ಹಿಂದೀ ಮಂದಿ: ದಕ್ಷಿಣಕ್ಕೊಂದು ಉತ್ತರದ ಕಿಟಕಿ
ಹಿಂದಿ-ಮಂದಿ

ಹಿಂದೀ ಮಂದಿ: ದಕ್ಷಿಣಕ್ಕೊಂದು ಉತ್ತರದ ಕಿಟಕಿ

ಹೆಚ್ಚುತ್ತಿರುವ ಗುಂಪು ಹತ್ಯೆ ಪ್ರಕರಣಗಳು, ‘ರಾಷ್ಟ್ರವಿರೋಧಿ’ ಹಣೆಪಟ್ಟಿ ಇದ್ದೂ ಜೆ.ಎನ್.ಯು. ನಲ್ಲಿ ವಿದ್ಯಾರ್ಥಿಗಳ ಚುನಾವಣಾ ಸ್ಪರ್ಧೆ ಹಾಗೂ ಸರ್ಕಾರಿ ನೌಕರರಲ್ಲಿ ಹೆಚ್ಚುತ್ತಿರುವ ಹೆಲಿಕಾಪ್ಟರ್ ಹುಚ್ಚು ಈ ವಾರದ ಹಿಂದಿ ಮಂದಿ ವಿಶೇಷ.

ಡಿ ಉಮಾಪತಿ

ಉತ್ತರದ ಉದ್ದಗಲಕ್ಕೆ ಗುಂಪು ದಾಳಿಗಳು ಸಾಂಕ್ರಾಮಿಕ

ಗುಂಪು ದಾಳಿಗಳು ಮತ್ತು ಹತ್ಯೆಗಳು ಉತ್ತರ ಭಾರತದ ಉದ್ದಗಲಕ್ಕೆ ಸರ್ವೇ ಸಾಮಾನ್ಯ ಆಗತೊಡಗಿವೆ. ನಿರುದ್ಯೋಗಿ ಯುವಜನರಿಗೆ ದಕ್ಕಿರುವ ಈ ಹೊಸ ಉದ್ಯೋಗ ಸಾಂಕ್ರಾಮಿಕ ರೂಪ ಧರಿಸಿರುವುದು ಆತಂಕಕಾರಿ. ಮಾಟ ಮಂತ್ರ ಮಾಡುತ್ತಾಳೆಂದು ಮಹಿಳೆಯರನ್ನು ಗುಂಪುಗಳು ಹಿಡಿದು ಥಳಿಸುವ, ಕೊಲ್ಲುವ ಪ್ರಕರಣಗಳು ಆಗಾಗ ವರದಿಯಾಗುತ್ತಿದ್ದವು. ಆದರೆ ಕಳೆದ ಐದಾರು ವರ್ಷಗಳಿಂದ ಗೋ ರಕ್ಷಣೆಯ ಹೆಸರಿನಲ್ಲಿ, ಮಕ್ಕಳ ಕಳ್ಳರೆಂಬ ವದಂತಿಯ ಹೆಸರಿನಲ್ಲಿ, ಮಾಟಮಂತ್ರ ಮಾಡುವ ಮಹಿಳೆಯ ಹೆಸರಿನಲ್ಲಿ ಗುಂಪು ದಾಳಿಗಳು ಮತ್ತು ಹತ್ಯೆಗಳು ಎಡೆಬಿಡದೆ ಜರುಗುತ್ತಿವೆ. ಕಾನೂನು ಅಸಹಾಯಕವಾಗಿದೆ. ಬಂಧಿತರು ಲೀಲಾಜಾಲವಾಗಿ ಜಾಮೀನಿನ ಮೇಲೆ ಹೊರಬೀಳುತ್ತಾರೆ, ಇಲ್ಲವೇ ಖುಲಾಸೆ ಆಗುತ್ತಿದ್ದಾರೆ. ಅಂತಹವರನ್ನು ಭಾರತ ಮಾತೆಗೆ ಜಯವಾಗಲಿ ಎಂಬ ಘೋಷಣೆ ಕೂಗಿ ಸ್ವಾಗತಿಸಲಾಗುತ್ತಿರುವ ಅಪಾಯಕಾರಿ ಪ್ರವೃತ್ತಿ ಕಂಡು ಬಂದಿದೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳ ಕಳ್ಳರ ಹೆಸರಿನಲ್ಲಿ ಅಮಾಯಕರನ್ನು ಹಾದಿ ಬೀದಿಗಳಲ್ಲಿ ನಡು ಹಗಲಲ್ಲೇ ಹಿಡಿದು ಕ್ರೂರವಾಗಿ ಜಜ್ಜಲಾಗುತ್ತಿದೆ. ಈ ಘಟನೆಗಳು ಹಿಂಸಾ ವಿನೋದ ಅಥವಾ ಹಿಂಸಾ ಮನರಂಜನೆಯ ಆಯಾಮ ತಳೆಯುತ್ತಿರುವುದು ಸಾಮಾಜಿಕ ವ್ಯಾಧಿಯೊಂದು ಹಬ್ಬುತ್ತಿರುವ ನಿಚ್ಚಳ ಲಕ್ಷಣ. ಫೇಕ್ ನ್ಯೂಸ್ ಅಥವಾ ಸುಳ್ಳು ಸುದ್ದಿಗಳಿಗೆ ಬಲಿ ಬೀಳದಂತೆ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ವಿನಂತಿಸಿಕೊಳ್ಳುತ್ತಿದ್ದಾರೆ. ವದಂತಿಗಳು ಕಾಳ್ಗಿಚ್ಚಿನಂತೆ ಹಬ್ಬಿ, ಜನ ಕಾನೂನನ್ನು ಕೈಗೆತ್ತಿಕೊಳ್ಳುವ ಕಾರಣ ಈ ಪ್ರಕರಣಗಳನ್ನು ನಿಭಾಯಿಸುವುದು ದುಸ್ತರ ಎನ್ನುತ್ತಾರೆ ಪೊಲೀಸರು.

ಗ್ರಾಮಪಂಚಾಯಿತಿ ಸದಸ್ಯರು, ಪ್ರಧಾನರು, ಗ್ರಾಮದ ಹಿರಿಯರೊಂದಿಗೆ ಸಭೆ ನಡೆಸಿ ವದಂತಿಗಳನ್ನು ನಂಬಕೂಡದೆಂದು ತಿಳಿಯಹೇಳುತ್ತಿದ್ದೇವೆ. ಮಗುವೊಂದರ ಅಪಹರಣವಾಗಿದೆ ಎಂಬ ಮಾಹಿತಿ ತಿಳಿದು ಬಂದಲ್ಲಿ 100 ನ್ನು ಡಯಲ್ ಮಾಡಿ ದೂರು ನೀಡುವಂತೆ ಹೇಳುತ್ತಿದ್ದೇವೆ. ಆದರೂ ವದಂತಿಗಳು ಹಬ್ಬುತ್ತಿವೆ ಎನ್ನುತ್ತಿದ್ದಾರೆ.

ಕಳೆದ ಒಂದು ವಾರದಲ್ಲಿ ಕೇವಲ ಪಶ್ಚಿಮೀ ಉತ್ತರಪ್ರದೇಶದ ಘಾಜಿಯಾಬಾದ್, ಡಾಸ್ನಾ, ಮೇರಠ್, ಕೈರಾಣ, ಮುಝಪ್ಫರ್ನಗರದಲ್ಲಿ ಇಂತಹ ಆರು ಪ್ರಕರಣಗಳು ವರದಿಯಾಗಿವೆ. ಮೊಮ್ಮಗನನ್ನು ಎತ್ತಿಕೊಂಡು ಹೆಜ್ಜೆ ಹಾಕುತ್ತಿದ್ದ ವಯಸ್ಸಾದ ಮಹಿಳೆಯೊಬ್ಬಳನ್ನು ಮಕ್ಕಳ ಕಳ್ಳಿಯೆಂದು ಅನುಮಾನಿಸಿ ಉತ್ತರಪ್ರದೇಶದ ಘಾಜಿಯಾಬಾದ್ ನಲ್ಲಿ ಕಳೆದ ವಾರ ಥಳಿಸಿತು. ಅಂಗಡಿಗೆ ಸಾಮಾನು ತರಲೆಂದು ಹೊರಟಿದ್ದ ಮಹಿಳೆ ಹೊರಗಿನ ಗಾಳಿ ಬಿಸಿಲು ತಾಕಿಸಲು ಮೊಮ್ಮಗನನ್ನೂ ಒಯ್ದಿದ್ದಳು. ಲೋನಿ ಠಾಣೆಯ ಪೊಲೀಸರು ಅಮಾಯಕ ಮಹಿಳೆಯನ್ನು ಥಳಿಸಿದ 25 ಮಂದಿಯ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ.

ರೈಲು ಗಾಡಿಯಲ್ಲಿ ಪಯಣಿಸುತ್ತಿದ್ದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಇದೇ ಕಾರಣಕ್ಕಾಗಿ ಶಂಕಿಸಿ ಡಾಸ್ನಾ ರೈಲು ನಿಲ್ದಾಣದಲ್ಲಿ ಹಿಡಿದು ಬಡಿದಿದ್ದಾರೆ. ರೇಲ್ವೆ ಪೊಲೀಸರು ಬಚಾವು ಮಾಡುವುದರಲ್ಲಿ ಈತನಿಗೆ ಗಂಭೀರ ಗಾಯಗಳಾಗಿದ್ದವು. ಇಬ್ಬರು ವ್ಯಕ್ತಿಗಳು ಅಪ್ರಾಪ್ತೆಯನ್ನು ಅಪಹರಿಸಿದ್ದಾರೆಂಬ ವದಂತಿಗಳ ಹರಡಿದ ಅಪಾದನೆ ಮೇರೆಗೆ ಘಾಜಿಯಾಬಾದ್ ನ ಆಕಾಶನಗರ ಪೊಲೀಸರು ನಾಲ್ವರನ್ನು ಬಂಧಿಸಿದರು. ಈ ವದಂತಿಗಳ ಮೇರೆಗೆ ಜನರ ಗುಂಪು ಇಬ್ಬರು ಅಮಾಯಕರನ್ನು ಹಿಡಿದು ಥಳಿಸಿತ್ತು. ಸುಳ್ಳು ವಾಟ್ಸ್ಯಾಪ್ ಮೆಸೇಜುಗಳು, ಸಂಬಂಧವೇ ಇಲ್ಲದ ವಿಡಿಯೋಗಳನ್ನು ಹಬ್ಬಿಸಿ ಕಿಡಿಗೇಡಿಗಳು ಜನರನ್ನು ರೊಚ್ಚಿಗೆಬ್ಬಿಸುತ್ತಿದ್ದಾರೆ ಎನ್ನುತ್ತಾರೆ ಪೊಲೀಸರು.

ಮೇರಠ್ ನ ಶಹಜಹಾನಪುರದಲ್ಲಿ ಗಿಡಮೂಲಿಕೆಗಳನ್ನು ಮಾರಲು ಬಂದಿದ್ದ ವ್ಯಕ್ತಿಯೊಬ್ಬನನ್ನು ಮಕ್ಕಳನ್ನು ಹೊತ್ತೊಯ್ಯುವನೆಂದು ಶಂಕಿಸಿ ಥಳಿಸಿದ ಸಂಬಂಧ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ. ಕೈರಾಣದಲ್ಲಿ ಮಕ್ಕಳನ್ನು ಅಪಹರಿಸಿ ಬೇರೊಂದು ರಾಜ್ಯಕ್ಕೆ ಸಾಗಿಸುತ್ತಾರೆಂಬ ವದಂತಿ ಹಬ್ಬಿಸಿ ಜನದಟ್ಟಣೆಯ ಮಾರುಕಟ್ಟೆಯ ನಡುವೆ ಐವರು ಮಹಿಳೆಯರನ್ನು ಥಳಿಸಲಾಯಿತು. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಇನ್ನಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿಸಿದವು. ಗುಜರಾತಿನ ಈ ಮಹಿಳೆಯರು ನಾರನ್ನು ಮಾರುವ ಕಸುಬಿನವರು, ನಿರಪರಾಧಿಗಳು ಎಂದು ಪೊಲೀಸರು ಹೇಳಿದ್ದಾರೆ.

ಇಬ್ಬರು ವ್ಯಕ್ತಿಗಳು ಮಗುವೊಂದನ್ನು ಅಪಹರಿಸಿದ್ದಾರೆಂದು ವದಂತಿ ಹಬ್ಬಿಸಿದ ಇಬ್ಬರಿಗೆ ಮುಝಫರ್ ನಗರದ ಪೊಲೀಸರು ದಂಡ ಹಾಕಿದ್ದಾರೆ. ಇಬ್ಬರು ಬೈಕ್ ಸವಾರ ವ್ಯಕ್ತಿಗಳು ಎಂಟು ವರ್ಷದ ಮಗುವೊಂದನ್ನು ಅಪಹರಿಸಿದ್ದಾರೆ ಎಂಬುದಾಗಿ ಅವರು ಹಬ್ಬಿಸಿದ ವದಂತಿ ಜನರಲ್ಲಿ ಗೊಂದಲ ಮತ್ತು ಗಾಬರಿಯನ್ನು ಹಬ್ಬಿಸಿತು. ಈ ಮಾಹಿತಿ ಸುಳ್ಳೆಂದು ಕಂಡು ಬಂದು ಇಬ್ಬರ ಮೇಲೆ ಕ್ರಮ ಜರುಗಿಸಿದ್ದೇವೆ ಎಂದು ಭೌರಾ ಕಲನ್ ಪೊಲೀಸರು ಹೇಳಿದ್ದಾರೆ.

ಕೂಲಿಯಾಳಾಗಿದ್ದ ಜಿತೇಂದ್ರ ಜೆ. ಎನ್. ಯು. ಚುನಾವಣೆ ಅಭ್ಯರ್ಥಿ

ದೆಹಲಿಯ ವಿಖ್ಯಾತ ಜೆ.ಎನ್.ಯು. ಗೆ (ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ) 'ರಾಷ್ಟ್ರವಿರೋಧಿ' ಹಣೆಪಟ್ಟಿ ಹಚ್ಚಿರುವ ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಿಂದ ಅಲ್ಲಿನ ವಿದ್ಯಾರ್ಥಿಗಳ ಪ್ರವೇಶಾವಕಾಶ ಮತ್ತು ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯವನ್ನು ನಿರಂತರವಾಗಿ ಮತ್ತು ವ್ಯವಸ್ಥಿತವಾಗಿ ಬೀಳುಗಳೆಯುತ್ತಿದೆ. ದೇಶದ ಮೂಲೆ ಮೂಲೆಗಳಿಂದ ಇಲ್ಲಿಗೆ ಬರುವ ಬಡ ದಲಿತ- ಆದಿವಾಸಿ ಮಕ್ಕಳಿಗೆ ಜೆ.ಎನ್.ಯು.ಬಾಗಿಲು ತೆರೆದಿರುತ್ತಿತ್ತು. ಅವರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿತ್ತು. ಈ ಅವಕಾಶಗಳು ಇದೀಗ ಬತ್ತತೊಡಗಿವೆ.

2017-18ರ ಎಂ.ಫಿಲ್ ಮತ್ತು ಪಿಎಚ್.ಡಿ. ಪ್ರವೇಶದ ಮೀಸಲಾತಿ ವಿವರಗಳು ಈ ಧೋರಣೆಗೆ ಹಿಡಿದ ಪುಟ್ಟ ಕನ್ನಡಿ. ಶೇ. 15ರಷ್ಟು ಮೀಸಲಾತಿ ದೊರೆಯಬೇಕಿದ್ದ ಪರಿಶಿಷ್ಟ ಜಾತಿಗಳಿಗೆ ವಾಸ್ತವವಾಗಿ ದೊರೆತದ್ದು ಶೇ. 1.3. ಶೇ. ಏಳೂವರೆಯ ಜಾಗದಲ್ಲಿ ಪರಿಶಿಷ್ಟ ಪಂಗಡಗಳಿಗೆ ಸಿಕ್ಕಿದ್ದು ಶೇ. 0.6. ಶೇ. 27ರಷ್ಟು ದೊರೆಯಬೇಕಿದ್ದ ಓ.ಬಿ.ಸಿ.ಗಳಿಗೆ ದಕ್ಕಿದ್ದು ಶೇ. 8.2 ಮಾತ್ರ. ಸೀಟುಗಳ ಸಂಖ್ಯೆಯಲ್ಲಿ ಶೇ. 83ರಷ್ಟು ಕಡಿತ ಮಾಡಲಾಗಿದೆ.

ಜೆ.ಎನ್.ಯು ವಿದ್ಯಾರ್ಥಿ ಸಂಘದ ಚುನಾವಣೆಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಕೂಡ ಬಹುತೇಕ ಅತ್ಯಂತ ತಳವರ್ಗಗಳಿಗೆ ಸೇರಿದವರು. ಕನ್ಹಯ್ಯ ಕುಮಾರ್ ಕೂಡ ಇಂತಹುದೇ ಹಿನ್ನೆಲೆಯಿಂದ ಬಂದಾತ. ಜೆ.ಎನ್.ಯು.ಇತಿಹಾಸದಲ್ಲಿ ಇಂತಹ ನಿದರ್ಶನಗಳು ಹೇರಳ. ದುಸ್ತರದ ದಿನಗಳಲ್ಲಿ ಈ ವರ್ಷವೂ ಅಂತಹುದೇ ಉದಾಹರಣೆಯೊಂದು ಎದ್ದು ಬಂದಿದೆ.

29 ವರ್ಷ ವಯಸ್ಸಿನ ಜಿತೇಂದ್ರ ಸೂನ ಹತ್ತು ವರ್ಷಗಳ ಹಿಂದೆ ದಿಲ್ಲಿಯ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ನಲ್ಲಿ ಗ್ಯಾಸ್ ಸ್ಟೊವ್ ಗಳನ್ನು ರಿಪೇರಿ ಮಾಡುತ್ತಿದ್ದ. ರಸ್ತೆಯಡಿಗಳ ಪೈಪುಗಳು ಒಡೆದರೆ ಗುಂಡಿ ತೋಡುತ್ತಿದ್ದ. ಒಡಿಶಾದ ಕಾಳಹಂಡಿ ಜಿಲ್ಲೆಯ ಬಡ ತಂದೆ ತಾಯಿಗಳ ಮಗ. ಎಂಟನೆಯ ತರಗತಿಯಲ್ಲಿದ್ದಾಗ ತಾಯಿ ತೀರಿ ಹೋದಳು. ಇತರರ ಭತ್ತದ ಗದ್ದೆಗಳಲ್ಲಿ ಕೂಲಿ ಮಾಡಿ ದಿನಕ್ಕೆ 30-40 ರುಪಾಯಿ ಸಂಪಾದಿಸುತ್ತಿದ್ದ. ಮನರೇಗ ಯೋಜನೆಯಡಿ ಉದ್ಯೋಗ ಗಿಟ್ಟಿಸಿ ನೆಲ ಅಗೆದು ದಿನಕ್ಕೆ 100-150 ರುಪಾಯಿ ಕೂಲಿ ಗಳಿಸಿದ್ದ.

ಹೊಟ್ಟೆಪಾಡಿಗೆಂದು ದೆಹಲಿ ತಲುಪಿ ಕೂಲಿ ನಾಲಿ ಮಾಡುತ್ತಲೇ ಪದವಿ ಗಳಿಸಿದ. 2013ರಲ್ಲಿ ಜೆ.ಎನ್.ಯು ಪ್ರವೇಶ ಪರೀಕ್ಷೆ ಪಾಸು ಮಾಡಿದ. ಇದೀಗ ಪಿ. ಎಚ್. ಡಿ. ಮಾಡುತ್ತಿರುವ ಆತ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹುದ್ದೆಗೆ ಬಿರ್ಸಾ ಅಂಬೇಡ್ಕರ್ ಫುಲೆ ವಿದ್ಯಾರ್ಥಿ ಸಂಘಟನೆಯಿಂದ (BAPSA) ಸ್ಪರ್ಧಿಸಿದ್ದಾನೆ.

ಬಡತನವನ್ನು ಸಹಾನುಭೂತಿಯಿಂದ ಕಾಣುವ ಮಾನವೀಯ ಗುಣವನ್ನು ಜೆ.ಎನ್.ಯು. ಕಲಿಸಿಕೊಡುತ್ತದೆ. ಅಲ್ಲಿ ಕಲಿಯುವುದೇ ಒಂದು ಹೆಮ್ಮೆಯ ವಿಷಯ ಎಂದು ಗುಜರಾತ್ ಸರ್ಕಾರದ ಮುಖ್ಯಕಾರ್ಯದರ್ಶಿ ಜೆ. ಎನ್. ಸಿಂಗ್ ಕಳೆದ ವರ್ಷ ಹೇಳಿದ್ದರು. ಅವರ ಮಾತನ್ನು ಅದೇ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ ಮೋಹನ್ ಝಾ ಅನುಮೋದಿಸಿದ್ದರು. ಮುಂಬರುವ ದಿನಗಳಲ್ಲಿ ತಳವರ್ಗಗಳ ವಿದ್ಯಾರ್ಥಿಗಳ ಪಾಲಿಗೆ ಜೆ.ಎನ್.ಯು. ಕನಸಿನ ಗಂಟಾಗಿ ಉಳಿಯುವ ಸೂಚನೆಗಳು ನಿಚ್ಚಳವಾಗತೊಡಗಿವೆ.

ಉತ್ತರದಲ್ಲಿ ನೌಕರರ ಹೆಲಿಕಾಪ್ಟರ್ ಹುಚ್ಚು!

ತಾಸಿಗೆ 90 ಸಾವಿರ ರುಪಾಯಿ ಬಾಡಿಗೆಯಂತೆ ಮೂರು ತಾಸಿನ ಹೆಲಿಕಾಪ್ಟರ್ ಹಾರಾಟ ಮತ್ತು ಹೆಲಿಪ್ಯಾಡ್ ನಿರ್ಮಾಣಕ್ಕೆ ಮೂರೂಕಾಲು ಲಕ್ಷ ರುಪಾಯಿ ವೆಚ್ಚ ಮಾಡಿದ ಹರಿಯಾಣದ ಸರ್ಕಾರಿ ಶಾಲೆಯ 'ಜವಾನ' ಕುದೇರಾಮ್ ಪ್ರಸಂಗವನ್ನು ಈ ಅಂಕಣ ಇತ್ತೀಚೆಗೆ ದಾಖಲು ಮಾಡಿತ್ತು. ಇಂತಹುದೇ ಮತ್ತಷ್ಟು ಪ್ರಕರಣಗಳು ವರದಿಯಾಗಿ ಬೆರಗು ಹುಟ್ಟಿಸತೊಡಗಿವೆ.

ರಾಜಸ್ತಾನದ ಅಲ್ವರ್ ಜಿಲ್ಲೆಯ ಶಾಲಾ ಶಿಕ್ಷಕ ರಮೇಶ್ ಚಂದ್ ಮೀಣಾ ಮೊನ್ನೆ ನಿವೃತ್ತಿಯ ದಿನದಂದು 22 ಕಿ.ಮೀ.ದೂರದ ಸ್ವಗ್ರಾಮಕ್ಕೆ ಪತ್ನಿಯೊಡಗೂಡಿ ಹೆಲಿಕಾಪ್ಟರ್ ಪ್ರಯಾಣ ಕೈಗೊಂಡ. ಹೆಲಿಕಾಪ್ಟರ್ ಹತ್ತುವುದು ಆತನ ಪತ್ನಿಯ ಕನಸಾಗಿತ್ತಂತೆ. 3.7 ಲಕ್ಷ ರುಪಾಯಿ ಖರ್ಚು ಮಾಡಿ ಕನಸನ್ನು ನನಸು ಮಾಡಿಕೊಂಡರು ಈ ದಂಪತಿಗಳು. ಶಾಲೆಯಿಂದ ಹೆಲಿಪ್ಯಾಡ್ ತನಕ ಅವರನ್ನು ಬಾಜಾ ಬಜಂತ್ರಿ, ಪಟಾಕಿ ಸದ್ದಿನ ಸಂಭ್ರಮದಲ್ಲಿ ಕರೆದೊಯ್ಯಲಾಯಿತು. ಹಳ್ಳಿಯಲ್ಲಿ ಇಳಿಯುವ ಮುನ್ನ ಒಂದು ಸುತ್ತು ಹಾಕಿ ನೆರೆದಿದ್ದ ಜನರ ಮೇಲೆ ಹೂಮಳೆ ಕರೆಯಿತು ಹೆಲಿಕಾಪ್ಟರ್.

http://www.truthprofoundationindia.com/

ಉತ್ತರಪ್ರದೇಶದ ಘಾಜಿಯಾಬಾದ್ ಮಹಾನಗರಪಾಲಿಕೆಯ ನೀರುಪೂರೈಕೆ ವಿಭಾಗದ ನೌಕರ ನರೇಂದ್ರ ಕುಮಾರ ಕಶ್ಯಪ ಕೂಡ ತನ್ನ ನಿವೃತ್ತಿಯ ದಿನದಂದು ಹೆಲಿಕಾಪ್ಟರಿನಲ್ಲಿ ತನ್ನ ಸ್ವಗ್ರಾಮದ ಮನೆಗೆ ಮರಳಲಿದ್ದಾನೆ. ಹದಿನೈದು ನಿಮಿಷಗಳ ಪಯಣಕ್ಕಾಗಿ ನಾಲ್ಕು ಲಕ್ಷ ರುಪಾಯಿ ವೆಚ್ಚ ಮೂಡಲು ಈತನಿಗೆ ಯಾವ ಅಳುಕೂ ಇಲ್ಲ. ಕಶ್ಯಪನ ಬದುಕಿನಲ್ಲೂ ಇದೇ ಮೊದಲ ಗಗನಯಾನ. ಪಂಪ್ ಆಪರೇಟರ್ ಕಶ್ಯಪನಿಗೆ ನಿವೃತ್ತಿಯ ದಿನದಂದು16 ಲಕ್ಷ ರುಪಾಯಿ ಕೈ ಸೇರಲಿದೆ. ಮಕ್ಕಳು ಕುಡುಕರು. ಹಣ ಕೈಗೆ ಸಿಕ್ಕರೆ ಉಡಾಯಿಸುತ್ತಾರೆ. ಹೆಣ್ಣು ಮಕ್ಕಳ ಮದುವೆ ಮಾಡಿದ್ದೇನೆ. ನನಗೆ ಯಾವ ಜವಾಬ್ದಾರಿಗಳೂ ಇಲ್ಲ ಎನ್ನುತ್ತಾನೆ. ಅಂದಿನ ದಿನ ಇಷ್ಟಮಿತ್ರರನ್ನು ಔತಣಕ್ಕೆ ಕರೆದಿದ್ದಾನೆ. ಅದಕ್ಕಾಗಿ ಆಹ್ವಾನ ಪತ್ರಿಕೆಗಳನ್ನು ಅಚ್ಚು ಮಾಡಿ ಹಂಚಿದ್ದಾನೆ ಕೂಡ.

ಕುರಿ ಮೇಯಿಸುತ್ತಾಳೆ ಮಾಜಿ ಜಿ.ಪಂ. ಅಧ್ಯಕ್ಷೆ!

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಕೆಂಪು ದೀಪದ ಕಾರಿನಲ್ಲಿ ತಿರುಗುತ್ತಿದ್ದ ಆದಿವಾಸಿ ಮಹಿಳೆ ಜೂಲಿ, ಇಂದು ಹೊಟ್ಟೆ ಹೊರೆಯಲು ಹಳ್ಳಿಯ ಮನೆಗಳ ಕುರಿ ಮೇಯಿಸುತ್ತಿದ್ದಾಳೆ. ಒಂದು ಕುರಿಗೆ ತಿಂಗಳೊಂದಕ್ಕೆ 50 ರುಪಾಯಿ ಕೂಲಿ. ಸ್ವಂತ ಮನೆ ಕೂಡ ಇಲ್ಲ. ಹತ್ತು ವರ್ಷಗಳ ಹಿಂದೆ ಆಕೆ ಮಧ್ಯಪ್ರದೇಶದ ಶಿವಪುರಿ ಜಿಲ್ಲಾ ಪಂಚಾಯಿತಿಯ ಸದಸ್ಯೆಯಾಗಿ ಅಧ್ಯಕ್ಷೆಯೂ ಆಗಿದ್ದುಂಟು.

ರಾಜ್ಯ ಮಂತ್ರಿ ದರ್ಜೆಯನ್ನು ಅನುಭವಿಸುತ್ತಿದ್ದ ಜೂಲಿಯನ್ನು ಅಂದು ಹಿರಿಯ ಅಧಿಕಾರಿಗಳು ಮತ್ತು ಸರ್ಕಾರಿ ಕರ್ಮಚಾರಿಗಳು 'ಮೇಡಂ' ಎಂದು ಸಂಬೋಧಿಸುತ್ತಿದ್ದರು. ಇಂದು ಅದೇ ಜಿಲ್ಲೆಯ ಬದರವಾಸ್ ತಾಲ್ಲೂಕಿನ ರಾಮಪುರಿ ಗ್ರಾಮದ ಲುಹಾರಪುರ ಬಸ್ತಿಯ ಹಸಿ ಮಣ್ಣಿನ ಮನೆಯಲ್ಲಿ 'ಅಜ್ಞಾತವಾಸ' ಆಕೆಯದು.

ಕೂಲಿ ಹುಡುಕಿಕೊಂಡು ಗುಜರಾತಿಗೆ ಹೋಗುವುದಿದೆ. ಬಡತನದ ರೇಖೆಯ ಕೆಳಗೆ ಜೀವಿಸುವ ಜೂಲಿಗೆ ಇಂದಿರಾ ಆವಾಸ ಯೋಜನೆಯಡಿ ಮನೆ ಮಂಜೂರಾಗಿದ. ಇನ್ನೂ ಕೈಗೆ ಬಂದಿಲ್ಲ.

Click here to follow us on Facebook , Twitter, YouTube, Telegram

Pratidhvani
www.pratidhvani.com