ಷೇರುಪೇಟೆಯಲ್ಲಿ ನಿಲ್ಲದ ರಕ್ತದೋಕುಳಿ; ಒಂದೇ ದಿನದಲ್ಲಿ ₹7 ಲಕ್ಷ ಕೋಟಿ ನಷ್ಟ
ರಾಷ್ಟ್ರೀಯ

ಷೇರುಪೇಟೆಯಲ್ಲಿ ನಿಲ್ಲದ ರಕ್ತದೋಕುಳಿ; ಒಂದೇ ದಿನದಲ್ಲಿ ₹7 ಲಕ್ಷ ಕೋಟಿ ನಷ್ಟ

ಸೆನ್ಸೆಕ್ಸ್ ಮತ್ತು ನಿಫ್ಟಿ ಪ್ರಬಲ ಬೆಂಬಲ ಅಂಶವಾದ 36,000 ಮತ್ತು 10500ರ ಮಟ್ಟದಿಂದ ಕೆಳಕ್ಕೆ ಇಳಿದಿದ್ದು ಈ ವಾರವಿಡೀ ಮತ್ತಷ್ಟು ಕುಸಿತ ದಾಖಲಿಸುವ ಸಾಧ್ಯತೆ ಇದೆ. ಉಭಯ ಸೂಚ್ಯಂಕಗಳು ಗರಿಷ್ಠ ಮಟ್ಟದಿಂದ ಶೇ.10ರಷ್ಟು ಕುಸಿತ ದಾಖಲಿಸಿವೆ.  ಮುಂಬರುವ ದಿನಗಳಲ್ಲಿ ಶೇ.5-10ರಷ್ಟು ಕುಸಿತ ದಾಖಲಿಸುವ ಅಂದಾಜು ಇದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

ರೇಣುಕಾ ಪ್ರಸಾದ್ ಹಾಡ್ಯ

ದೇಶದ ಅಲಲ್ಲಿ ಹೋಳಿ ಹಬ್ಬದ ಸಂಭ್ರಮದಲ್ಲಿ ಬಣ್ಣದೋಕುಳಿ ಆಡುತ್ತಿದ್ದರೆ ಸತತ ಕುಸಿತದ ಹಾದಿಯಲ್ಲಿ ಸಾಗಿರುವ ಷೇರುಪೇಟೆಯಲ್ಲಿ ಮಾತ್ರ ರಕ್ತದೋಕುಳಿ ನಡೆದಿದೆ. ‘ಕಪ್ಪು ಸೋಮವಾರ’ದ ಕರಡಿ ಕುಣಿತಕ್ಕೆ ಹೂಡಿಕೆದಾರರು ಸುಮಾರು ₹7 ಲಕ್ಷ ಕೋಟಿ ರುಪಾಯಿಗಳ ನಷ್ಟ ಅನುಭವಿಸಿದ್ದಾರೆ. ಸದ್ಯಕ್ಕೆ ಪೇಟೆಯಲ್ಲಿ ಕರಡಿ ಕುಣಿತ ನಿಚ್ಛಳವಾಗಿದ್ದು, ಮತ್ತಷ್ಟು ರಕ್ತದೋಕುಳಿಯ ಸಾಧ್ಯತೆ ಹೆಚ್ಚಿದೆ. ವಿಸ್ತೃತ ಮಾರುಕಟ್ಟೆಯ ಎಲ್ಲಾ ಸೂಚ್ಯಂಕಗಳು ಇಳಿಜಾರಿನಲ್ಲಿ ಸಾಗಿವೆ. ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ದಿನದ ವಹಿವಾಟಿನಲ್ಲಿ ಶೇ.6ರಷ್ಟು ಕುಸಿತ ದಾಖಲಿಸಿವೆ. ದಿನದ ವಹಿವಾಟು ಮುಗಿಯುವ ಹೊತ್ತಿಗೆ ಕೊಂಚ ಚೇತರಿಸಿಕೊಂಡರೂ ಕುಸಿತದ ತೀವ್ರತೆ ತಗ್ಗಿಲ್ಲ. ದಿನದ ವಹಿವಾಟಿನಲ್ಲಿ 2200 ಅಂಶಗಳ ಕುಸಿತ ದಾಖಲಿಸಿದ್ದ ಸೆನ್ಸೆಕ್ಸ್ ದಿನದ ಅಂತ್ಯಕ್ಕೆ 1942 ಅಂಶ ಕುಸಿತದೊಂದಿಗೆ 35,635 ಅಂಶಗಳಿಗೆ ಸ್ಥಿರಗೊಂಡರೆ, ನಿಫ್ಠಿ 538 ಅಂಶ ಕುಸಿತದೊಂದಿಗೆ 10451 ಅಂಶಗಳಿಗೆ ಸ್ಥಿರಗೊಂಡಿತು.

ಸೆನ್ಸೆಕ್ಸ್ ಮತ್ತು ನಿಫ್ಟಿ ಪ್ರಬಲ ಬೆಂಬಲ ಅಂಶವಾದ 36,000 ಮತ್ತು 10500ರ ಮಟ್ಟದಿಂದ ಕೆಳಕ್ಕೆ ಇಳಿದಿದ್ದು ಈ ವಾರವಿಡೀ ಮತ್ತಷ್ಟು ಕುಸಿತ ದಾಖಲಿಸುವ ಸಾಧ್ಯತೆ ಇದೆ. ಉಭಯ ಸೂಚ್ಯಂಕಗಳು ಗರಿಷ್ಠ ಮಟ್ಟದಿಂದ ಶೇ.10ರಷ್ಟು ಕುಸಿತ ದಾಖಲಿಸಿವೆ.  ಮುಂಬರುವ ದಿನಗಳಲ್ಲಿ ಶೇ.5-10ರಷ್ಟು ಕುಸಿತ ದಾಖಲಿಸುವ ಅಂದಾಜು ಇದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

ಸೋಮವಾರದ ತೀವ್ರ ಕುಸಿತಕ್ಕೆ ಕಾರಣಗಳೇನು?

ಕೊರೊನಾ ವೈರಸ್ ಚೀನಾ ದೇಶದ ಒಳಗೆ ಹರಡಲಾರಂಭಿಸಿದಾಗ ಕುಸಿತದ ಹಾದಿಯಲ್ಲಿ ಸಾಗಿದ್ದ ಭಾರತೀಯ ಷೇರುಪೇಟೆ ಆಗಾಗ್ಗೆ ಜೇತರಿಕೆ ಕಂಡು ಏರಿಳತದ ನಡುವೆ ಜೀಕುತ್ತಿತ್ತು. ಆದರೆ, ಭಾರತದಲ್ಲೇ ಕೊರೊನಾ ವೈರಸ್ ಪತ್ರೆಯಾಗಿ, ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಪೇಟೆಯಲ್ಲಿ ತಲ್ಲಣ ಮೂಡಿದೆ. ಆಮದು ರಫ್ತು ಆಧಾರಿತ ಉದ್ಯಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಉತ್ಪಾದನೆ ಸ್ಥಗಿತಗೊಳ್ಳುವ, ತತ್ಪರಿಣಾಮ ಆರ್ಥಿಕತೆಗೆ ಹಿನ್ನಡೆಯಾಗುವ ಸಾಧ್ಯತೆಯಿಂದಾಗಿ ಷೇರುಪೇಟೆ ತೀವ್ರವಾಗಿ ಪ್ರತಿಕ್ರಿಯಿಸಿದೆ

ಇದರ ಜತೆಗೆ ಕೊರೊನಾ ವೈರಸ್ ನಿತ್ಯವೂ ಹೊಸಹೊಸ ದೇಶಗಳಿಗೆ ಹರಡುತ್ತಿರುವುದರಿಂದಾಗಿ ಜಾಗತಿಕ ಆರ್ಥಿಕ ಹಿಂಜರಿತದ ಮುನ್ಸೂಚನೆ ಸಿಕ್ಕಂತೆ ಜಾಗತಿಕ ಷೇರುಪೇಟೆಗಳಲ್ಲೂ ತಲ್ಲಣ ಮೂಡಿದೆ. ಹೀಗಾಗಿ ಫ್ರೆಂಚ್ ಸ್ಟಾಕ್ ಎಕ್ಸ್ಚೆಂಜ್ ಸೂಚ್ಯಂಕ ಸಿಎಸಿ, ಜರ್ಮನಿಯ ಡಿಎಎಕ್ಸ್, ಲಂಡನ್ ಸ್ಟಾಕ್ ಎಕ್ಚೆಂಜಿನ ಎಫ್ಟಿಎಸ್ಇ, ಜಪಾನಿನ ನಿಕ್ಕೀ, ಸ್ಟ್ರೈಟ್ ಟೈಮ್ಸ್ ಇಂಡೆಕ್ಸ್, ಹಾಂಗ್ ಕಾಂಗ್ ಹ್ಯಾಂಗ್ ಶೆಂಗ್, ಜಕಾರ್ತಾ ಕಾಂಪೋಸಿಟ್, ಷಾಂಗೈ ಕಾಂಪೊಸಿಟ್ ಸೇರಿದಂತೆ ಬಹುತೇಕ ಜಾಗತಿಕ ಷೇರುಪೇಟೆಗಳ ಸೂಚ್ಯಂಕಗಳು ಶೇ.4ರಿಂದ 6ರಷ್ಟು ಕುಸಿತ ದಾಖಲಿಸಿವೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿರುವ ಸೌದಿ ಅರೇಬಿಯಾದ ದರಸಮರವೂ ಷೇರುಪೇಟೆಗಳ ಕರಡಿ ಕುಣಿತಕ್ಕೆ ತಾಳಹಾಕಿದಂತಾಗಿದೆ. ಇವೆಲ್ಲದರ ಜತೆಗೆ ದೇಶದ ಐದನೇ ಮತ್ತು ಖಾಸಗಿ ಬ್ಯಾಂಕುಗಳ ಪೈಕಿ ನಾಲ್ಕನೇ ಅತಿ ದೊಡ್ಡ ಬ್ಯಾಂಕಾಗಿ ಈಗ ತನ್ನ ಅಸ್ಥಿತ್ವ ಕಾಯ್ದುಕೊಳ್ಳಲು ಹೆಣಗಾಡುತ್ತಿರುವ ಯೆಸ್ ಬ್ಯಾಂಕ್ ಹಗರಣವೂ ಷೇರುಪೇಟೆ ಕುಸಿತಕ್ಕೆ ಕಾರಣವಾಗಿದೆ. ಈ ನಾಲ್ಕು ಅಂಶಗಳು ಹೆಚ್ಚುಕಮ್ಮಿ ಕುಸಿತಕ್ಕೆ ಸಮಪಾಲು ನೀಡಿವೆ.

ಫೆಬ್ರವರಿ 2019ರ ನಂತರದಲ್ಲಿ ನಿಫ್ಟಿ ಅತಿ ಕನಿಷ್ಠ ಮಟ್ಟಕ್ಕೆ ಕುಸಿದಿದ್ದರೆ, ಸೆನ್ಸೆಕ್ಸ್ ಸಹ ಅದೇ ಹಾದಿಯಲ್ಲಿದೆ. ಕರೊನಾ ವೈರಸ್ ಹರಡುವಿಕೆ ಚೀನಾದಲ್ಲಿ ನಿಯಂತ್ರಣಕ್ಕೆ ಬಂದಿದ್ದರೂ ಚೀನಾದ ಹೊರಗೆ ವ್ಯಾಪಕವಾಗುತ್ತಿರುವುದು ಆತಂಕ್ಕೆಡೆ ಮಾಡಿದೆ. ಕೊರೊನಾ ವೈರಸ್ ಹರಡುವಿಕೆ ಜಾಗತಿಕವಾಗಿ ನಿಯಂತ್ರಣಕ್ಕೆ ಬಂದರೂ ಅದರ ಸರಣಿ ಹಾನಿಯು ಮುಂದಿನ ಎರಡು ಮೂರು ತ್ರೈಮಾಸಿಕಗಳ ವರೆಗೂ ವಿಸ್ತರಿಸಲಿದೆ. ಹೀಗಾಗಿ ಜಾಗತಿಕ ಷೇರುಪೇಟೆಗಳಲ್ಲಿ ಅಸ್ಥಿರತೆ ಕಾಡುತ್ತಿದೆ.

ಸೋಮವಾರದ ರಕ್ತದೋಕುಳಿ ವೇಳೆ ವಿಸ್ತೃತ ಮಾರುಕಟ್ಟೆಯ ಎಲ್ಲಾ ಸೂಚ್ಯಂಕಗಳು ತೀವ್ರ ಕುಸಿತ ದಾಖಲಿಸಿದವು. ಸೆನ್ಸೆಕ್ಸ್, ನಿಫ್ಟಿ ಜತೆಗೆ ಮಿಡ್ಕ್ಯಾಪ್ 100, ನಿಫ್ಟಿ ನೆಕ್ಸ್ಟ್ 500, ನಿಫ್ಟಿ 500, ನಿಫ್ಟಿ ಬ್ಯಾಂಕ್, ನಿಫ್ಟಿ ಐಟಿ, ನಿಫ್ಟಿ ರಿಯಾಲ್ಟಿ, ನಿಫ್ಟಿ ಇನ್ಫ್ರಾ, ನಿಫ್ಟಿ ಎನರ್ಜಿ, ನಿಫ್ಟಿ ಫಾರ್ಮ, ನಿಫ್ಟಿ ಪಿಎಸ್ಯು ಬ್ಯಾಂಕ್, ನಿಫ್ಟಿ ಮಿಡಿಯಾ, ನಿಫ್ಟಿ ಮೆಟಲ್ ಮತ್ತು ನಿಫ್ಟಿ ಆಟೋ ಸೂಚ್ಯಂಕಗಳು ಶೇ.4ರಿಂದ 8ರಷ್ಟು ಕುಸಿತ ದಾಖಲಿಸಿದವು. ಷೇರುಪೇಟೆಯಲ್ಲಿ ಅತಿಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ ಅತಿದೊಡ್ಡ ಕಂಪನಿ ರಿಲಯನ್ಸ್ ಇಂಡರ್ಸ್ಟ್ರೀಸ್ (ಆರ್ಐಎಲ್) ಶೇ.13ರಷ್ಟು ಕುಸಿತ ದಾಖಲಿಸಿದೆ. ಕಳೆದ ಹನ್ನೊಂದು ವರ್ಷಗಳಲ್ಲೇ ಅತಿ ಗರಿಷ್ಠ ಕುಸಿತ ಇದಾಗಿದೆ. ಮಾರುಕಟ್ಟೆ ಬಂಡವಾಳ 100 ಬಿಲಿಯನ್ ಡಾಲರ್ ದಾಟಿದ ಮೊದಲ ಭಾರತದ ಕಂಪನಿ ರಿಲಯನ್ಸ್.

ಇಂತಹ ಕುಸಿತದ ನಡುವೆಯು ಎಸ್ಬಿಐನಿಂದ ಜೀವದಾನ ಪಡೆಯುತ್ತಿರುವ ಯೆಸ್ ಬ್ಯಾಂಕ್ ಷೇರು ಶೇ.20ರಷ್ಟು ಜಿಗಿತ ಸಾಧಿಸಿತು. ಮೋದಿ ಸರ್ಕಾರ ಮಾರಾಟಕ್ಕೆ ಇಟ್ಟಿರುವ ಬಿಪಿಸಿಎಲ್  ಸಹ ಏರುಹಾದಿಯಲ್ಲಿ ಕ್ರಮಿಸಿತು. ಉಳಿದಂತೆ ಭಾರ್ತಿ ಇನ್ಫ್ರಾಟೆಲ್ ಮತ್ತು ಐಷರ್ ಮೋಟಾರ್ ಏರಿಕೆ ದಾಖಲಿಸಿದ ಕೆಲವೇ ಕೆಲವು ಷೇರುಗಳು.

ಮುಂದೇನು?

ಮಾರುಕಟ್ಟೆ ಕುಸಿತದ ಹಾದಿಗೆ ಅಂತ್ಯಯಾವಾಗ ಎಂಬುದು ಯಾರಿಗೂ ಸ್ಪಷ್ಟವಿಲ್ಲ. ದೇಶದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಸೋಮವಾರ 43ಕ್ಕೆ ಏರಿದೆ. ಕೇರಳದ ಮೂರು ವರ್ಷದ ಮಗುವಿಗೂ ವೈರಸ್ ತಗುಳಿರುವುದು ಆತಂಕಕ್ಕೆ ಎಡೆ ಮಾಡಿದೆ. ನಿತ್ಯವೂ ಹೀಗೆ ವೈರಸ್ ಪೀಡಿತರ ಸಂಖ್ಯೆ ಏರುತ್ತಾ ಹೋದರೆ ಅದು ಮಾರುಕಟ್ಟೆಯಲ್ಲಿ ಮೂಡಿಸಿರುವ ತಲ್ಲಣ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಆಗ ಪೇಟೆ ಕುಸಿತದ ವೇಗವು ತೀವ್ರಗೊಳ್ಳುತ್ತದೆ.

ಸದ್ಯಕ್ಕೆ ಜಾಗತಿಕ ವಿದ್ಯಮಾನಗಳು ಮಾರುಕಟ್ಟೆಯ ಏರಿಳಿತವನ್ನು ನಿಯಂತ್ರಿಸುವ ಹಂತದಲ್ಲಿರುವುದರಿಂದ ಸಣ್ಣ ಹೂಡಿಕೆದಾರರು ಮಾರುಕಟ್ಟೆಯಿಂದ ದೂರ ಉಳಿಯುವುದು ಒಳಿತು. ಆದರೆ, ದೀರ್ಘಕಾಲದ ಅವಧಿಗೆ ಹೂಡಿಕೆ ಮಾಡುವವರಿಗೆ ಇದು ಸಕಾಲ. ಆದರೆ, ಸಣ್ಣ ಪ್ರಮಾಣದಲ್ಲಿ ಉತ್ತಮ ಷೇರುಗಳನ್ನು ಖರೀದಿಸಬೇಕು. ಉತ್ತಮ ಗುಣಮಟ್ಟದ ಕಂಪನಿಗಳ ಷೇರುಗಳು ವರ್ಷದ ಗರಿಷ್ಠಮಟ್ಟದಿಂದ ಶೇ.25-50ರಷ್ಟು ಕುಸಿದಿವೆ. ಅಂತಹ ಷೇರುಗಳನ್ನು ಆಯ್ಕೆ ಮಾಡಿ ಅಲ್ಪಪ್ರಮಾಣದಲ್ಲಿ ಖರೀದಿಸಬೇಕು. ದೀರ್ಘಕಾಲದ ಹೂಡಿಕೆ ಮಾಡದವರು ಈ ಹಂತದಲ್ಲಿ ಮಾರುಕಟ್ಟೆ ಪ್ರವೇಶಿಸುವುದು ಸೂಕ್ತವಲ್ಲ.

Click here Support Free Press and Independent Journalism

Pratidhvani
www.pratidhvani.com