ವಿಧಾನಸಭಾ ಚುನಾವಣೆಯಲ್ಲಿ ಸರಣಿ ಸೋಲು; ಬಿಜೆಪಿಯ ಮೇಲ್ಮನೆ ಅಧಿಪತ್ಯಕ್ಕೆ ಸಂಚಕಾರ?
ರಾಷ್ಟ್ರೀಯ

ವಿಧಾನಸಭಾ ಚುನಾವಣೆಯಲ್ಲಿ ಸರಣಿ ಸೋಲು; ಬಿಜೆಪಿಯ ಮೇಲ್ಮನೆ ಅಧಿಪತ್ಯಕ್ಕೆ ಸಂಚಕಾರ?

ರಾಷ್ಟ್ರೀಯ ಹಾಗೂ ವಿವಾದಿತ ವಿಚಾರಗಳನ್ನು ಚುನಾವಣಾ ಅಸ್ತ್ರವನ್ನಾಗಿಸಿ ಗೆಲುವ ಸಾಧಿಸಲು ಯತ್ನಿಸುತ್ತಿದ್ದ ಬಿಜೆಪಿಗೆ ದೆಹಲಿಯ ಆಪ್ ಗೆಲುವು ಗಂಭೀರ ಸವಾಲನ್ನು ನೆನೆಪಿಸಿದೆ. ವಿಧಾನಸಭಾ ಚುನಾವಣೆಯಲ್ಲಿನ ಸರಣಿ ಸೋಲುಗಳು ರಾಜ್ಯಸಭೆಯಲ್ಲಿ ಬಿಜೆಪಿಯ ಮೇಲುಗೈ ಸಾಧಿಸುವ ಯತ್ನಕ್ಕೆ ಹೊಡೆತ ನೀಡಿವೆ.

ಮಹದೇವಪ್ಪ

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು 70 ವಿಧಾನಸಭಾ ಕ್ಷೇತ್ರಗಳ ಪೈಕಿ 62 ರಲ್ಲಿ ಅಭೂತಪೂರ್ವ ಜಯಗಳಿಸುತ್ತಿದ್ದಂತೆಯೇ ಬಿಜೆಪಿಗೆ ಎರಡು ಮಹತ್ತರ ಸವಾಲುಗಳು ಎದುರಾಗಿವೆ. ವಿಧಾನಸಭಾ ಚುನಾವಣೆಗಳಿಗೆ ಸ್ಥಳೀಯ ನಾಯಕತ್ವ ರೂಪಿಸುವುದರ ಜೊತೆಗೆ ಪ್ರಾದೇಶಿಕ ವಿಚಾರ ಹಾಗೂ ಸಾಧನೆಗಳನ್ನು ಚುನಾವಣಾ ವಿಷಯವನ್ನಾಗಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ನಿರಂತರವಾಗಿ ಸೋಲುತ್ತಿರುವುದು ಹಾಗೂ ಪ್ರಭಾವ ಕಳೆದುಕೊಳ್ಳುತ್ತಿರುವುದರಿಂದ ರಾಜ್ಯಸಭೆಯಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆ ಕ್ಷೀಣವಾಗುತ್ತಿದೆ. 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಸರಳ ಬಹುಮತಕ್ಕೆ 122 ಸದಸ್ಯರ ಬೆಂಬಲ ಅಗತ್ಯ. 86 ಸದಸ್ಯ ಬಲಹೊಂದಿರುವ ಬಿಜೆಪಿಯು ಮಿತ್ರಪಕ್ಷಗಳ ಬೆಂಬಲದಿಂದ ಹಲವಾರು ವಿವಾದಿತ ಕಾನೂನುಗಳನ್ನು ಜಾರಿಗೊಳಿಸಿದೆ. ಕಾಂಗ್ರೆಸ್ 45 ಸದಸ್ಯ ಬಲದೊಂದಿಗೆ ವಿರೋಧ ಪಕ್ಷದ ಸ್ಥಾನದಲ್ಲಿದೆ.

ಸಂಸತ್ತಿನಲ್ಲಿ ಯಾವುದೇ ಪ್ರಮುಖ ಮಸೂದೆ ಕಾನೂನಿನ ರೂಪ ಪಡೆಯಬೇಕಾದರೆ ಲೋಕಸಭೆಯ ನಂತರ ರಾಜ್ಯಸಭೆಯಲ್ಲಿ ಅನುಮೋದನೆಗೊಳ್ಳಬೇಕು. ಈ ದೃಷ್ಟಿಯಿಂದ ರಾಜ್ಯಸಭೆಯಲ್ಲಿ ಆಡಳಿತ ಪಕ್ಷವು ಸಂಖ್ಯಾಬಲ ಹೊಂದುವುದು ಅತ್ಯಗತ್ಯ. ರಾಜ್ಯಸಭೆಗೆ ವಿಧಾನಸಭೆಯ ಸದಸ್ಯರು ಮತಹಾಕಿ ಆಯ್ಕೆ ಮಾಡುವುದರಿಂದ ವಿಧಾನಸಭಾ ಚುನಾವಣೆಗಳನ್ನು ಗೆದ್ದು ರಾಜ್ಯಗಳಲ್ಲಿ ಅಧಿಕಾರ ಹಿಡಿಯುವುದು ಕೇಂದ್ರದಲ್ಲಿ ಅಧಿಕಾರ ನಡೆಸುವ ಪಕ್ಷಕ್ಕೆ ಅತ್ಯವಶ್ಯವಾಗಿದೆ.

ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ದೆಹಲಿಯಲ್ಲಿ ಅಧಿಕಾರ ಕಳೆದುಕೊಂಡಿರುವುದರಿಂದ ರಾಜ್ಯಸಭೆಯಲ್ಲಿ ಮೇಲುಗೈ ಸಾಧಿಸುವ ಆಸೆ ಇಟ್ಟುಕೊಂಡಿದ್ದ ಬಿಜೆಪಿಗೆ ಹೊಡೆತ ಬಿದ್ದಿದೆ. ಈ ವರ್ಷದ ಅಂತ್ಯದಲ್ಲಿ ಬಿಹಾರ, ಪಶ್ಚಿಮ ಬಂಗಾಳ ಹಾಗೂ ಮುಂದಿನ ವರ್ಷ ತಮಿಳುನಾಡಿನಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳಲ್ಲಿ ಗೆಲ್ಲುವುದು ಅಥವಾ ಮೈತ್ರಿ ಪಕ್ಷಗಳ ಜಯದ ಬೆನ್ನೇರುವುದು ರಾಜ್ಯಸಭೆಯಲ್ಲಿ ಮೇಲುಗೈ ಸಾಧಿಸುವ ದೃಷ್ಟಿಯಿಂದ ಬಿಜೆಪಿಗೆ ಅವಶ್ಯ. ಈ ವಿಚಾರವು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಜೋಡಿಯನ್ನು ಮುಂದೆ ಕಾಡಲಾರಂಭಿಸಲಿದೆ. ಸರಣಿ ಸೋಲುಗಳು ಪಕ್ಷದ ಸ್ಥೈರ್ಯ ಕುಂದಿಸುವುದಲ್ಲದೇ ಮೇಲ್ಮನೆಯಲ್ಲಿ ಪ್ರಭಾವ ಕಳೆದುಕೊಳ್ಳುವಂತೆ ಮಾಡುತ್ತಿದೆ. ಇದು ಮೋದಿ-ಶಾ ಬ್ರ್ಯಾಂಡ್ ರಾಜಕಾರಣಕ್ಕೆ ಹೊಂದುವ ವಿಚಾರವಲ್ಲ ಎಂಬುದು ರಾಜಕೀಯ ತಜ್ಞರ ಅಭಿಮತ.

ಕಳೆದ ವರ್ಷದ ಮೇ ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ಅತಿಹೆಚ್ಚು ಸ್ಥಾನ ಪಡೆದು ಅಧಿಕಾರ ಹಿಡಿದ ಬಿಜೆಪಿಯು ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಗೆಲುವಿಗಿಂತ ಸೋಲು ಕಂಡಿದ್ದೇ ಹೆಚ್ಚು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆಯ ಜೊತೆಗೂಡಿ ಚುನಾವಣೆ ಎದುರಿಸಿದ ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಅಧಿಕಾರ ಹಾಗೂ ಸ್ಥಾನಮಾನ ಹಂಚಿಕೆಯಲ್ಲಿ ಶಿವಸೇನೆಯೊಂದಿಗೆ ವಿರಸ ಕಟ್ಟಿಕೊಂಡು ಅಧಿಕಾರ ಕಳೆದುಕೊಂಡಿದೆ.

ಇದೇ ಸಂದರ್ಭದಲ್ಲಿ ಹರಿಯಾಣದಲ್ಲಿ 2014ರಲ್ಲಿ ಬಹುಮತ ಪಡೆದು ಸರ್ಕಾರ ರಚಿಸಿದ್ದ ಬಿಜೆಪಿಯು ಈ ಬಾರಿ ಮೈತ್ರಿ ಸರ್ಕಾರ ರಚಿಸಿ ಅಧಿಕಾರ ಉಳಿಸಿಕೊಂಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ರಾಜೀನಾಮೆ ಕೊಡಿಸಿ ಅಧಿಕಾರ ಹಿಡಿದಿದೆ. ಈಗ ಸ್ಥಾನಮಾನಕ್ಕೆ ಹಗ್ಗಜಗ್ಗಾಟ ಆರಂಭವಾಗಿದ್ದು, ಭಿನ್ನಮತ ಸ್ಫೋಟಗೊಂಡರೆ ಬಿ ಎಸ್ ಯಡಿಯೂರಪ್ಪ ಸರ್ಕಾರವು ಅವಧಿ ಪೂರ್ಣಗೊಳಿಸುವ ಸಾಧ್ಯತೆ ಕ್ಷೀಣ. ಇನ್ನು, ಇತ್ತೀಚೆಗೆ ನಡೆದ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಹಾಗೂ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಮೈತ್ರಿಗೆ ಶರಣಾಗಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಈ ವರ್ಷದ ಆರಂಭದಲ್ಲಿಯೇ ಆಪ್ ವಿರುದ್ಧ ಹೀನಾಯ ಸೋಲುಕಂಡಿರುವ ಬಿಜೆಪಿಯು ದಿಗ್ಮೂಢವಾಗಿದೆ.

2020 ಅಂತ್ಯದಲ್ಲಿ ಪಶ್ಚಿಮ ಬಂಗಾಳ ಹಾಗೂ ಬಿಹಾರದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸೆಣೆಸಬಲ್ಲ ಪ್ರಬಲ ಮುಖವಿಲ್ಲ. ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಜೊತೆಗೂಡಿ ಸರ್ಕಾರ ನಡೆಸುತ್ತಿರುವ ಬಿಜೆಪಿಗೆ ಹಲವಾರು ಸವಾಲುಗಳಿವೆ. ವಿವಿಧ ರಾಜ್ಯಗಳಲ್ಲಿ ಬಿಜೆಪಿ ಸೋಲುತ್ತಿರುವುದರಿಂದ ನಿತೀಶ್ ಕುಮಾರ್ ಅವರು ಬಿಜೆಪಿಯ ಮೇಲೆ ಒತ್ತಡ ಹಾಕಿ ಹೆಚ್ಚಿನ ಸ್ಥಾನಕ್ಕೆ ಬೇಡಿಕೆ ಇಡಬಹುದು. ಅಧಿಕಾರ ಹಿಡಿಯುವ ಏಕೈಕ ಉದ್ದೇಶದಿಂದ ಅನಿವಾರ್ಯವಾಗಿ ಬಿಜೆಪಿಯು ಜೆಡಿಯು ನಾಯಕನ ಒತ್ತಡಕ್ಕೆ ಮಣಿಯಬೇಕಾಗಬಹುದು. 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಒತ್ತಡಕ್ಕೆ ಮಣಿದ ಬಿಜೆಪಿಯು ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸಿತ್ತು ಎಂಬುದನ್ನು ನೆನೆಯಬಹುದಾಗಿದೆ.

2015ರಲ್ಲಿ ಕಾಂಗ್ರೆಸ್-ಆರ್‌ಜೆಡಿ ಮಹಾಮೈತ್ರಿಯೊಂದಿಗೆ ಚುನಾವಣೆ ಎದುರಿಸಿ ಬಿಜೆಪಿ ಮಣಿಸಿದ್ದ ನಿತೀಶ್ ಕುಮಾರ್ ಅವರು ಆನಂತರ ಮಹಾಮೈತ್ರಿ ತೊರೆದು ಬಿಜೆಪಿ ಜೊತೆ ಸೇರಿ ಅಧಿಕಾರದಲ್ಲಿ ಮುಂದುವರಿದ್ದಾರೆ. ಕೋಮುವಾದಿ ಎಂಬ ಆರೋಪಕ್ಕೆ ಗುರಿಯಾಗಿರುವ ಬಿಜೆಪಿಯ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರೂ ಬಿಹಾರ ರಾಜಕಾರಣದಲ್ಲಿ ಮುಸ್ಲಿಂ ಸಮುದಾಯವು ನಿತೀಶ್ ಕುಮಾರ್ ಬೆನ್ನಿಗೆ ಪ್ರಬಲವಾಗಿ ನಿಂತಿತ್ತು. ನಿತೀಶ್ ಕುಮಾರ್ ಅವರು ಬಿಜೆಪಿಯ ಮುಸ್ಲಿಂ ವಿರೋಧಿ ನಿಲುವುಗಳಿಂದ ಅಂತರ ಕಾಯ್ದುಕೊಂಡಿದ್ದರಿಂದ ನಿತೀಶ್ ಅವರ ಮೇಲೆ ಮುಸ್ಲಿಂ ಸಮುದಾಯ ವಿಶ್ವಾಸವಿಟ್ಟಿತ್ತು. ಬಿಜೆಪಿಯ ಕೋರ್‌ ಮತಗಳ ಜೊತೆಗೆ ನಿತೀಶ್ ಪ್ರತಿನಿಧಿಸುವ ಕುರ್ಮಿ ಸಮುದಾಯದ ಮತಗಳು ಒಟ್ಟುಗೂಡಿದಾಗ ಮಾತ್ರ ಜೆಡಿಯು-ಬಿಜೆಪಿ ಮೈತ್ರಿಯು ಬಹುಮತ ಪಡೆಯಲು ಸಾಧ್ಯ ಎಂಬುದನ್ನು ಚುನಾವಣಾ ಅಂಕಿ-ಅಂಶಗಳು ಬಹಿರಂಗಪಡಿಸಿವೆ. ಆದರೆ, ಸಿಎಎ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (NRC) ವಿರೋಧಿಸಿ ದೇಶಾದ್ಯಂತ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸುತ್ತಿದ್ದರೂ ನಿತೀಶ್ ಅವರು ಮುಸ್ಲಿಂ ಸಮುದಾಯದಲ್ಲಿ ವಿಶ್ವಾಸ ಮೂಡಿಸುವ ಯಾವುದೇ ಕ್ರಮಕೈಗೊಂಡಿಲ್ಲ.

ಕಾಂಗ್ರೆಸ್ ಹಾಗೂ ಬಿಜೆಪಿ ವಿರೋಧಿ ರಾಜ್ಯ ಸರ್ಕಾರಗಳು ಸಿಎಎ ವಿರೋಧಿಸಿ ವಿಧಾನಸಭೆಗಳಲ್ಲಿ ನಿಲುವಳಿ ಮಂಡಿಸಿವೆ. ಕೆಲವು ರಾಜ್ಯ ಸರ್ಕಾರಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಿವೆ. ಬಿಜೆಪಿ ಸಖ್ಯದೊಂದಿಗೆ ಸರ್ಕಾರ ನಡೆಸುತ್ತಿರುವ ನಿತೀಶ್ ಕುಮಾರ್ ಅವರು ಮುಸ್ಲಿಂ ಸಮುದಾಯದಲ್ಲಿ ವಿಶ್ವಾಸ ಮೂಡಿಸಬಲ್ಲ ಯಾವುದೇ ಕಠಿಣ ನಿಲುವು ತಳೆದಿಲ್ಲ. ಇದು ನಿತೀಶ್ ಗೆ ಮುಳುವಾಗಬಹುದು ಎನ್ನಲಾಗುತ್ತಿದೆ. ಇದರೊಂದಿಗೆ ಅಧಿಕಾರಕ್ಕಾಗಿ ಆಗಿಂದಾಗ್ಗೆ ನಿಲುವುಗಳನ್ನು ಬದಲಿಸಿರುವ ನಿತೀಶ್ ಕುಮಾರ್ ಅವರು ಬಿಜೆಪಿ ಜೊತೆ ಗುರುತಿಸಿಕೊಂಡರೂ ಬಿಹಾರಕ್ಕೆ ವಿಶೇಷ ಅನುದಾನ ತರಲಾಗಲಿಲ್ಲ ಎನ್ನುವ ವಿರೋಧದ ಕೂಗು ಎದ್ದಿದೆ. ನಿತೀಶ್ ಸರ್ಕಾರದ ವಿರುದ್ಧದ ಆಕ್ರೋಶವನ್ನು ಸಮರ್ಥವಾಗಿ ಬಳಸಿಕೊಂಡು ಪ್ರಬಲ ಹೋರಾಟ ಸಂಘಟಿಸಿದರೆ ವಿರೋಧ ಪಕ್ಷಗಳಾದ ಆರ್‌ಜೆಡಿ-ಕಾಂಗ್ರೆಸ್‌ ಮುಂದೆ ಬಿಜೆಪಿ-ಜೆಡಿಯು ಮೈತ್ರಿ ಮುಗ್ಗರಿಸಬಹುದು.

ಇನ್ನು ತಮಿಳುನಾಡಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಯಲಲಿತಾ ಹಾಗೂ ಎಂ ಕರುಣಾನಿಧಿ ನಿಧನದ ನಂತರ ಮೊದಲ ವಿಧಾನಸಭೆ ಚುನಾವಣೆ 2021ರಲ್ಲಿ ನಡೆಯಲಿದೆ. ಪ್ರಬಲ ನಾಯಕತ್ವದ ಕೊರತೆ ಎದುರಿಸುತ್ತಿರುವ ಬಿಜೆಪಿಯ ಮಿತ್ರಪಕ್ಷವಾದ ಎಐಎಡಿಎಂಕೆಯು ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಇದನ್ನು ಅರಿತು ಸೂಪರ್ ಸ್ಟಾರ್ ರಜನೀಕಾಂತ್ ಮೂಲಕ ತಮಿಳುನಾಡಿನಲ್ಲಿ ಚುನಾವಣೆ ಎದುರಿಸುವ ಗುಪ್ತ ಕಾರ್ಯಸೂಚಿಯನ್ನು ಬಿಜೆಪಿ ಹೆಣೆದಿದೆ ಎನ್ನಲಾಗುತ್ತಿದೆ. ಅತ್ತ ಮತ್ತೊಬ್ಬ ಸ್ಟಾರ್ ನಟ ಕಮಲ್ ಹಾಸನ್ ಅವರು ಸಕ್ರಿಯ ರಾಜಕಾರಣ ಪ್ರವೇಶಿಸಿರುವುದರಿಂದ ಕದನ ಕುತೂಹಲ ಹೆಚ್ಚಿದೆ. ಲೋಕಸಭಾ ಚುನಾವಣೆಯಲ್ಲಿ ಎಂ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ-ಕಾಂಗ್ರೆಸ್ ಮೈತ್ರಿಯು ಮೇಲುಗೈ ಸಾಧಿಸಿದೆ. ಈ ಬಾರಿಯ ಚುನಾವಣೆಯು ಹಲವು ರೀತಿಯ ಹೋರಾಟಕ್ಕೆ ಸಾಕ್ಷಿಯಾಗಿರುವುದರಿಂದ ಕುತೂಹಲ ಮೂಡಿಸಿದೆ. ಇದೆಲ್ಲದರ ನಡುವೆ ಬಿಜೆಪಿಯು ಇತ್ತೀಚೆಗೆ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ರಾಷ್ಟ್ರೀಯ ವಿಚಾರಧಾರೆಗಳನ್ನು ಚುನಾವಣಾ ವಿಷಯವನ್ನಾಗಿಸಲು ಯತ್ನಿಸಿ ದಯನೀಯವಾಗಿ ಸೋಲುಂಡಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಲಾಗಿದ್ದ ವಿಶೇಷ ಮಾನ್ಯತೆ ರದ್ದು, ರಾಮ ಮಂದಿರ ನಿರ್ಮಾಣ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ತ್ರಿವಳಿ ತಲಾಖ್ ಹೀಗೆ ಕೇಂದ್ರದಲ್ಲಿನ ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿದ ಈ ಕಾಯ್ದೆಗಳಿಗೆ ಜನರು ವಿಧಾನಸಭೆಯ ಚುನಾವಣೆಯಲ್ಲಿ ಕಿಮ್ಮತ್ತು ನೀಡಿಲ್ಲ ಎಂಬುದು ಫಲಿತಾಂಶದಿಂದ ರುಜುವಾತಾಗಿದೆ. ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶವು ಬಿಜೆಪಿಯ ಹಿಂದುತ್ವ ಹಾಗೂ ದ್ವೇಷಪೂರಿತ ಚುನಾವಣಾ ಪ್ರಚಾರಕ್ಕೆ ಅವಕಾಶವಿಲ್ಲ ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಿದೆ.

ಈ ಹಿನ್ನೆಲೆಯಲ್ಲಿ ಮುಂದೆ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯು ಆಡಳಿತ, ಅಭಿವೃದ್ಧಿ ಹಾಗೂ ಸ್ಥಳೀಯ ನಾಯಕತ್ವವನ್ನು ಮುಂದಿಟ್ಟು ಚುನಾವಣೆ ನಡೆಸಿದರೆ ಮಾತ್ರ ಅದಕ್ಕೆ ಅಧಿಕಾರ ಸಿಗುವ ಸಾಧ್ಯತೆ ಎನ್ನುವುದನ್ನು ಮಹಾರಾಷ್ಟ್ರ, ದೆಹಲಿ, ಜಾರ್ಖಂಡ್ ಚುನಾವಣೆಗಳು ಸ್ಪಷ್ಟಪಡಿಸಿವೆ. ಒಂದೊಮ್ಮೆ ಚುನಾವಣೆಯಲ್ಲಿ ಹಿಂದೂ-ಮುಸ್ಲಿಂ, ಪಾಕಿಸ್ತಾನ, ಮದ್ದು-ಗುಂಡು, ದೇಶದ್ರೋಹಿ, ಅರ್ಬನ್ ನಕ್ಸಲ್, ವಿವಾದಿತ ತೀರ್ಮಾನಗಳು, ಅತಿಯಾದ ರಾಷ್ಟ್ರೀಯತೆಯ ವಿಚಾರಗಳನ್ನು ಪ್ರಸ್ತಾಪಿಸಿದರೆ ಅದಕ್ಕೆ ಕಿಮ್ಮತ್ತು ಸಿಗುವುದು ಕ್ಷೀಣ. ಇದು ಸಹಜವಾಗಿ ಬಿಜೆಪಿಯ ಅಧಿಕಾರವನ್ನು ಕಸಿಯಲಿದ್ದು, ರಾಜ್ಯಸಭೆಯಲ್ಲಿ ಬಹುಮತ ಪಡೆಯುವ ಬಿಜೆಪಿಯ ಆಸೆಗೆ ತಣ್ಣೀರೆರಚಲಿದೆ. ಇದರಿಂದ ಲೋಕಸಭೆಯಲ್ಲಿ ಎಷ್ಟೇ ದೊಡ್ಡ ಬಹುಮತ ಹೊಂದಿದ್ದರೂ ರಾಜ್ಯಸಭೆಯಲ್ಲಿ ಬಹುಮತ ಸಾಬೀತುಪಡಿಸಲು ವಿಫಲವಾದಲ್ಲಿ ಬಿಜೆಪಿ ಉದ್ದೇಶಿಸಿರುವ ಕಾನೂನುಗಳನ್ನು ಜಾರಿಗೆ ತರಲಾಗದು.

ನರೇಂದ್ರ ಮೋದಿಯವರ ಮೊದಲ ಐದು ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಬಹುಮತ ಹೊಂದಿದ್ದರಿಂದ ಬಿಜೆಪಿಯ ಹಲವು ಮಸೂದೆಗಳಿಗೆ ಸೋಲುಂಟಾಗಿತ್ತು ಎಂಬುದನ್ನು ಸ್ಮರಿಸಬಹುದಾಗಿದೆ. ವಿರೋಧ ಪಕ್ಷಗಳನ್ನು ಅಣಿಯಲು ತುದಿಗಾಲಲ್ಲಿ ನಿಲ್ಲುವ ಮೋದಿ-ಶಾ ಜೋಡಿಯು ದೆಹಲಿ ಫಲಿತಾಂಶವನ್ನು ಗಂಭೀರವಾಗಿ ಪರಿಗಣಿಸಿ ತನ್ನ ಚುನಾವಣಾ ತಂತ್ರವನ್ನು ಬದಲಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ನಿರಂತರ ಸುದ್ದಿಗಾಗಿ ಪ್ರತಿಧ್ವನಿಯ Facebook, YouTube, Twitter ಪೇಜ್ ಸೇರಿಕೊಳ್ಳಿ. ಪ್ರತಿಧ್ವನಿಯ ಟೆಲಿಗ್ರಾಂ ಸೇರಲು, ಈ ಲಿಂಕ್ ಕ್ಲಿಕ್ ಮಾಡಿ

Pratidhvani
www.pratidhvani.com