ಟ್ರೋಲಿಂಗ್ ಓಕೆ, ಆದರೆ ಸಭ್ಯತೆಯ ಗೆರೆ ದಾಟುವುದು ಯಾಕೆ?
ರಾಷ್ಟ್ರೀಯ

ಟ್ರೋಲಿಂಗ್ ಓಕೆ, ಆದರೆ ಸಭ್ಯತೆಯ ಗೆರೆ ದಾಟುವುದು ಯಾಕೆ?

ತೀರಾ 2015ರ ವರೆಗೂ ದೇಶದಹೆಚ್ಚಿನ ಜನರಿಗೆ ಎಡ/ಬಲ ಪಂಥಗಳೆಂಬ ಕಲ್ಪನೆಯೂ ಇರಲಿಲ್ಲ. ಆದರೆ ಯಾವಾಗ ಈ ರಾಜಕೀಯ ವ್ಯಕ್ತಿಗಳು ಹಾಗೂ ಪಕ್ಷಗಳು ತಮ್ಮ ತಮ್ಮ ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಟ್ರಿಕ್‌ಗಳನ್ನು ಶುರುವಿಟ್ಟುಕೊಂಡವೋ, ಅಲ್ಲಿಂದ ಶುರುವಾದವು ನೋಡಿ ನಾವು ಇಂದು ನೋಡುತ್ತಿರುವ ಕರ್ಮಕಾಂಡಗಳು.

ಸಮಚಿತ್ತ

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ’ಸೋಷಿಯಲ್‌’ ಚಟುವಟಿಕೆಗಳು ನಡೆಯುವುದಕ್ಕಿಂತ ಬರೀ ’ಪೊಲಿಟಿಕಲ್‌’ ಸರಕುಗಳೇ ತುಂಬಿಕೊಂಡುಬಿಟ್ಟಿದೆ.

ಮೊನ್ನೆ ದೆಹಲಿ ವಿಧಾನ ಸಭಾ ಚುನಾವಣಾ ಫಲಿತಾಂಶ ಹೊರಬಂದ ಬಳಿಕವಂತೂ ಈ ಸೋಷಿಯಲ್ ಮೀಡಿಯಾಗಳಲ್ಲಿ ರಾಜಕೀಯದ ಕೆಸರೆರಚಾಟ ಎಷ್ಟರ ಮಟ್ಟಿಗೆ ಚೀಪ್ ಲೆವೆಲ್ಲಿಗೆ ಇಳಿದಿದೆ ಎಂದು ಸಾರಿ ಹೇಳುವಂತ ನಿದರ್ಶನಗಳು ಘಟಿಸಿವೆ.

ಟ್ರೋಲ್‌ಮಾಡುವುದು, ಮೀಮ್‌ಗಳನ್ನು ಹಾಕುವುದು ಒಂದು ಮಟ್ಟಿಗೆ ಸರಿ. ಆದರೆ, ಎಲ್ಲದಕ್ಕೂ ಒಂದು ಲಿಮಿಟ್‌ ಇರುತ್ತದೆ. ಆದರೆ, ಗೆದ್ದ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷಗಳ ಗೆಲುವನ್ನು ಸಂಭ್ರಮಿಸುವುದನ್ನು ಬಿಟ್ಟು, ಅನ್ಯ ಪಕ್ಷಗಳಿಗೆ ಅವಹೇಳನ ಮಾಡುವುದನ್ನೇ ಸಂಭ್ರಮಾಚರಣೆ ಎಂಬಂತೆ ಭಾವಿಸಿಬಿಟ್ಟಿವೆ.

ಟ್ರೋಲಿಂಗ್ ಓಕೆ, ಆದರೆ ಸಭ್ಯತೆಯ ಗೆರೆ ದಾಟುವುದು ಯಾಕೆ?

ಆಪ್ ಪಕ್ಷದ ಕಾರ್ಯಕರ್ತರು ಹಾಗೂ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡುವ ಕೆಲ ಮಂದಿ, ಟ್ರೋಲ್ ಮಾಡುವ ಭರದಲ್ಲಿ ಪ್ರಧಾನ ಮಂತ್ರಿ, ಗೃಹ ಮಂತ್ರಿಯಂಥ ಸಾಂವಿಧಾನಿಕ ಹುದ್ದೆಗಳನ್ನೂ ಸಹ ಅಣಕ ಮಾಡಿ ಮೀಮ್‌ಗಳು ಹಾಗೂ ಪೋಸ್ಟ್‌ಗಳನ್ನು ಹಾಕಿದ್ದು ತೀರಾ ಅಸಹನೀಯ. ಕಳೆದ ವರ್ಷದ ಸಾರ್ವತ್ರಿಕ ಚುನಾವಣೆ ಬಳಿಕ ಬಿಜೆಪಿ ಕಾರ್ಯಕರ್ತರು ಸಹ ಇದೇ ರೀತಿಯ ಅಸಹನೀಯ ಮಟ್ಟದ ಟ್ರೋಲಿಂಗ್ ಮಾಡಲೆಂದು ಅಕ್ಷಮ್ಯವಾದ ಮೀಮ್‌ಗಳನ್ನು ಬಳಸುವ ಮೂಲಕ ತಮ್ಮದೇ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದ ನಿದರ್ಶನಗಳೂ ಇವೆ.

ರಾಜಕೀಯ ವಿಶ್ಲೇಷಣೆಗಳನ್ನು ಗಂಭೀರವಾದ ಭಾಷೆಯಲ್ಲಿ ಮಾಡುವ ಕನಿಷ್ಠ ಸೌಜನ್ಯವನ್ನೂ ಕಳೆದುಕೊಂಡಿರುವ ದೊಡ್ಡ ವರ್ಗವೊಂದು ನೆಟ್ಟಿಗರ ನಡವೆ ದೊಡ್ಡದಾಗಿ ಸದ್ದು ಮಾಡುತ್ತಿದೆ. ಯಾವುದೇ ಪಕ್ಷ ಗೆದ್ದರೂ ಸಹ, ಸಂವಿಧಾನಬದ್ಧವಾದ ಚುನಾವಣೆಯೆಂಬ ಪ್ರಕ್ರಿಯೆಯಲ್ಲಿ ಪ್ರಜಾಪ್ರಭುತ್ವದ ಜನಪ್ರಿಯ ಮತಗಳಿಸಿಯೇ ಗೆದ್ದಿರುತ್ತದೆ. ಖುದ್ದು ಜನರೇ ತಮ್ಮ ನಾಯಕ ಯಾರಾಗಬೇಕೆಂದು ಯೋಚಿಸಿ, ತಂತಮ್ಮ ವಿವೇಚನೆಯಲ್ಲೇ ಮತ ಹಾಕುವಂಥ ಅವಕಾಶವನ್ನು ಚುನಾವಣಾ ಪ್ರಕ್ರಿಯೆ ಕೊಡಮಾಡಿರುತ್ತದೆ.

ಹೀಗಿರುವಾಗ, ಗೆದ್ದವರು ಅತಿಯಾಗಿ ಬೀಗುವ ಭರದಲ್ಲಿ ಸೋತ ಪಕ್ಷಗಳು ಹಾಗೂ ಕಾರ್ಯಕರ್ತರ ಮೇಲೆ ಅವಹೇಳನಾಕಾರಿ ಭಾಷೆ ಪ್ರಯೋಗ ಮಾಡುವುದು, ಹಾಗೇ ಸೋತವರು ಸುಖಾಸುಮ್ಮನೇ ಮತಯಂತ್ರಗಳನ್ನು ದೂಷಿಸುತ್ತಾ ಜನರ ದಿಕ್ಕು ತಪ್ಪಿಸುವಂಥ ಕೆಲಸಗಳೆಲ್ಲಾ ಒಂದು ಜವಾಬ್ದಾರಿಯುತ ಸಮಾಜಕ್ಕೆ ಶೋಭೆ ತರುವಂಥದ್ದಲ್ಲ.

ಡಿಜಿಟಲ್ ಯುಗವಾದ ಇಂದು ದೇಶದ ಬಹುತೇಕ ಎಲ್ಲ ಯುವಕರ ಕೈಯಲ್ಲೂ ಒಂದೊಂದು ಸ್ಮಾರ್ಟ್‌ಫೋನ್ ಹಾಗೂ ಫೇಸ್ಬುಕ್‌ಅಕೌಂಟ್‌ಗಳು ಇರಲೇಬೇಕೆಂಬ ಅಲಿಖಿತ ನಿಯಮವೊಂದು ಹುಟ್ಟಿಕೊಂಡಿದೆ. ಯಾವುದೇ ಸುಳ್ಳು ಸಂದೇಶವನ್ನು ಉದ್ದೇಶಪೂರಿತವಾಗಿ ಫಾರ್ವಡ್ ಮಾಡಿಬಿಟ್ರೆ ಮುಗೀತು; ಅದು ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಇದೇ ಫೇಸ್ಬುಕ್/ವಾಟ್ಸಾಪ್‌ಗಳ ಮೂಲಕ exponentially ಹಬ್ಬಿ, ಅದಕ್ಕೆ ರೆಕ್ಕೆ ಪುಕ್ಕಗಳೂ ಸೇರಿಕೊಂಡು ಆ ಸುಳ್ಳುಗಳು/ಕಟ್ಟುಕಥೆಗಳೇ accepted normಗಳಾಗುವ ಸಾಧ್ಯತೆಗಳು ಹುಟ್ಟಿಕೊಂಡು ಬಿಡುತ್ತವೆ.

ನನ್ನ ಪ್ರಧಾನಿ ಕಳ್ಳ, ನನ್ನ ಪ್ರಧಾನಿ ಸುಳ್ಳ ಎಂದೆಲ್ಲಾ ಹ್ಯಾಶ್‌ಟ್ಯಾಗ್‌ಗಳನ್ನು ಸೃಷ್ಟಿಸುತ್ತಾ ಹೋದಲ್ಲಿ ಖುದ್ದು ಪ್ರಧಾನಿ ಎಂಬ ಗೌರವಾನ್ವಿತ ಹುದ್ದೆಯ ಘನತೆಗೆ ಚ್ಯುತಿ ತರುವ ಕೆಲಸವನ್ನು ಮಾಡುವುದರಿಂದ ಸಿಗುವ ಲಾಭವಾದರೂ ಏನು? ಯಾವುದೇ ಸರ್ಕಾರವಾದರೂ ಅದರ ಕಾರ್ಯವೈಖರಿಗಳನ್ನು ಟೀಕಿಸಿ ಕಿವಿ ಹಿಂಡಲು ರಚನಾತ್ಮಕವಾದ ಮಾರ್ಗಗಳು ಬೇಕಾದಷ್ಟಿವೆ. ಆದರೆ, ತೀರಾ ಈ ರೀತಿ ಕೀಳುಮಟ್ಟದ ಭಾಷಾ ಪ್ರಯೋಗ ಹಾಗೂ ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್‌ನಿಂದ ಇನ್ನಷ್ಟು ದೊಡ್ಡ ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾಗುತ್ತವೆ.

ಡಿಜಿಟಲ್ ಕೇಂದ್ರಿತವಾಗಿಬಿಟ್ಟಿರುವ ಇಂದಿನ ದಿನಮಾನದಲ್ಲಿ ರಾಜಕೀಯ ಪಕ್ಷಗಳೂ ತಮ್ಮ ದಾಳಗಳನ್ನು ಉರುಳಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವಲ್ಲಿ ಎಲ್ಲಾ ರೀತಿಯ ಸರ್ಕಸ್ ಮಾಡುತ್ತಿವೆ. ಪ್ರತಿಯೊಬ್ಬ ರಾಜಕಾರಣಿಯೂ ತಾನೊಬ್ಬ ಫುಲ್ ಸಾಚಾ ಎಂದು ತೋರಿಸಿಕೊಳ್ಳಲು ಬೇಕಾದ ನೌಟಂಕಿಗಳನ್ನೆಲ್ಲಾ ಮಾಡಿಕೊಂಡು, ಜನರ ಮುಂದೆ ಕೃತಕವಾದ ಕ್ಲೀನ್ ಇಮೇಜ್ ಸೃಷ್ಟಿಸಿಕೊಳ್ಳಲೆಂದು ಈಗೆಲ್ಲಾ ವ್ಯವಸ್ಥಿತವಾದ ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಕಂಪನಿಗಳೇ ಹುಟ್ಟಿಕೊಂಡಿವೆ. ಪ್ರಶಾಂತ್‌ಕಿಶೋರ್‌ನಂಥ ಜನರು ಇಂಥದ್ದರಿಂದಲೇ ಕೋಟಿಗಳಲ್ಲಿ ಆಟವಾಡಲು ಆರಂಭಿಸಿದ್ದಾರೆ. ಇವನಂಥ ಮಂದಿ ಇಂದು ಈ ಪಕ್ಷ ನಾಳೆ ಆ ಪಕ್ಷ ಎಂದುಕೊಂಡು, ಮೂರು ಕೊಟ್ರೆ ಸೊಸೆ ಕಡೆಗೆ, ಆರು ಕೊಟ್ರೆ ಅತ್ತೆ ಕಡೆಗೆ ಅಂತ ಎಲ್ಲಾ ಕಡೆಯೂ ತಮ್ಮ ತಂತ್ರಗಾರಿಕೆ ಮಾಡಿಕೊಂಡು ಸಾಗುತ್ತಾರೆ.

ಇಂಥ ಟ್ರಿಕ್‌ಗಳಿಗೆ ಮರುಳಾಗುವ ಮಂದಿ, ಸೋಷಿಯಲ್ ಮೀಡಿಯಾಗಳಲ್ಲಿ ಕಂಡು ಬರುವ ಸರಕುಗಳನ್ನು ನೋಡಿಕೊಂಡು, ಕಣ್ಣು ಮುಚ್ಚಿಕೊಂಡು ನಂಬುತ್ತಾರೆ. ತಮ್ಮ ಪಕ್ಷ ನಿಷ್ಠೆಗಳನ್ನು ಮೆರೆಯೋದ್ರಲ್ಲೇ ಜೀವನದ ಸಾರ್ಥಾಕ್ಯತೆ ಕಾಣುವ ಇವರಿಗೆ, ಎಲ್ಲ ಪಕ್ಷಗಳ ರಾಜಕಾರಣಿಗಳು ದೇಶದ ಸಂಪತ್ತನ್ನು ಲೂಟಿ ಹೊಡೆಯುವಾಗ ಒಬ್ಬರಿಗೊಬ್ಬರು ಶಾಮೀಲಾಗೇ ಇರುತ್ತಾರೆ ಎನ್ನುವ ಕನಿಷ್ಠ ಪರಿಜ್ಞಾನವೂ ಇರದಂತೆ ಆಗಿಬಿಟ್ಟಿದೆ.

ದೇಶದ ಜ್ವಲಂತ ಸಮಸ್ಯೆಗಳ ವಿಚಾರದಲ್ಲಿ ಸೂಕ್ಷ್ಮ ಸಂವೇದನೆ ಬೆಳೆಸಿಕೊಂಡು, ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಒಂದು ಸಮಾಜವಾಗಿ ನಾವೆಲ್ಲಾ ಏನು ಮಾಡಬೇಕು ಎಂದು ರಚನಾತ್ಮಕವಾದ ಚರ್ಚೆಗಳು ಹಾಗೂ ಮಾತುಕತೆಗಳನ್ನು ಹಮ್ಮಿಕೊಳ್ಳುವ ಪ್ರಜ್ಞಾವಂತ ವೇದಿಕೆಗಳನ್ನು ಸೃಷ್ಟಿಸುವ ಬದಲಿಗೆ, ರಾಜಕೀಯ ಪಕ್ಷಗಳು/ಸಿದ್ಧಾಂತಗಳ ಆಧಾರದಲ್ಲಿ ಜನರ ನಡುವೆ ಮಾನಸಿಕ ಬೇಲಿಗಳನ್ನು ಸೃಷ್ಟಿ ಮಾಡುವ ಪರಿಪಾಠ ಕಳೆದ 5-6 ವರ್ಷಗಳಿಂದ ಜೋರಾಗಿ ನಡೆಯುತ್ತಿದೆ. ಇದರ ಪರಿಣಾಮವೇ ಕೇಂಬ್ರಿಡ್ಜ್ ಅನಲಿಟಿಕಾ ಎಂಬಂಥ ವ್ಯವಸ್ಥಿತ ದಂಧೆಗಳು, ಸೋಷಿಯಲ್ ಮೀಡಿಯಾ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನೇ ಬಳಸಿಕೊಂಡು, ದೇಶದ ಮತದಾರರ ಮನಸ್ಥಿತಿಗಳನ್ನೇ manipulate ಮಾಡಲು ರಾಜಕೀಯ ಪಕ್ಷಗಳೊಂದಿಗೆ ಭಾಗಿಯಾಗುತ್ತಿರುವಂಥ ದುರಂತಮಯ ಟ್ರೆಂಡ್‌ಗಳೂ ನಮ್ಮೆದುರೇ ನಡೆದುಕೊಂಡು ಬಂದಿರುವುದು.

ಬರೀ ಹತ್ತು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳು ಆಗಿನ್ನೂ ಅಂಬೆಗಾಲಿಡುತ್ತಿದ್ದವು. ಆಗೆಲ್ಲಾ ಈ ಸೋಷಿಯಲ್ ಮೀಡಿಯಾ ಎಂಬುದೇನಿದ್ದರೂ ದೇಶ, ಭಾಷೆಗಳ ಗಡಿ ದಾಟಿ ಸ್ನೇಹಿತರನ್ನು ಮಾಡಿಕೊಳ್ಳಲು ಇದ್ದ ಮಾಧ್ಯಮಗಳಾಗಿದ್ದವು.

ಆದರೆ, 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳ ಮ್ಯಾನೇ‌ಜ್‌ಮೆಂಟ್‌ಮಾಡುವುದನ್ನು ಪ್ರೊಫೇಶನಲ್ ಆಗಿ ಮಾಡಿ ತೋರಿಸಿದ ಬಿಜೆಪಿ, ತನ್ನ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿರನ್ನು ’ಡೆವಲೆಪ್‌ಮೆಂಟ್ ಮಾಡೆಲ್‌’ನ ಮುಖವನ್ನಾಗಿ ತೋರುವ ಮೂಲಕ ದೇಶಾದ್ಯಂತ ಅವರನ್ನು ಒಂದು ದೊಡ್ಡ ಬ್ರಾಂಡ್‌ಆಗಿ ಬಿಂಬಿಸಲು ಯಶಸ್ವಿಯಾಯಿತು. ಇದರ ಯಶಸ್ಸು ಯಾವ ಮಟ್ಟಿಗೆ ಇತ್ತು ಎಂಬುದನ್ನು ಆ ಬಾರಿಯ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು ಸಾರಿ ಹೇಳುತ್ತಿದ್ದವು.

ಇದನ್ನು ಗಮನಿಸಿದ ಗ್ರಾಂಡ್ ಓಲ್ಡ್ ಪಾರ್ಟಿ ಕಾಂಗ್ರೆಸ್‌ ಸಹ ತನ್ನ ಏಜ್ ಓಲ್ಡ್‌ ಚುನಾವಣಾ ಟ್ರಿಕ್‌ಗಳನ್ನು ಬಿಟ್ಟು, ಇತ್ತೀಚಿನ ಟ್ರೆಂಡ್ ಹಾಗೂ ಯುವಕರೇ ಪ್ರಧಾನವಾಗಿರುವ ದೇಶವಾದ ಭಾರತದ ನಾಡಿಮಿಡಿತ ಏನಿದೆ ಎಂಬುದನ್ನು ಅರಿಯಲು ತಾನೂ ಸಾಮಾಜಿಕ ಜಾಲತಾಣಗಳ ಮ್ಯಾನೇಜ್‌ಮೆಂಟ್‌ಗೆ ಇಳಿಯಿತು. ಇದರ ಬೆನ್ನಿಗೇ ಹುಟ್ಟಿಕೊಂಡವು ನೋಡಿ ಎಲ್ಲಾ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಐಟಿ ವಿಂಗ್ ಅನ್ನೋ ಹೊಸ ಸೆಕ್ಷನ್‌ಗಳು. ಅಲ್ಲಿವರೆಗೂ ಶಾಂತಿಯುತವಾಗಿದ್ದ ಸಾಮಾಜಿಕ ಜಾಲತಾಣಗಳು ಎಡ/ಬಲಗಳಾಗಿ ಅಕ್ಷರಶಃ ಇಬ್ಭಾಗವಾಗಲು ಆರಂಭಗೊಂಡಿದ್ದೇ ಆಗಿನಿಂದ.

ತೀರಾ 2015ರ ವರೆಗೂ ದೇಶದ ಹೆಚ್ಚಿನ ಜನರಿಗೆ ಎಡ/ಬಲ ಪಂಥಗಳೆಂಬ ಕಲ್ಪನೆಯೂ ಇರಲಿಲ್ಲ. ಆದರೆ ಯಾವಾಗ ಈ ರಾಜಕೀಯ ವ್ಯಕ್ತಿಗಳು ಹಾಗೂ ಪಕ್ಷಗಳು ತಂತಮ್ಮ ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಟ್ರಿಕ್‌ಗಳನ್ನು ಶುರುವಿಟ್ಟುಕೊಂಡವೋ, ಅಲ್ಲಿಂದ ಶುರುವಾದವು ನೋಡಿ ನಾವು ಇಂದು ನೋಡುತ್ತಿರುವ ಕರ್ಮಕಾಂಡಗಳು.

ನಿರಂತರ ಸುದ್ದಿಗಾಗಿ ಪ್ರತಿಧ್ವನಿಯ Facebook, YouTube, Twitter ಪೇಜ್ ಸೇರಿಕೊಳ್ಳಿ. ಪ್ರತಿಧ್ವನಿಯ ಟೆಲಿಗ್ರಾಂ ಸೇರಲು, ಈ ಲಿಂಕ್ ಕ್ಲಿಕ್ ಮಾಡಿ

Pratidhvani
www.pratidhvani.com