈಕಮಾಂಡ್‌ ಕಂಗಾಲಾಗುವಂತೆ ಮಾಡಿದೆ. ಅಷ್ಟೇ ಅಲ್ಲದೆ ಬೆಂಗಳೂರು ತಲುಪಿರುವ ಎಲ್ಲಾ ಸಚಿವರು, ಶಾಸಕರ ಮೊಬೈಲ್‌ಗಳು ಸ್ವಿಚ್‌ ಆಗಿದ್ದು, ಮನವೊಲಿಕೆ ಮಾಡೋದು ಹೇಗೆ ಎನ್ನುವ ಆತಂಕ ಕಾಂಗ್ರೆಸ್‌ ನಾಯಕರಲ್ಲಿ ಮನೆ ಮಾಡಿದೆ.

ಆರೋಗ್ಯ ಸಚಿವ ತುಳಸಿ ಸೀಲವಂತ, ಕಾರ್ಮಿಕ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ, ಸಾರಿಗೆ ಸಚಿವ ಗೋವಿಂದ್ ಸಿಂಗ್ ರಜಪೂತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಇಮ್ರತಿ ದೇವಿ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರದ್ಯುಮ್ನ ಸಿಂಗ್ ತೋಮರ್ ಹಾಗೂ ಶಿಕ್ಷಣ ಸಚಿವ ಪ್ರಭುರ ಚೌಧರಿ ಅವರ ಮೊಬೈಲ್‌ ಫೋನ್‌ಗಳು ಸ್ವಿಚ್ಡ್‌ ಆಫ್ ಆಗಿದೆ. 18 ಮಂದಿ ಕಾಂಗ್ರೆಸ್‌ ಶಾಸಕರು, ಸಚಿವರೇ ಬೆಂಗಳೂರಿನ ಹಾದಿ ಹಿಡಿದ ಬೆನ್ನಲ್ಲೇ ಸಿಎಂ ಕಮಲನಾಥ್‌ ತುರ್ತು ಸಚಿವ ಸಂಪುಟ ಸಭೆ ನಡೆಸಿದ್ದಾರೆ. ಈ ನಡುವೆ ಕೇಂದ್ರ ಗೃಹ ಮಂತ್ರಿ ಅಮಿತ್‌ ಷಾ ಹಾಗು ಶಿವರಾಜ್‌ ಸಿಂಗ್‌ ಚೌಹಾಣ್ ಭೇಟಿ ಕಾಂಗ್ರೆಸ್‌ ದಿಗುಲುಗೊಳ್ಳುವಂತೆ ಮಾಡಿದೆ.

ಮಧ್ಯಪ್ರದೇಶ ಶಾಸಕರು, ಸಚಿವರು ಬೆಂಗಳೂರಿಗೆ ಆಗಮಿಸಿರುವ ಬೆನ್ನಲ್ಲೇ ಶಾಸಕರ ಮನವೊಲಿಸಿ, ಪರಿಸ್ಥಿತಿ ತಿಳಿಗೊಳಿಸುವಂತೆ ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್‌ ಸಂದೇಶ ರವಾನಿಸಿದೆ ಎನ್ನಲಾಗಿದೆ. ಜ್ಯೋತಿರಾಧಿತ್ಯ ಸಿಂದಿಯಾ ನೇತೃತ್ವದಲ್ಲೇ ಆಪರೇಷನ್‌ ಕಮಲ ಆಗುತ್ತಾ ಇರುವುದರಿಂದ, ಈ ಬಾರಿ ಬಿಜೆಪಿ ಯಶಸ್ಸು ಸಾಧಿಸಲಿದೆ ಎನ್ನುವ ಆತಂಕ ಖಚಿತವಾಗುತ್ತಿದೆ. ಬೆಂಗಳೂರಿನ ಅಜ್ಞಾತ ಸ್ಥಳದಲ್ಲಿ ಬೀಡುಬಿಟ್ಟಿರು ಶಾಸಕರು ಎಲ್ಲಿದ್ದಾರೆ ಎನ್ನುವುದನ್ನು ಪತ್ತೆ ಮಾಡಿದ ಬಳಿಕ, ಮುಂಬೈನಲ್ಲಿ ನಡೆದ ಹೈಡ್ರಾಮಾ ಬೆಂಗಳೂರಿನಲ್ಲೂ ನಡೆಯುವುದು ಖಚಿತವಾಗಿದೆ. ರಾಜ್ಯದಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಆರೋಪಗಳ ನಡುವೆ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದ್ದು, 18 ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿ ಎಲ್ಲಿದ್ದಾರೆ ಎನ್ನುವುದನ್ನು ಪತ್ತೆ ಮಾಡಲು ಸರ್ಕಸ್‌ ನಡೆಯುತ್ತಿದೆ. ಬಿಜೆಪಿ ಸರ್ಕಾರವೇ ಎಲ್ಲಾ ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ ಎನ್ನುವ ಮಾಹಿತಿಯೂ ಇದೆ.

ಮಧ್ಯಪ್ರದೇಶದಲ್ಲಿ ಸರ್ಕಾರ ಉರುಳಿಸಲು ಬಿಜೆಪಿ ಹೈಕಮಾಂಡ್ ನೇರ ಅಖಾಡಕ್ಕೆ ಇಳಿದಿದ್ದು, ಜೋತಿರಾರಾಧ್ಯ ಸಿಂಧಿಯಾಗೆ ಕೇಂದ್ರದಲ್ಲಿ ಮಂತ್ರಿಸ್ಥಾನ ಕೊಡಲಿದ್ದಾರೆ ಎಂದು ಈಗಾಗಲೇ ವರದಿಯಾಗಿದೆ. ಕರ್ನಾಟಕದಲ್ಲಿ ಅನುಸರಿಸಿದ ನೀತಿಯನ್ನೇ ಮಧ್ಯಪ್ರದೇಶದಲ್ಲೂ ಅನುಸರಿಸಿರುವ ಕಾಂಗ್ರೆಸ್, ಎಲ್ಲಾ ಸಚಿವರಿಂದಲೂ ರಾಜೀನಾಮೆ ಪಡೆದಿದೆ. ಹೊಸದಾಗಿ ಸಚಿವ ಸಂಪುಟ ವಿಸ್ತರಣೆ ಮಾಡುವ ಇಂಗಿತ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಸರ್ಕಾರವನ್ನು ಬೀಳಿಸಲು ಸಿದ್ದರಾಮಯ್ಯ ಅವರ ಸಪೋರ್ಟ್‌ ತೆಗೆದುಕೊಳ್ಳಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಇದೇ ಸಿದ್ದರಾಮಯ್ಯಗೆ ಮಧ್ಯಪ್ರದೇಶ ಶಾಸಕರ ಮನವೊಲಿಕೆ ಜವಾಬ್ದಾರಿ ನೀಡಲಾಗಿದೆ. ಮಧ್ಯಪ್ರದೇಶ ಸಿಎಂ ಕಮಲನಾಥ್‌ ನಿವಾಸದಲ್ಲಿ ತುರ್ತು ಸಭೆ ನಡೆಸಿದ್ದು, ಮುಂದೇನು ಎನ್ನುವ ಬಗ್ಗೆ ಚರ್ಚೆ ನಡೆಸಲಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು. ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಯಾಗಿ ಸಚಿವ ಸಂಉಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಾಗಿದೆ. ಅಷ್ಟರಲ್ಲಿ ಸರ್ಕಾರವೇ ಮಧ್ಯಂತರಕ್ಕೆ ಬಂದು ನಿಂತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರ ಉರುಳಲು ಸಿದ್ದರಾಮಯ್ಯನೇ ಕಾರಣ ಎನ್ನುವ ಆರೋಪ ಹೊತ್ತಿರುವ ಸಿದ್ದರಾಮಯ್ಯ, ಇದೀಗ ಮಧ್ಯಪ್ರದೇಶ ಸರ್ಕಾರ ಉರುಳದಂತೆ ಕಾಪಾಡ್ತಾರಾ ಕಾದು ನೋಡ್ಬೇಕಿದೆ. ಆದರೆ, ಈಗಾಗಲೇ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಶಾಸಕರು ವಾಪಸ್ ಬರುತ್ತಾರಾ? ಎನ್ನುವುದು ಬಹುತೇಕ ಅನುಮಾನ ಎನ್ನಲಾಗಿದೆ.

Click here Support Free Press and Independent Journalism

Pratidhvani
www.pratidhvani.com