ಹಿಂದಿ ಮಂದಿ - ದಕ್ಷಿಣಕ್ಕೊಂದು ಉತ್ತರದ ಕಿಟಕಿ
ಹಿಂದಿ-ಮಂದಿ

ಹಿಂದಿ ಮಂದಿ - ದಕ್ಷಿಣಕ್ಕೊಂದು ಉತ್ತರದ ಕಿಟಕಿ

ದೆಹಲಿಯ ರಸ್ತೆ ಬದಿಗಳಲ್ಲಿ ಆಯಸ್ಸು ತೀರಿದ ಮತ್ತು ಗುಜರಿಯಾದ 40 ಲಕ್ಷ ವಾಹನಗಳು. ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ಮೊಬೈಲು ಛಾರ್ಜು ಮಾಡಿಕೊಂಡವರಿಗೆ ಪಂಗನಾಮ. ವಿದೇಶೀಪ್ರವಾಸಿಗರ ಪಾಲಿನ ಸಿಂಹಸ್ವಪ್ನವಾಗಿರುವ ದೆಹಲಿ ಈ ವಾರದ ಹಿಂದಿ ಮಂದಿ ವಿಶೇಷ

ಡಿ ಉಮಾಪತಿ

ದೆಹಲಿ- ಆಯಸ್ಸು ತೀರಿದ ಮತ್ತು ಗುಜರಿ ವಾಹನ 40 ಲಕ್ಷ!

ಹಿಂದಿ ಮಂದಿ - ದಕ್ಷಿಣಕ್ಕೊಂದು ಉತ್ತರದ ಕಿಟಕಿ

ನಂಬಿದರೆ ನಂಬಿ, ಬಿಟ್ಟರೆ ಬಿಡಿ. ದೆಹಲಿಯ ರಸ್ತೆ ಬದಿಗಳು, ಓಣಿಗಳು, ಮತ್ತಿತರೆ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಂಡಿರುವ 'ಆಯುಷ್ಯ ತೀರಿದ' ಮತ್ತು ಧೂಳು ಮೆತ್ತಿ ತುಕ್ಕು ಹಿಡಿಯುತ್ತಿರುವ ಗುಜರಿ ಮೋಟಾರು ವಾಹನಗಳ ಸಂಖ್ಯೆ 40 ಲಕ್ಷ! ಆಯುಷ್ಯ ತೀರಿರುವ ವಾಹನಗಳ ನೋಂದಣಿ ರದ್ದಾಗಿದೆ. ಆದರೂ ಇವುಗಳನ್ನು ಅಕ್ರಮವಾಗಿ ಓಡಿಸಲಾಗುತ್ತಿದೆ.

ಶೋ ರೂಮ್ ಗಳಿಂದ ಖರೀದಿಸಿ 15 ವರ್ಷಗಳು ತುಂಬಿರುವ ಎಲ್ಲ ಪೆಟ್ರೋಲ್ ಮತ್ತು ಸಿ.ಎನ್.ಜಿ. ಗಾಡಿಗಳು ಮತ್ತು ಹತ್ತು ವರ್ಷ ತುಂಬಿರುವ ಡೀಸೆಲ್ ಗಾಡಿಗಳು ಆಯುಷ್ಯ ತೀರಿದ ವಾಹನಗಳು ಎಂದು ಘೋಷಿಸಿ 2018ರಲ್ಲೇ ದೆಹಲಿ ಸರ್ಕಾರ ಕಾನೂನು ಜಾರಿಗೆ ತಂದಿತು. ಉಳಿದಂತೆ ಅಪಘಾತದ ಕಾರಣ ಇನ್ನು ಓಡಲಾರದ ಅಥವಾ ತೀರಾ ಹಳೆಯವಾಗಿರುವ ಗಾಡಿಗಳು ಗುಜರಿ ಗಾಡಿಗಳು.

ಇವುಗಳ ಜೊತೆಗೆ ಪ್ರತಿ ವರ್ಷ 1.75 ಲಕ್ಷ ಹೊಸ ಕಾರುಗಳು ಮತ್ತು 4.50 ಲಕ್ಷ ಹೊಸ ದ್ವಿಚಕ್ರವಾಹನಗಳು ದೆಹಲಿಯ ರಸ್ತೆಗಳಿಗೆ ಇಳಿಯುತ್ತಿವೆ ಎಂದು ಸಾರಿಗೆ ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ.

ಕಳೆದ ವರ್ಷ ಜಾರಿಗೆ ಬಂದಿರುವ ದೆಹಲಿಯ ಹೊಸ ಪಾರ್ಕಿಂಗ್ ನಿಯಮಗಳ ಪ್ರಕಾರ ಗುಜರಿ ವಾಹನಗಳನ್ನು ಸಾರ್ವಜನಿಕ ಜಾಗೆಗಳಲ್ಲಿ ವಿಶೇಷವಾಗಿ 60 ಅಡಿ ಅಗಲದ ರಸ್ತೆಗಳ ಬದಿಗಳಲ್ಲಿ ನಿಲ್ಲಿಸುವಂತಿಲ್ಲ. ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ನಿಯಮಗಳು ಪೊಲೀಸರಿಗೆ ನೀಡುತ್ತವೆ. ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಅವುಗಳ ಮಾಲೀಕರು ಮೂರೂವರೆ ತಿಂಗಳುಗಳ ಒಳಗಾಗಿ ಬಿಡಿಸಿಕೊಳ್ಳದೆ ಹೋದರೆ ಹರಾಜು ಹಾಕುವ ಅಧಿಕಾರವೂ ಪೊಲೀಸರಿಗೆಉಂಟು.

ಜನಸಂಖ್ಯೆ ಹೆಚ್ಚಿದಂತೆಲ್ಲ ರಸ್ತೆಗಳು ಮತ್ತು ಸಾರ್ವಜನಿಕ ಜಾಗಗಳು ಸಾಲದಾಗಿ ಕುಗ್ಗತೊಡಗಿವೆ. ಹೀಗಾಗಿ ಗುಜರಿ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕಿಂತ ಗುಜರಿಗೆ ಹಾಕುವುದು (Scrap) ಸರಿ ಎನ್ನುತ್ತಾರೆ ಪರಿಣಿತರು.

ಆದರೆ ಮಾಯಾಪುರಿಯ ಅನಧಿಕೃತ ಗುಜರಿ ಡೀಲರುಗಳನ್ನು ಬಿಟ್ಟರೆ ಬೇರೆ ಗತಿಯಿಲ್ಲ. ಲೈಸೆನ್ಸ್ ನೀಡಿಕೆಗೆ ಸಾವಿರ ಚದರ ಗಜಗಳಷ್ಟು ಜಾಗವಾದರೂ ಇರಬೇಕು ಎಂಬ ಸರ್ಕಾರಿ ನಿಬಂಧನೆಯ ಕಾರಣ ಮಾಯಾಪುರಿಯ ಗುಜರಿ ಡೀಲರುಗಳಿಗೆ ಲೈಸೆನ್ಸ್ ಸಿಗದಂತಾಗಿದೆ. ಈ ಕಾರಣದಿಂದಾಗಿ ಹಳೆಯ ವಾಹನಗಳನ್ನು ಗುಜರಿಗೆ ಹಾಕದಂತೆ ಮಾಲೀಕರ ಕೈ ಕಟ್ಟಿವೆ. ಮಾಯಾಪುರಿಯ ಅನಧಿಕೃತ ಗುಜರಿ ಡೀಲರುಗಳಿಗೆ ಮಾರಾಟ ಮಾಡುವಂತೆಯೂ ಇಲ್ಲ. ಯಾಕೆಂದರೆ ಇಂತಹ ವಾಹನಗಳ 'ಸೆಕೆಂಡ್ ಹ್ಯಾಂಡ್' ಮಾರಾಟವನ್ನೂ ದೆಹಲಿಯಲ್ಲಿ ನಿಷೇಧಿಸಲಾಗಿದೆ. 10-15 ವರ್ಷಗಳ ನಡುವಣ ಡೀಸೆಲ್ ಗಾಡಿಗಳನ್ನು ಮಾತ್ರವೇ ದೆಹಲಿಯ ಹೊರಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ.

ಹಿಂದಿ ಮಂದಿ - ದಕ್ಷಿಣಕ್ಕೊಂದು ಉತ್ತರದ ಕಿಟಕಿ
http://www.truthprofoundationindia.com/

ನಗರಸಭೆ, ಮಹಾನಗರ ಪಾಲಿಕೆಯಂತಹ ಸಂಸ್ಥೆಗಳು ಈ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾದರೂ ಅವುಗಳನ್ನು ಇಟ್ಟುಕೊಳ್ಳುವಷ್ಟು ಜಾಗ ಅವುಗಳ ಬಳಿ ಇಲ್ಲ. ಹರಾಜು ಮಾಡಿದರೆ ಅದೇ ವಾಹನಗಳು ಪುನಃ ದೆಹಲಿಯ ರಸ್ತೆಗಳಿಗೆ ಇಳಿಯುವುದಿಲ್ಲ ಎಂಬ ಖಾತ್ರಿ ಇಲ್ಲ. ಬಹುತೇಕ ವಸತಿ ಪ್ರದೇಶಗಳಲ್ಲಿ ರಸ್ತೆಯ ಎರಡೂ ಬದಿಗಳನ್ನು ಗುಜರಿ ವಾಹನಗಳೇ ಆಕ್ರಮಿಸಿಕೊಂಡಿವೆ. ಪಾದಚಾರಿಗಳ ಪಥಗಳಲ್ಲೂ ಇಂತಹ ವಾಹನಗಳನ್ನು ನಿಲ್ಲಿಸಲಾಗಿದೆ.

ದೆಹಲಿ ರಾಜ್ಯ ಸಾರಿಗೆ ಇಲಾಖೆಯು ಕಳೆದ ವರ್ಷ 'ಲಟಾರಿ ಗಾಡಿ' ಹೆಸರಿನ ಅಭಿಯಾನವೊಂದನ್ನು ನಡೆಸಿತ್ತು. ಗುಜರಿ ವಾಹನಗಳು ಸಾರ್ವಜನಿಕ ಪಾರ್ಕಿಂಗ್ ಜಾಗೆಗಳನ್ನು ಆಕ್ರಮಿಸಿಕೊಂಡಿದ್ದರೆ, ನಾಗರಿಕರು ಅಂತಹ ವಾಹನಗಳ ಫೋಟೋ ಕ್ಲಿಕ್ ಮಾಡಿ ಸರ್ಕಾರಕ್ಕೆ ಕಳಿಸಬಹುದಿತ್ತು. ಸರ್ಕಾರ ನಿರ್ವಹಿಸುವುದು ಮತ್ತು ಕ್ರಮ ಕೈಗೊಳ್ಳುವುದು ಅಸಾಧ್ಯ ಎನ್ನುವಷ್ಟು ಭಾರೀ ಸಂಖ್ಯೆಯ ದೂರುಗಳ ಮಳೆಗರೆಯಿತು. ಅಂತಹ ವಾಹನಗಳನ್ನು ಇರಿಸಿಕೊಳ್ಳಲು ಸರ್ಕಾರದ ಬಳಿಯೂ ಜಾಗ ಇಲ್ಲ. ಹೀಗಾಗಿ ಈ ಅಭಿಯಾನ ಕಡೆಯುಸಿರೆಳೆಯಿತು.

ಗುಜರಿ ವಾಹನಗಳ ಡೀಲರುಗಳ ಬಳಿ ಈ ಸಮಸ್ಯೆಗೆ ಸಮಾಧಾನ ಉಂಟು. ಅವರ ಪ್ರಕಾರ ಇಂತಹ ಗಾಡಿಗಳ ಬಿಡಿ ಭಾಗಗಳನ್ನು ಕಳಚುವುದೊಂದೇ ದಾರಿ. ಆಯುಷ್ಯ ತೀರಿದ ವಾಹನಗಳ ಬಿಡಿ ಭಾಗಗಳನ್ನು ವ್ಯವಸ್ಥಿತವಾಗಿ, ಪರಿಸರಕ್ಕೆ ಹಾನಿಯಾಗದಂತೆ ಕಳಚಿ ಮಾರಾಟ ಮಾಡಲು ಗುಜರಿ ಡೀಲರುಗಳಿಗೆ ಅನುವು ಮಾಡಿಕೊಡುವಂತೆ ಕಾನೂನಿಗೆ ತಿದ್ದುಪಡಿ ತರಬೇಕು. ತಮ್ಮ ವಾಹನಗಳನ್ನು ಹೀಗೆ ಸ್ವಇಚ್ಛೆಯಿಂದ ಬಿಡಿ ಭಾಗ ಕಳಚಲು ಒಪ್ಪಿಸುವವರಿಗೆ ಪ್ರೋತ್ಸಾಹ ಕ್ರಮಗಳನ್ನು ಪ್ರಕಟಿಸಬೇಕು ಎಂಬದು ಮಾಯಾಪುರಿ ಗುಜರಿ ಡೀಲರುಗಳ ಸಲಹೆ.

ಮೊಬೈಲುಗಳಿಗೆ 'ಜ್ಯೂಸ್ ಜಾಕಿಂಗ್' ಎಂಬ ಅಪಾಯ!

ಹಿಂದಿ ಮಂದಿ - ದಕ್ಷಿಣಕ್ಕೊಂದು ಉತ್ತರದ ಕಿಟಕಿ

ದೆಹಲಿಯ ಪ್ರಸಿದ್ಧ ಶಾಪಿಂಗ್ ತಾಣಗಳಲ್ಲಿ ಒಂದಾದ ಕನಾಟ್ ಪ್ಲೇಸ್ ನಲ್ಲಿ ನಡೆಯುತ್ತಿದ್ದ ಆ ಯುವಕನ ಫೋನಿನ ಛಾರ್ಜ್ ಮುಗಿದು ಹೋಗಿತ್ತು. ಸನಿಹದಲ್ಲೇ ಪತ್ತೆಯಾದ ಉಚಿತ ಯು.ಎಸ್.ಬಿ. ಪವರ್ ಛಾರ್ಜಿಂಗ್ ಸೌಲಭ್ಯ ಬಳಸಿ ಛಾರ್ಜ್ ಮಾಡಿಕೊಂಡ. ತುಸು ಹೊತ್ತಿನಲ್ಲೇ ಆತನ ಬಂದ ಮೆಸೇಜ್ ನೋಡಿ ಗಾಬರಿಯಾದ. ಆತನ ಬ್ಯಾಂಕ್ ಖಾತೆಯಿಂದ 50 ಸಾವಿರ ರುಪಾಯಿಯನ್ನು ತೆಗೆಯಲಾಗಿತ್ತು. ಆದರೆ ಅಂತಹ ಯಾವುದೇ ವ್ಯವಹಾರವನ್ನು ಆತ ಮಾಡಿರಲಿಲ್ಲ.

ವಿದೇಶೀ ಪ್ರವಾಸಿಗರಿಗೆ ಸಿಂಹಸ್ವಪ್ನವಾದ ದೆಹಲಿ

ಹಿಂದಿ ಮಂದಿ - ದಕ್ಷಿಣಕ್ಕೊಂದು ಉತ್ತರದ ಕಿಟಕಿ

ಆಕೆ ವಿದ್ಯಾರ್ಥಿನಿ. ದೆಹಲಿಯ ಸೌತ್ ಎಕ್ಸ್ ಶಾಪಿಂಗ್ ಪ್ರದೇಶದಲ್ಲಿ ಇದೇ ರೀತಿ ಮೊಬೈಲ್ ಛಾರ್ಜ್ ಮಾಡಿಕೊಂಡಳು. ಕೆಲ ಹೊತ್ತಿನಲ್ಲಿ ಆಕೆಯ ಸಾಮಾಜಿಕ ಜಾಲತಾಣ ಅಕೌಂಟಿನಿಂದ ಅಶ್ಲೀಲ ವಿಡಿಯೋವೊಂದು ಆಕೆಯ ಹೆಸರಿನಲ್ಲಿ ಆಪ್ಲೋಡ್ ಆಗಿತ್ತು. ವಾಸ್ತವದಲ್ಲಿ ಆಕೆ ಅಂತಹ ಯಾವ ವಿಡಿಯೋವನ್ನೂ ಅಪ್ಲೋಡ್ ಮಾಡಿರಲಿಲ್ಲ.

ಸಾರ್ವಜನಿಕ ಸ್ಥಳಗಳ ಉಚಿತ ಛಾರ್ಜಿಂಗ್ ಸೌಲಭ್ಯ ಬಳಸಿದ ಇವರಿಬ್ಬರ ಫೋನುಗಳನ್ನು ಹ್ಯಾಕ್ ಮಾಡಲಾಗಿದೆ ಎಂದಿದೆ ದೆಹಲಿ ಪೊಲೀಸರ ಸೈಬರ್ ಅಪರಾಧ ನಿಗ್ರಹ ವಿಭಾಗ.

ಸಾರ್ವಜನಿಕ ಸ್ಥಳಗಳಲ್ಲಿನ ಯು.ಎಸ್.ಬಿ. ಪವರ್ ಛಾರ್ಜಿಂಗ್ ಉಚಿತ ಸೌಲಭ್ಯದ ಉಪಯೋಗ- ದುರುಪಯೋಗದಮೇಲೆ ಯಾರೂ ನಿಗಾ ಇಟ್ಟಿರುವುದಿಲ್ಲ. ಹ್ಯಾಕ್ ಮಾಡುವ ಪಾತಕಿಗಳು ಈ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಛಾರ್ಜ್ ಮಾಡಲು ಅಮಾಯಕರು ಇಡುವ ಮೊಬೈಲ್ ಫೋನುಗಳಿಂದ ಅವುಗಳಲ್ಲಿನ ಮಾಹಿತಿಯನ್ನು(ಡೇಟಾ) ಕದಿಯುತ್ತಾರೆ. ಯು.ಎಸ್.ಬಿ. ಪೋರ್ಟ್ ಗಳಲ್ಲಿ ಮಾಹಿತಿ ಕದಿಯುವ 'ಚಿಪ್' ಗಳನ್ನು ಅಡಗಿಸಿಡುತ್ತಾರೆ. ಯು.ಎಸ್.ಬಿ. ಕಾರ್ಡ್ ಗಳು ಸಾಮಾನ್ಯ ಛಾರ್ಜರ್ ಗಳಂತಲ್ಲ. ಡೇಟಾವನ್ನು ಫೋನಿನಿಂದ ಫೋನಿಗೆ, ಇಲ್ಲವೇ ಫೋನಿನಿಂದ ಕಂಪ್ಯೂಟರಿಗೆ, ಕಂಪ್ಯೂಟರಿಂದ ಫೋನಿಗೆ ವರ್ಗಾಯಿಸಲೂ ಯು.ಎಸ್.ಬಿ.ಕಾರ್ಡ್ ಗಳ ಬಳಕೆಯಾಗುತ್ತದೆ ಎಂಬುದನ್ನು ಗಮನಿಸಬೇಕು ಎನ್ನುತ್ತಾರೆ ದೆಹಲಿ ಪೊಲೀಸರು.

ಮೇಲ್ದರ್ಜೆಯ ಶಾಪಿಂಗ್ ತಾಣಗಳು ಮತ್ತು ವಿಮಾನ ನಿಲ್ದಾಣಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಸೈಬರ್ ಮಾಹಿತಿಚೋರರು ಸಕ್ರಿಯವಾಗಿರುತ್ತಾರೆ. ಮೊಬೈಲಿನೊಳಗಿನ ಬ್ಯಾಂಕಿಂಗ್ ಮತ್ತು ಇತರೆ ಸೂಕ್ಷ್ಮ ಮಾಹಿತಿಗಳನ್ನು ಕದಿಯುತ್ತಾರೆ. ಇವರು ಪೋರ್ಟ್ ಗಳಲ್ಲಿ ಅಡಗಿಸಿಡುವ ಚೋರ ಸಾಧನವು ಪ್ರತಿ ಐದು ಸೆಕೆಂಡುಗಳಿಗೆ ಒಮ್ಮೆ ಫೋನಿನ ಸ್ಕ್ರೀನ್ ಶಾಟ್ ಗಳನ್ನು ತೆಗೆದು ರವಾನಿಸುತ್ತದೆ. ಬ್ಯಾಂಕ್ ಖಾತೆಯಿಂದ ಹಣ ತೆಗೆಯಲು ಮತ್ತು ಹೆಣ್ಣುಮಕ್ಕಳಿಗೆ ಕಿರುಕುಳ ನೀಡಲು ಹಾಗೂ ಬ್ಲ್ಯಾಕ್ ಮೇಲ್ ಮಾಡಲು ಈ ಮಾಹಿತಿಯನ್ನು ಅವರು ಬಳಸುತ್ತಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ನಿಮ್ಮ ಮಾಮೂಲು ಮೊಬೈಲ್ ಛಾರ್ಜರ್ ಜೊತೆಗೆ ಒಯ್ಯಿರಿ. ಗೋಡೆಯಲ್ಲಿನ ಪ್ಲಗ್ ಗಳಿಗೆ ಸಿಕ್ಕಿಸಿ ಛಾರ್ಜ್ ಮಾಡಿರ. ಇಲ್ಲವೇ ಪವರ್ ಬ್ಯಾಂಕ್ ಬಳಸಿ. ಯು.ಎಸ್.ಬಿ. ಪೋರ್ಟ್ ಕೇಬಲ್ ಗಳನ್ನು ಬಳಸಬೇಡಿ ಎಂಬುದು ಅವರ ಕಿವಿಮಾತು.

ಜ್ಯೂಸ್ ಜಾಕಿಂಗ್ ಎಂದು ಕರೆಯಲಾಗುವ ಈ ಸೈಬರ್ ಚೌರ್ಯ ಕೇವಲ ದೆಹಲಿಗೆ ಸೀಮಿತವಲ್ಲ. ವಿಶ್ವದ ಬಹುತೇಕದೊಡ್ಡ ನಗರಗಳಿಂದ ಇಂತಹ ಕಳ್ಳತನಗಳು ವರದಿಯಾಗಿವೆ. ಬೆಂಗಳೂರು ಕೂಡ ಈ ಮಾತಿಗೆ ಹೊರತಲ್ಲ.

ನಿರಂತರ ಸುದ್ದಿಗಾಗಿ ಪ್ರತಿಧ್ವನಿಯ Facebook, YouTube, Twitter ಪೇಜ್ ಸೇರಿಕೊಳ್ಳಿ. ಪ್ರತಿಧ್ವನಿಯ ಟೆಲಿಗ್ರಾಂ ಸೇರಲು, ಈ ಲಿಂಕ್ ಕ್ಲಿಕ್ ಮಾಡಿ

Pratidhvani
www.pratidhvani.com