ಮೆಹಬೂಬ ಮುಫ್ತಿಯ ದೋಷಾರೋಪದಲ್ಲಿ ಕಾಶ್ಮೀರದ ಕೋಟಾ ರಾಣಿಯ ಉಲ್ಲೇಖಿಸಿದ ಪೋಲೀಸರು
ರಾಷ್ಟ್ರೀಯ

ಮೆಹಬೂಬ ಮುಫ್ತಿಯ ದೋಷಾರೋಪದಲ್ಲಿ ಕಾಶ್ಮೀರದ ಕೋಟಾ ರಾಣಿಯ ಉಲ್ಲೇಖಿಸಿದ ಪೋಲೀಸರು

ಮೆಹಬೂಬ ಮುಫ್ತಿ ವಿರುದ್ದ ಸಿದ್ದಪಡಿಸಲಾಗಿರುವ   ದೂರಿನಲ್ಲಿ  ಅವರ ಮೇಲೆ ದೇಶ ವಿರೋಧಿ ಹೇಳಿಕೆ ನೀಡುವ ಆರೋಪ ಜತೆಗೇ ನಿಷೇಧಿಸಲಾಗಿರುವ ಮತೀಯ ಸಂಘಟನೆ ಜಮಾತೆ ಇಸ್ಲಾಮ್ ಗೆ ಬೆಂಬಲ ನೀಡಿರುವ ಆರೋಪವನ್ನೂ ಹೊರಿಸಲಾಗಿದೆ.

ಕೋವರ್ ಕೊಲ್ಲಿ ಇಂದ್ರೇಶ್

ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮೊನ್ನೆ ಫೆಬ್ರುವರಿ 6 ನೇ ತಾರೀಖಿನಂದು ಜಮ್ಮು ಕಾಶ್ಮೀರ ಪೋಲೀಸರು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಅವರನ್ನು ಪುನಃ ಸಾರ್ವಜನಿಕ ಸುರಕ್ಷತಾ ಕಾಯ್ದೆ(PSA)ಯ ಅನ್ವಯ ಬಂಧಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಜಮ್ಮು ಕಾಶ್ಮೀರ ಆಡಳಿತ, ಮೆಹಬೂಬ ಮುಫ್ತಿ ಅವರ ವಿರುದ್ದ ಸಿದ್ದಪಡಿಸಲಾದ ದಸ್ತಾವೇಜಿನಲ್ಲಿ ಅವರನ್ನು ಕಾಶ್ಮೀರದ ಹಿಂದಿನ ರಾಣಿಯಾಗಿದ್ದ ಕೋಟಾ ರಾಣಿಯಂತೆ ಎಂದು ಉಲ್ಲೇಖಿಸಲಾಗಿದೆ.

ಕೋಟಾ ರಾಣಿಯು ಕಾಶ್ಮೀರವನ್ನು ಆಳಿದ ಕೊನೆಯ ಹಿಂದೂ ರಾಣಿ ಆಗಿದ್ದು ಈಕೆಯ ಆಳ್ವಿಕೆ ಕ್ರಿಸ್ತ ಶಕ 1339 ರಲ್ಲಿ ಕೊನೆಗೊಂಡಿದೆ. ಈಕೆ ಲೊಹರ ವಂಶದ ರಾಜನಾಗಿದ್ದ ಸುಹದೇವ ಎಂಬುವವನ ಸೇನಾಧಿಪತಿಯಾಗಿದ್ದ ರಾಮಚಂದ್ರನ ಮಗಳಾಗಿದ್ದು ಈಕೆ ಕುಟಿಲತನಕ್ಕೆ ಹೆಸರುವಾಸಿ ಆಗಿದ್ದಳು. ತನ್ನ ವಿರೋಧಿಗಳನ್ನು ಸಂಹರಿಸಲು ಸಂಚು ಮಾಡಿ ವಿಷವನ್ನು ನೀಡಿ ಕೊಲ್ಲುತಿದ್ದಳು ಎಂದು ಹೇಳಲಾಗಿದ್ದು, ಕೋಟ ರಾಣಿಯು ಎರಡು ಬಾರಿ ಮದುವೆ ಆಗಿದ್ದು ತನ್ನ ತಂದೆ ನೇಮಿಸಿದ್ದ ಲಢಾಖಿ ಆಡಳಿತಗಾರ ರಿಂಚನ್‌ ಎಂಬಾತನನ್ನು ಮೊದಲು ವಿವಾಹವಾಗಿದ್ದಳು. ನಂತರ ರಾಜ ಸುಹದೇವನ ಸಹೋದರನನ್ನು ವಿವಾಹವಾಗಿದ್ದಳು. ನಂತರ ರಿಂಚನ್‌ ಕೋಟ ರಾಣಿಯ ತಂದೆಯನ್ನು ಹತ್ಯೆ ಮಾಡಿ ಕೋಟ ರಾಣಿಯ ಇಡೀ ಕುಟುಂಬವನ್ನು ಒತ್ತೆ ಇರಿಸಿಕೊಂಡು ಷಾ ಮಿರ್‌ ಎಂಬಾತನನ್ನು ಉಸ್ತುವಾರಿಗೆ ನೇಮಿಸಿದ್ದ. ರಾಜ ಉದಯದೇವನ ಮರಣದ ನಂತರ ಕೋಟ ರಾಣಿ ಕಾಶ್ಮೀರದ ಆಡಳಿತ ಕೈಗೆತ್ತಿಕೊಂಡು ಪಟ್ಟಕ್ಕೇರಿದಳು. ಆದರೆ 1339 ರಲ್ಲಿ ನಡೆದ ಯುದ್ದದಲ್ಲಿ ಷಾ ಮಿರ್‌ ನೊಂದಿಗೆ ನಡೆದ ಯುದ್ದದಲ್ಲಿ ಸೋಲನ್ನಪ್ಪಿದಳು. ಷಾ ಮಿರ್‌ ತನ್ನನ್ನು ಮದುವೆ ಆಗುವಂತೆ ಕೋಟ ರಾಣಿಯನ್ನು ಕೇಳಿದಾಗ ತನ್ನನ್ನೇ ಇರಿದುಕೊಂಡು ಸಾವನ್ನಪ್ಪಿದಳು ಎಂಬುದು ಇತಿಹಾಸ. 14 ನೇ ಶತ ಮಾನದಲ್ಲಿ ಕೋಟ ರಾಣಿಯು ತನ್ನ ಸೌಂದರ್ಯಕ್ಕೆ ಮತ್ತು ಅತ್ಯತ್ತಮಆಡಳಿತ ಕೌಶಲ್ಯಕ್ಕೆ ಹೆಸರಾಗಿದ್ದು ಕಾಶ್ಮೀರವನ್ನು ಧಾಳಿಕೋರರಿಂದ ರಕ್ಷಿಸಲು ಹೋರಾಡಿದಳು ಎಂದು ಹೇಳಲಾಗಿದೆ. ಕೋಟ ರಾಣಿಯು ತನ್ನ ಆಡಳಿತಾವಧಿಯಲ್ಲಿ ರಾಜ್ಯವನ್ನು ಪ್ರವಾಹದಿಂದ ರಕ್ಷಿಸಲು ಕಾಲುವೆಯೊಂದನ್ನು ನಿರ್ಮಿಸಿದಳು ಅದನ್ನು ಕುತ್ತೆ ಕೋಲ್‌ ಎಂದೂ ಕರೆಯಲಾಗುತ್ತದೆ. 2019 ರ ಆಗಸ್ಟ್‌ ನಲ್ಲಿ ಹಿಂದಿ ಚಿತ್ರ ನಿರ್ಮಾಪಕ ಮಧು ಮಂತೆನ ಅವರು ಕೋಟ ರಾಣಿಯ ಕುರಿತು ಚಲನಚಿತ್ರ ನಿರ್ಮಿಸುವುದಾಗಿ ಘೋಷಿಸಿದ್ದರು.

ಈಗ ಮೆಹಬೂಬ ಮುಫ್ತಿ ವಿರುದ್ದ ಸಿದ್ದಪಡಿಸಲಾಗಿರುವ ದೂರಿನಲ್ಲಿ ಅವರ ಮೇಲೆ ದೇಶ ವಿರೋಧಿ ಹೇಳಿಕೆ ನೀಡುವ ಆರೋಪ ಜತೆಗೇ ನಿಷೇಧಿಸಲಾಗಿರುವ ಮತೀಯ ಸಂಘಟನೆ ಜಮಾತೆ ಇಸ್ಲಾಮ್ ಗೆ ಬೆಂಬಲ ನೀಡಿರುವ ಆರೋಪವನ್ನೂ ಹೊರಿಸಲಾಗಿದೆ. ಕಾಶ್ಮೀರದ ಪೀಪಲ್ಸ್‌ ಡೆಮಾಕ್ರಾಟಿಕ್‌ ಪಕ್ಷದ ಅದ್ಯಕ್ಷೆಯೂ ಆಗಿರುವ ಮುಫ್ತಿ ಜತೆಗೇ ಜಮ್ಮು ಕಾಶ್ಮೀರ ಮಾಜಿ ಮುಖ್ಯ ಮಂತ್ರಿ ಒಮರ್‌ ಅಬ್ದುಲ್ಲ ಅವರ ‌6 ತಿಂಗಳ ಗೃಹ ಬಂಧನದ ಅವಧಿ ಪೂರ್ಣಗೊಳ್ಳುವುದಕ್ಕೂ ಕೆಲವು ಗಂಟೆಗಳ ಮೊದಲಷ್ಟೆ ಈ ಅರೋಪಗಳನ್ನು ಹೊರಿಸಿ ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ವಯ ವಶಕ್ಕೆ ಪಡೆಯಲಾಗಿದೆ.

ಈ ಕಾಯ್ದೆಯನ್ವಯ ಯಾವುದೇ ವ್ಯಕ್ತಿಯನ್ನು ಎರಡು ವರ್ಷಗಳವರೆಗೆ ಬಂಧನದಲ್ಲಿಡಬಹುದಾಗಿದೆ. ಪೋಲೀಸರು ಮುಫ್ತಿ ಅವರ ಬಂಧನಕ್ಕೆ ಕೋಟ ರಾಣಿಯನ್ನು ಉಲ್ಲೇಖಿಸಿರುವುದು ಕುತೂಹಲಕಾರಿ ಆಗಿದೆ.

ಮೆಹಬೂಬ ಮುಫ್ತಿ ಅವರ ಟ್ವಿಟರ್‌ ಖಾತೆಯನ್ನು ನೋಡಿಕೊಳ್ಳುತ್ತಿರುವ ಪುತ್ರಿ ಇಲ್ತಿಜ ಮುಫ್ತಿ ಅವರು ಡ್ಯಾಡೀಸ್‌ ಗರ್ಲ್‌ ಎಂಬ ಹೇಳಿಕೆ ಕುರಿತು ಟ್ವೀಟ್‌ ಮಾಡಿದ್ದು ದಿವಂಗತ ಮುಫ್ತಿ ಮೊಹಮದ್‌ ಸಯೀದ್‌ ಅವರನ್ನು ಮೆಹಬೂಬ ಅವರು ಹೆಚು ಪ್ರೀತಿ ಮತ್ತು ಗೌರವದಿಂದ ಕಾಣುತಿದ್ದರು ಎಂದು ಟ್ವೀಟ್‌ ಮಾಡಿದ್ದಾರೆ. ಹಾಗಾಗಿ 2016 ರಲ್ಲಿ ಸಯೀದ್‌ ಅವರ ಹಠಾತ್‌ ಸಾವಿನ ನಂತರ ಅವರ ಆಶಯಗಳನ್ನು ಪೂರ್ಣಗೊಳಿಸುವುದು ಮೆಹಬೂಬ ಅವರ ಉದ್ದೇಶವಾಗಿತ್ತು ಎಂದಿದ್ದಾರೆ. ಆದರೆ ಪೋಷಕರನ್ನು ಪ್ರೀತಿಸುವುದೂ ಕೂಡ ಕಾನೂನಿನಡಿಯಲ್ಲಿ ತಪ್ಪಾಗುತ್ತದೆ ಎಂದು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

ಕಾಶ್ಮೀರ ಅಡಳಿತ ಮೆಹಬೂಬ ಮುಫ್ತಿ ಅವರ ಮೇಲೆ ಹೊರಿಸಲಾಗಿರುವ ಎಲ್ಲ ಆರೋಪಗಳಿಗೂ ಉತ್ತರಿಸಿರುವ ಇಲ್ತಿಜ ಅವರು ಕೇಂದ್ರ ಗೃಹ ಸಚಿವಾಲಯದ ಅಣತಿಯಂತೆ ಈ ದೋಷಾರೋಪವನ್ನು ಸಿದ್ದಪಡಿಸಲಾಗಿದೆ ಎಂದಿದ್ದಾರೆ. ಬಿಜೆಪಿಯು ಪಿಡಿಪಿ ಜತೆ ಸರ್ಕಾರವನ್ನು ರಚಿಸಿದ್ದಾಗ 370 ನೇ ವಿಧಿಯನ್ನು ಯಥಾ ಪ್ರಕಾರ ಮುಂದುವರಿಸಿಕೊಂಡು ಹೋಗುವುದಾಗಿ ಭರವಸೆ ನೀಡಿತ್ತು. ಅದರೆ ತನ್ನ ಮಾತಿನಿಂದ ಹಿಂದೆ ಸರಿದಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

2016 ರ ಏಪ್ರಿಲ್‌ 4 ರಂದು ಬಿಜೆಪಿ -ಪಿಡಿಪಿ ಸಹಯೋಗದೊಂದಿಗೆ ಕಣಿವೆ ರಾಜ್ಯದ ಮೊದಲ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೆಹಬೂಬ ಮುಫ್ತಿ ಅವರು ಜೂನ್‌ 19 , 2018 ರಂದು ರಾಜೀನಾಮೆ ಸಲ್ಲಿಸಿದ್ದರು.

ಪಿಡಿಪಿಯ ಹಿರಿಯ ಮುಖಂಡ ನಯೀಮ್‌ ಅಕ್ತರ್‌ ಅವರನ್ನೂ ಕೂಡ ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ವಯವೇ ವಶಕ್ಕೆ ಪಡೆಯಲಾಗಿದ್ದು ಗೃಹ ಸಚಿವ ಅಮಿತ್‌ ಷಾ ಅವರನ್ನು ಟೀಕಿಸಿದ್ದು, ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸಯದ್‌ ಅಲಿ ಷಾ ಗೀಲಾನಿ ಅವರ ಅತ್ಮಕಥೆಯನ್ನು ಓದುವಂತೆ ಜನತೆಗೆ ಕರೆ ನೀಡಿದ್ದು, ಪಾಕ್‌ ಆಕ್ರಮಿತ ಕಾಶ್ಮೀರದ ಯುವಕನೊಬ್ಬನು ತನ್ನ ಖಾಯಿಲೆ ಬಿದ್ದಿರುವ ಅಜ್ಜಿಯನ್ನು ನೋಡಲು ಕಾಶ್ಮೀರಕ್ಕೆ ಬರಲು ಕೇಂದ್ರ ಸರ್ಕಾರ ವೀಸಾ ನಿರಾಕರಿಸಿದ್ದನ್ನು ಟೀಕಿಸಿದ್ದು, ಮುಂತಾದ ಅರೋಪಗಳನ್ನು ಹೊರಿಸಲಾಗಿದೆ.

ನಯೀಮ್‌ ಅವರು 2019ರ ಜನವರಿ 9 ರಂದು ಗೃಹ ಸಚಿವ ಅಮಿತ್‌ ಷಾ ಅವರ ಪಶ್ಚಿಮ ಬಂಗಾಳದ ಚುನಾವಣಾ ಭಾಷಣವನ್ನು ಟೀಕಿಸಿದ್ದರು. ಅವರು ಹಿಂದೂ ರಾಷ್ಟ್ರ ಕ್ಕೆ ಕರೆ ನೀಡಿದ್ದು, ಚುನಾವಣೆಗಳಲ್ಲಿ ಗೆಲ್ಲಲು ಕೋಮು ದ್ವೇಷ ಹರಡುತಿದ್ದಾರೆ ಎಂದೂ ಅರೋಪಿಸಿದ್ದರು. ನಯೀಮ್‌ ಅವರು ಮುಫ್ತಿ ಕುಟುಂಬದ ಆಪ್ತರಾಗಿದ್ದು ಕೇಂದ್ರ ಸರ್ಕಾರದ ವಿರುದ್ದ ಜನತೆ ಪ್ರತಿಭಟಿಸುವಂತೆ ಕರೆ ನೀಡಿದ್ದರು ಎಂದೂ ಆರೋಪಿಸಲಾಗಿದೆ. ಪಿಡಿಪಿ ಪಕ್ಷದಲ್ಲಿ ನಂಬರ್‌ 2 ರ ಸ್ಥಾನದಲ್ಲಿರುವ ನಯೀಮ್‌ ಅವರು ಸಂಪುಟ ಸಚಿವರೂ ಅಗಿದ್ದು ಪಿಡಿಪಿ -ಬಿಜೆಪಿ ಸರ್ಕಾರ ಇದ್ದಾಗ ವಕ್ತಾರರೂ ಅಗಿದ್ದರು.

ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಬಂಧಿಸಿರುವುದನ್ನು ಪ್ರಶ್ನಿಸಿ ಒಮರ್‌ ಅವರ ಸಹೋದರಿ ಸಾರಾ ಅಬ್ದುಲ್ಲ ಅವರು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸಂಸದರಾಗಿ, ಮುಖ್ಯ ಮಂತ್ರಿಯಾಗಿ ದೇಶ ಸೇವೆ ಮಾಡಿರುವವರನ್ನು ಬಂದಿಸಿರುವುದು ಮತ್ತು ಬಂದನಕ್ಕೆ ನೀಡಿರುವ ಕಾರಣಗಳೂ ಅನುಮಾನ ಹುಟ್ಟಿಸುತ್ತವೆ ಎಂದೂ ಅರ್ಜಿಯಲ್ಲಿ ಆರೋಪಿಸಲಾಗಿದೆ.

ನಿರಂತರ ಸುದ್ದಿಗಾಗಿ ಪ್ರತಿಧ್ವನಿಯ Facebook, YouTube, Twitter ಪೇಜ್ ಸೇರಿಕೊಳ್ಳಿ. ಪ್ರತಿಧ್ವನಿಯ ಟೆಲಿಗ್ರಾಂ ಸೇರಲು, ಈ ಲಿಂಕ್ ಕ್ಲಿಕ್ ಮಾಡಿ

Pratidhvani
www.pratidhvani.com