ಅಪೆಕ್ಸ್‌ ಅಕ್ರಮ-1: ಅಪೆಕ್ಸ್ ಬ್ಯಾಂಕ್ ಅವ್ಯವಹಾರದ ವರದಿಯ ಬೆನ್ನಲ್ಲೇ ಹೊರಬಿದ್ದ ಒಳ ವ್ಯವಹಾರಗಳು
ಶೋಧ

ಅಪೆಕ್ಸ್‌ ಅಕ್ರಮ-1: ಅಪೆಕ್ಸ್ ಬ್ಯಾಂಕ್ ಅವ್ಯವಹಾರದ ವರದಿಯ ಬೆನ್ನಲ್ಲೇ ಹೊರಬಿದ್ದ ಒಳ ವ್ಯವಹಾರಗಳು

ಅಪೆಕ್ಸ್‌ ಬ್ಯಾಂಕ್‌ನಲ್ಲಿ ನಡೆದ ಅವ್ಯವಹಾರಗಳ ಕುರಿತು ವರದಿ ಕೇಳಿದ ಬೆನ್ನಲ್ಲೇ ಹೊರಬಿತ್ತು ಬ್ಯಾಂಕ್‌ನ ಒಳ ವ್ಯವಹಾರಗಳು. ರಾಜಕೀಯ ಮುಖಂಡರಿಗೆ ಸೇರಿದ್ದ ಸಕ್ಕರೆ ಕಾರ್ಖಾನೆಗಳಿಗೆ ನೀಡಿದ ಸಾಲದ ಕುರಿತ ವರದಿಗಳು ಅಪೆಕ್ಸ್‌ ಬ್ಯಾಂಕ್‌ನಲ್ಲಿ ನಡೆದಂತಹ ಅವ್ಯವಹಾರಗಳಿಗೆ ಸಾಕ್ಷಿಯಾಗಿವೆ.

ಜಿ ಮಹಂತೇಶ್‌

ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯಲಕ್ಷ್ಮಿ ಶುಗರ್ಸ್‌ ಲಿಮಿಟೆಡ್‌ ಸೇರಿದಂತೆ ಹಲವು ಪ್ರಭಾವಿ ರಾಜಕೀಯ ಮುಖಂಡರ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ ನೀಡಿದ್ದ ಒಟ್ಟು 1,022.55 ಕೋಟಿ ರೂ.ಗಳ ಸಾಲ ಮೊತ್ತದ ಪೈಕಿ ಒಟ್ಟಾರೆ 610 ಕೋಟಿಯಷ್ಟು ಅನುತ್ಪಾದಕ ಆಸ್ತಿ (NPA) ಇರುವುದು ಬಹಿರಂಗವಾಗಿದೆ.ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಕುರಿತು ತಕ್ಷಣ ಮಾಹಿತಿ ಒದಗಿಸಬೇಕು ಎಂದು ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕರಿಗೆ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಸೂಚಿಸಿರುವ ಬೆನ್ನಲ್ಲೇ ಬ್ಯಾಂಕ್‌ನ ಅವ್ಯವಹಾರ ಪ್ರಕರಣಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.

ಅಪೆಕ್ಸ್‌ ಬ್ಯಾಂಕ್‌ನಲ್ಲಿ ಈವರೆಗೂ ನಡೆದಿರುವ ಹಲವು ಅಕ್ರಮಗಳು ಮತ್ತು ನೇಮಕಾತಿಯಲ್ಲಿನ ನಿಯಮಬಾಹಿರ ಚಟುವಟಿಕೆಗಳ ಕುರಿತು ಸಹಕಾರ ಸಂಘಗಳ ಜಂಟಿ ನಿಬಂಧಕರು ತನಿಖಾ ವರದಿಯನ್ನು 2020ರ ಮಾರ್ಚ್‌ 10ರಂದು ಸರ್ಕಾರಕ್ಕೆ ಸಲ್ಲಿಸಿದ್ದರೂ ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಪ್ರಭಾವಿ ರಾಜಕೀಯ ಮುಖಂಡರ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಕೋಟ್ಯಂತರ ರೂ.ಮೊತ್ತದ ಸಾಲ ಮಂಜೂರಾಗಿದೆ.ಅಷ್ಟೇ ಅಲ್ಲ, ಒಟ್ಟು 27 ಸಕ್ಕರೆ ಕಾರ್ಖಾನೆಗಳಿಗೆ 2019ರ ಮಾರ್ಚ್‌ 31ರ ಅಂತ್ಯಕ್ಕೆ 47 ಪ್ರಕರಣಗಳಲ್ಲಿ ಒಟ್ಟು 1,603.36 ಕೋಟಿ ರೂ.ಸಾಲದ ಹೊರಬಾಕಿ ಇದೆ. ಅದೇ ರೀತಿ 391.15 ಕೋಟಿ ರೂ. ಸಾಲ ಸುಸ್ತಿಯಾಗಿರುವ ಪೈಕಿ 305.73 ಕೋಟಿ ರೂ. ಎನ್‌ಪಿಎ(ಕೆಟ್ಟ ಸಾಲ) ಇದೆ ಎಂದು ಸಹಕಾರ ಸಂಘಗಳ ಜಂಟಿ ನಿಬಂಧಕ ಎಂ ಡಿ ನರಸಿಂಹಮೂರ್ತಿ ನೇತೃತ್ವದ ತನಿಖಾ ವರದಿ ಹೊರಗೆಡವಿದೆ.

27 ಸಹಕಾರಿ ಮತ್ತು ಸಹಕಾರೇತರ ಸಕ್ಕರೆ ಕಾರ್ಖಾನೆಗಳಿಗೆ ವಿವಿಧ ರೀತಿಯ ಅಂದರೆ ದುಡಿಯುವ ಬಂಡವಾಳ, ಅವಧಿ ಸಾಲ, ಬ್ರಿಡ್ಜ್‌ ಲೋನ್‌, ಸಾಫ್ಟ್‌ ಲೋನ್‌ ಹೆಸರಿನಲ್ಲಿ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕ್‌ ಒಟ್ಟು 1,022.55 ಕೋಟಿ ರೂ.ಗಳ ಸಾಲ ನೀಡಿದೆ. ಈ ಪೈಕಿ 860.48 ಕೋಟಿ ರೂ.ಸಾಲ ವಸೂಲಾಗಿಲ್ಲ ಎಂಬುದು ತನಿಖಾ ವರದಿಯಿಂದ ಗೊತ್ತಾಗಿದೆ.10 ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ 517.80 ಕೋಟಿ ರೂ.ಸಾಲ ಮಂಜೂರಾಗಿದ್ದು, ಈ ಪೈಕಿ 2019ರ ಮಾರ್ಚ್‌ 31ರ ಅಂತ್ಯಕ್ಕೆ 454.89 ಕೋಟಿ ರೂ. ಹೊರಬಾಕಿ ಇದೆ. ಇದರಲ್ಲಿ 2019ರ ಮಾರ್ಚ್‌ ಅಂತ್ಯಕ್ಕೆ 70.57 ಕೋಟಿ ರೂ. ಅಸಲು ಮತ್ತು 83.43 ಕೋಟಿ ರೂ.ಬಡ್ಡಿ ಸೇರಿ ಒಟ್ಟು 154.00 ಕೋಟಿ ಸುಸ್ತಿಯಾಗಿದೆಯಲ್ಲದೆ ಸಾಲ ವಸೂಲಾತಿಗೆ ಬಾಕಿ ಇದೆ.

ಈ 10 ಸಕ್ಕರೆ ಕಾರ್ಖಾನೆಗಳಿಗೆ ನೀಡಲಾದ ಸಾಲಗಳಲ್ಲಿ 95.27 ಕೋಟಿ ರೂ. ಎನ್‌ಪಿಎ ಆಗಿರುವುದು ವರದಿಯಿಂದ ತಿಳಿದು ಬಂದಿದೆ.ಹಾಗೆಯೇ 1,262.00 ಕೋಟಿ ರೂ. ಸಾಲ ಪಡೆದಿರುವ 17 ಖಾಸಗಿ ಸಕ್ಕರೆ ಕಾರ್ಖಾನೆಗಳು 1,148 ಕೋಟಿ ರೂ.ಹೊರಬಾಕಿ ಉಳಿಸಿಕೊಂಡಿವೆ. ಈ ಪೈಕಿ 136.00 ಕೋಟಿ ರೂ. ಅಸಲು ಮತ್ತು 101.00 ಕೋಟಿ ರೂ.ಬಡ್ಡಿ ಸೇರಿ ಒಟ್ಟು 237.00 ಕೋಟಿ ಸುಸ್ತಿ ಸಾಲ ವಸೂಲಾತಿಗೆ ಬಾಕಿ ಇದೆ. ಇದರಲ್ಲಿ 210.00 ಕೋಟಿ ರೂ. ಎನ್‌ಪಿಎ ಆಗಿದೆ ಎಂದು ತನಿಖಾ ವರದಿ ಹೊರಗೆಡವಿದೆ.

ಒಟ್ಟಾರೆ 27 ಸಕ್ಕರೆ ಕಾರ್ಖಾನೆಗಳ 47 ಪ್ರಕರಣಗಳಲ್ಲಿ ದುಡಿಯುವ ಬಂಡವಾಳ ಸಾಲವಾಗಿ 1,176 ಕೋಟಿ ಹಾಗೂ 29 ಪ್ರಕರಣಗಳಲ್ಲಿ ಅವಧಿ ಸಾಲವಾಗಿ 427.24 ಕೋಟಿ ರೂ. ಹೊರಬಾಕಿ ಇದೆ. ಇದೂ ಸೇರಿದಂತೆ ಒಟ್ಟಾರೆಯಾಗಿ 1,603.36 ಕೋಟಿ ಸಾಲ ಹೊರಬಾಕಿ ಇದೆ. ಈ ಪೈಕಿ 206.32 ಕೋಟಿ ಅಸಲು ಮತ್ತು 184.83 ಕೋಟಿ ಬಡ್ಡಿ ಸೇರಿ ಒಟ್ಟು 391.15 ಕೋಟಿ ರೂ.ಸಾಲ ಸುಸ್ತಿಯಾಗಿ ಮುಂದುವರೆಯುತ್ತಿದೆ. ಇದರಲ್ಲಿಯೂ 305.73 ಕೋಟಿ ರೂ. ಎನ್‌ಪಿಎ ಆಗಿರುವುದು ವರದಿಯಿಂದ ಗೊತ್ತಾಗಿದೆ.

ಪ್ರಭಾವಿ ರಾಜಕೀಯ ಮುಖಂಡರ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡಿರುವ ಅಪೆಕ್ಸ್‌ ಬ್ಯಾಂಕ್‌, ಕಾರ್ಖಾನೆಗಳಿಂದ ಅಡಮಾನ ಮಾಡಿಕೊಂಡಿರುವ ಸ್ಥಿರಾಸ್ತಿಯ ಮೌಲ್ಯವು ನೀಡಿರುವ ಸಾಲದ ಮೊತ್ತಕ್ಕಿಂತ ಕಡಿಮೆಯಾಗಿದೆ. ಕೆಲ ಸಕ್ಕರೆ ಕಾರ್ಖಾನೆಗಳಿಂದ ಸಕ್ಕರೆ ದಾಸ್ತಾನು ಇರುವ ಬಗ್ಗೆ ಖಾತರಿಪಡಿಸಿಕೊಂಡಿರುವ ಸಂಬಂಧ ಬ್ಯಾಂಕ್‌ನಲ್ಲಿ ಯಾವುದೇ ದಾಖಲೆಗಳು ಲಭ್ಯ ಇಲ್ಲ. ಹಾಗೇ ಬ್ಯಾಂಕ್‌ ಅಧಿಕಾರಿಗಳು ತನಿಖಾ ತಂಡಕ್ಕೆ ಒದಗಿಸಿದ್ದ ದಾಖಲೆಗಳಲ್ಲಿಯೂ ಸಕ್ಕರೆ ದಾಸ್ತಾನು ಇರಲಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಹಲವು ಸಕ್ಕರೆ ಕಾರ್ಖಾನೆಗಳಿಗೆ ಹೊಸದಾಗಿ ಸಾಲ ಮಂಜೂರು ಮಾಡಿ ಈ ಸಾಲವನ್ನು ಕಾರ್ಖಾನೆಗಳು ಪಡೆದ ಹಿಂದಿನ ಸಾಲಗಳು ಎನ್‌ಪಿಎ ಆಗಿದ್ದವು. ಹೀಗಾಗಿ ಸಾಲವನ್ನು ಮರುಪಾವತಿಸುವ ಉದ್ದೇಶದ ಹೆಸರಿನಲ್ಲಿ ಅಪೆಕ್ಸ್‌ ಬ್ಯಾಂಕ್‌, ಹೊಸದಾಗಿ ಸಾಲ ಮಂಜೂರು ಮಾಡಿತ್ತು ಎಂಬ ಅಂಶ ತನಿಖಾ ವರದಿಯಿಂದ ತಿಳಿದು ಬಂದಿದೆ.

'ಕಾರ್ಖಾನೆಗಳಿಗೆ ಬಿಡುಗಡೆಯಾದ ಸಾಲಗಳು ಕಾರ್ಖಾನೆಯ ಯಂತ್ರೋಪಕರಣ, ಕಾರ್ಖಾನೆ ವಿಸ್ತರಣೆ, ಹೆಚ್ಚಿನ ವಿದ್ಯುತ್‌ ಸಂಪರ್ಕ ಪಡೆದಿದ್ದು, ಈ ಉದ್ದೇಶಕ್ಕಾಗಿ ಪಡೆದ ಸಾಲಗಳು ಸದುಪಯೋಗಪಡಿಸಿಕೊಂಡಿರುವ ಬಗ್ಗೆ ಬ್ಯಾಂಕ್‌ ಖಾತರಿಪಡಿಸಿಕೊಂಡಿರಲಿಲ್ಲ,' ಎಂದು ತನಿಖಾಧಿಕಾರಿಗಳು ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ದುಡಿಯುವ ಬಂಡವಾಳ ಸಾಲವನ್ನು ಪ್ರೀ-ಆಪರೇಟೀವ್‌ ಲೋನ್‌ ರೂಪದಲ್ಲಿ ಒಟ್ಟು 20 ಸಹಕಾರಿ ಮತ್ತು ಸಹಕಾರೇತರ ಕಾರ್ಖಾನೆಗಳಿಗೆ ಒಟ್ಟಾರೆ 898.15 ಕೋಟಿ ರೂ. ಮಂಜೂರಾಗಿತ್ತು. ಈ ಕಾರ್ಖಾನೆಗಳಲ್ಲಿ ಸಕ್ಕರೆ ದಾಸ್ತಾನು ಹೊಂದಿರುವ ಬಗ್ಗೆ ದೃಢೀಕರಣವನ್ನು ಪಡೆಯದೇ ಅಪೆಕ್ಸ್‌ ಬ್ಯಾಂಕ್‌ ಸಾಲ ನೀಡಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಸಚಿವ ರಮೇಶ್‌ ಜಾರಕಿಹೊಳಿ ಸೇರಿದಂತೆ ರಾಜಕೀಯ ಪ್ರಭಾವಿ ಮುಖಂಡರ ಒಡೆತನದ ಸಕ್ಕರೆ ಕಾರ್ಖಾನೆಗಳಿಗೆ ಸಾಲ ಮಂಜೂರು ಮಾಡಿದ್ದ ಅವಧಿಯಲ್ಲಿ ಮಾಜಿ ಶಾಸಕ ಕೆ ಎನ್‌ ರಾಜಣ್ಣ ಅವರು ಬ್ಯಾಂಕ್‌ಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರೂ. ಬ್ಯಾಂಕ್‌ನಲ್ಲಿ ನಡೆದ ದುರಾಡಳಿತಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಸರ್ಕಾರ ಮತ್ತು ನಬಾರ್ಡ್‌ಗೆ ಹಲವು ದೂರುಗಳು ಸಲ್ಲಿಕೆಯಾಗಿದ್ದವು. ಇದೇ ಅವಧಿಯಲ್ಲಿ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ಡಾ. ಜಿ ಪರಮೇಶ್ವರ್‌ ಅವರ ವಿರುದ್ಧ ತಿರುಗಿಬಿದ್ದಿದ್ದನ್ನು ಸ್ಮರಿಸಿಕೊಳ್ಳಬಹುದು.

Click here to follow us on Facebook , Twitter, YouTube, Telegram

Pratidhvani
www.pratidhvani.com