ಮಧ್ಯಪ್ರದೇಶದಲ್ಲಿ ಫಲ ನೀಡುತ್ತಾ ಕರ್ನಾಟಕ ಮಾದರಿ ಆಪರೇಷನ್‌ ಕಮಲ?
ರಾಷ್ಟ್ರೀಯ

ಮಧ್ಯಪ್ರದೇಶದಲ್ಲಿ ಫಲ ನೀಡುತ್ತಾ ಕರ್ನಾಟಕ ಮಾದರಿ ಆಪರೇಷನ್‌ ಕಮಲ?

ಮಧ್ಯಪ್ರದೇಶದ ಈ ಆಪರೇಷನ್‌ ಕಮಲಕ್ಕೆಕರ್ನಾಟಕವೇ ಮಾದರಿಯಾಗಿದ್ದು, ಹೆಚ್‌.ಡಿ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸಿ ಬಿ.ಎಸ್‌ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ ರೀತಿಯಲ್ಲೇ ಕಾಂಗ್ರೆಸ್‌ನ ಕಮಲನಾಥ್‌ ಅವರನ್ನು ಕೆಳಕ್ಕಿಳಿಸಿ ಮಾಜಿ ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌವ್ಹಾಣ್‌ ಅವರನ್ನು ಮುಖ್ಯಮಂತ್ರಿ ಮಾಡಲು ತಯಾರಿ ಜೋರಾಗಿದೆ.

ಕೃಷ್ಣಮಣಿ

ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಇದೀಗ ಮಧ್ಯಪ್ರದೇಶದಲ್ಲೂ ಬಿಜೆಪಿ ಸರ್ಕಾರ ರಚನೆ ಮಾಡುವ ಕಸರತ್ತು ನಡೆಸುತ್ತಿದೆ. ಕಾಂಗ್ರೆಸ್‌ ಶಾಸಕರನ್ನು ಸೆಳೆದು ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌವ್ಹಾಣ್‌ ಅವರನ್ನು ಮುಖ್ಯಮಂತ್ರಿ ಮಾಡಲು ಎಲ್ಲಾ ರೀತಿಯ ಕಸರತ್ತು ನಡೆಯುತ್ತಿದೆ. ಮಧ್ಯಪ್ರದೇಶದ ಈ ಆಪರೇಷನ್‌ ಕಮಲಕ್ಕೆ ಕರ್ನಾಟಕವೇ ಮಾದರಿಯಾಗಿದ್ದು, ಹೆಚ್‌.ಡಿ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸಿ ಬಿ.ಎಸ್‌ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ ರೀತಿಯಲ್ಲೇ ಕಾಂಗ್ರೆಸ್‌ನ ಕಮಲನಾಥ್‌ ಅವರನ್ನು ಕೆಳಕ್ಕಿಳಿಸಿ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌವ್ಹಾಣ್‌ ಅವರನ್ನು ಮುಖ್ಯಮಂತ್ರಿ ಮಾಡಲು ತಯಾರಿ ಜೋರಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಶಾಸಕರ ಜೊತೆಗೆ ಮೂವರು ಜೆಡಿಎಸ್‌ ಶಾಸಕರನ್ನು ಸೆಳೆಯಲಾಗಿತ್ತು. ಆದರೆ ಮಧ್ಯಪ್ರದೇಶದಲ್ಲಿ ಕೇವಲ ಕಾಂಗ್ರೆಸ್‌ ಪಕ್ಷದ ಶಾಸಕರಿಗೆ ಕೂ ಹಾಕಿದೆ ಕಮಲ ಪಕ್ಷ.

230 ಸ್ಥಾನಗಳ ಬಲಾಬಲ ಹೊಂದಿರುವ ಮಧ್ಯಪ್ರದೇಶ ವಿಧಾನಸಭೆಗೆ 2018ರ ನವೆಂಬರ್‌ 28ರಂದು ಚುನಾವಣೆ ನಡೆದಿತ್ತು. 11, ಡಿಸೆಂಬರ್‌ 2018ರಂದು ಫಲಿತಾಂಶ ಪ್ರಕಟವಾಗಿತ್ತು. ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದಿದ್ದವು. ಆದರೆ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿ ಕಾಂಗ್ರೆಸ್‌ 114 ಸ್ಥಾನಗಳನ್ನು ಗಳಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 109 ಸ್ಥಾನಗಳನ್ನು ಪಡೆದ ಬಿಜೆಪಿ ಪಕ್ಷ ಎರಡನೇ ದೊಡ್ಡ ಪಕ್ಷವಾಗಿತ್ತು. ಇನ್ನುಳಿದಂತೆ ನಾಲ್ವರು ಪಕ್ಷೇತರರು, ಇಬ್ಬರು ಬಿಎಸ್‌ಪಿ, ಓರ್ವ ಸಮಾಜವಾದಿ ಪಕ್ಷದ ಶಾಸಕರು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ ಅಧಿಕಾರ ಹಿಡಿಯಲು ಎರಡು ಸ್ಥಾನಗಳ ಕೊರತೆ ಎದುರಾದರೆ, ಬಿಜೆಪಿ ಅಧಿಕಾರ ಹಿಡಿಯಲು 7 ಶಾಸಕರ ಬಲ ಕಡಿಮೆ ಆಗಿತ್ತು. ಸರಳ ಬಹುಮತಕ್ಕೆ ಸನಿಹದಲ್ಲಿದ್ದ ಕಾಂಗ್ರೆಸ್‌, ಪಕ್ಷೇತರ ನಾಲ್ವರು, ಬಿಎಸ್‌ಪಿ ಇಬ್ಬರು ಹಾಗು ಎಸ್‌ಪಿಯ ಒಬ್ಬರು ಶಾಸಕರನ್ನು ಸೇರಿಸಿಕೊಂಡು ಅಧಿಕಾರ ಗದ್ದುಗೆ ಹಿಡಿದಿತ್ತು.

ಇದೀಗ ಬಿಜೆಪಿ ಆಪರೇಷನ್‌ ಕಮಲದ ಮೂಲಕ ಕಡಿಮೆಯಾಗಿದ್ದ 7 ಜನರನ್ನು ಸೆಳೆದು ಅಧಿಕಾರ ಹಿರಿಯಲು ಮುಂದಾಗಿದೆ. ಇದರ ನಡುವೆ ಬಿಜೆಪಿಯ ಇಬ್ಬರು ಶಾಸಕರು ಸಾವನ್ನಪ್ಪಿದ್ದು, ವಿಧಾನಸಭಾ ಬಲಾಬಲ 228ಕ್ಕೆ ಕುಸಿದಿದ್ದು, ಸದ್ಯಕ್ಕೆ ಬಹುಮತ ಸಾಧಿಸಲು 115 ಮತಗಳು ಬೇಕಾಗಿವೆ. ಬಿಜೆಪಿ 107 ಶಾಸಕರನ್ನು ಹೊಂದಿದ್ದು, 8 ಶಾಸಕರ ಅವಶ್ಯಕತೆ ಇದೆ. ಆ 8 ಶಾಸಕರನ್ನು ಕಾಂಗ್ರೆಸ್‌ನಿಂದ ಸೆಳೆದಿದೆ ಎನ್ನಲಾಗ್ತಿದೆ.

ಮಧ್ಯಪ್ರದೇಶ ಸರ್ಕಾರ ಉರುಳಿಸಲು ಬಿಜೆಪಿ ಒಬ್ಬೊಬ್ಬರಿಗೆ 25 ರಿಂದ 35 ಕೋಟಿ ರೂಪಾಯಿಗಳನ್ನು ಕೊಡುವ ಆಮೀಷ ಒಡ್ಡುತ್ತಿದೆ ಎಂದು ಕಾಂಗ್ರೆಸ್‌ ನಾಯಕ ಹಾಗು ಮಾಜಿ ಸಿಎಂ ದಿಗ್ವಿಜಯ್‌ ಸಿಂಗ್‌ ಆರೋಪ ಮಾಡಿದ್ದರು. ಕಳೆದ 3 ದಿನಗಳ ಹಿಂದೆಯೇ ದಿಗ್ವಿಜಯ್ ಸಿಂಗ್ ಆರೋಪ ಮಾಡಿದ ಬಳಿಕ ಆಪರೇಷನ್‌ ಕಮಲ ಜೋರಾಗಿದೆ. ಇದೀಗ ಬೆಂಗಳೂರಿಗೆ ನಾಲ್ವರು ಶಾಸಕರನ್ನು ಕರೆದುಕೊಂಡು ಬರಲಾಗಿದೆ ಎನ್ನಲಾಗ್ತಿದ್ದು, ಉಳಿದವರನ್ನು ಹರಿಯಾಣದ ಮನಸೆರಾ ಹೋಟೆಲ್‌ನಲ್ಲಿ ಇರಿಸಲಾಗಿದೆ ಎನ್ನುವ ವರದಿಗಳು ಬರುತ್ತಿವೆ. ಮೊದಲ ಕಂತಿನಲ್ಲಿ ಈಗಾಗಲೇ ತಲಾ 5 ಕೋಟಿ ರೂಪಾಯಿ ಹಣವನ್ನು ಕೊಟ್ಟಿದ್ದು, 2ನೇ ಕಂತಿನ ಹಣವನ್ನು ರಾಜ್ಯಸಭಾ ಚುನಾವಣೆ ವೇಳೆ ಹಾಗು ಅಂತಿಮವಾಗಿ ಕಮಲನಾಥ್‌ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ಸಮಯದಲ್ಲಿ ಕೊಡಲಾಗುತ್ತದೆ ಎಂದಿದ್ದಾರೆ. ಆದರೆ ದಿಗ್ವಿಜಯ್‌ ಸಿಂಗ್‌ ಆರೋಪವನ್ನು ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌವ್ಹಾಣ್ ತಳ್ಳಿ ಹಾಕಿದ್ದರು. ಆದರೆ ಇದೀಗ ಬಿಜೆಪಿ ಪಕ್ಷದೊಳಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಆಪರೇಷನ್‌ ಕಮಲ ನಡೆಯುತ್ತಿದೆ ಎನ್ನುವುದನ್ನು ಖಚಿತಪಡಿಸುವಂತಿದೆ.

ಬಿಜೆಪಿ ಶಾಸಕ ನರೋತ್ತಮ್‌ ಮಿಶ್ರಾ ನೇತೃತ್ವದಲ್ಲಿ ಆಪರೇಷನ್‌ ನಡೆಯುತ್ತಿದೆ. ಗುರುಗ್ರಾಮದ ಐಟಿಸಿ ಗಾರ್ಡೇನಿಯಾ ಹೋಟೆಲ್‌ನಲ್ಲಿ ಹಣಕಾಸು ವ್ಯವಹಾರ ನಡೆದಿದೆ ಎಂದು ದಿಗ್ವಿಜಯ್‌ ಸಿಂಗ್‌ ದೆಹಲಿಯಲ್ಲಿ ಇಂದು ಆರೋಪ ಮಾಡಿದ್ದಾರೆ. ಆದರೆ ಮಾಧ್ಯಮಗಳ ಜೊತೆ ದೂರವಾಣಿಯಲ್ಲಿ ಮಾತನಾಡಿರುವ ನರೋತ್ತಮ್‌ ಮಿಶ್ರಾ, ನಾನು ದೆಹಲಿಯಲ್ಲಿ ಇದ್ದೇನೆ. ಕಾಂಗ್ರೆಸ್‌ನ ಹಲವು ಶಾಸಕರು ಕಾಂಗ್ರೆಸ್‌ ಪಕ್ಷದ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಆದರೆ ನಾವು ಅವರನ್ನು ಸೆಳೆಯುವ ಕೆಲಸ ಮಾಡಿಲ್ಲ ಎಂದಿದ್ದಾರೆ ಬಿಜೆಪಿ ಪಕ್ಷದವರು. ಮಧ್ಯಪ್ರದೇಶ ಉನ್ನತ ಶಿಕ್ಷಣ ಸಚಿವ ಜಿತು ಪಟ್ವಾರಿ ಮಾತನಾಡಿ ಕಾಂಗ್ರೆಸ್‌ ಶಾಸಕರನ್ನು ಕೂಡಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್‌ ವಕ್ತಾರ ಶಕ್ತಿ ಸಿನ್‌ ಗೀಯೆಲ್‌ ಮಾತನಾಡಿ, ಯಾವ ಸರ್ಕಾರ ಬೇಕು ಎನ್ನುವುದನ್ನು ಜನರು ನಿರ್ಧಾರ ಮಾಡ್ತಾರೆ. ಆದರೆ ಗುಜರಾತ್‌, ಕರ್ನಾಟಕ, ಗೋವಾ, ಮಣಿಪುರದಲ್ಲಿ ಕಪ್ಪುಹಣವನ್ನು ಬಳಸಿ ಬಿಜೆಪಿ ಅಧಿಕಾರ ಹಿಡಿದಿದೆ ಎಂದು ಆರೋಪಿಸಿದ್ದಾರೆ. ಈ ಆಪರೇಷನ್‌ ಕಮಲಕ್ಕೆ ಬಿಜೆಪಿಯ ಮುಖ್ಯ ನಾಯಕರುಗಳ ಸೂಚನೆ ಇದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗು ಅಮಿತ್‌ ಷಾ ಸೂಚನೆ ಮೇರೆಗೆ ನಡೆಯುತ್ತಿದೆ ಎಂದಿದ್ದಾರೆ.

ಕರ್ನಾಟಕಕ್ಕೂ ಮಧ್ಯಪ್ರದೇಶ ಆಪರೇಷನ್‌ ಕಮಲಕ್ಕೆ ಒಂದೇ ರೀತಿಯ ಸಾಮ್ಯತೆ ಇದೆ. ಕರ್ನಾಟಕದಲ್ಲಿ ಕುಮಾರಸ್ವಾಮಿ ಸರ್ಕಾರ ಜಾರಿಗೆ ಬಂದ 14 ತಿಂಗಳಿಗೆ ಆಪರೇಷನ್‌ ಕಮಲ ಸಕ್ಸಸ್‌ ಆಗಿತ್ತು. ಇದೀಗ ಮಧ್ಯಪ್ರದೇಶದಲ್ಲೂ ಕಮಲನಾಥ್‌ ಸರ್ಕಾರ ಅಧಿಕಾರಕ್ಕೆ ಬಂದ 14 ತಿಂಗಳಿಗೆ ಅಧಿಕಾರ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ. ಬಿಜೆಪಿ ಹೈಕಮಾಂಡ್‌ ಆಪರೇಷನ್‌ ಕಮಲಕ್ಕೆ ಅಸ್ತು ಎಂದಿದೆ. ಆದರೆ ಸಂಘ ಪರಿವಾರದ ನಾಯಕನ್ನು ಮುಖ್ಯಮಂತ್ರಿ ಪಟ್ಟಕ್ಕೆ ತರುವ ಲೆಕ್ಕಾಚಾರಗಳು ನಡೆದಿವೆ ಎನ್ನಲಾಗ್ತಿದೆ. ಒಂದು ವೇಳೆ 15 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸಿದ ಶಿವರಾಜ್‌ ಸಿಂಗ್‌ ಚೌವ್ಹಾಣ್‌, ಮತ್ತೆ ನನ್ನ ಮುಂದಾಳತ್ವದಲ್ಲೇ 109 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಹಾಗಾಗಿ ನಾನೇ ಮುಖ್ಯಮಂತ್ರಿ ಆಗಬೇಕು ಎಂದು ಪಟ್ಟು ಹಿಡಿದರೆ ಮಾತ್ರ ಆಪರೇಷನ್‌ ಕಮಲ ಠುಸ್‌ ಆಗಬಹುದು. ಒಂದು ವೇಳೆ ಶಿವರಾಜ್‌ ಸಿಂಗ್‌ ಚೌವ್ಹಾಣ್‌ ಬದಲಿ ಲೆಕ್ಕಾಚಾರಕ್ಕೆ ಒಪ್ಪಿಗೆ ಕೊಟ್ಟರೆ, ಆಪರೇಷನ್‌ ಸಕ್ಸಸ್‌ ಆಗುವುದು ಪಕ್ಕಾ ಎನ್ನಲಾಗ್ತಿದೆ.

Click here Support Free Press and Independent Journalism

Pratidhvani
www.pratidhvani.com