ಹಿಮಾಚಲ-ಮಾಟಗಾತಿ ಹೆಸರಿನಲ್ಲಿ ಮಹಿಳೆಯರಿಗೆ ಹಿಂಸೆ
ಹಿಂದಿ-ಮಂದಿ

ಹಿಮಾಚಲ-ಮಾಟಗಾತಿ ಹೆಸರಿನಲ್ಲಿ ಮಹಿಳೆಯರಿಗೆ ಹಿಂಸೆ

ಮಾಟಗಾತಿಯರೆಂದು ಕರೆದು ವೃದ್ಧ ವಿಧವೆಯರನ್ನು ಹಿಂಸಿಸುವ ದೇವಭೂಮಿ ಹಿಮಾಚಲದ ದುಷ್ಟತನ, ಛತ್ತೀಸಗಢದಲ್ಲಿ ಅಮಾಯಕ ಆದಿವಾಸಿಗಳಿಗೆ ಕೊಂದ ನಕಲಿ ಎನ್ಕೌಂಟರ್ ಬಣ್ಣ ನ್ಯಾಯಾಂಗ ವಿಚಾರಣೆಯಲ್ಲಿ ಬಯಲಾಗಿರುವುದು ಈ ವಾರದ ಹಿಂದೀ ಮಂದಿಯ ವಿಷಯ

ಡಿ ಉಮಾಪತಿ

ವಯಸ್ಸಾದ ವಿಧವೆ ಮಹಿಳೆಯರನ್ನು ಮಾಟಗಾತಿಯರೆಂದು ಕರೆದು ಹಿಂಸಿಸಿ ಕೊಲ್ಲುವ ಇಲ್ಲವೇ ಊರು ಬಿಡಿಸಿ ಓಡಿಸುವ ದುಷ್ಟ ಪರಂಪರೆ ಭಾರತಕ್ಕೆ ಹೊಸದಲ್ಲ. ಮೂಢನಂಬಿಕೆ ಮೂಲದ ಈ ಬಹುತೇಕ ಪ್ರಕರಣಗಳ ಆಳಕ್ಕಿಳಿದು ಗಮನಿಸಿದರೆ ಆಸ್ತಿಪಾಸ್ತಿ ಲಪಟಾಯಿಸುವ ಇಲ್ಲವೇ ಹಗೆ ತೀರಿಸಿಕೊಳ್ಳುವ ಹಂಚಿಕೆಗಳು ಹುದುಗಿರುತ್ತವೆ. ವಿಶೇಷವಾಗಿ ಆದಿವಾಸಿ ಬಹುಳ ಸೀಮೆಯಲ್ಲಿ ಈಗಲೂ ಹೆಚ್ಚು ಆಚರಣೆಯಲ್ಲಿರುವ ಅನಿಷ್ಟವಿದು. ಹಳ್ಳಿಗಾಡುಗಳ ಅಬಲೆ ಹೆಣ್ಣುಮಕ್ಕಳ ಮೇಲೆ ನಡೆಯುವ ಈ ದೌರ್ಜನ್ಯದ ಘಟನೆಗಳು ನಗರಕೇಂದ್ರಿತ ಸಮೂಹ ಮಾಧ್ಯಮಗಳನ್ನು ತಲುಪುವುದು ವಿರಳ. ಮೊನ್ನೆ ಹಿಮಾಚಲ ಪ್ರದೇಶದಲ್ಲಿ ಜರುಗಿರುವ ಇಂತಹ ಹೃದಯ ಹಿಂಡುವ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಪತ್ರಿಕೆಗಳು ಮತ್ತು ಟೀವಿ ಚಾನೆಲ್ ಗಳ ಗಮನ ಅತ್ತ ಹರಿದಿದೆ.

ಮಂಡಿ ಜಿಲ್ಲೆಯ ಸಮಾಹಲ್ ಎಂಬ ಗ್ರಾಮದ ರಾಜ್ ದೇಯಿ 81 ವರ್ಷ ವಯಸ್ಸಿನ ವೃದ್ಧೆ. ಆಕೆಯನ್ನು ಮದ್ದಿಕ್ಕುವ ಮಾಟಗಾತಿಯೆಂದು ಕರೆದು ಮುಖಕ್ಕೆ ಮಸಿ ಬಳಿದು ಹಳ್ಳಿಯ ಓಣಿಗಳಲ್ಲಿ ಮೆರವಣಿಗೆ ಮಾಡುತ್ತ ಥಳಿಸಲಾಗಿದೆ. ಸ್ಥಳೀಯ ದೇವತೆಯ ಆಕ್ರೋಶದ ಬೆದರಿಕೆಯನ್ನೂ ಆಕೆಗೆ ಹಾಕಲಾಗಿದೆ.

ರಾಜ್ ದೇಯಿ ಪತಿ 1971ರ ಭಾರತ-ಪಾಕಿಸ್ತಾನ್ ಯುದ್ಧದಲ್ಲಿ ಹೋರಾಡಿದ್ದ ಯೋಧ. ಕಿರುಕುಳ- ಅವಹೇಳನದಿಂದ ಜಿಗುಪ್ಸೆ ಹೊಂದಿದ ಈ ವೃದ್ಧೆ ಚಲಿಸುತ್ತಿರುವ ಬಸ್ಸಿನ ಮುಂದಕ್ಕೆ ಜಿಗಿದು ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದಳು. ಬಸ್ ಚಾಲಕ ಮತ್ತು ಕಂಡಕ್ಟರ್ ಈಕೆಯನ್ನು ಉಳಿಸಿದರು. ರಾಜ್ ದೇಯಿಯ ದುಃಖಭರಿತ ಬವಣೆ ಫೋನಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಆಕೆಗೆ ನ್ಯಾಯ ಒದಗಿಸಬೇಕೆಂಬ ಕೂಗೆದ್ದಿದೆ. ಜಿಲ್ಲಾ ಪರಿಷತ್ತಿನ ಸಿಪಿಐ(ಎಂ) ಸದಸ್ಯ ಭೂಪಿಂದರ್ ಸಾಮ್ರಾಟ್ ಹೋರಾಟ ನಡೆಸಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ಅದೇ ಸಮಾಹಲ್ ಗ್ರಾಮದ 72 ವರ್ಷ ವಯಸ್ಸಿನ ಮತ್ತೊಬ್ಬ ಹೆಣ್ಣುಮಗಳು ಕೃಷ್ಣಾದೇವಿ ತನ್ನ ಮೇಲೆಯೂ ಇಂತಹುದೇ ದೌರ್ಜನ್ಯ ನಡೆದದ್ದಾಗಿ ಹೇಳಿದ್ದಾಳೆ. ಆಕೆಯ ಮುಖಕ್ಕೂ ಮಸಿ ಬಳಿದು ಕುತ್ತಿಗೆಗೆ ಚಪ್ಪಲಿ ಹಾರ ತೊಡಿಸಿ ಮೆರವಣಿಗೆ ಮಾಡಲಾಯಿತು.

ದೇವಭೂಮಿ ಎಂದು ಕರೆಯಲಾಗುವ ಹಿಮಾಚಲದ ಹಳ್ಳಿ ಹಳ್ಳಿಗಳಲ್ಲಿ ಗ್ರಾಮದೇವತೆಯ ಹೆಸರಿನಲ್ಲಿ ಬಡವರು, ದಲಿತರು ಹಾಗೂ ಮಹಿಳೆಯರ ಶೋಷಣೆ ದೌರ್ಜನ್ಯಗಳ ಪ್ರಕರಣಗಳು ಜರುಗಿವೆ. ಮಾದಕದ್ರವ್ಯ ವ್ಯಸನಿಗಳು ಸೇರಿದಂತೆ ಸಮಾಜಘಾತಕ ಶಕ್ತಿಗಳು ಈ ಪ್ರಕರಣಗಳ ಕೇಂದ್ರದಲ್ಲಿವೆ ಎಂದು ಸಾಮ್ರಾಟ್ ಅವರು ಇಂಗ್ಲಿಷ್ ಸುದ್ದಿ ಜಾಲತಾಣ 'ದಿ ಸಿಟಿಜನ್' ಗೆ ದೂರಿದ್ದಾರೆ. ದೇವತೆಗಳ ಹೆಸರಿನಲ್ಲಿ ಜಾತಿ ಪದ್ಧತಿಯನ್ನೂ ಸಮರ್ಥಿಸಲಾಗುತ್ತಿದೆ. ಚುನಾವಣೆಗಳ ಹೊತ್ತಿನಲ್ಲಿ ಲೋಟ ನೀರು ಮತ್ತು ಉಪ್ಪು ಹಿಡಿದು ಪ್ರಮಾಣ ಮಾಡಿಸಿಕೊಂಡು ವೋಟು ಕೇಳಲಾಗುತ್ತದೆ.

ಆಪರಾಧಿಗಳ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿದರೆ ಇಂತಹ ಪ್ರಕರಣಗಳನ್ನು ತಡೆಗಟ್ಟಬಹುದು. ಆದರೆ ಸಾಕ್ಷ್ಯಗಳನ್ನು ನಾಶ ಮಾಡಿ, ಸಾಕ್ಷೀದಾರರ ಬಾಯಿ ಮುಚ್ಚಿಸಿ, ರಾಜೀ ಒಪ್ಪಂದ ಕುದುರಿಸಿ ಅವುಗಳನ್ನು ಅದುಮಿಡಲಾಗುತ್ತಿದೆ. ಅನ್ಯಾಯಕ್ಕೆ ತುತ್ತಾದವರಿಗೆ ನ್ಯಾಯ ದೊರೆಯುತ್ತಿಲ್ಲ. ಮುಖ್ಯ ರಾಜಕೀಯ ಪಕ್ಷಗಳು ಈ ಕುರಿತು ತಲೆಕೆಡಿಸಿಕೊಳ್ಲುತ್ತಿಲ್ಲ. ಆಡಳಿತ ಯಂತ್ರ ಬಹುತೇಕ ಮೇಲ್ಜಾತಿಗಳಿಂದ ತುಂಬಿರುವುದೂ ಈ ಪ್ರಕರಣಗಳ ಕುರಿತ ನಿರ್ಲಕ್ಷ್ಯಕ್ಕೆ ಕಾರಣ ಎಂಬುದು ಸ್ಥಳೀಯ ಸಾಮಾಜಿಕ ಹೋರಾಟಗಾರರ ದೂರು.

ಪೊಲೀಸರು ಕೊಂದ ಆದಿವಾಸಿಗಳು ಮಾವೋವಾದಿಗಳಲ್ಲ

ಛತ್ತೀಸಗಢದ ಬಿಜಾಪುರ ಜಿಲ್ಲೆಯ ಸರ್ಕೇಗುಡದಲ್ಲಿ ಏಳು ವರ್ಷಗಳ ಹಿಂದೆ ನಡೆದ ಹುಸಿ ಗುಂಡಿನ ಕಾಳಗದಲ್ಲಿ ಆರು ಮಂದಿ ಅಪ್ರಾಪ್ತ ವಯಸ್ಕರೂ ಸೇರಿದಂತೆ 17 ಮಂದಿ ಆದಿವಾಸಿಗಳನ್ನು ಕೊಲ್ಲಲಾಗಿತ್ತು. 2012ರಲ್ಲಿ ನಡೆದ ಈ ಹತ್ಯಾಕಾಂಡದಲ್ಲಿ ಹತರಾದವರು ಮಾವೋವಾದಿಗಳೆಂದು ಅಂದಿನ ರಮಣಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಹೇಳಿತ್ತು. ಭಾರೀ ಪ್ರತಿಭಟನೆ ವಿವಾದಗಳ ನಂತರ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿತ್ತು.

ಮಧ್ಯಪ್ರದೇಶ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿ.ಕೆ. ಅಗರವಾಲ ಆಯೋಗವು ಇತ್ತೀಚೆಗೆ ವರದಿ ಸಲ್ಲಿಸಿದೆ. ಭದ್ರತಾ ಪಡೆಗಳಿಂದ ಹತರಾದ 17 ಮಂದಿಯ ಪೈಕಿ ಯಾರೂ ಮಾವೋವಾದಿಗಳಾಗಿರಲಿಲ್ಲ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಗ್ರಾಮಸ್ತರನ್ನು ಬಹಳ ಸಮೀಪದಿಂದ ಕೊಲ್ಲಲಾಗಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಸ್ಥಳೀಯ ಪೊಲೀಸರಿದ್ದ ಭದ್ರತಾ ಪಡೆಯು ಗಾಬರಿಯಲ್ಲಿ ಗುಂಡು ಹಾರಿಸಿರಬೇಕು ಎಂದಿದೆ. ಎನ್ಕೌಂಟರ್ ಜರುಗಿದ್ದು ರಾತ್ರಿಯ ಹೊತ್ತು. ಆದರೆ 17 ಮಂದಿಯ ಪೈಕಿ ಒಬ್ಬ ಯುವಕನನ್ನು ಬೆಳಿಗ್ಗೆ ಹಿಡಿದು ಗುಂಡು ಹಾರಿಸಿ ಕೊಲ್ಲಲಾಗಿದೆ ಎಂದೂ ಆಯೋಗ ಹೇಳಿದೆ.

ಭದ್ರತಾ ಪಡೆಯ ಕೆಲವರಿಗೆ ಆಗಿರುವ ಗಾಯಗಳಿಗೆ ತಮ್ಮದೇ ಸಂಗಾತಿಗಳ ಮತ್ತೊಂದು ತಂಡ ಕತ್ತಲಲ್ಲಿ ಗೊತ್ತಿಲ್ಲದೆ ಹಾರಿಸಿರುವ ಗುಂಡುಗಳೇ ಕಾರಣ. ಆದರೆ ಅಷ್ಟು ಮಂದಿ ಗ್ರಾಮಸ್ತರು ಹಬ್ಬದ ಆಚರಣೆಯ ಯೋಜನೆಯನ್ನು ಚರ್ಚಿಸಲು ಸೇರಿದ್ದರು ಎಂಬ ಕಾರಣವನ್ನು ನಂಬಲಾಗದು ಎಂದೂ ವರದಿಯಲ್ಲಿ ಸಂದೇಹ ಪ್ರಕಟಿಸಲಾಗಿದೆ.

ಭದ್ರತಾ ಪಡೆಗಳು ಹೇಳಿದಂತೆ ಬಸಗುಡಾದಿಂದ ಹೊರಟ ಎರಡು ತಂಡಗಳು ಮೂರು ಕಿ.ಮೀ.ದೂರದ ಸರ್ಕೇಗುಡದಲ್ಲಿ ಮಾವೋವಾದಿಗಳ ಸಭೆ ನಡೆಯುತ್ತಿದ್ದುದನ್ನು ಕಂಡವು. ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ತರು ಭದ್ರತಾ ಪಡೆಯ ತಂಡಗಳ ಮೇಲೆ ಗುಂಡು ಹಾರಿಸಿದರು. ಭದ್ರತಾ ಪಡೆಗಳು ವಾಪಸು ಗುಂಡು ಹಾರಿಸಿದರು. ಆದರೆ ಗ್ರಾಮಸ್ತರ ಪ್ರಕಾರ ಅವರು ಬೀಜ ಪಂಡುಮ್ ಹಬ್ಬದ ಸಿದ್ಧತೆಗಾಗಿ ಸಭೆ ಸೇರಿದ್ದರು.

ಭದ್ರತಾ ಪಡೆಗಳು ಅವರನ್ನು ಸುತ್ತುವರೆದು ಗುಂಡು ಹಾರಿಸಿದವು. ಪಡೆಗಳಿಂದ ಹತ್ಯೆಗೀಡಾದ ಮತ್ತು ಗಾಯಗೊಂಡ ಗ್ರಾಮಸ್ತರು ನಕ್ಸಲೀಯರು ಎನ್ನಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ದೂರದಲ್ಲಿ ಅನುಮಾನಾಸ್ಪದ ಸದ್ದು ಕೇಳಿಬರುತ್ತಿದೆ ಎಂಬುದಾಗಿ ತಮ್ಮ 'ಮಾರ್ಗದರ್ಶಿ'ಯ ಮಾತಿನಿಂದ ಪ್ರಭಾವಿತರಾದಂತಿರುವ ಪೊಲೀಸರು ಗಾಬರಿಯಾಗಿ ನಕ್ಸಲೀಯರಿದ್ದಾರೆಂದು ಭಾವಿಸಿ ಗುಂಡು ಹಾರಿಸಿ ಗ್ರಾಮಸ್ತರ ಸಾವು ನೋವುಗಳಿಗೆ ಕಾರಣದ್ದಾರೆ. ಗ್ರಾಮಸ್ತರು ಗುಂಡು ಹಾರಿಸಿಲ್ಲವೆಂಬ ಅಂಶವು ಹಿರಿಯ ಪೊಲೀಸ್ ಅಧಿಕಾರಿಗಳಾದ ಎಸ್.ಇಳಂಗೋ ಮತ್ತು ಮನೀಶ್ ಬರ್ಮೋಲ ಅವರ ಹೇಳಿಕೆಗಳಿಂದ ಸ್ಪಷ್ಟವಾಗಿದೆ.

ಸಾಕ್ಷ್ಯಾಧಾರಗಳ ಪ್ರಕಾರ 17 ರಲ್ಲಿ ಹತ್ತು ಮಂದಿ ಬೆನ್ನಿಗೆ ಗುಂಡು ಬಿದ್ದು ಸತ್ತಿದ್ದಾರೆ. ಅರ್ಥಾತ್ ಪರಾರಿಯಾಗುತ್ತಿದ್ದಾಗ ಕೊಲ್ಲಲಾಗಿದೆ. ಕೆಲವರು ತಲೆಗೆ ಗುಂಡು ಬಿದ್ದು ಸತ್ತಿದ್ದಾರೆ. ಈ ಅಂಶಗಳನ್ನು ಗಮನಿಸಿದರೆ ಗುಂಡು ಹಾರಿಸಿದ್ದು ಬಲು ಸಮೀಪದಿಂದಲೇ ವಿನಾ ಪೊಲೀಸರು ಹೇಳುವಂತೆ ದೂರದಿಂದ ಅಲ್ಲ. ಗಾಯಗೊಂಡವರ ಮೈ ಮೇಲಿನ ಗಾಯಗಳು ಕೂಡ ಬಂದೂಕದ ಹಿಡಿಯಿಂದ ಮತ್ತು ಹರಿತ ಅಂಚಿನ ಮತ್ತು ಮೊಂಡು ವಸ್ತುವಿನಿಂದ ಆದಂತಹವು. ಈ ಗಾಯಗಳು ಆದದ್ದು ಹೇಗೆ ಎಂಬುದಕ್ಕೆ ಭದ್ರತಾ ಪಡೆಗಳಿಂದ ಉತ್ತರ ಬರಲಿಲ್ಲ ಎಂದು ವರದಿ ಹೇಳಿದೆ.

ಯೂಪಿ ಹಳ್ಳಿಗಾಡಿನ 'ಒಡವೆ' ಜೇವರ್ ಏರ್ಪೋರ್ಟ್

ರಾಷ್ಟ್ರೀಯ ರಾಜಧಾನಿ ಕ್ಷೇತ್ರದಲ್ಲಿ ಮೂರನೆಯ ವಿಮಾನ ನಿಲ್ದಾಣ ನಿರ್ಮಾಣದ ಪ್ರಕ್ರಿಯೆಗಳು ನಿರ್ಣಾಯಕ ಹಂತ ಮುಟ್ಟಿವೆ. ದೆಹಲಿಗೆ ಗಡಿಗೆ ಹೊಂದಿಕೊಂಡಂತಿರುವ ಉತ್ತರಪ್ರದೇಶದ ಗೌತಮಬುದ್ಧ ನಗರ ಜಿಲ್ಲೆಯ ಗ್ರೇಟರ್ ನೋಯ್ಡಾದ ಯಮುನಾ ಎಕ್ಕ್ ಪ್ರೆಸ್ ಹೆದ್ದಾರಿ ಬದಿಯ ಜೇವರ್ ಎಂಬ ಗ್ರಾಮ ಈ ನಿಲ್ದಾಣದ ಸ್ಥಳ. ವಿಶ್ವದರ್ಜೆಯ ಈ ನಿಲ್ದಾಣ 2023ರ ಹೊತ್ತಿಗೆ ಮೊದಲನೆಯ ಹಂತ ಕಾರ್ಯಾರಂಭ ಮಾಡಲಿದೆ.

ಉದ್ದೇಶಿಸಲಾಗಿರುವ ನಾಲ್ಕೂ ಹಂತಗಳ ನಿರ್ಮಾಣ ಮುಂದಿನ ಮೂವತ್ತು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಆಗ ಆರರಿಂದ ಎಂಟು ರನ್ ವೇಗಳು ಹಾರಾಟಕ್ಕೆ ದೊರೆಯಲಿವೆ. ದೆಹಲಿಯ ಇಂದಿರಾಗಾಂಧೀ ವಿಮಾನನಿಲ್ದಾಣ ಹೊಂದಿರುವ ಹಾಲಿ ರನ್ ವೇಗಳ ಸಂಖ್ಯೆ ಮೂರು. ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಿದು. ಅಮೆರಿಕೆಯ ಟೆಕ್ಸಾಸ್ ನ ಡಲ್ಲಾಸ್ ಫೋರ್ಟ್ವರ್ತ್ ಮತ್ತು ಶಿಕಾಗೋದ ಓ ಹರೆ ವಿಮಾನನಿಲ್ದಾಣಗಳು ಅನುಕ್ರಮವಾಗಿ ಎಂಟು ಮತ್ತು ಏಳು ರನ್ ವೇಗಳನ್ನು ಹೊಂದಿವೆ. ಪ್ರಪಂಚದಲ್ಲೇ ಅತಿ ಹೆಚ್ಚಿನ ಸಂಖ್ಯೆಯಿದು.

2001ರಲ್ಲಿ ರಾಜನಾಥಸಿಂಗ್ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಯೋಜಿಸಲಾದ ಈ ನಿಲ್ದಾಣವನ್ನು ಯುಪಿಎ ಸರ್ಕಾರ ಕಾಗದದ ಹಂತದಲ್ಲೇ ಉಳಿಸಿತು. ಮಥುರಾ, ಆಗ್ರಾ, ವೃಂದಾವನಕ್ಕೆ ಸಮೀಪ ವಿಮಾನಯಾನ ಸೌಲಭ್ಯ ಕಲ್ಪಿಸುವುದು ಅವರ ಉದ್ದೇಶವಾಗಿತ್ತು. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಜೇವರ್ ನಡುವಣ ದೂರ 72 ಕಿ.ಮೀ.ಗಳು. ಅಂದಿನ ಷರತ್ತಿನ ಪ್ರಕಾರ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 150 ಕಿ.ಮೀ. ಫಾಸಲೆಯೊಳಗೆ ಮತ್ತೊಂದು ಹೊಸ ವಿಮಾನ ನಿಲ್ದಾಣ ತಲೆಯೆತ್ತುವಂತಿರಲಿಲ್ಲ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜೇವರ್ ಯೋಜನೆಗೆ ಪುನಃ ಜೀವ ಬಂತು.

<a href="http://truthprofoundationindia.com/">http://truthprofoundationindia.com/</a>

ಸರ್ಕಾರ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ಈ ನಿಲ್ದಾಣ ನಿರ್ಮಾಣ ಆಗಲಿದ್ದು, ಸ್ವೀಡನ್ ನ ಜ್ಯೂರಿಕ್ ಏರ್ಪೋರ್ಟ್ ಇಂಟರ್ ನ್ಯಾಷನಲ್ ಎಜಿ ಸಂಸ್ಥೆಯು ಜೇವರ್ ನಿಲ್ದಾಣ ನಿರ್ಮಿಸುವ ಹರಾಜು ಗೆದ್ದಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಸೀಮನ್ಸ್ ಜೊತೆಗೂಡಿ ನಿರ್ಮಿಸಿದ ಕಂಪನಿಯಿದು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತನಗಿದ್ದ ಶೇ.17ರ ಪಾಲುದಾರಿಕೆಯನ್ನು 2017ರಲ್ಲಿ ಪೂರ್ಣ ಮಾರಾಟ ಮಾಡಿತ್ತು.

ನಿರ್ಮಾಣಕ್ಕೆ ಬೇಕಿರುವ ಒಟ್ಟು ಜಮೀನು 5000 ಹೆಕ್ಟೇರುಗಳು. 998.13 ಹೆಕ್ಟೇರುಗಳನ್ನು ಈಗಾಗಲೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ತಮ್ಮ ಜಮೀನಿನ ಬದಲಿಗೆ ನೀಡಿರುವ ಪರಿಹಾರ ಸಾಲದೆಂದು ರೈತರು ಇತ್ತೀಚಿನ ತನಕ ಪ್ರತಿಭಟನೆ ನಡೆಸಿದ್ದರು.

ಮೊದಲ ಹಂತದ ನಿರ್ಮಾಣ ವೆಚ್ಚ 4,588 ಕೋಟಿ ರುಪಾಯಿಗಳು. ನಾಲ್ಕೂ ಹಂತಗಳ ನಿರ್ಮಾಣ ವೆಚ್ಚದ ಅಂದಾಜು 29,560 ಕೋಟಿ ರುಪಾಯಿಗಳು. ವರ್ಷಕ್ಕೆ 1.20 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಈ ನಿಲ್ದಾಣ ಹೊಂದಲಿದೆ. ದೆಹಲಿಯ ಇಂದಿರಾಗಾಂಧೀ ವಿಮಾನನಿಲ್ದಾಣದ ಮೇಲಿನ ಒತ್ತಡವನ್ನು ಜೇವರ್ ತಗ್ಗಿಸುವ ನಿರೀಕ್ಷೆಗಳಿವೆ. ಮುಂಬರುವ ಐದಾರು ವರ್ಷಗಳಲ್ಲಿ ಇಂದಿರಾಗಾಂಧೀ ವಿಮಾನನಿಲ್ದಾಣ ತನ್ನ 1.10 ಕೋಟಿ ಪ್ರಯಾಣಿಕರ ಗರಿಷ್ಠ ಸಾಮರ್ಥ್ಯ ಮುಟ್ಟಲಿದೆ.

Click here Support Free Press and Independent Journalism

Pratidhvani
www.pratidhvani.com