So called ʼಗುಜರಾತ್‌ ಮಾಡೆಲ್‌ʼನ ಹಿಂದಿನ ಅಸಲಿಯತ್ತು
ರಾಷ್ಟ್ರೀಯ

So called ʼಗುಜರಾತ್‌ ಮಾಡೆಲ್‌ʼನ ಹಿಂದಿನ ಅಸಲಿಯತ್ತು

ಒಂದೆಡೆ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನ. ಮತ್ತೊಂದಡೆ ಚುನಾವಣಾ ರಣತಂತ್ರದ ಭಾಗವಾಗಿ ಬಿಜೆಪಿ ಇಡೀ ದೇಶದ ಎದುರು ಇಟ್ಟ ಆ ಒಂದು ಮಾಂತ್ರಿಕ ಪದವೇ ಗುಜರಾತ್ ಮಾಡೆಲ್

ಶಿವಕುಮಾರ್‌ ಎ

ಭಾಗಶಃ 2014ರಲ್ಲಿ ಭಾರತದ ಲೋಕಸಭಾ ಚುನಾವಣೆಯಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಮತ್ತೆ ಮತ್ತೆ ಪ್ರತಿಧ್ವನಿಸಿದ ಪದ ಗುಜರಾತ್ ಮಾಡೆಲ್. ನರೇಂದ್ರ ಮೋದಿ ಎಂಬ ಪದಕ್ಕಿಂತ ಈ ಪದ ಅತಿಹೆಚ್ಚು ಬಾರಿ ಪ್ರಯೋಗಿಸಲ್ಪಟ್ಟಿತ್ತು ಹಾಗೂ ಅಂದಿನ ದಿನಗಳಲ್ಲಿ ಇದೊಂದು ಗೆಲುವಿನ ಮಂತ್ರವೇ ಆಗಿ ಹೋಗಿತ್ತು ಎಂದರೆ ತಪ್ಪಾಗಲಾರದು.

ಒಂದೆಡೆ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನ ಅಂದಿನ ಯುಪಿಎ ಸರ್ಕಾರದ ವಿರುದ್ಧ ಮುರಿದುಕೊಂಡು ಬಿದ್ದಿದ್ದರೆ, ಮತ್ತೊಂದಡೆ ಚುನಾವಣಾ ರಣತಂತ್ರದ ಭಾಗವಾಗಿ ಬಿಜೆಪಿ ಇಡೀ ದೇಶದ ಎದುರು ಇಟ್ಟ ಆ ಒಂದು ಮಾಂತ್ರಿಕ ಪದವೇ ಗುಜರಾತ್ ಮಾಡೆಲ್..!

ಈ ಪದ ಭಾರತೀಯ ಮತದಾರರನ್ನು ಪ್ರಭಾವಿಸುವಲ್ಲಿ ಸಾಕಷ್ಟು ಸಫಲವಾಗಿತ್ತು. ಪರಿಣಾಮ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿತು. ಹೇಳಿ ಕೇಳಿ ಗುಜರಾತ್ ವರೆಗೂ ಕ್ರಮಿಸಿ ನಿಜಕ್ಕೂ ಏನದು ಗುಜರಾತ್ ಮಾಡೆಲ್? ಎಂದು ಪರೀಕ್ಷಿಸಲು ಸಾಧ್ಯವಾಗದ ಮತದಾರ ಕೊನೆಗೂ ಕೇಸರಿ ಪಡೆಯ ಮಾತನ್ನು ನಂಬಿ ಮತ ಚಲಾಯಿಸಿದ್ದ. ಆದರೆ, ಕಳೆದ 6 ವರ್ಷದಿಂದ ಭಾರತೀಯರ ಪಾಲಿಗೆ ಗುಜರಾತ್ ಮಾಡೆಲ್ ಎಂಬುದು ಅಕ್ಷರಶಃ ಗನ್ನಡಿಯೊಳಗಿನ ಕಗ್ಗಂಟಾಗಿಯೇ ಉಳಿದಿದೆ.

ಈ ನಡುವೆ ಅಮೆರಿಕ ಅಧ್ಯಕ್ಷ ಭಾರತದ ಗುಜರಾತ್ಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸ್ಲಂ ಸುತ್ತಾ ಗೋಡೆ ಕಟ್ಟಿಸಲಾಗುತ್ತಿದೆ. ನಮಸ್ತೆ ಟ್ರಂಪ್ ಕಾರ್ಯಕ್ರಮ ನಡೆಯುತ್ತಿರುವ ಮೊಟೇರಾ ಸ್ಟೇಡಿಯಂ ಸುತ್ತ ವಾಸಿಸುತ್ತಿರು ಸ್ಲಂ ಜನರನ್ನು ಬೇರೆಡೆ ಸ್ಥಳಾಂತರಿಸಲಾಗುತ್ತಿದೆ ಎಂಬ ಸುದ್ದಿ ರಾಷ್ಟ್ರದೆಲ್ಲೆಡೆ ಸದ್ದು ಮಾಡುತ್ತಿದೆ. ಅಲ್ಲದೆ, ಗುಜರಾತ್ ಮಾಡೆಲ್ ಕುರಿತು ದೊಡ್ಡದೊಂದು ಭ್ರಮೆಯಲ್ಲಿದ್ದ ಭಾರತೀಯರಿಗೆ ಅಸಲಿಗೆ ಗುಜರಾತ್ ಏನು? ಎಂಬುದನ್ನು ಈ ಸುದ್ದಿಗಳು ಮನದಟ್ಟು ಮಾಡಿಕೊಡುವಲ್ಲಿ ಸಫಲವಾಗಿವೆ.

ಹಾಗಾದರೆ ಏನುದು ಗುಜರಾತ್ ಮಾಡೆಲ್? ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಗುಜರಾತ್ ನಿಜಕ್ಕೂ ಅಭಿವೃದ್ಧಿ ಸಾಧಿಸಿದೆಯೇ? ಕಳೆದ ಒಂದು ದಶಕದಿಂದಲೂ ಗುಜರಾತ್ ಆರ್ಥಿಕತೆಯನ್ನು ಅರ್ಥಶಾಸ್ತ್ರಜ್ಞರು ಟೀಕಿಸುತ್ತಿರುವುದು ಏಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಗುಜರಾತ್ ಮಾದರಿ?

ಮೋದಿಯ ಆಳ್ವಿಕೆಯಲ್ಲಿ ಈಗಿನ ಗುಜರಾತ್ ಸುಮಾರು 12 ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದ ಮಾನ್ಯ ನರೇಂದ್ರ ಮೋದಿಯವರ ಸಾಧನೆಗಳಾದರೂ ಏನು? ಅವರು ಜಾರಿಗೆ ತಂದ ಜನಸಾಮಾನ್ಯರಿಗೆ ಉಪಯೋಗವಾಗುವ ಕಾರ್ಯಗಳಾದರೂ ಯಾವುವು? ಎಂಬಿತ್ಯಾದಿಗಳ ಮಾಹಿತಿ ಇಲ್ಲಿದೆ. ಇದನ್ನು ಓದಿದ ನಂತರ ಅಭಿವೃದ್ಧಿ ಎಂದರೆ ಏನು? ನಿಜಕ್ಕೂ ಗುಜರಾತ್ ಮಾದರಿಯ ಅವಶ್ಯಕತೆ ನಮಗಿದೆಯೇ? ಎಂಬುದನ್ನು ನೀವೆ ನಿರ್ಧರಿಸಿ.

ಅಸಲಿಗೆ ಗುಜರಾತ್ ರಾಜ್ಯವನ್ನು ಬಿ.ಜೆ.ಪಿ.ಯು 1998-99 ರಿಂದ ಇಂದಿನ ವರೆಗೆ ಆಳ್ವಿಕೆ ಮಾಡುತ್ತಾ ಬಂದಿದೆ. (ಅಂದರೆ ಸರಿಸುಮಾರು 20 ವರ್ಷ). ಇದರಲ್ಲಿ ಮೋದಿಯ ಆಳ್ವಿಕೆ ಆರಂಭವಾದದ್ದು 10, 2001 ರಿಂದ.

19998-99 ರಿಂದ 2001-02 ರವರೆಗೆ ಗುಜರಾತಿನ ಮುಖ್ಯಮಂತ್ರಿಯಾಗಿ ಬಿಜೆಪಿಯ ಕೇಶುಭಾಯ್ ಪಟೇಲರು ಅಧಿಕಾರದಲ್ಲಿದ್ದರು. ಆಗ ಗುಜರಾತ್ ರಾಜ್ಯದ ವಾರ್ಷಿಕ ಅಭಿವೃದ್ಧಿ ದರ 7.5% ಇತ್ತು. ಭಾರತದ ಅಭಿವೃದ್ಧಿ ದರ 10.7 % ಇತ್ತು. ಅಂದರೆ ಬಿಜೆಪಿಯು ಅಧಿಕಾರಕ್ಕೆ ಬಂದಾಕ್ಷಣ ಮಹತ್ತರವಾದ ಪವಾಡಗಳೇನೂ ಗುಜರಾತಿನಲ್ಲಿ ನಡೆಯಲಿಲ್ಲ ಮತ್ತು ಮುಂದಿನ 10 ವರ್ಷದ ಮೋದಿ ಆಳ್ವಿಕೆಯಲ್ಲೂ ಗುಜರಾತ್ನಲ್ಲಿ ಯಾವುದೇ ಪವಾಡ ಆಗಿಲ್ಲ ಎಂಬುದನ್ನು ಸ್ವತಃ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ

2002-03 ರಿಂದ ಗುಜರಾತ್ನಲ್ಲಿ ಸತತ 10 ವರ್ಷ ಮೋದಿಯವರ ಆಡಳಿತ ನಡೆದಿದ್ದು ಈ ಅವಧಿಯಲ್ಲಿ ಗುಜರಾತ್ ಅತ್ಯಂತ ವೇಗವಾಗಿ ಬೆಳೆದಿದೆ. ದೇಶದ ಬೇರೆ ಯಾವ ರಾಜ್ಯಗಳೂ ಈ ರೀತಿಯ ಅಭಿವೃದ್ಧಿಯನ್ನು ಸಾಧಿಸಿಲ್ಲ ಮೋದಿ ಅವರ ಸಮರ್ಥ ನಾಯಕತ್ವವೇ ಇದಕ್ಕೆ ಕಾರಣ ಎಂಬ ಭ್ರಮೆಯನ್ನು ಹುಟ್ಟುಹಾಕಲಾಗಿತ್ತು.

ಆದರೆ, ಅಸಲಿಗೆ ಕಥೆ ಹಾಗೂ ಅಂಕಿಅಂಶಗಳು ಬೇರೆಯದೇ ಸತ್ಯವನ್ನು ನುಡಿಯುತ್ತಿವೆ.

ಜಿಡಿಪಿ ಲೆಕ್ಕಾಚಾರ

ಆದರೆ, ವಾಸ್ತವ ಎಂದರೆ ಇದೇ ಅವಧಿಯಲ್ಲಿ ಗುಜರಾತ್ ಗಿಂತಲೂ ಇತರೆ ರಾಜ್ಯಗಳು ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದವು. ಭಾರತದ ರಿಸರ್ವ್ ಬ್ಯಾಂಕ್ ನೀಡುವ ಅಂಕಿಅಂಶಗಳ ಪ್ರಕಾರ 2013ರ ವೇಳೆಗೆ ವಾರ್ಷಿಕ ಸರಾಸರಿ ಅಭಿವೃದ್ಧಿಯಲ್ಲಿ(Net State Domestic Product) ಅಂದರೆ ಜಿಡಿಪಿ ಲೆಕ್ಕಾಚಾರದಲ್ಲಿ ಶೇ.20ರ ಸರಾಸರಿಯಲ್ಲಿ ಮಹರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಶೇ.18ರ ಸರಾಸರಿಯಲ್ಲಿ ಹರಿಯಾಣ ಎರಡನೇ ಸ್ಥಾನದಲ್ಲೂ, ಶೇ.17.5ರ ಸರಾಸರಿಯಲ್ಲಿ ಆಂಧ್ರಪ್ರದೇಶ 3ನೇ ಸ್ಥಾನದಲ್ಲಿದ್ದರೆ, ಶೇ. 17ರ ಸರಾಸರಿಯಲ್ಲಿ ತಮಿಳುನಾಡು ನಾಲ್ಕನೇಯ ಸ್ಥಾನದಲ್ಲಿದೆ.

ಇನ್ನೂ 2013ರ ವೇಳೆಗೆ ಶೇ.16ರ ಸರಾಸರಿಯೊಂದಿಗೆ ಗುಜರಾತ್ ಐದನೇ ಸ್ಥಾನದಲ್ಲಿತ್ತು ಎಂಬುದು ಸತ್ಯ. ಆದರೆ, ಆ ಕಾಲದಲ್ಲಿ ಇದನ್ನು ಮರೆಮಾಚಲಾಗಿತ್ತು. ಈಗಲೂ ಜಿಡಿಪಿ ಲೆಕ್ಕಾಚಾರದಲ್ಲಿ ಗುಜರಾತ್ ಐದನೇ ಸ್ಥಾನದಲ್ಲೇ ಇದೆ ಎಂಬುದು ಉಲ್ಲೇಖಾರ್ಹ.

ಕೃಷಿ ಅಭಿವೃದ್ಧಿ

ನರೇಂದ್ರ ಮೋದಿಯವರಿಂದ ಗುಜರಾತಿನ ಕೃಷಿ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ ಭಾರತದ ಅಭಿವೃದ್ಧಿಗಿಂತ ಹೆಚ್ಚಿನದಾಗಿ ಅಭಿವೃದ್ಧಿ ಗುಜರಾತಿನಲ್ಲಿ ನಡೆದಿದೆ. ಇದಕ್ಕೆಲ್ಲ ಮೋದಿಯವರ ಸಮರ್ಥ ನಾಯಕತ್ವ, ಒಳನೋಟ ಇವುಗಳೇ ಕಾರಣ ಎಂಬ ಮಾತುಗಳು ಆಗಾಗ್ಗೆ ಕೇಳಿ ಬರುತ್ತವೆ. ಮೋದಿಯೂ ಸಹ ತನ್ನ ವೆಬ್ಸೈಟ್ನಲ್ಲಿ ಹಾಗೂ ಇತರ ಕಡೆಗಳಲ್ಲಿ ಭಾಷಣ ಮಾಡುವಾಗ ಈಗ ಭಾರತದ ಕೃಷಿಕ್ಷೇತ್ರದಲ್ಲಿ ಗುಜರಾತ್ ನಂ.1 ಎಂದೆಲ್ಲ ತಾವೇ ಹೇಳಿದ್ದಾರೆ.

ಭಾರತದ ಕೃಷಿ ವರ್ಷಕ್ಕೆ 4% ನಂತೆ ವೃದ್ಧಿಯಾಗುತ್ತಿದೆ, ಆದರೆ ಗುಜರಾತಿನಲ್ಲಿ ಅದು 11% ನಂತೆ ಹೆಚ್ಚಾಗುತ್ತಿದೆ ಎಂದು ಬಾಯಿಗೆ ಬಂದ ಅಂಕಿ-ಅಂಶಗಳನ್ನು ನೀಡಲಾಗುತ್ತಿದೆ. ಆದರೆ, ಕೇಂದ್ರ ಸಚಿವಾಲಯವು ಮುದ್ರಿಸಿರುವ ಭಾರತದ ಕೃಷಿಯ ಸ್ಥಿತಿ-ಗತಿ, 2012-13ರ ವರದಿಯ ಪ್ರಕಾರ ಕೃಷಿಯಲ್ಲಿ ಗುಜರಾತಿನ ಸ್ಥಾನ 8ನೇ ಸ್ಥಾನ. 2007-08 ರಿಂದ 2011-12 ರ ಅವಧಿಯಲ್ಲಿ ಗುಜರಾತಿನ ಕೃಷಿ ಅಭಿವೃದ್ಧಿಯು 4.8% ದರದಲ್ಲಿ ಪ್ರತಿವರ್ಷ ವೃದ್ಧಿಯಾಗುತ್ತಿದೆ.

ವಾರ್ಷಿಕ ತಲಾ ಆದಾಯ

ಪ್ರತಿ ವ್ಯಕ್ತಿಯ ವಾರ್ಷಿಕ ತಲಾ ಆದಾಯವನ್ನು ಲೆಕ್ಕ ಹಾಕಿದರೆ, ಹರಿಯಾಣದಲ್ಲಿ ಓರ್ವ ವ್ಯಕ್ತಿಯ ವಾರ್ಷಿಕ ತಲಾ ಆದಾಯ ರೂ. 78781, ಮಹಾರಾಷ್ಟ್ರದಲ್ಲಿ ರೂ. 74072,-ಆದರೆ ಗುಜರಾತಿನಲ್ಲಿ ಈ ಪ್ರಮಾಣ ಕೇವಲ ರೂ. 63961.(2017ರ ಅಂಕಿಅಂಶ)

ಮಾನವ ಅಭಿವೃದ್ಧಿ ಸೂಚ್ಯಾಂಕ ಮತ್ತು ಅಪೌಷ್ಠಿಕತೆ: ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಗುಜರಾತ್ ಈಗಲೂ ದೇಶದಲ್ಲೇ 10 ನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಕೇರಳ ರಾಜ್ಯಕ್ಕೆ. 5 ವರ್ಷಕ್ಕೂ ಕಡಿಮೆ ವಯಸ್ಸಿನ ಶೇ. 44.6% ಮಕ್ಕಳು ಗುಜರಾತ್ನಲ್ಲಿ ಪೌಷ್ಠಿಕ ಆಹಾರವಿಲ್ಲದೆ ಅಪೌಷ್ಠಿಕತೆಯಿಂದ ಬಳಲುತ್ತಿವೆ. ಗುಜರಾತಿನ ಮಕ್ಕಳಲ್ಲಿ ಶೇ.70%ರಷ್ಟು ಮಕ್ಕಳು ಅನಿಮಿಯಾದಿಂದ ಬಳಲುತ್ತಿದ್ದಾರೆ

ಎನ್.ಆರ್.ಇ.ಜಿ.ಎಸ್. ಸ್ಕೀಂನ ಅಡಿಯಲ್ಲಿ ಬೇರೆ ರಾಜ್ಯದಲ್ಲಿ ಕೊಡುವ ದಿನಗೂಲಿಯ ಅರ್ಧದಷ್ಟು ದಿನಗೂಲಿ ಹಣವನ್ನು ಮಾತ್ರ ಗುಜರಾತ್ ಸರ್ಕಾರ ತನ್ನ ರಾಜ್ಯದ ಕಾರ್ಮಿಕರಿಗೆ ನೀಡುತ್ತಿದೆ. ಇಡೀ ದೇಶದಲ್ಲೇ ತನ್ನ ರಾಜ್ಯದ ಕಾರ್ಮಿಕರಿಗೆ ಅತೀ ಕಡಿಮೆ ದಿನಗೂಲಿ ನೀಡುತ್ತಿರುವ ರಾಜ್ಯ ಗುಜರಾತ್. ಅದರಲ್ಲೂ ಮಹಿಳಾ ಕಾರ್ಮಿಕರಿಗೆ ಸಿಗುವ ಸಂಬಳ ಇನ್ನೂ ನಿಕೃಷ್ಟವಾಗಿದೆ. ಸುಶಿಕ್ಷಿತ ಮಹಿಳೆಯರಲ್ಲಿ ಕೇವಲ ಶೇ.2.04% ಮಹಿಳೆಯರು ಮಾತ್ರ ಸರ್ಕಾರಿ ಹಾಗೂ ಅರೆ ಸರ್ಕಾರಿ ಉದ್ಯೋಗದಲ್ಲಿದ್ದಾರೆ.

ಸಂಘಟಿತ ಕಾರ್ಮಿಕರಲ್ಲಿ ಉದ್ಯೋಗದ ಬೆಳವಣಿಗೆಯ ಪ್ರಮಾಣ ಅತಿ ಕಡಿಮೆಯಾಗಿದೆ. ವರ್ಷಕ್ಕೆ ಸಂಘಟಿತ ಕ್ಷೇತ್ರದಲ್ಲಿ ಕೇವಲ ಶೇ.0.50% ಉದ್ಯೋಗದಲ್ಲಿ ಹೆಚ್ಚಳವನ್ನು ಕಾಣಬಹುದು. ಅಂದರೆ ಈ ವರ್ಷ 1000 ಜನ ಕೆಲಸದಲ್ಲಿದ್ದರೆ, ಮುಂದಿನ ವರ್ಷದಲ್ಲಿ ಅವರ ಸಂಖ್ಯೆ ಕೇವಲ 1005! ಮಾತ್ರ.

ಮೋದಿಯವರ ಗುಜರಾತಿನಲ್ಲಿ ಬಡವರೆಂದರೆ ಯಾರೂ ಎಂಬುದನ್ನು ನಿರ್ಧರಿಸಲು ಇರುವ ಮಾನದಂಡವೇ ಬೇರೆ!. ನಗರ ಪ್ರದೇಶದಲ್ಲಿ ಯಾರ ಮಾಸಿಕ ಆದಾಯ 540/- ರೂಪಾಯಿ ದಾಟುವುದಿಲ್ಲವೋ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಯಾರ ಮಾಸಿಕ ಆದಾಯ ರೂಪಾಯಿ 361/- ದಾಟುವುದಿಲ್ಲವೋ ಅವರು ಮಾತ್ರ ಬಡವರು. ಅವರಿಗೆ ಮಾತ್ರ BPL ಕಾರ್ಡ್ಗಳನ್ನು ನೀಡಲಾಗುವುದು.

ಗುಜರಾತ್ ನ FDI ಪಾಲು ಎಷ್ಟು ಗೊತ್ತಾ? : ಪ್ರತಿ ವರ್ಷ ಅಂತಾರಾಷ್ಟ್ರೀಯ ಉದ್ಯಮಪತಿಗಳನ್ನು ಗುಜರಾತಿಗೆ ಕರೆಯಿಸಿ “ಗ್ಲೋಬಲ್ ಮೀಟ್” ಮಾಡಿ ಅನೇಕ ಉದ್ದಿಮೆಗಳಿಗೆ ಸಹಿಹಾಕುವ ಕೆಲಸ ಗುಜರಾತಿನಲ್ಲಿ ನಡೆಸುತ್ತ ಬರಲಾಗಿದೆ. ಆದರೆ ಈ ಪೈಕಿ ಕೇವಲ 20% ಮಾತ್ರ ಇಲ್ಲಿಯವರೆಗೆ ಅನುಷ್ಠಾನಗೊಂಡಿವೆ ಎಂಬುದು ನಂಬಲು ಅಸಾಧ್ಯವಾದರೂ ನಂಬಲೇಬೇಕಾದ ಸತ್ಯ.

ಭಾರತಕ್ಕೆ ಈವರೆಗೆ ಹರಿದುಬಂದಿರುವ ವಿದೇಶಿ ಬಂಡವಾಳ FDI ನಲ್ಲಿ ಕೇವಲ ಶೇ.5ರಷ್ಟು ಮಾತ್ರ ಗುಜರಾತಿಗೆ ತರಿಸುವಲ್ಲಿ ಮೋದೀಯ ಮೋಡಿ ಕೆಲಸಮಾಡಿದೆ. ತಮಿಳುನಾಡು ಮತ್ತು ಕರ್ನಾಟಕವು ಸದ್ದಿಲ್ಲದೆ ತಲಾ ಶೇ6 ರಷ್ಟು ಹಣವನ್ನು ತಮ್ಮದಾಗಿಸಿಕೊಂಡಿವೆ. ಮಹಾರಾಷ್ಟ್ರಾದವರು ಶೇ.35ರಷ್ಟು ಪಾಲು ಪಡೆಯುವಲ್ಲಿ ಸಫಲರಾಗಿದ್ದಾರೆ.

ಕೆ.ಪಿ.ಶಶಿ ಎಂಬ ಚಿಂತಕರು ಗುಜರಾತಿನ ಅಭಿವೃದ್ಧಿಯ ಕುರಿತು ಒಂದು ಮಾತನ್ನು ಹೇಳಿದ್ದು ಇಂದಿನ ಸಂದರ್ಭದಲ್ಲಿ ಈ ಮಾತು ಬಹಳ ಅರ್ಥಪೂರ್ಣವಾಗಿದೆ. ಅವರ ಪ್ರಕಾರ “ಮೋದಿಯವರ ಅಭಿವೃದ್ಧಿಯ ಮಾಡೆಲ್” ಆರ್.ಎಸ್.ಎಸ್.ನ ಚಡ್ಡಿಯಿದ್ದಂತೆ-ಅದು ಎಂದಿಗೂ ಸಹ ತನ್ನ ನೆಲವನ್ನು ಮುಟ್ಟುವುದೇ ಇಲ್ಲ!

Click here Support Free Press and Independent Journalism

Pratidhvani
www.pratidhvani.com