ʼಹರೇ ಕೃಷ್ಣʼ ಎನ್ನುತ್ತಲೇ ಕೈಗಾರಿಕಾ ಜಮೀನು ದುರ್ಬಳಕೆ ಮಾಡಿದ ಇಸ್ಕಾನ್

ಕೈಗಾರಿಕಾ ಅಭಿವೃದ್ದಿಯ ನೆಪದಲ್ಲಿ ಪಡೆದುಕೊಂಡ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಕಳೆದ ಹಲವು ವರ್ಷಗಳಿಂದ ಇಸ್ಕಾನ್ ಬಳಸಿಕೊಂಡು ಬರುತ್ತಲೇ ಇದೆ. ಈ ಕುರಿತಾದ ಸಂಪೂರ್ಣ ವಿವರಗಳು ಇಲ್ಲಿವೆ.
ʼಹರೇ ಕೃಷ್ಣʼ ಎನ್ನುತ್ತಲೇ ಕೈಗಾರಿಕಾ ಜಮೀನು ದುರ್ಬಳಕೆ ಮಾಡಿದ  ಇಸ್ಕಾನ್

ಹರೇ ಕೃಷ್ಣ ಎಂಬ ಭಗವಂತನ ನಾಮ ಸ್ಮರಣೆಯಿಂದ ಪ್ರಪಂಚದಾದ್ಯಂತ ಶ್ರೀ ಕೃಷ್ಣನ ವಾಣಿಯ ಕುರಿತು ಜನರಲ್ಲಿ ಪ್ರಜ್ಞೆ ಮೂಡಿಸಲು ರೂಪುಗೊಂಡ ʼಅಂತರಾಷ್ಟ್ರೀಯ ಕೃಷ್ಣಾಪ್ರಜ್ಞಾ ಸಂಸ್ಥೆ (ISKCON- The International Society for Krishna Consciousness) ಯ ಅಕ್ಷಯ ಪಾತ್ರ ಫೌಂಡೇಶನ್‌ನಲ್ಲಿ ಆಗಿರುವ ಅವ್ಯವಹಾರದಿಂದ ಇತ್ತೀಚಿಗೆ ಸುದ್ದಿಯಾಗಿತ್ತು. ಆ ನಂತರ ಇಸ್ಕಾನ್‌ನ ಹುಳುಕುಗಳನ್ನು ಹುಡುಕುತ್ತಾ ಸಾಗಿದಂತೆ ಕೆಲವು ವರ್ಷಗಳ ಹಿಂದೆ ನಡೆದಂತಹ ಹಾಗೂ ಅಷ್ಟೇನು ಸುದ್ದಿ ಆಗದಂತಹ ಭೂ ಹಗರಣವೊಂದು ಬಯಲಾಗಿದೆ. ಈ ಕುರಿತು ಸಾಲು ಸಾಲು ದೂರುಗಳು ದಾಖಲಾದರೂ ಸಂಬಧಪಟ್ಟ ಇಲಾಖೆಗಳು ಮುಗುಮ್ಮಾಗಿ ಕುಳಿತಿರುವುದು ಸಂದೇಹಕ್ಕೆ ಕಾರಣವಾಗಿವೆ.

ಈ ಭೂ ಹಗರಣದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ (KIADB) ಯೂ ನೇರವಾಗಿ ಭಾಗಿಯಾಗಿದೆ. ಈ ಹಗರಣ ಸಂಪೂರ್ಣ ವಿವರಗಳು ಇಲ್ಲಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಉತ್ತರಹಳ್ಳಿಯ ಸಮೀಪ ಇರುವಂತಹ ದೊಡ್ಡಕಲ್ಲಸಂದ್ರದಲ್ಲಿ ಇದ್ದಂತಹ ಶ್ರೀಶೈಲ ಕೋ-ಆಪರೇಟಿವ್‌ ಇಂಡಸ್ಟ್ರೀಸ್‌ ಎಸ್ಟೇಟ್‌ ಲಿಮಿಟೆಡ್‌ (SCIEL) ಹಾಗೂ KIADBಗೆ ಸೇರಿದ್ದ 41 ಎಕರೆ 6 ಗುಂಟೆ ಜಮೀನನ್ನು ಕೈಗಾರಿಕೆಯ ಉದ್ದೇಶಕ್ಕಾಗಿ ಅಕ್ಟೋಬರ್‌ 6, 2004ರಲ್ಲಿ ಇಸ್ಕಾನ್‌ಗೆ ನೀಡಲಾಯಿತು. ಜಮೀನನ್ನು ಇಸ್ಕಾನ್‌ ಸಂಸ್ಥೆಗೆ ನೀಡುವ ಸಂದರ್ಭದಲ್ಲಿ ʼಕಡ್ಡಾಯವಾಗಿ ಕೈಗಾರಿಕಾ ಉದ್ದೇಶಕ್ಕಾಗಿ ಮಾತ್ರ ಬಳಸತಕ್ಕದ್ದುʼ ಎಂಬ ಶರತ್ತನ್ನು ಕೂಡಾ ವಿಧಿಸಲಾಗಿತ್ತು.

ಈ ಶರತ್ತಿನ ಅನ್ವಯ ಇಸ್ಕಾನ್‌ ಸಂಸ್ಥೆಯು ದೊಡ್ಡಕಲ್ಲಸಂದ್ರದಲ್ಲಿ ʼThe Indian Heritage Theme Park’ಅನ್ನು ನಿರ್ಮಿಸುವ ಕುರಿತು ಯೋಜನೆಯನ್ನು ರೂಪಿಸಿತ್ತು. ಈ ಯೋಜನೆಯ ವರದಿಯನ್ನು KIADBಗೂ ನೀಡಲಾಗಿತ್ತು. ಈ ಯೋಜನೆಯ ಅನ್ವಯ ಆ ಪ್ರದೇಶದಲ್ಲಿ ಭಾರತದ ಸಂಸ್ಕೃತಿ ಹಾಗೂ ಪೌರಾಣಿಕ ಪ್ರಸಂಗಗಳಲ್ಲಿ ಬರುವಂತಹ ವಾತಾವರಣವನ್ನು ನಿರ್ಮಿಸಬೇಕಾಗಿತ್ತು. 3D, 4D ಥಿಯೆಟರ್‌ಗಳು, ಝೂ ಮತ್ತು ಮತ್ಸ್ಯಾಲಯ, ಗ್ರಂಥಾಲಯ ಹೀಗೆ ಇನ್ನೂ ಹಲವು ವಿಚಾರಗಳನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ರೀತಿ ಭಾರತದ ಪರಂಪರೆಯನ್ನು ಜನರಿಗೆ ಪರಿಚಯಿಸುವ ಹಾಗೂ ಅವರಲ್ಲಿ ಭಾರತದ ಪರಂಪರೆಯ ಕುರಿತು ಜ್ಞಾನವನ್ನು ಹೆಚ್ಚಿಸುವ ಯೋಜನೆಯನ್ನು KIADBಯ ಮುಂದೆ ಇರಿಸಿ ಭೂಮಿಯನ್ನು ಇಸ್ಕಾನ್‌ ಸಂಸ್ಥೆ ಪಡೆದುಕೊಂಡಿತ್ತು.

ʼಹರೇ ಕೃಷ್ಣʼ ಎನ್ನುತ್ತಲೇ ಕೈಗಾರಿಕಾ ಜಮೀನು ದುರ್ಬಳಕೆ ಮಾಡಿದ  ಇಸ್ಕಾನ್
ಅಕ್ಷಯಪಾತ್ರಾ ಅವ್ಯವಹಾರ: ಅನುಮಾನ ಹುಟ್ಟಿಸಿದ ಸಚಿವ ಈಶ್ವರಪ್ಪ ಟ್ವೀಟ್ !

ಭೂಮಿಯನ್ನು ಪಡೆದುಕೊಂಡ ನಂತರ ಕೇವಲ ಒಂಬತ್ತು ತಿಂಗಳ ಒಳಗಾಗಿ, ಇಸ್ಕಾನ್‌ ಚಾರಿಟೀಸ್‌ ಪರವಾಗಿ ಸರ್ಕಾರದ ಹಲವು ಇಲಾಖೆಗಳ ನಿರಕ್ಷೇಪಣಾ ಪತ್ರವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಪರಿಸರ ಮತ್ತು ಅರಣ್ಯ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಹಾಗೂ ಇತರ ಇಲಾಖೆ ಹಾಗೂ ಪ್ರಾಧಿಕಾರಗಳಿಂದ ಬೃಹತ್‌ ವಸತಿ ಸಮುಚ್ಚಯಗಳ ನಿರ್ಮಾಣಕ್ಕೆ ಹಾಗೂ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಅನುಮತಿಯನ್ನು ಕೋರಲಾಗಿತ್ತು. ಈ ಅಪಾರ್ಟ್‌ಮೆಂಟ್‌ಗಳ ನಿರ್ಮಾಣವೇ ಇಸ್ಕಾನ್‌ನ ಭೂಮಿಯನ್ನು ಪಡೆಯುವ ಹಿಂದಿನ ಉದ್ದೇಶ ಎಂಬುದು ಇದರಿಂದಾಗಿ ಸ್ಪಷ್ಟವಾಗುತ್ತದೆ.

ಯಾವುದೇ ಕೈಗಾರಿಕಾ ಯೋಜನೆಯನ್ನು ದೊಡ್ಡಕಲ್ಲಸಂದ್ರದಲ್ಲಿ ರೂಪಿಸುವ ಉದ್ದೇಶ ಇಸ್ಕಾನ್‌ಗೆ ಇರಲೇ ಇಲ್ಲ. ಅಸಲಿಗೆ ದೊಡ್ಡಕಲ್ಲಸಂದ್ರದಲ್ಲಿ ʼThe Indian Heritage Theme Park’ ಪಾರ್ಕ್‌ ಇಲ್ಲಿಯವರೆಗೂ ತಲೆ ಎತ್ತಲೇ ಇಲ್ಲ.

ಕೈಗಾರಿಕೆಗಳಿಗೆ ಮೀಸಲಾದ ಪ್ರದೇಶದಲ್ಲಿ ನಿರ್ಮಿಸಲಾದ ಅಪಾರ್ಟ್‌ಮೆಂಟ್‌
ಕೈಗಾರಿಕೆಗಳಿಗೆ ಮೀಸಲಾದ ಪ್ರದೇಶದಲ್ಲಿ ನಿರ್ಮಿಸಲಾದ ಅಪಾರ್ಟ್‌ಮೆಂಟ್‌

ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕೆ ಇಸ್ಕಾನ್‌ನ ಅಂಗಸಂಸ್ಥೆಗಳಾದ ಇಸ್ಕಾನ್‌ ಚಾರಿಟೀಸ್‌, ಗೋಕುಲಮ್‌ ಶೆಲ್ಟರ್ಸ್‌ ಪ್ರೈವೇಟ್‌ ಲಿಮಿಟೆಡ್‌, ಇಂಡಿಯಾ ಹೆರಿಟೇಜ್‌ ಟ್ರಸ್ಟ್‌ ಮತ್ತು ಇಂಡಿಯಾ ಹೆರಿಟೇಜ್‌ ಫೌಂಡೇಶನ್‌ ಸೇರಿ ಮಂತ್ರಿ ಡೆವೆಲಪರ್ಸ್‌ ಜೊತೆಗೆ ಜಂಟಿ ಒಪ್ಪಂದ ಮಾಡಿಕೊಂಡವು.

ʼಹರೇ ಕೃಷ್ಣʼ ಎನ್ನುತ್ತಲೇ ಕೈಗಾರಿಕಾ ಜಮೀನು ದುರ್ಬಳಕೆ ಮಾಡಿದ  ಇಸ್ಕಾನ್
ಇಸ್ಕಾನ್ ‘ಅಕ್ಷಯ ಪಾತ್ರೆ’ಯಲ್ಲಿ ಅಕ್ರಮದ ಬಿರುಗಾಳಿ: ಟ್ರಸ್ಟಿಗಳ ರಾಜೀನಾಮೆ!

ನಂತರ ಇಸ್ಕಾನ್‌ ಮತ್ತು ಮಂತ್ರಿ ಡೆವೆಲಪರ್ಸ್‌ ಜೊತೆ ಸೇರಿಕೊಂಡು ʼಗೋಕುಲಮ್‌ ಪ್ರಾಜೆಕ್ಟ್ಸ್‌ʼನ ʼವಿಸ್ತೃತ ಭಾಗʼದ ಕಟ್ಟಡ ನಿರ್ಮಾಣ ಕಾರ್ಯ ʼಮಂತ್ರಿ ಸೆರೆನಿಟಿʼಯನ್ನು ಆರಂಭಿಸಿದವು. ಇದರಿಂದಾಗಿ KIADB ಕಾಯ್ದೆಯ ನೇರ ಉಲ್ಲಂಘನೆಯಾಗಿದೆ ಮಾತ್ರವಲ್ಲದೇ, ಬಿಡಿಎ, ಬಿಬಿಎಂಪಿ, ಪರಿಸರ ಮತ್ತು ಅರಣ್ಯ ಇಲಾಖೆಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಕಾಯ್ದೆ, 1966ರ ಸೆಕ್ಷನ್‌ 34ಬಿ ಅಡಿಯಲ್ಲಿ ಇಸ್ಕಾನ್‌ಗೆ ನೀಡಿರುವ ಭೂಮಿಯನ್ನು ವಾಪಾಸ್‌ ಪಡೆಯಲು KIADBಗೆ ಸಂಪೂರ್ಣ ಅಧಿಕಾರವಿತ್ತು. ಇದರ ಹೊರತಾಗಿಯೂ ತಮ್ಮ ಅಧಿಕಾರವನ್ನು ಚಲಾಯಿಸಲು KIADB ಅಧಿಕಾರಿಗಳು ಸಿದ್ದವಿರಲಿಲ್ಲ.

ಇನ್ನು ಇಸ್ಕಾನ್‌ ಪಡೆದಿರುವ ಇತರ ಅನುಮತಿ ಪತ್ರಗಳನ್ನು ನೋಡಿದರೆ,

1. ಪರಿಸರ ಮತ್ತು ಅರಣ್ಯ ಇಲಾಖೆ: ಏಪ್ರಿಲ್‌ 3, 2006ರಲ್ಲಿ ಇಲಾಖೆಯು ಬರೆದ ಪತ್ರದಲ್ಲಿ ನೆಲ ಮಾಳಿಗೆ ಮತ್ತು ಅದರ ಮೇಲೆ 14 ಅಂತಸ್ತಿನ ಕಟ್ಟಡವನ್ನು ನಿರ್ಮಿಸಲು ಅನುಮತಿಯನ್ನು ನೀಡಲಾಗಿತ್ತು. ಆದರೆ, ಇಲ್ಲಿ 22-29 ಅಂತಸ್ತುಗಳ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಮೊದಲಿಗೆ ಇಲ್ಲಿ ಅನುಮತಿಯನ್ನು ನೀಡಿದ್ದೇ ಕಾನೂನು ಬಾಹಿರ. ಏಕೆಂದರೆ, ಕೈಗಾರಿಕೆಗಳಿಗೆಂದು ಮೀಸಲಾಗಿದ್ದ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಪರವಾನಿಗೆ ನೀಡಲಾಗಿದೆ.

2. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ: ಪರಿಸರ ಮತ್ತು ಅರಣ್ಯ ಇಲಾಖೆ 14 ಅಂತಸ್ತನ್ನು ನಿರ್ಮಾಣ ಮಾಡಲು ಅನುಮತಿ ನೀಡಿದ್ದರೆ, ಇದಕ್ಕೆ ತದ್ವಿರುದ್ದವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ, 22-29 ಅಂತಸ್ತನ್ನು ನಿರ್ಮಿಸಲು ಅನುಮತಿ ನೀಡಿತ್ತು.

3. ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ (BDA): ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿಗೆ ವಿರುದ್ದವಾಗಿ ಬಿಡಿಎ ಕೂಡಾ 29 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದೆ.

4. ರಾಜ್ಯ ಮಟ್ಟದ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರ: ಈ ಪ್ರಾಧಿಕಾರವು ನೀಡಿರುವ ವರದಿಯಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಿಸಲು ಅನುಮತಿ ನೀಡಿದ್ದರೂ, ದೊಡ್ಡಕಲ್ಲಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಿಸಿದರೆ, ರಾಜಕಾಳುವೆಗೆ ತೊಂದರೆ ಉಂಟಾಗುವುದರಿಂದ, ನೆರೆ ಪರಿಸ್ಥಿತಿ ನಿರ್ಮಾಣವಾಗುವ ಸಂಭವವಿದೆ ಎಂದು ಹೇಳಿತ್ತು.

ಹೀಗೆ ಒಂದು ಅನುಮತಿಯು ಮತ್ತೊಂದು ಅನುಮತಿಯೊಂದಿಗೆ ತಾಳೆಯಾಗದೇ ಇರುವುದು ಕೂಡಾ ಈ ಒಟ್ಟು ಹಗರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಅಸಲಿಗೆ ಸಂಪೂರ್ಣ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಅನುಮತಿ ಪಡೆಯಲು ಇಸ್ಕಾನ್‌ ಅವರು ಬಳಸಿಕೊಂಡಿದ್ದು ಗೋಕುಲಮ್‌ ಪ್ರಾಜೆಕ್ಟ್‌ನ ಹೆಸರು. ನೇರವಾಗಿ ʼಮಂತ್ರಿ ಸೆರೆನಿಟಿʼಯೆಂಬ ಹೆಸರಿನ ಅಪಾರ್ಟ್‌ಮೆಂಟ್‌ಅನ್ನು ಕಟ್ಟಲು ಅನುಮತಿ ಕೇಳದೇ, ಈ ಹಿಂದೆ ಇದ್ದಂತಹ ಗೋಕುಲಮ್‌ ಪ್ರಾಜೆಕ್ಟ್‌ನ ವಿಸ್ತೃತ ಭಾಗಕ್ಕೆ ಅನುಮತಿಯನ್ನು ಕೇಳಲಾಗಿತ್ತು. ಹಳೆಯ ಯೋಜನೆಯ ಹೊಸ ಭಾಗ ಎಂದು ಅಧಿಕಾರಿಗಳು ʼಶ್ರಮʼಪಡಲು ಇಚ್ಚಿಸದೇ ಕುಳಿತಲ್ಲಿಯೇ ಎಲ್ಲ ಅನುಮತಿ ಪತ್ರಗಳಿಗೆ ಸಹಿ ಹಾಕಿದ್ದು ನಿಜಕ್ಕೂ ದುರ್ದೈವ.

2016 ರಲ್ಲಿ ಇಂತಹುದೇ ಪ್ರಕರಣವೊಂದು ಸುಪ್ರಿಂಕೋರ್ಟ್‌ನ ಮುಂದೆ ಬಂದಾಗ ಸುಪ್ರಿಂಕೋರ್ಟ್‌ ನೀಡಿದ ತೀರ್ಪನ್ನು ಇಲ್ಲಿ ಗಮನಿಸಲೇಬೇಕಾಗಿದೆ. ಉದ್ದಾರ್‌ ಗಗನ್‌ ಪ್ರೈವೇಟ್‌ ಲಿಮಿಟೆಡ್‌ vs ಸಂತ್‌ ಸಿಂಗ್‌ ಮತ್ತು ಇತರರು ಪ್ರತಿವಾದಿಯಾಗಿದ್ದ ಪ್ರಕರಣವೊಂದು ಸುಪ್ರಿಂ ಮೆಟ್ಟಿಲೇರಿತ್ತು. 13 ಮೇ 2016ರಂದು ತನ್ನ ತೀರ್ಪು ಪ್ರಕಟಿಸಿದ ಅನಿಲ್‌ ದಾವೆ ಹಾಗೂ ಆದರ್ಶ್‌ ಕುಮಾರ್‌ ಗೋಯೆಲ್‌ ಅವರಿದ್ದ ದ್ವಿಸದಸ್ಯ ಪೀಠವು, ಉದ್ದೇಶಿತ ಕಾರಣಕ್ಕೆ ಭೂಮಿಯನ್ನು ಬಳಸಿಕೊಳ್ಳದಿದ್ದ ಸಂದರ್ಭದಲ್ಲಿ ಅದನ್ನು ಭೂಮಿಯ ಮೂಲ ಮಾಲಕರಿಗೆ ವಾಪಾಸ್‌ ನೀಡಬೇಕು, ಎಂದು ಹೇಳಿತ್ತು. ಈ ತೀರ್ಪಿನ ಪ್ರಕಾರ ಇಸ್ಕಾನ್‌ KIADB ಯಿಂದ ಕೈಗಾರಿಕಾ ಉದ್ದೇಶಕ್ಕಾಗಿ ಪಡೆದುಕೊಂಡ ಭೂಮಿಯನ್ನು ವಾಪಾಸ್‌ KIADBಗೆ ನೀಡಬೇಕಿತ್ತು. ಅಥವಾ KIADBಯು ಭೂಮಿಯನ್ನು ವಾಪಾಸ್‌ ಕೇಳಿ ನೋಟಿಸ್‌ ನೀಡಬೇಕಿತ್ತು ಆದರೆ, ಅದ್ಯಾವುದೂ ಈ ಪ್ರಕರಣದಲ್ಲಿ ನಡೆಯಲೇ ಇಲ್ಲ.

ಹಲವು ದೂರು ನೀಡಿದರೂ ಯಾವುದೇ ಪ್ರಯೋಜನವಿಲ್ಲ:

ಇಸ್ಕಾನ್‌ನಿಂದ ಈ ತರಹದ ತಪ್ಪು ಜರುಗಿದೆ ದಯವಿಟ್ಟು ಕ್ರಮ ಕೈಗೊಂಡು ಸರ್ಕಾರಕ್ಕೆ ಸೇರಬೇಕಿದ್ದ ಭೂಮಿಯನ್ನು ಪಾಪಾಸ್‌ ಪಡೆಯಿರಿ ಎಂದು ಹಲವು ದೂರುಗಳು ದಾಖಲಾದರೂ, ಯಾವ ಇಲಾಖೆಯು ಕ್ರಮ ಕೈಗೊಂಡಿಲ್ಲ.

Committee on Judicial Accountability ಯು KIADB ಮುಖ್ಯ ಕಾರ್ಯನಿರ್ವಾಹಕರಿಗೆ, ಪರಿಸರ ಮತ್ತು ಅರಣ್ಯ ಇಲಾಖೆಯ ನಿರ್ದೇಶಕರಿಗೆ, BDA ಆಯುಕ್ತರಿಗೆ ಹಾಗೂ ರಾಜ್ಯ ಮಟ್ಟದ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರದ ಕಾರ್ಯದರ್ಶಿಯವರಿಗೆ ಪತ್ರವನ್ನು ಬರೆದಿದ್ದರೂ, ಯಾವುದೇ ಉತ್ತರ ಬಂದಿಲ್ಲ. ಫೆಬ್ರವರಿ 9, 2017ರಲ್ಲಿ ದೂರು ನೀಡಲಾಗಿದ್ದು ಇದಕ್ಕೆ ಉತ್ತರ ನೀಡುವ ಬದಲು ಯಾವುದಾದರೂ ಕ್ರಮ ಕೈಗೊಂಡಿದ್ದರೂ ಸಾಕಿತ್ತು, ಆದರೆ, ಅದೂ ನಡೆಯಲಿಲ್ಲ.

ಒಟ್ಟಿನಲ್ಲಿ, ಅಭಿವೃದ್ದಿಯ ನೆಪದಲ್ಲಿ ಸ್ವಾಧೀನ ಪಡಿಸಿಕೊಂಡಿದ್ದ 41 ಎಕರೆ 6 ಗುಂಟೆಗಳಷ್ಟು ಜಮೀನನ್ನು ಇಸ್ಕಾನ್‌ಗೆ KIADB ನೀಡಿದೆ. ಇದರ ಕುರಿತು KIADB ಚಕಾರವೂ ಎತ್ತಿಲ್ಲ. ಇದರೊಂದಿಗೆ ಇಸ್ಕಾನ್‌ನ ಮೇಲಿರುವ ಆರೋಪಗಳ ಪಟ್ಟಿ ಇನ್ನಷ್ಟು ಬೆಳೆಯುತ್ತಲೇ ಹೋಗುತ್ತಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com