ಬಿಜೆಪಿ ನಾಯಕರ ಪ್ರಚೋದನೆ ಬೆನ್ನಲ್ಲೇ ಜಾಮಿಯಾ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ

ದೆಹಲಿ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ನಾಯಕರು ದಿನಕ್ಕೊಂದು ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ ಜಾಮಿಯಾದಲ್ಲಿ ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿ ಅನುಮಾನ ಹುಟ್ಟಿಸಿದೆ.
ಬಿಜೆಪಿ ನಾಯಕರ ಪ್ರಚೋದನೆ ಬೆನ್ನಲ್ಲೇ ಜಾಮಿಯಾ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ ಎಸ್‌ ಎಸ್) ಜೊತೆ ಗುರುತಿಸಿಕೊಂಡಿದ್ದ ಭಯೋತ್ಪಾದಕ ನಾಥೋರಾಮ್ ಗೂಡ್ಸೆ ಗುಂಡಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಲಿಯಾದ ದಿನಾಚರಣೆಯಂದೇ ದೆಹಲಿಯ ಪ್ರತಿಷ್ಠಿತ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ‘ರಾಮಭಕ್ತ’ ಎಂದು ಕರೆದುಕೊಂಡ ಗೋಪಾಲ್ ಎಂಬಾತ ಗುರುವಾರ ಗುಂಡಿನ ದಾಳಿ ನಡೆಸಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಘಟನೆಯಲ್ಲಿ ವಿದ್ಯಾರ್ಥಿಯೋರ್ವ ಗಾಯಗೊಂಡಿದ್ದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಪೊಲೀಸರ ಸರ್ಪಗಾವಲಿರುವ ನಡುವೆಯೇ ಆರೋಪಿ ಗೋಪಾಲ್ ಗುಂಡಿನ ದಾಳಿ ನಡೆಸಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಜೇವರ್ ಪ್ರದೇಶದ ನಿವಾಸಿ ಎನ್ನಲಾಗಿದೆ.

ದೇಶಾದ್ಯಂತ ಸಿಎಎ ವಿರೋಧಿ ಪ್ರತಿಭಟನೆಗಳು ನಡೆಯುತ್ತಿವೆ. ಜಾಮಿಯಾ ಹಾಗೂ ದೆಹಲಿಯ ಶಾಹೀನ್ ಬಾಗ್ ಪ್ರದೇಶದಲ್ಲಿ ಸಾವಿರಾರು ಮಹಿಳೆಯರು ಹಾಗೂ ಮಕ್ಕಳು ಕಳೆದ 47 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸಿಎಎ ಜಾರಿಗೆ ದೇಶ ಹಾಗೂ ವಿದೇಶದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿರುವುದರಿಂದ ಬಿಜೆಪಿ ನಾಯಕತ್ವ ಕಂಗಾಲಾಗಿದೆ. ವಿಶೇಷವಾಗಿ ದೆಹಲಿ ವಿಧಾನಸಭೆಗೆ ಫೆಬ್ರುವರಿ 8ರಂದು ಚುನಾವಣೆ ನಡೆಯಲಿದ್ದು, ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿಗೆ ಸೋಲಾಗಲಿದೆ ಎಂದು ಭವಿಷ್ಯ ನುಡಿದಿವೆ. ಇದರಿಂದ ಕಂಗಾಲಾಗಿರುವ ಬಿಜೆಪಿಯು ಅಭಿವೃದ್ಧಿ ವಿಚಾರಣೆಗಳಿಗೆ ಬದಲಾಗಿ ಅತಿಯಾದ ರಾಷ್ಟ್ರೀಯತೆಗೆ ಒತ್ತು ಕೊಟ್ಟು ಪ್ರಚಾರ ನಡೆಸುತ್ತಿದೆ. ಕೇಂದ್ರ ಗೃಹ ಸಚಿವ ಹಾಗೂ ದೆಹಲಿ ಚುನಾವಣಾ ನೇತೃತ್ವ ವಹಿಸಿರುವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಲವು ನಾಯಕರು ಹಿಂಸಾಚಾರಕ್ಕೆ ಎಡೆಮಾಡುಕೊಡುವಂಥ ಪ್ರಚೋದನಾಕಾರಿ ಭಾಷಣದಲ್ಲಿ ತೊಡಗಿದ್ದಾರೆ. ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಮೂರು ದಿನಗಳ ಹಿಂದೆ “ದೇಶದ್ರೋಹಿಗಳನ್ನು ಏನು ಮಾಡಬೇಕು” ಪ್ರಶ್ನಿಸಿದಾಗ ಅವರ ಬೆಂಬಲಿಗರು “ಗುಂಡಿಕ್ಕಿ ಕೊಲ್ಲಬೇಕು” ಎಂದು ಉದ್ಘರಿಸಿದ್ದ ಬೆನ್ನಲ್ಲೇ ಜಾಮಿಯಾದಲ್ಲಿ ಗುಂಡಿನ ದಾಳಿ ನಡೆದಿರುವುದು ಅನುಮಾನ ಹಾಗೂ ಆತಂಕಕ್ಕೆ ಕಾರಣವಾಗಿದೆ. ಅನುರಾಗ್ ಠಾಕೂರ್ ಹೇಳಿಕೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ವ್ಯಾಪ್ತಿಗೆ ಬರುತ್ತದೆ ಎಂದು ಆಯೋಗವು ಅವರನ್ನು ಬಿಜೆಪಿಯ ತಾರಾ ಪ್ರಚಾರಕರ ಪಟ್ಟಿಯಿಂದ ಕೈಬಿಡುವಂತೆ ಸೂಚಿಸಿದ್ದು, ಮೂರು ದಿನಗಳು ಅವರು ಪ್ರಚಾರ ಕೈಗೊಳ್ಳದಂತೆ ನಿಷೇಧ ಹೇರಿದೆ.

ಕಳೆದ ತಿಂಗಳು ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದ ಜಾಮಿಯಾ ಹಾಗೂ ಉತ್ತರ ಪ್ರದೇಶದ ಅಲಿಘಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಪೊಲೀಸರ ಅಟ್ಟಹಾಸಕ್ಕೆ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಇದರ ಬೆನ್ನಲ್ಲೇ ಹಾಸ್ಟೆಲ್ ಹಾಗೂ ಊಟದ ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿಭಟಿಸುತ್ತಿದ್ದ ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಬಿಜೆಪಿ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಜೊತೆ ಗುರುತಿಸಿಕೊಂಡಿದ್ದ ಗೂಂಡಾಗಳು ದಾಳಿ ನಡೆಸಿದ್ದರು. ಈಗ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಹಿನ್ನಡೆಯಾಗುವುದನ್ನು ಗ್ರಹಿಸಿರುವ ಬಿಜೆಪಿ ನಾಯಕರು ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ಬಳಸಿಕೊಂಡಿರುವ ಆರೋಪಿ ಗೋಪಾಲ್ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದಕ್ಕೆ ಬಿಜೆಪಿಯೇ ನೇರಕಾರಣ ಎಂದು ವಿರೋಧ ಪಕ್ಷಗಳು ಹಾಗೂ ಪ್ರತಿಭಟನಾಕಾರರು ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರ ಮೇಲೆ ದಾಳಿ ಆರಂಭಿಸಿದ್ದಾರೆ.

ಪ್ರತಿಭಟನಾಕಾರರು ಧರಣಿ ಸಂದರ್ಭದಲ್ಲಿ ಸಾಮಾಜಿಕ ಅನಿಷ್ಠಗಳು, ಭ್ರಷ್ಟಾಚಾರ, ಸರ್ಕಾರದ ವಿಭಜನಾಕಾರಿ ನೀತಿಗಳಿಂದ ಸ್ವಾತಂತ್ರ್ಯ ಬೇಕು ಎಂದು ಕೂಗುವುದು ಸಾಮಾನ್ಯವಾಗಿದೆ. ಇದನ್ನೇ ಪ್ರಸ್ತಾಪಿಸಿರುವ ಆರೋಪಿ ಗೋಪಾಲ್‌, ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುವುದಕ್ಕೂ ಮುನ್ನ “ಇಗೋ ನಿಮಗೆ ಸ್ವಾತಂತ್ರ್ಯ” ಎಂದು ಘೋಷಣೆ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ಆತ ಸಿಎಎ ವಿರುದ್ಧದ ಹೋರಾಟದಿಂದ ಕುಪಿತನಾಗಿದ್ದಾನೆ. ಇದಕ್ಕೆ ಪೂರಕ ಎಂಬಂತೆ ಸಚಿವ ಅನುರಾಗ್ ಠಾಕೂರ್ ಭಾಷಣ ಕೆಲಸ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

“ಶಾಹೀನ್ ಬಾಗ್ ನಲ್ಲಿ ಪ್ರತಿಭಟಿಸುತ್ತಿರುವವರು ನಿಮ್ಮ ಮನೆಗೆ ನುಗ್ಗಿ ಅತ್ಯಾಚಾರ ಎಸಗಬಹುದು” ಎಂದು ಬಿಜೆಪಿಯ ದೆಹಲಿ ಸಂಸದ ಪರ್ವೇಶ್ ವರ್ಮಾ ಇತ್ತೀಚೆಗೆ ಪ್ರಚಾರ ಸಭೆಯಲ್ಲಿ ಹೇಳಿದ್ದರು. ದೆಹಲಿಯ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ವರ್ಮಾ ವಾಗ್ದಾಳಿ ನಡೆಸಿದ್ದರು. ಇದಕ್ಕಾಗಿ ಚುನಾವಣಾ ಆಯೋಗವು ಅವರನ್ನು ನಾಲ್ಕು ದಿನಗಳು ಪ್ರಚಾರದಲ್ಲಿ ಭಾಗಿಯಾಗದಂತೆ ನಿರ್ಬಂಧಿಸಿದೆ. ಅಮಿತ್‌ ಶಾ ಅವರು “ಫೆಬ್ರುವರಿ 8ರಂದು ಮತದಾನ ಮಾಡುವಾಗ ಮತದಾನದ ಯಂತ್ರವನ್ನು ಒತ್ತುವ ಒತ್ತಡಕ್ಕೆ ಶಾಹೀನ್ ಬಾಗ್ ನಲ್ಲಿ ವಿದ್ಯುತ್ ಸಂಚಯವಾಗುವಂತೆ ಮಾಡಬೇಕು” ಎನ್ನುವ ಮೂಲಕ ಪ್ರತಿಭಟನಾಕಾರರ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದರು.

http://truthprofoundationindia.com/  

ಅಭಿವೃದ್ಧಿ ಕಾರ್ಯಗಳ ಮೇಲೆ ಚುನಾವಣೆ ನಡೆಸುವಲ್ಲಿ ವಿಫಲವಾಗಿರುವ ಬಿಜೆಪಿಯು ಭಾವನಾತ್ಮಕ ಹಾಗೂ ಅತಿಯಾದ ರಾಷ್ಟ್ರೀಯವಾದವನ್ನು ಚುನಾವಣಾ ಪ್ರಚಾರದ ವಿಷಯವನ್ನಾಗಿಸಿದೆ. ಇದನ್ನು ಅನುಷ್ಠಾನಕ್ಕೆ ತರಲು ನಿರ್ದಿಷ್ಟ ಸಮುದಾಯಗಳನ್ನು ವೈರಿಗಳನ್ನಾಗಿ ಬಿಂಬಿಸುವ ಕೆಲಸವನ್ನು ಮಾಡಿದೆ. ಇದಕ್ಕೆ ಪೂರಕವಾಗಿ ಬಿಜೆಪಿಯ ನಾಯಕರು ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ. ಇದರಿಂದ ಪ್ರೇರಿತವಾಗಿ ಗೋಪಾಲ್ ನಂಥ ಅಮಾಯಕ ಯುವಕರು ಬಂದೂಕುಗಳನ್ನು ಕೈಗೆತ್ತುಕೊಳ್ಳುತ್ತಿದ್ದಾರೆ. ಇದು ದೇಶದಲ್ಲಿ ಅಶಾಂತಿ ಸೃಷ್ಟಿಸಿ, ಮತ ತುಷ್ಟೀಕರಣಕ್ಕೆ ನಾಂದಿ ಹಾಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಇತ್ತೀಚೆಗೆ ದೆಹಲಿಯಲ್ಲಿ ಜಾಮಿಯಾ, ಜೆ ಎನ್ ಯು ವಿನಲ್ಲಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆದಿದ್ದು, ಜೆ ಎನ್ ಯು ಘಟನೆಗೆ ಸಂಬಂಧಿಸಿದಂತೆ ಒಬ್ಬರನ್ನೂ ಪೋಲಿಸರು ಬಂಧಿಸಿಲ್ಲ. ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಗೆ ಬರುವುದರಿಂದ ರಾಜ್ಯ ಸರ್ಕಾರವು ಕಾನೂನು ಸುವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಲಾಗದು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೈತಿಕವಾಗಿ ಈ ಘಟನೆಗಳ ಹೊಣೆ ಹೊರಬೇಕಿದೆ. ಆದರೆ, ಅವರೇ ಪ್ರತಿಭಟನಾಕಾರರ ವಿರುದ್ಧ ಪ್ರಚೋದನಾಕಾರಿ ಭಾಷಣದಲ್ಲಿ ತೊಡಗಿದ್ದಾರೆ ಎಂಬುದು ವಿಪಕ್ಷಗಳ ದೂರು. ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಆಡಳಿತದ ಕರ್ನಾಟಕ, ಉತ್ತರ ಪ್ರದೇಶ ಹಾಗೂ ಅಸ್ಸಾಂನಲ್ಲಿ ಪೊಲೀಸರ ಅಟ್ಟಹಾಸಕ್ಕೆ ಸಮಾರು 30 ಮಂದಿ ಬಲಿಯಾಗಿದ್ದಾರೆ ಎಂಬುದನ್ನು ನೆನೆಯಬಹುದಾಗಿದೆ. ಹಲವು ಅಂತಾರಾಷ್ಟ್ರೀಯ ಸಂಘ-ಸಂಸ್ಥೆಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳು ಭಾರತದಲ್ಲಿನ ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈಗ ನಡೆದಿರುವ ಗುಂಡಿನ ದಾಳಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಮತ್ತಷ್ಟು ಕೆಟ್ಟದಾಗಿ ಬಿಂಬಿಸುವುದರಲ್ಲಿ ಅನುಮಾನವಿಲ್ಲ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com