ಸೋದರಳಿಯನ ಸೆಳೆಯಲು ಕುಟುಂಬ ಪ್ರೇಮ ಅಸ್ತ್ರವಾಯಿತೇ? 
ರಾಷ್ಟ್ರೀಯ

ಸೋದರಳಿಯನ ಸೆಳೆಯಲು ಕುಟುಂಬ ಪ್ರೇಮ ಅಸ್ತ್ರವಾಯಿತೇ? 

2018ರಲ್ಲಿ ಕಾಂಗ್ರೆಸ್​ ಪರ ಸಾಕಷ್ಟು ಹೋರಾಟ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮ ವಹಿಸಿದ್ದು ಜೋತಿರಾದಿತ್ಯ ಸಿಂಧಿಯಾ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಾಂಗ್ರೆಸ್​ ಅಧಿಕಾರ ಹಿಡಿಯುವುದು ಖಚಿತ ಆಗುತ್ತಿದ್ದಂತೆ ಜೋತಿರಾದಿತ್ಯ ಮುಖ್ಯಮಂತ್ರಿ ಆಗಬೇಕು ಎನ್ನುವ ಕೂಗು ಎದ್ದಿತ್ತು.​ ಆದರೆ, ಹಿರಿತನದ ಆಧಾರದ ಮೇಲೆ ಕಮಲನಾಥ್​ ಮುಖ್ಯಮಂತ್ರಿ ಆಗಲು ಕಾಂಗ್ರೆಸ್​ ಹೈಕಮಾಂಡ್​ ಒಪ್ಪಿಗೆ ಸೂಚಿಸಿತ್ತು. 

ಕೃಷ್ಣಮಣಿ

ಮಧ್ಯಪ್ರದೇಶದಲ್ಲಿ ಜೋತಿರಾದಿತ್ಯ ಸಿಂಧಿಯಾ ಭಾರತೀಯ ಜನತಾ ಪಾರ್ಟಿ ಸೇರ್ಪಡೆಯಾಗಿದ್ದಾರೆ. 18 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದ ಜೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರಿರುವುದಕ್ಕೆ ವಿಶೇಷ ಕಾರಣಗಳಿವೆ. ಜೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಯಾಗುವ ಕಾರ್ಯಕ್ರಮಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಬಂದು ಸ್ವಾಗತಿಸಿದ್ದಾರೆ ಎಂದ ಮೇಲೆ ಏನೋ ವಿಶೇಷತೆ ಇರಲೇ ಬೇಕು.

1947ರಲ್ಲಿ ಗ್ವಾಲಿಯರ್‌ನ ರಾಜ ಮನೆತನ ಅಧಿಕಾರದಲ್ಲಿತ್ತು. ಭಾರತದ ಒಕ್ಕೂಟ ಗಣರಾಜ್ಯಕ್ಕೆ ಸೇರ್ಪಡೆಯಾದ ಬಳಿಕ ರಾಜ ಜಿವಾಜಿ ರಾವ್ ಸಿಂಧಿಯಾ ಕಾಲವಾದ ನಂತರ ಸಿಂಧಿಯಾ ಕುಟುಂಬ ಬಿಜೆಪಿ ಸೇರ್ಪಡೆಯಾಗಿತ್ತು. ಮೂಲತಃ ಮರಾಠ ಪ್ರದೇಶದ ಕುಟುಂಬವಾದ ಜಿವಾಜಿ ರಾವ್ ಸಿಂಧಿಯಾಗೆ ಒಟ್ಟು ನಾಲ್ವರು ಮಕ್ಕಳು ಅದರಲ್ಲಿ ಉಶಾರಾಜೇ, ಮಾಧವ ರಾವ್ ಸಿಂಧಿಯಾ, ವಸುಂಧರ ರಾಜೆ, ಯಶೋಧರ ರಾಜೆ. ಜಿವಾಜಿ ರಾವ್ ಸಿಂಧಿಯಾ ಬಳಿಕ ಮಾಧವ ರಾವ್ ಸಿಂಧಿಯಾ ಕುಟುಂಬ ಕ್ರಮೇಣ ಕಾಂಗ್ರೆಸ್
ಪಕ್ಷಕ್ಕೆ ಸೇರ್ಪಡೆಯಾಗಿ ಕೇಂದ್ರ, ರಾಜ್ಯದಲ್ಲೂ ಅಧಿಕಾರ ಅನುಭವಿಸಿದ್ರು. ಇದೀಗ ಇದೇ ಮಾಧವ ರಾವ್
ಸಿಂಧಿಯಾ ಸಹೋದರಿ ವಸುಂಧರ ರಾಜೆ ಈಗಿನ ಬಿಜೆಪಿ ನಾಯಕಿ. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ. ಈ ಆಪರೇಷನ್ ಕಮಲದ ಪ್ರಮುಖ ಸೂತ್ರಧಾರಿ ಎನ್ನಲಾಗುತ್ತಾ ಇದೆ.

ಅಣ್ಣನ ಮಗನಾದ ಜೋತಿರಾದಿತ್ಯ ಸಿಂಧಿಯಾ, ಸಂಬಂಧದಲ್ಲಿ ಅಳಿಯ. ಸೋದರಳಿಯ ಜೋತಿರಾದಿತ್ಯ ಸಿಂಧಿಯಾ ಅವರನ್ನು ಕಾಂಗ್ರೆಸ್ ನಿಂದ ಹೊರಕ್ಕೆ ಕರೆತಂದು ಬಿಜೆಪಿ ಸೇರಿಸುವ ಹೊಣೆಗಾರಿಕೆಯನ್ನು ವಸುಂಧರ ರಾಜೆ ಅವರಿಗೆ ವಹಿಸಲಾಗಿತ್ತು. ಇದೇ ಕಾರಣಕ್ಕೆ ಆಪರೇಷನ್ ಕಮಲ ಎಲ್ಲೂ ಬಹಿರಂಗವಾಗದೆ ಕುಟುಂಬದ ಒಳಗೇ ನಡೆದು ಹೋಗಿದೆ. ವಸುಂಧರ ರಾಜೆ ಸೂತ್ರಧಾರಿ ಆಗಿದ್ದರೂ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ.

ಆದರೆ 2018ರಲ್ಲಿ ಕಾಂಗ್ರೆಸ್ ಪರ ಸಾಕಷ್ಟು ಹೋರಾಟ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮ ವಹಿಸಿದ್ದು ಜೋತಿರಾದಿತ್ಯ ಸಿಂಧಿಯಾ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಾಂಗ್ರೆಸ್
ಅಧಿಕಾರ ಹಿಡಿಯುವುದು ಖಚಿತ ಆಗುತ್ತಿದ್ದಂತೆ ಜೋತಿರಾದಿತ್ಯ ಮುಖ್ಯಮಂತ್ರಿ ಆಗಬೇಕು ಎನ್ನುವ ಕೂಗು ಎದ್ದಿತ್ತು. ಆದರೆ, ಹಿರಿತನದ ಆಧಾರದ ಮೇಲೆ ಕಮಲನಾಥ್ ಮುಖ್ಯಮಂತ್ರಿ ಆಗಲು ಕಾಂಗ್ರೆಸ್ ಹೈಕಮಾಂಡ್
ಒಪ್ಪಿಗೆ ಸೂಚಿಸಿತ್ತು. ಅಂದಿನಿಂದಲೂ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದ್ದ ಜೋತಿರಾದಿತ್ಯ ಸಿಂಧಿಯಾ, ಪಕ್ಷದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದರು.

ಸೋದರಳಿಯನ ಸೆಳೆಯಲು ಕುಟುಂಬ ಪ್ರೇಮ ಅಸ್ತ್ರವಾಯಿತೇ? 

ಜೋತಿರಾದಿತ್ಯ ಸಿಂಧಿಯಾ ಒಂದು ಕಾಲದಲ್ಲಿ ರಾಹುಲ್ ಗಾಂಧಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ನಾಯಕ. ಆದ್ರೆ ರಾಹುಲ್ ಆಪ್ತನಾಗಿ ಇಡೀ ಮಧ್ಯಪ್ರದೇಶ ಸುತ್ತಾಡಿ ಕಾಂಗ್ರೆಸ್
ಅಧಿಕಾರಕ್ಕೆ ತಂದರೂ 48 ವರ್ಷದ ಜೋತಿರಾದಿತ್ಯ ಸಿಂಧಿಯಾ ಅವರನ್ನು ಕಡೆಗಣಿಸಿ, 74 ವರ್ಷದ ಕಮಲನಾಥ್ ರನ್ನು ಆಯ್ಕೆ ಮಾಡಲಾಗಿತ್ತು. ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊಂದಿದ್ದ ನಾಯಕನನ್ನೇ ಆಪರೇಷನ್ ಮಾಡಿದರೆ ಅನುಕೂಲ ಎನ್ನುವ ಏಕೈಕ ಕಾರಣಕ್ಕೆ ಜೋತಿರಾದಿತ್ಯ ಸಿಂಧಿಯಾ ಅವರನ್ನು ಸೆಳೆಯುವ ತಂತ್ರಗಾರಿಕೆ ಮಾಡಲಾಯ್ತು ಎನ್ನಲಾಗಿದೆ. ಒಂದು ವೇಳೆ ಆಪರೇಷನ್ ಕಮಲ ವಿಫಲವಾದರೆ ಅವಮಾನ ಎನ್ನುವ ಕಾರಣಕ್ಕೆ ಕುಟುಂಬಸ್ಥರನ್ನೇ ಅಸ್ತ್ರ ಮಾಡಿಕೊಂಡ ಕಮಲ ನಾಯಕರು ವಸುಂದರ ರಾಜೆಯನ್ನೇ ಅಖಾಡಕ್ಕೆ ಇಳಿಸಿ ಅಳಿಯನನ್ನು ಸೆಳೆದಿದ್ದಾರೆ.

ಮೊದಲೇ ಕಾಂಗ್ರೆಸ್ ನಲ್ಲಿ ಅಸಮಾಧಾನಗೊಂಡು ರಾಹುಲ್ ಗಾಂಧಿಯಿಂದಲೂ ದೂರವಾಗಿದ್ದ ಜೋತಿರಾದಿತ್ಯ ಸಿಂಧಿಯಾ ಕಮಲಕ್ಕೆ ಜೈ ಎಂದಿದ್ದಾರೆ. ಜೊತೆಗೆ 22 ಜನ ಶಾಸಕರನ್ನು ಕರೆದುಕೊಂಡು ಹೊರಟಿದ್ದಾರೆ. ಇನ್ನೂ 8 ಜನ ಶಾಸಕರು ರಾಜೀನಾಮೆ ನೀಡುತ್ತಾರೆ ಎನ್ನುವ ಮಾಹಿತಿಯೂ ಇದೆ. ಒಟ್ಟಾರೆ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಮುಳುಗುತ್ತಿದೆ.

Click here Support Free Press and Independent Journalism

Pratidhvani
www.pratidhvani.com