ಎರಡು ನಾಪತ್ತೆ ಪ್ರಕರಣ ಭೇದಿಸಲಾಗದ ಅಮಿತ್ ಶಾ ಉಕ್ಕಿನ ಮನುಷ್ಯ ಪಟೇಲರಿಗೆ ಸಮವೇ? 
ರಾಷ್ಟ್ರೀಯ

ಎರಡು ನಾಪತ್ತೆ ಪ್ರಕರಣ ಭೇದಿಸಲಾಗದ ಅಮಿತ್ ಶಾ ಉಕ್ಕಿನ ಮನುಷ್ಯ ಪಟೇಲರಿಗೆ ಸಮವೇ? 

ಎಬಿವಿಪಿ ಸದಸ್ಯರಿಂದ ದಾಳಿಗೊಳಗಾಗಿದ್ದರು ಎನ್ನಲಾದ ಜೆ ಎನ್ ಯು ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆಯಾಗಿ ಮೂರುವರೆ ವರ್ಷಗಳಾಗಿವೆ. ಗುಜರಾತ್ ನ ಹಾರ್ದಿಕ್ ಪಟೇಲ್ ಕಳೆದ ಒಂದು ತಿಂಗಳಿಂದ ಕಣ್ಮರೆಯಾಗಿದ್ದಾರೆ. ಗೃಹ ಸಚಿವ ಅಮಿತ್ ಶಾ ಏನು ಮಾಡುತ್ತಿದ್ದಾರೆ?

ಮಹದೇವಪ್ಪ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಇತ್ತೀಚೆಗೆ ತಮ್ಮ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಿಶಿಷ್ಟ ಕಲಾಕೃತಿಯೊಂದನ್ನು ನೀಡಿ ಅವರಲ್ಲಿ ನಗು ಅರಳಿಸಿದ್ದರು. ದೇಶದ ಮೊದಲ ಗೃಹ ಸಚಿವ, ಕಾಂಗ್ರೆಸ್ ನಾಯಕ ಸರ್ದಾರ್‌ ವಲ್ಲಭ ಭಾಯಿ ಪಟೇಲ್ ಹಾಗೂ ಅಮಿತ್ ಶಾ ಅವರನ್ನು ಒಳಗೊಂಡ ಈ ಕಲಾಕೃತಿಯು ಪಟೇಲ್ ಗೆ ಸಮನಾದ ಅಥವಾ ಪಟೇಲ್ ನಂತರ ಭಾರತ ಕಂಡ ಅತ್ಯಂತ ಸಮರ್ಥ ಗೃಹ ಸಚಿವ ಶಾ ಎಂಬುದನ್ನು ಸೂಚ್ಯವಾಗಿ ಹೇಳುವ ಉದ್ದೇಶದಿಂದ ರಚಿಸಿದ ಕಲಾಕೃತಿಯಾಗಿತ್ತು.

ಸ್ವಾತಂತ್ರ್ಯಾನಂತರ ವಿವಿಧ ರಾಜಮನೆತನಗಳು ಹಾಗೂ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಪ್ರದೇಶಗಳನ್ನು ಒಗ್ಗೂಡಿಸುವ ಮೂಲಕ ಅಖಂಡ ಭಾರತದ ಕನಸನ್ನು ನನಸು ಮಾಡಿದ, ಭಾರತದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಹಾಗೂ ಮಹಾತ್ಮ ಗಾಂಧೀಜಿಯವರನ್ನು ಕೊಂದ ಆರೋಪದಲ್ಲಿ ಶಾ ಹಾಗೂ ತೇಜಸ್ವಿ ಸೂರ್ಯ ಪ್ರತಿನಿಧಿಸುವ ಬಿಜೆಪಿಯ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್‌ ಎಸ್‌ಎಸ್) ನಿಷೇಧಿಸಿದ್ದ ಸಮರ್ಥ ಹಾಗೂ ವಿವೇಕಯುತ ನಾಯಕ ಸರ್ದಾರ್ ಪಟೇಲ್.

‘’ಪಟೇಲರಿಗೆ ಕಾಂಗ್ರೆಸ್ ಹಲವು ರೀತಿಯಲ್ಲಿ ಮೋಸ ಮಾಡಿದೆ’’ ಎಂದು ಕಟ್ಟುಕತೆಗಳ ಮೂಲಕ ಜನಮಾನಸದಲ್ಲಿ ಸುಳ್ಳು ಹರಡಲು ಯತ್ನಿಸುತ್ತಿರುವ ಬಿಜೆಪಿಯು ಗುಜರಾತಿನಲ್ಲಿ ಪಟೇಲರ ವಿಶ್ವ ಪ್ರಸಿದ್ಧ ಪ್ರತಿಮೆ ಪ್ರತಿಷ್ಠಾಪಿಸಿ, ಕಾಂಗ್ರೆಸ್‌ ಅನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಯತ್ನ ಮಾಡಿದೆ. ಪೂರ್ವಗ್ರಹ ಪೀಡಿತರಲ್ಲದ ಪಟೇಲರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ ಅಡಿ ಕಲ್ಪಿಸಲಾಗಿದ್ದ ವಿಶೇಷ ಮಾನ್ಯತೆ ರದ್ದುಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಅಮಿತ್ ಶಾ ಅವರಿಗೆ ಹೋಲಿಕೆ ಮಾಡುವ ಯತ್ನದ ಭಾಗವಾಗಿ ಪಟೇಲ್-ಶಾ ಕಲಾಕೃತಿಯನ್ನು ತೇಜಸ್ವಿ ಸೂರ್ಯ ಉಡುಗೊರೆಯಾಗಿ ನೀಡಿರಬಹುದು. ರಾಜಕೀಯವಾಗಿ ಮಹತ್ವಾಕಾಂಕ್ಷಿಯಾದ ತೇಜಸ್ವಿ ಸೂರ್ಯ ಅವರು ಸ್ಥಾನಮಾನ ಪಡೆಯುವ ಉದ್ದೇಶದಿಂದ ಬಿಜೆಪಿಯ ಪ್ರಬಲ ನಾಯಕ ಅಮಿತ್ ಶಾ ಅವರನ್ನು ಓಲೈಸಲು ಕಲಾಕೃತಿಯ ರಾಜಕಾರಣ ಮಾಡಿರುವುದನ್ನು ಅಲ್ಲಗಳೆಯಲಾಗದು. ಅದೇನೆ ಇದ್ದರೂ ಪಟೇಲರಿಗೆ ಶಾ ಹೋಲಿಕೆ ಅಸಮರ್ಥನೀಯ.

ವಿದೇಶದಲ್ಲಿ ಕಲಿತು, ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಹಲವು ವರ್ಷಗಳ ಕಾಲ ಜೈಲು ಪಾಲಾಗಿದ್ದ ಪಟೇಲರು ಭಾರತದ ಸಾರ್ವಭೌಮತೆಗೆ ನಿಜಾರ್ಥದಲ್ಲಿ ಹೋರಾಡಿದವರು. ಆದರೆ, ಇಂದಿನ ಗೃಹ ಸಚಿವರಾಗಿರುವ ಅಮಿತ್ ಶಾ ಅವರು ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಾ ಅವರು ಎಲ್ಲಾ ಪ್ರಕರಣಗಳಿಂದ ಖುಲಾಸೆಗೊಂಡಿದ್ದಾರೆ. ಪಟೇಲರ ವ್ಯಕ್ತಿತ್ವ, ಬದ್ಧತೆ ಹಾಗೂ ನಿಷ್ಠುರತೆಗೆ ಯಾವ ಕೋನದಿಂದಲೂ ಶಾ ಸಾಟಿಯಲ್ಲ ಎಂಬುದಕ್ಕೆ ಇತ್ತೀಚೆಗೆ ಗೃಹ ಸಚಿವಾಲಯದ ವ್ಯಾಪ್ತಿಯಲ್ಲಿ ನಡೆದಿರುವ ಎರಡು ಪ್ರಮುಖ ನಾಪತ್ತೆ ಘಟನೆಗಳು ಸಾಕ್ಷಿಯೊದಗಿಸಿವೆ.

‘’ಗುಜರಾತ್ ನ ಯುವಕ ಹಾಗೂ ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಅವರು ಸುಮಾರು ಒಂದು ತಿಂಗಳಿಂದ ನಾಪತ್ತೆಯಾಗಿದ್ದಾರೆ’’ ಎಂದು ಅವರ ಪತ್ನಿ ಕಿಂಜಾಲ್ ಸಾರ್ವಜನಿಕವಾಗಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಗುಜರಾತ್ ನಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರೂ ಅದರ ಬಗ್ಗೆ ಅಲ್ಲಿನ ಸರ್ಕಾರ ಕವಡೇ ಕಾಸಿನ ಕಿಮ್ಮತ್ತು ನೀಡಿಲ್ಲ. ವರ್ಷಾಂತ್ಯದಲ್ಲಿ ಗುಜರಾತಿನಲ್ಲಿ ಪಂಚಾಯ್ತಿ ಚುನಾವಣೆಗಳು ನಡೆಯಲಿದ್ದು, ಪಟೇಲ್ ಹೊರಗಿದ್ದರೆ ಬಿಜೆಪಿಗೆ ಹಿನ್ನಡೆಯಾಗಬಹುದು ಎಂದು ಅರಿತು ಆಡಳಿತ ಪಕ್ಷ ಷಡ್ಯಂತ್ರ ರೂಪಿಸಿರಬಹುದು ಎನ್ನಲಾಗುತ್ತಿದೆ.

ಗುಜರಾತಿನಲ್ಲಿ ಜನಸಂಖ್ಯೆ ಹಾಗೂ ಆರ್ಥಿಕವಾಗಿ ಪಟೇಲ್ ಸಮುದಾಯ ಪ್ರಬಲವಾಗಿದೆ. ರಾಜಕೀಯವಾಗಿ ಬಿಜೆಪಿಯನ್ನು ಬೆಂಬಲಿಸುತ್ತಿರುವ ಪಟೇಲ್ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಅಡಿ (ಒಬಿಸಿ) ಮೀಸಲಾತಿ ಕಲ್ಪಿಸಬೇಕು ಎಂದು 2015ರಲ್ಲಿ ಹಾರ್ದಿಕ್ ಪಟೇಲ್ ದೊಡ್ಡ ಹೋರಾಟ ನಡೆಸಿದ್ದರು. ಈ ಹೋರಾಟ ನಿಭಾಯಿಸುವಲ್ಲಿ ವಿಫಲವಾದ ಬಿಜೆಪಿಯ ಅಂದಿನ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರು ರಾಜೀನಾಮೆ ಸಲ್ಲಿಸಿದ್ದರು. ಆಡಳಿತರೂಢ ಬಿಜೆಪಿಯನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ಪಟೇಲ್ ಹೋರಾಟವು ದೇಶದಲ್ಲಿ ಸಂಚಲನ ಸೃಷ್ಟಿಸಿತ್ತು. ಇದಕ್ಕಾಗಿ ಹಾರ್ದಿಕ್ ಪಟೇಲ್ ಸೇರಿದಂತೆ ಹಲವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಇದರ ಭಾಗವಾಗಿ ಕೋರ್ಟ್‌ ಗೆ ಹಾಜರಾಗಿ ಐದು ದಿನಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಹಾರ್ದಿಕ್ ಪಟೇಲ್ ನಾಪತ್ತೆಯಾಗಿದ್ದಾರೆ. ಹಾರ್ದಿಕ್ ಪಟೇಲ್ ಜೈಲಿನಲ್ಲಿದ್ದಾಗಲೇ ಮತ್ತೆರಡು ಪ್ರಕರಣಗಳಲ್ಲಿ ಅವರ ಹಾಜರಾತಿಗೆ ಕೋರ್ಟ್ ಆದೇಶಿಸಿತ್ತು. ಜೈಲು ಪಾಲಾಗಿದ್ದರಿಂದ ಅವರು ಕೋರ್ಟ್ ಮುಂದೆ ಹಾಜರಾಗಲು ವಿಫಲರಾಗಿದ್ದರು. ಇಷ್ಟಾದರೂ ಗುಜರಾತ್‌ ನ ಗಾಂಧಿನಗರ ಲೋಕಸಭಾ ಸದಸ್ಯ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಹಾರ್ದಿಕ್ ಪಟೇಲ್ ನಾಪತ್ತೆಯ ಬಗ್ಗೆ ಒಂದು ಮಾತನಾಡಿಲ್ಲ.

ಇನ್ನು, ದೆಹಲಿಯ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್ ಯು) ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲಕದ ನಜೀಬ್ ಅಹಮದ್ ಎಂಬ ಯುವಕ 2016ರ ಅಕ್ಟೋಬರ್ ನಲ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ನಿಂದ ನಾಪತ್ತೆಯಾಗಿದ್ದು ಇದುವರೆಗೂ ಆತನ ಗುರುತು ಪತ್ತೆಯಾಗಿಲ್ಲ. ದೆಹಲಿ ಪೊಲೀಸರ ಕಾರ್ಯನಿರ್ವಹಣೆಯನ್ನು ನಂಬದ ನಜೀಬ್ ತಾಯಿ ಫಾತಿಮಾ ನಫೀಸ್ ಅವರು ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸುವಂತೆ ಸುಪ್ರೀಂಕೋರ್ಟ್ ಅನ್ನು ಆಗ್ರಹಿಸಿದ್ದರು. ಅದರಂತೆ ಸಿಬಿಐ ತನಿಖೆ ನಡೆಸಿದ್ದು, ನಜೀಬ್ ಸುಳಿವು ಪತ್ತೆಹಚ್ಚಲು ಯತ್ನಿಸಿ ವಿಫಲವಾಗಿ, ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಪ್ರಕರಣದ ತನಿಖಾ ವರದಿಯನ್ನು ಫಾತಿಮಾ ಅವರಿಗೆ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿದ್ದರೂ ಸಿಬಿಐ ಇದುವರೆಗೂ ಅದನ್ನು ಅವರಿಗೆ ಸಲ್ಲಿಸಿಲ್ಲ. ಇಲ್ಲಿ ದೆಹಲಿ ಪೊಲೀಸರು ಹಾಗೂ ಸಿಬಿಐ ಎರಡೂ ಅಮಿತ್‌ ಶಾ ನೇತೃತ್ವದ ಗೃಹ ಇಲಾಖೆಯ ವ್ಯಾಪ್ತಿಗೆ ಬರುತ್ತವೆ ಎಂಬುದನ್ನು ನೆನೆಯಬೇಕು.

2016ರ ರಾತ್ರಿ ಜೆಎನ್ ಯು ಚುನಾವಣೆಯ ಹಿನ್ನೆಲೆಯಲ್ಲಿ ಮತ ಕೇಳಲು ಜೆ ಎನ್ ಯು ಕ್ಯಾಂಪನ್ ಹಾಸ್ಟೆಲ್ ಗೆ ಬಂದಿದ್ದ ಬಿಜೆಪಿ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬೆಂಬಲಿಗರು ಹಾಗೂ ನಜೀಬ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಅಂದು ಎಬಿವಿಪಿ ಬೆಂಬಲಿತ ಅಭ್ಯರ್ಥಿಗಳು ನಜೀಬ್ ಅವರನ್ನು ಮನಬಂದಂತೆ ಥಳಿಸಿದ್ದರು. ಆನಂತರದಿಂದ ನಜೀಬ್ ಸುಳಿವಿಲ್ಲ. ‘’ಮಗನನ್ನು ಎಬಿವಿಪಿ ಸದಸ್ಯರು ಅಹರಿಸಿದ್ದಾರೆ’’ ಎಂದು ನಜೀಬ್ ತಾಯಿ ಫಾತಿಮಾ ಆರೋಪಿಸಿದ್ದಾರೆ. ಇದರ ಮಧ್ಯೆ, ನಜೀಬ್ ಮಾನಸಿಕ ಅಸ್ವಸ್ತನಾಗಿದ್ದು ಕ್ಯಾಂಪಸ್ ಬಿಟ್ಟು ತೆರಳಿದ್ದಾನೆ. ಉಗ್ರ ಸಂಘಟನೆಯಾದ ಐಸಿಸ್‌ ಸೇರಿದ್ದಾನೆ ಎಂಬೆಲ್ಲಾ ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ. ಕೆಲವು ಮಾಧ್ಯಮಗಳು ನಜೀಬ್ ಐಸಿಸ್ ಸೇರಿದ್ದಾನೆ ಎಂದು ಸುದ್ದಿ ಪ್ರಕಟಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ದೆಹಲಿ ನ್ಯಾಯಾಲಯವು ವರದಿಗಳನ್ನು ಹಿಂಪಡೆಯುವಂತೆ ಸೂಚಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

ಈ ಮಧ್ಯೆ, ಜೆ ಎನ್ ಯು ಶಿಸ್ತುಪಾಲನಾ ಅಧಿಕಾರಿ ಎ ಎಂ ಡಿಮ್ರಿ ಅವರು ನಜೀಬ್ ಮೇಲೆ ದಾಳಿಯಾಗಿದ್ದು, ಆತನ ಮೇಲೆ ಗಂಭೀರವಾದ ಹಲ್ಲೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸುವಂತೆ ಕುಲಪತಿ ಜಗದೀಶ್ ಕುಮಾರ್ ಅವರಿಗೆ ವರದಿ ನೀಡಿದ್ದರು. ಈ ವಿಚಾರದಲ್ಲಿ ಜಗದೀಶ್ ಕುಮಾರ್ ಹಾಗೂ ಡಿಮ್ರಿ ಅವರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಬೇಸತ್ತು ಡಿಮ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಹಾರ್ದಿಕ ಪಟೇಲ್ ಹಾಗೂ ನಜೀಬ್ ಅಹ್ಮದ್ ಪ್ರಕರಣಗಳಲ್ಲಿ ಬಿಜೆಪಿ ಹಾಗೂ ಅದರ ಬೆಂಬಲಿತ ಸಂಘಟನೆಗಳ ಕೈವಾಡ ಇರುವುದು ಢಾಳಾಗಿದೆ. ಸ್ವಾರ್ಥ, ಅಧಿಕಾರ, ಪೂರ್ವಗ್ರಹ ಕಣ್ಣಿಗೆ ರಾಚುವಂತಿವೆ. ಅನ್ಯಾಯಕ್ಕೊಳಗಾದವರ ಪರವಾಗಿ ಕೆಲಸ ಮಾಡಬೇಕಾದ ಗೃಹ ಇಲಾಖೆಯು ತನ್ನ ಜವಾಬ್ದಾರಿ ಏನೂ ಇಲ್ಲವೇನು ಎಂಬಂತೆ ಕಣ್ಮುಚ್ಚಿ ಕುಳಿತಿದೆ. ಎರಡು ನಾಪತ್ತೆ ಪ್ರಕರಣಗಳನ್ನು ಭೇದಿಸಲಾಗದ ಗೃಹ ಸಚಿವಾಲಯದ ಮುಖ್ಯಸ್ಥ ಅಮಿತ್ ಶಾ ಅವರನ್ನು ‘ಭಾರತದ ಉಕ್ಕಿನ ಮನುಷ್ಯ’ ಎಂದು ಪ್ರಸಿದ್ಧರಾದ ಪಟೇಲರಿಗೆ ಹೋಲಿಕೆ ಮಾಡಲಾಗುತ್ತಿದೆ. ಇದು ಇತಿಹಾಸ ಹಾಗೂ ಸರ್ದಾರ್ ಪಟೇಲ್ ಗೆ ಎಸಗುವ ಅಪಚಾರವಲ್ಲದೆ ಮತ್ತೇನು?

ನಿರಂತರ ಸುದ್ದಿಗಾಗಿ ಪ್ರತಿಧ್ವನಿಯ Facebook, YouTube, Twitter ಪೇಜ್ ಸೇರಿಕೊಳ್ಳಿ. ಪ್ರತಿಧ್ವನಿಯ ಟೆಲಿಗ್ರಾಂ ಸೇರಲು, ಈ ಲಿಂಕ್ ಕ್ಲಿಕ್ ಮಾಡಿ

Pratidhvani
www.pratidhvani.com