ಬಿಜೆಪಿಗೆ ಶಾಹೀನ್ ಬಾಗ್  ಚುನಾವಣೆ ಅಸ್ತ್ರವೇ? 

ಬಿಜೆಪಿಗೆ ಶಾಹೀನ್ ಬಾಗ್ ಚುನಾವಣೆ ಅಸ್ತ್ರವೇ? 

ಶಾಹೀನ್ ಬಾಗ್ ನಲ್ಲಿ ಸೇರಿರುವ ಲಕ್ಷಾಂತರ ಜನರು ನಿಮ್ಮ ಮನೆಗೆ ನುಗ್ಗಿ ನಿಮ್ಮ ಹೆಣ್ಣು ಮಕ್ಕಳನ್ನು ಹೊತ್ತೊಯ್ದು ಅತ್ಯಾಚಾರ ಮಾಡಿ ಕೊಲೆ ಮಾಡಬಹುದು. ಹೀಗಾಗಿ ಚುನಾವಣೆಯಲ್ಲಿ ಬುದ್ಧಿವಂತಿಕೆಯಿಂದ ಮತ ಹಾಕಿ ಎಂದಿದ್ದಾರೆ ಸಂಸದ ಪರ್ವೀಶ್ ವರ್ಮಾ

ಫೆಬ್ರವರಿಯಲ್ಲಿ ನಡೆಯಲಿರುವ ದೇಶದ ರಾಜಧಾನಿ ದೆಹಲಿಯ ವಿಧಾನಸಭೆ ಚುನಾವಣೆ ಮೇಲೆ ಇಡೀ ದೇಶವಷ್ಟೇ ಅಲ್ಲ, ಜಗತ್ತಿನ ಕಣ್ಣು ನೆಟ್ಟಿದೆ. ಇಲ್ಲಿ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಮತ್ತೊಂದು ಅವಧಿಗೆ ಅಧಿಕಾರ ನೀಡುವಂತೆ ಮತಭಿಕ್ಷೆ ಕೇಳುತ್ತಿದ್ದರೆ, ಸುಮಾರು ಒಂದೂವರೆ ದಶಕದ ನಂತರ ಅಧಿಕಾರ ನೀಡಿ ಎಂದು ಬಿಜೆಪಿ ಮತ ಕೇಳುತ್ತಿದೆ.

ಕೇಂದ್ರದಲ್ಲಿ ಎರಡನೇ ಅವಧಿಗೆ ಭಾರೀ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಕಳೆದ ಐದಾರು ವರ್ಷಗಳಿಂದ ದೆಹಲಿಯಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಅಲ್ಲಲ್ಲಿ ಕೆಲವು ವಿವಾದಗಳನ್ನು ಹೊರತುಪಡಿಸಿದರೆ ಪ್ರತಿಪಕ್ಷದಲ್ಲಿದ್ದುಕೊಂಡು ಬಿಜೆಪಿ ಮಾಡಿದ ಸಾಧನೆ ಒಂದು ರೀತಿಯ ಶೂನ್ಯ ಸಂಪಾದನೆಯಂತಾಗಿದೆ.

ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಎರಡಂಕಿಯ ಸ್ಥಾನಗಳನ್ನು ಗೆಲ್ಲಲೂ ಹರಸಾಹಸಪಟ್ಟಿದ್ದ ಬಿಜೆಪಿ ಈಗ ಅಧಿಕಾರಕ್ಕೆ ಬರಲು ಸಾಧ್ಯವೇ ಎಂಬ ಲೆಕ್ಕಾಚಾರದಲ್ಲಿ ತೊಡಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ದೆಹಲಿಯಲ್ಲಿ ಆಡಳಿತ ವಿರೋಧಿ ಅಲೆಯಂತೂ ಕಾಣುತ್ತಿಲ್ಲ. ಹೀಗಾಗಿ ಬಿಜೆಪಿಗೆ ಮಾತ್ರವಲ್ಲ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಕ್ಕೂ ಮತದಾರರ ಬಳಿ ಹೋಗಿ ಇಂತಹದ್ದೇ ವಿಚಾರಕ್ಕೆ ಮತ ನೀಡಿ ಎಂದು ಕೇಳಲು ವಿಷಯಗಳೇ ಇಲ್ಲದಂತಾಗಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿಯು ಮುಖ್ಯಮಂತ್ರಿ ಕೇಜ್ರಿವಾಲ್ ಗೆ ಸಮಾನವಾಗಿ ಯಾವುದೇ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸದಿರಲು ಕಳೆದ ಡಿಸೆಂಬರ್ ನಲ್ಲಿಯೇ ನಿರ್ಧರಿಸಿದೆ. ಇದರ ಬದಲಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನೇ ಮುಂದಿಟ್ಟುಕೊಂಡು ಚುಣಾವಣೆ ಎದುರಿಸಲಿದೆ. ಹೀಗಾಗಿ, ಈ ಚುನಾವಣೆಯನ್ನು ಮೋದಿ ಮತ್ತು ಕೇಜ್ರಿವಾಲ್ ನಡುವಿನ ಸಮರ ಎಂದೇ ಬಿಂಬಿಸಲಾಗುತ್ತಿದೆ. ಬಿಜೆಪಿ ಈ ನಿರ್ಧಾರ ಕೈಗೊಳ್ಳಲು ಪ್ರಮುಖ ಕಾರಣ ಹಿಂದಿನ ಎರಡು ಚುನಾವಣೆಗಳ ಕಹಿ ಅನುಭವ. 2013 ಮತ್ತು 2015 ರಲ್ಲಿ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಬಿಂಬಿಸಿ ಕೈ ಸುಟ್ಟುಕೊಂಡಿತ್ತಲ್ಲದೇ, ಹೀನಾಯ ಸೋಲನ್ನೂ ಅನುಭವಿಸಿತ್ತು.

ಇದೀಗ ಬಿಜೆಪಿ ಮುಂದಿರುವ ಬಹುದೊಡ್ಡ ಸವಾಲೆಂದರೆ ಕೇಜ್ರಿವಾಲ್ ಸರ್ಕಾರ ಜಾರಿಗೆ ತಂದಿರುವ ಸೋವಿ ದರದ ವಿದ್ಯುತ್, ಉಚಿತ ನೀರು, ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ಗುಣಮಟ್ಟದ ಶಿಕ್ಷಣದಂತಹ ಹಲವಾರು ಜನಪ್ರಿಯ ಯೋಜನೆಗಳಿಗೆ ಪರ್ಯಾಯವಾಗಿ ಹೇಳಿಕೊಳ್ಳುವಂತಹ ಯಾವುದೇ ಯೋಜನೆಗಳು ಇಲ್ಲ ಅಥವಾ ಈ ಜನಪ್ರಿಯ ಯೋಜನೆಗಳಿಗೆ ಸವಾಲಾಗುವಂತಹ ಕಾರ್ಯಕ್ರಮಗಳು ಬಿಜೆಪಿ ಮುಂದಿಲ್ಲ. ತಳಮಟ್ಟದಲ್ಲಿ ಸ್ವತಃ ಬಿಜೆಪಿ ಕಾರ್ಯಕರ್ತರು ಇದನ್ನು ಒಪ್ಪಿಕೊಳ್ಳುತ್ತಿದ್ದಾರೆ ಮತ್ತು ಈ ಚುನಾವಣೆಯನ್ನು ಹೇಗೆ ಎದುರಿಬೇಕೆಂಬುದರ ಬಗ್ಗೆ ಚಿಂತೆಯಲ್ಲಿ ತೊಡಗಿದ್ದಾರೆ.

ಬಿಜೆಪಿಗೆ ಇರುವ ಕೆಲವು ನಿರೀಕ್ಷೆಗಳೆಂದರೆ ಫ್ಲೋಟಿಂಗ್ ವೋಟ್ ಗಳನ್ನು ತಮ್ಮ ಪರವಾಗಿ ಮಾಡಿಕೊಳ್ಳುವುದು. ಇದನ್ನು ಬಿಜೆಪಿ ಮತಗಳ ಕ್ರೋಢೀಕರಣ ಎಂದು ಕರೆದುಕೊಂಡಿದೆ. ಇನ್ನು ಸಿಎಎ ವಿರುದ್ಧ ಶಾಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ದೆಹಲಿ ವಿಧಾನಸಭೆ ಚುನಾವಣೆಯ ವಿಚಾರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕಳೆದ ಕೆಲವು ದಿನಗಳಿಂದ ಮೋದಿ ಸರ್ಕಾರದಲ್ಲಿರುವ ಹಿರಿಯ ಮಂತ್ರಿಗಳು ಈ ವಿಚಾರವನ್ನು ಪ್ರತಿಯೊಂದು ಚುನಾವಣೆ ರ್ಯಾಲಿಯಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ. ಪ್ರತಿಭಟನೆ ನಡೆಸುತ್ತಿರುವವರನ್ನು ದೇಶದ್ರೋಹಿಗಳು ಎಂದು ಬಿಂಬಿಸುತ್ತಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚುನಾವಣೆ ರ್ಯಾಲಿಯಲ್ಲಿ ಮಾತನಾಡಿ ಶಾಹೀನ್ ಬಾಗ್ ಹೊರತಾದ ದೆಹಲಿಯನ್ನು ನಿರ್ಮಾಣ ಮಾಡಲು ಮತದಾರರು ನೆರವಾಗಬೇಕೆಂದು ಮನವಿ ಮಾಡುವ ಮೂಲಕ ಶಾಹೀನ್ ಬಾಗ್ ಪ್ರತಿಭಟನೆಯನ್ನು ಟೀಕಿಸಿದ್ದಾರೆ. ನಿಮ್ಮ ಮತ ದೆಹಲಿ ನಿರ್ಮಾಣಕ್ಕೆ ಮತ್ತು ಶಾಹೀನ್ ಬಾಗ್ ನಂತಹ ಸಾವಿರಾರು ಘಟನೆಗಳನ್ನು ಹತ್ತಿಕ್ಕಲು ನೆರವಾಗುತ್ತದೆ ಎಂದು ಹೇಳಿದ್ದಾರೆ.

ಈ ಮೂಲಕ ಶಾಹೀನ್ ಬಾಗ್ ಪ್ರತಿಭಟನೆಯನ್ನು ದೆಹಲಿ ಚುನಾವಣೆ ವಿಚಾರವನ್ನಾಗಿ ಬಿಜೆಪಿ ಪರಿಗಣಿಸಿದೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಯು ತುಕ್ಡೆ ತುಕ್ಡೆ ಗ್ಯಾಂಗ್ ಗೆ ಒಂದು ವೇದಿಕೆಯನ್ನು ಒದಗಿಸಿಕೊಟ್ಟಿದೆ. ಮೋದಿ ವಿರುದ್ಧ ಪ್ರತಿಭಟನೆ ಮಾಡಲೆಂದೇ ಈ ಪ್ರತಿಭಟನಾಕಾರರು ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಬಿಜೆಪಿಯ ನೂತನ ಅಧ್ಯಕ್ಷ ಜೆಪಿ ನಡ್ಡಾ ಅವರು ಈ ಪ್ರತಿಭಟನಾಕಾರರಿಗೆ ಕೇಜ್ರಿವಾಲ್ ಬೆಂಬಲ ನೀಡುತ್ತಿದ್ದಾರೆ ಎಂದಿದ್ದಾರೆ.

ಶಾಹೀನ್ ಬಾಗ್ ಪ್ರತಿಭಟನಾಕಾರರು ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದವರಾಗಿದ್ದಾರೆ ಎಂದು ಬಿಜೆಪಿಯ ಇತರೆ ನಾಯಕರು ಬ್ರ್ಯಾಂಡ್ ಮಾಡಿದ್ದಾರೆ.

ಶಾಹೀನ್ ಬಾಗ್ ನಲ್ಲಿ ಸೇರಿರುವ ಲಕ್ಷಾಂತರ ಜನರು ಸೇರಿದ್ದಾರೆ. ಅವರೆಲ್ಲಾ ನಿಮ್ಮ ಮನೆಗೆ ನುಗ್ಗಿ ನಿಮ್ಮ ಸಹೋದರಿಯರು, ಹೆಣ್ಣು ಮಕ್ಕಳನ್ನು ಹೊತ್ತೊಯ್ದು ಅತ್ಯಾಚಾರ ಮಾಡಿ ಕೊಲೆ ಮಾಡಬಹುದು. ಹೀಗಾಗಿ ದೆಹಲಿ ಚುನಾವಣೆಯಲ್ಲಿ ಬುದ್ಧಿವಂತಿಕೆಯಿಂದ ಮತ ಹಾಕಿ ಎಂದು ಸಂಸದ ಪರ್ವೀಶ್ ವರ್ಮಾ ಕರೆ ನೀಡಿದ್ದಾರೆ.

ಈ ಮೂಲಕ ಬಿಜೆಪಿ ಶಾಹೀನ್ ಬಾಗ್ ಪ್ರತಿಭಟನೆ ವಿಚಾರವನ್ನು ಚುನಾವಣೆ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದೆ. ಆದರೆ, ಕಳೆದ ಎರಡು ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿರುವ ದೆಹಲಿ ಮತದಾರರು, ಈ ಚುನಾವಣೆಯಲ್ಲಿ ಏನು ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com