ಹಿಂದೀ ಮಂದಿ: ದಕ್ಷಿಣಕ್ಕೊಂದು ಉತ್ತರದ ಕಿಟಕಿ  
ಹಿಂದಿ-ಮಂದಿ

ಹಿಂದೀ ಮಂದಿ: ದಕ್ಷಿಣಕ್ಕೊಂದು ಉತ್ತರದ ಕಿಟಕಿ  

ತೀವ್ರ ದೈಹಿಕ ಚಿತ್ರಹಿಂಸೆಯಕೂಪಗಳಾದ ಹರಿಯಾಣ ಜೈಲುಗಳು ಹಾಗೂ ಹಸಿದ ಶಾಲಾ ಮಕ್ಕಳಿಗೆ ಉಪ್ಪು-ರೊಟ್ಟಿ, ಉಪ್ಪು-ಅನ್ನ ನೀಡುತ್ತಿರುವಉತ್ತರ ಪ್ರದೇಶ ಸರ್ಕಾರದ ನಡೆ ಈ ವಾರದ ಹಿಂದೀ ಮಂದಿ ವಿಶೇಷ.

ಡಿ ಉಮಾಪತಿ

ಚಿತ್ರಹಿಂಸೆಯ ಕೂಪಗಳಾದ ಹರಿಯಾಣ ಜೈಲುಗಳು!

ಪೊಲೀಸ್ ಕಸ್ಟಡಿಯಲ್ಲಿದ್ದ ಆ ನಾಲ್ಕು ದಿನಗಳನ್ನು ಬದುಕಿಡೀ ಮರೆಯಲಾರೆ. ಎಡೆಬಿಡದ ಲಾಠಿ ಹೊಡೆತ ಮಾತ್ರವಲ್ಲ, ನನ್ನ ಗುಪ್ತಾಂಗಕ್ಕೆ ಹಗ್ಗ ಕಟ್ಟಿ ಇನ್ನೊಂದು ತುದಿಗೆ ಇಟ್ಟಿಗೆ ನೇತಾಡಿಸಿದರು. ಕುಮಾರ್ ಎಂಬಾತನ ಕತೆಯಿದು. ಹರಿಯಾಣ ಪೊಲೀಸರು ಆತನನ್ನು ತೀವ್ರ ಚಿತ್ರಹಿಂಸೆಗೆ ಗುರಿಪಡಿಸಿದ್ದರು. ಗುಪ್ತಾಂಗಕ್ಕೆ ಉಂಟಾದ ಗಂಭೀರ ಸ್ವರೂಪದ ಆಂತರಿಕ ಗಾಯಗಳಿಂದಾಗಿ ಆತ ಸರಿಯಾಗಿ ನಡೆಯಲಾರದೆ ಹೋದ. ನ್ಯಾಯಾಂಗ ವಶದಲ್ಲೇ ಎರಡು ಶಸ್ತ್ರಚಿಕಿತ್ಸೆಗಳಾದವು.

ಕುಮಾರನ ಚಿತ್ರಹಿಂಸೆಯ ಈ ಬವಣೆ ಆತನೊಬ್ಬನದೇ ಅಲ್ಲ, ಹರಿಯಾಣದ ಪೊಲೀಸ್ ಕಸ್ಟಡಿಗೆ ಸಿಕ್ಕ ನೂರಾರು ಆರೋಪಿಗಳ ಬವಣೆ. ಹರಿಯಾಣದ ಜೈಲುಗಳ ಸ್ಥಿತಿಗತಿಗಳ ಕುರಿತು ಅಧ್ಯಯನ ವರದಿಯೊಂದನ್ನು-Inside Haryana Prisons- ಹೊರತಂದಿರುವ ಕಾಮನ್ವೆಲ್ತ್ ಮಾನವ ಹಕ್ಕುಗಳ ಸಂಸ್ಥೆಯು (ಸಿ.ಎಚ್.ಆರ್.ಐ), ಈ ವಿಷಯಕ್ಕೆ ವಿಶೇಷ ಅಧ್ಯಾಯವನ್ನೇ ಮೀಸಲಿರಿಸಿದೆ. ಅಧ್ಯಯನ ವರದಿಯ ವ್ಯಾಪ್ತಿಯಲ್ಲಿ ಚಿತ್ರಹಿಂಸೆಯ ಸಂಗತಿ ಇರಲಿಲ್ಲ. ಆದರೆ ಈ ಜೈಲುಗಳಿಗೆ ಭೇಟಿ ನೀಡಿದಾಗ ಹರಿದ ಈ ನೋವಿನ ಕತೆಗಳನ್ನು ದಾಖಲು ಮಾಡಿ ಸಂಬಂಧಪಟ್ಟವರ ಗಮನಕ್ಕೆ ತರಬೇಕೆನಿಸಿತು ಎಂದು ವರದಿ ತಯಾರಿಸಿದ ಸಬಿಕಾ ಅಬ್ಬಾಸ್ ಮತ್ತು ಮಧುರಿಮಾ ಧಾನುಕ ಹೇಳಿದ್ದಾರೆ. ಈ ಅಧ್ಯಯನವನ್ನು ಮಾಡಿಸಿದ್ದು ಹರಿಯಾಣ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ.

ಗುಪ್ತಾಂಗಕ್ಕೆ ಇಟ್ಟಿಗೆ ನೇತಾಡಿಸುವುದು, ಎಲೆಕ್ಟ್ರಿಕ್ ಶಾಕ್ ನೀಡುವುದು, ಹೆಣ್ಣುಮಕ್ಕಳಿಗೆ ರೇಪ್ ಬೆದರಿಕೆ ಹಾಕುವುದು, ಲೈಂಗಿಕ ಹಲ್ಲೆ ಮಾಡುವುದು, ಬೆತ್ತಲೆ ನೇತು ಹಾಕುವುದು, ತಲೆಕೆಳಗಾಗಿ ನೇತು ಹಾಕುವುದು, ಕಪಾಳಕ್ಕೆ ಬಾರಿಸುವುದು, ಅಂಗಾಲುಗಳ ಮೇಲೆ ಲಾಠಿ ಬಡಿತ, ತಲೆಯ ಮೇಲೆ ಸತತ ಚಪ್ಪಲಿ ಪ್ರಹಾರ, ಮುಖದ ಮೇಲೆ ನೀರು ಸುರಿಯುವುದು, ಮೂಗಿನ ಹೊಳ್ಳೆಗಳಿಗೆ ತೀವ್ರ ಒತ್ತಡದಲ್ಲಿ ನೀರು ನುಗ್ಗಿಸುವುದು, ತಲೆಯನ್ನು ನೀರಲ್ಲಿ ಮುಳುಗಿಸಿ ಉಸಿರು ಕಟ್ಟಿಸುವುದು, ಹೆಣ್ಣುಮಕ್ಕಳ ಗುಪ್ತಾಂಗಗಳ ಮುಟ್ಟುವುದು, ಗುಪ್ತಾಂಗಗಳಲ್ಲಿ ಖಾರದ ಪುಡಿ ಹಾಕುತ್ತೇನೆಂದು ಬೆದರಿಕೆ ಹಾಕುವುದು, ನಿದ್ರಿಸಲು ಬಿಡದಿರುವುದು, ತೊಡೆಗಳ ಮೇಲೆ ಲಾಠಿಯನ್ನಿಟ್ಟು ಮೇಲೆ ನಿಂತು ಒತ್ತಡ ಹಾಕಿ ಉರುಳಿಸುವುದು, ಕೆಟ್ಟ ಬೈಗುಳ ಬಳಕೆ ಇತ್ಯಾದಿ. ಇವೆಲ್ಲ ವಿಶೇಷವಾಗಿ ಹರಿಯಾಣ ಪೊಲೀಸರ ಕ್ರಿಮಿನಲ್ ಇನ್ವೆಸ್ಟಿಗೇಶನ್ ಏಜೆನ್ಸಿಯ (ಸಿಐಎ) ಕಾರನಾಮೆಗಳು.

ಈ ಚಿತ್ರಹಿಂಸೆಗಳು ಹರಿಯಾಣಕ್ಕೆ ಮಾತ್ರವೇ ಸೀಮಿತ ಅಲ್ಲ, ಇನ್ನೂ ಕ್ರೂರ ರೀತಿಯ ಚಿತ್ರಹಿಂಸೆಗಳು ದೇಶದ ಹಲವು ಜೈಲುಗಳಲ್ಲಿ ಸರ್ವೇಸಾಮಾನ್ಯ. ಆದರೆ ಅವುಗಳಿಗೆ ಅಧಿಕೃತ ರೂಪ ಸಿಗುವುದು ಇಂತಹ ವರದಿಗಳು ಹೊರಬಿದ್ದಾಗ ಮಾತ್ರ. ದೇಶದ ಬಹುತೇಕ ಜೈಲುಗಳು ಇಂತಹ ಅಧ್ಯಯನಗಳ ಪರಿಧಿಯಿಂದ ದೂರವೇ ಉಳಿದಿವೆ. ಅವುಗಳ ನಾಲ್ಕು ಗೋಡೆಗಳ ನಡುವೆ ಏನೆಲ್ಲ ಕ್ರೌರ್ಯಗಳು ಜರುಗುತ್ತವೆ ಎಂಬುದು ಆಯಾ ಕೈದಿಗಳು ಹೊರಬಂದು ದಾಖಲಿಸಿದಾಗ ಮಾತ್ರವೇ ಹೊರಜಗತ್ತಿಗೆ ತಿಳಿಯುತ್ತದೆ. ಆದರೆ ಹಾಗೆ ದಾಖಲಿಸುವವರಾದರೂ ಎಷ್ಟು ಮಂದಿ?

<i>ಸಾಂದರ್ಭಿಕ</i><i> </i><i>ಚಿತ್ರ: ಕುಟುಂಬದವರು ತಮ್ಮ ಮನೆಯ ವ್ಯಕ್ತಿಯನ್ನು ಪಂಜಾಬಿನ ಅಮೃತ್ ಸರ್ ನಗರದ ಜೈಲಿನಲ್ಲಿ ನೋಡುತ್ತಿರುವ ದೃಶ್ಯ</i><i></i>
<i>ಸಾಂದರ್ಭಿಕ</i><i> </i><i>ಚಿತ್ರ: ಕುಟುಂಬದವರು ತಮ್ಮ ಮನೆಯ ವ್ಯಕ್ತಿಯನ್ನು ಪಂಜಾಬಿನ ಅಮೃತ್ ಸರ್ ನಗರದ ಜೈಲಿನಲ್ಲಿ ನೋಡುತ್ತಿರುವ ದೃಶ್ಯ</i><i></i>

ಸಬಿಕಾ ಮತ್ತು ಮಧುರಿಮಾ ಅವರು ಹರಿಯಾಣದ 19 ಜೈಲುಗಳ 475 ಕೈದಿಗಳನ್ನು ಮಾತಾಡಿಸಿದ್ದಾರೆ. ಅವರ ಪೈಕಿ 227 ಕೈದಿಗಳು ತಮ್ಮ ಮೇಲೆ ಅಮಾನುಷ ಕ್ರೌರ್ಯ ನಡೆಯಿತೆಂದೂ, ಈ ಕ್ರೌರ್ಯ ನಡೆಸಿದವರು ಯಾರಿಗೂ ಉತ್ತರದಾಯಿ ಅಲ್ಲ ಎಂಬ ಸಂಗತಿ ಇರುವುದನ್ನೂ ತೋಡಿಕೊಂಡಿದ್ದಾರೆ.

ಈ ಅಧ್ಯಯನವನ್ನು ಸುಪ್ರೀಂ ಕೋರ್ಟಿನ ಮೂವರು ನ್ಯಾಯಮೂರ್ತಿಗಳು, ಹರಿಯಾಣದ ಮುಖ್ಯಮಂತ್ರಿ, ಪಂಜಾಬ್ ಹರಿಯಾಣ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಹಾಗೂ ಜೈಲು- ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದೆ.

ಪೊಲೀಸ್ ಕಸ್ಟಡಿಯಲ್ಲಿ ನೀಡಲಾಗುವ ಈ ಚಿತ್ರಹಿಂಸೆಯ ವಿಧಾನಗಳು ಆರೋಪಿಯ ಮೈಮೇಲೆ ಎದ್ದು ಕಾಣುವ ಯಾವುದು ಗುರುತು ಅಥವಾ ಕಲೆಯನ್ನು ಉಳಿಸುವುದಿಲ್ಲ. ಹೀಗಾಗಿ ಆರೋಪಿ ದೂರು ನೀಡಿದರೂ ಅದನ್ನು ಸಾಬೀತು ಮಾಡುವುದು ಕಷ್ಟ.

ಅಂಬಾಲ ಕೇಂದ್ರ ಕಾರಾಗೃಹದಲ್ಲಿ ಜಸ್ಜೀತ್ ಎಂಬ ಕೈದಿಯನ್ನು ಎಂಟು ದಿನಗಳ ಕಾಲ ತೀವ್ರ ದೈಹಿಕ ಚಿತ್ರಹಿಂಸೆಗೆ ಗುರಿಪಡಿಸಲಾಯಿತು. ಎಲೆಕ್ಟ್ರಿಕ್ ಶಾಕ್ ಗಳು, ಪದೇ ಪದೇ ತಲೆಯ ಮೇಲೆ ಚಪ್ಪಲಿ ಹೊಡೆತ, ಮೂಗಿನ ಹೊಳ್ಳೆಗಳಿಗೆ ಮೇಲ್ಮುಖವಾಗಿ ನೀರು ನುಗ್ಗಿಸಲಾಯಿತು. ಪಾಣಿಪತ್ ಜೈಲಿನ ಸಲ್ಮಾನ್ ದು ಇದೇ ಕತೆ. ಅಂಗಾಲುಗಳ ಮೇಲೆ ಲಾಠಿ ಬಡಿತ, ಮೂಗಿನ ಹೊಳ್ಳೆಗಳಿಗೆ ಮೇಲ್ಮುಖವಾಗಿ ನೀರು ನುಗ್ಗಿಸುವಿಕೆ, ಗುಪ್ತಾಂಗಕ್ಕೆ ಎಲೆಕ್ಟ್ರಿಕ್ ಶಾಕ್ ನೀಡಿಕೆ. ತಾನು ಮಾಡದಿರುವ ಅಪರಾಧವನ್ನು ಮಾಡಿದ್ದೇನೆಂದು ಒಪ್ಪಿಕೊಳ್ಳುವಂತೆ ಅವನ ಮೇಲೆ ಈ ಬಲಾತ್ಕಾರ ಜರುಗಿತ್ತು. ಸುಮಿತ್ ಎಂಬಾತನನ್ನು ಬೆತ್ತಲು ಮಾಡಿ ಎಂಟು ದಿನಗಳ ಕಾಲ ಪದೇ ಪದೇ ತಲೆಕೆಳಗಾಗಿ ನೇತು ಹಾಕಲಾಯಿತು. ಲಾಠಿಯಿಂದ ಬಡಿಯಲಾಯಿತು. ಮುಖವನ್ನು ನೀರಿನಲ್ಲಿ ಮುಳುಗಿಸಲಾಗುತ್ತಿತ್ತು. ದೈಹಿಕ ಹಿಂಸೆಗಿಂತಲೂ ಹೆಚ್ಚಾಗಿ ಮಾನವ ಘನತೆಯ ಮೇಲೆ ದಾಳಿ ನಡೆಸಿ ಮಾಡುವ ಅವಹೇಳನ ಬದುಕಿಡೀ ದುಃಸ್ವಪ್ನದಂತೆ ಕಾಡುತ್ತದೆ ಎನ್ನುತ್ತಾನೆ ಆತ.

<a href="http://www.truthprofoundationindia.com/">www.truthprofoundationindia.com</a>

ಕುಡಿದ ಮತ್ತಿನಲ್ಲಿದ್ದ ಪೊಲೀಸರು ನನ್ನನ್ನು ನೆಲದ ಮೇಲೆ ಬೆತ್ತಲೆ ಮಲಗಿಸಿ ಗುಪ್ತಾಂಗಗಳನ್ನು ಮುಟ್ಟಿದರು. ಪ್ರತಿಭಟಿಸಿದರೆ ಎಲೆಕ್ಟ್ರಿಕ್ ಶಾಕ್ ಮತ್ತು ಮುಖವನ್ನು ನೀರಿನಲ್ಲಿ ಮುಳುಗಿಸಿ ಹಿಂಸಿಸುತ್ತಿದ್ದರು. ಲಾಠಿಗಳಿಂದ ಹೊಡೆಯುತ್ತಿದ್ದರು ಎನ್ನುತ್ತಾಳೆ ರೀಮಾ. ಆಕೆಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡ ಏಳು ದಿನಗಳಾದರೂ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಿಲ್ಲ. 39 ವರ್ಷದ ಜೈನಾಬ್ ಳಿಗೆ ರೇಪ್ ಬೆದರಿಕೆ ಹಾಕಲಾಯಿತು. ಪುರುಷ ಪೊಲೀಸರ ಎದುರು ಆಕೆಯ ಸಲ್ವಾರನ್ನು ಬಿಚ್ಚಲಾಯಿತು.

ಕಸ್ಟಡಿಯ ಮೂರೂ ದಿನ ಸತತ ಚಿತ್ರಹಿಂಸೆಗೆ ಗುರಿಯಾದ ನೋವಿನ ಕತೆ ಇಂದುವಿನದು. ರಾತ್ರಿ ಮಾತ್ರವೇ ಆಕೆಯನ್ನು ಲಾಕಪ್ ಗೆ ಕಳಿಸಲಾಗುತ್ತಿತ್ತು. ಪೊಲೀಸನೊಬ್ಬ ನನ್ನ ತೊಡೆಯ ಮೇಲೆ ಕಾಲಿಟ್ಟು ನಿಂತು ರೇಪ್ ಮಾಡುವುದಾಗಿಯೂ, ಯೋನಿಗೆ ಖಾರದ ಪುಡಿ ತುಂಬುವುದಾಗಿಯೂ ಬೆದರಿಸಿದ.

ಮೂರು ದಿನ ಎಲೆಕ್ಟ್ರಿಕ್ ಶಾಕ್ ಗಳು ಮತ್ತು ಲಾಠಿ ಏಟುಗಳು. ಮ್ಯಾಜಿಸ್ಟ್ರೇಟ್ ಮುಂದೆಯಾಗಲಿ ಮತ್ತು ದೈಹಿಕ ಪರೀಕ್ಷೆ ನಡೆಸಿದ ವೈದ್ಯರ ಮುಂದಾಗಲಿ ಚಿತ್ರಹಿಂಸೆಯ ಕುರಿತು ಬಾಯಿ ಬಿಡಲಿಲ್ಲ. ಹೇಳಿದರೆ ಮತ್ತಷ್ಟು ಹಿಂಸೆ ಮಾಡುತ್ತಾರೆಂಬ ಭಯ ಎಂದಾಕೆ ಆಂಚಲ್. ಮ್ಯಾಜಿಸ್ಟ್ರೇಟ್ ಕೂಡ ಆಕೆಯ ಸ್ಥಿತಿಗತಿ ಕುರಿತು ಏನನ್ನೂ ಕೇಳಲಿಲ್ಲ.

ಹರಿಯಾಣದಲ್ಲಿ ಸಿಐಎ ರೂಪದಲ್ಲಿ ಚಿತ್ರಹಿಂಸೆಯನ್ನು ಸಾಂಸ್ಥೀಕರಿಸಲಾಗಿದೆ, ಸಿಐಎ ಸಿಬ್ಬಂದಿ ಬಾಯಿಬಿಡಿಸುವುದರಲ್ಲಿ (Interrogation) ನಿಷ್ಣಾತರು ಎನಿಸಿಕೊಂಡಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸಿಐಎ ಘಟಕ ಇದೆ.  ‘ಭಾರತದಲ್ಲಿ ಜನತಾಂತ್ರಿಕ ಹಕ್ಕುಗಳ ಉಲ್ಲಂಘನೆ’ ಎಂಬ ತಮ್ಮ ಪುಸ್ತಕದಲ್ಲಿ ಎ.ಆರ್. ದೇಸಾಯಿ ಹೇಳಿದ್ದಾರೆ.

ಈ ನೋವಿನ ಕತೆಗಳು ಹಲವು ಕಾಯಿದೆ ಕಾನೂನುಗಳ ಉಲ್ಲಂಘನೆಯತ್ತ ಬೆರಳು ಮಾಡುತ್ತವೆ. ತಮ್ಮ ಬಂಧನದ ನಂತರ ಪೊಲೀಸ್ ಚಿತ್ರಹಿಂಸೆಗೆ ಗುರಿಯಾದ ಕುರಿತ ಒಂದೇ ಒಂದು ದೂರನ್ನೂ ಯಾವುದೇ ಜೈಲು ಸ್ವೀಕರಿಸಿರುವ ನಿದರ್ಶನ ನಮಗೆ ಸಿಗಲಿಲ್ಲ. ಚಿತ್ರಹಿಂಸೆಗೆ ಗುರಿಯಾದ ಆರೋಪಿಗಳಿಗೆ ನೋವು ನಿವಾರಕ ಮಾತ್ರೆಗಳನ್ನು ನೀಡಲಾಯಿತು ಅಷ್ಟೇ. ಪೊಲೀಸ್ ಚಿತ್ರಹಿಂಸೆಯ ದೂರುಗಳನ್ನು ನಾವು ದಾಖಲಿಸಲಿಲ್ಲ ಎಂದು ಜೈಲು ವೈದ್ಯರು ನಮಗೆ ತಿಳಿಸಿದರು. ಗಾಯಗಳ ವೈದ್ಯಕೀಯ ದಾಖಲೆ ಇಲ್ಲದೆ ಯಾವ ವಿಚಾರಣೆ ನಡೆದೀತು? ಅಪರಾಧಿಗಳಾದ ಸಿಐಎ ಪೊಲೀಸರು ಯಾವ ಕ್ರಮವನ್ನೂ ಎದುರಿಸದೆ ಪಾರಾಗುತ್ತಾರೆ ಎಂದು ಸಿ.ಎಚ್.ಆರ್.ಐ ಅಧ್ಯಯನ ಹೇಳಿದೆ. ದೇಶದಲ್ಲಿ ಪೊಲೀಸ್ ಕಸ್ಟಡಿ ಚಿತ್ರಹಿಂಸೆ ತೀವ್ರವಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ತನ್ನ 2015-16ರ ವಾರ್ಷಿಕ ವರದಿಯನ್ನು ಉಲ್ಲೇಖಿಸಿದೆ. 2015-16ರಲ್ಲಿ ಆಯೋಗದ ತಂಡವೊಂದು ಚಿತ್ರಹಿಂಸೆ, ಪ್ರಾಣಬೆದರಿಕೆ, ನಕಲಿ ಎನ್ಕೌಂಟರ್, ಅಕ್ರಮ ಬಂಧನ, ಸುಳ್ಳು ಕೇಸುಗಳಲ್ಲಿ ಸಿಕ್ಕಿಸುವುದೇ ಮುಂತಾದ 1,827 ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳ ತನಿಖೆ ನಡೆಸುತ್ತದೆ. ಕಸ್ಟಡಿಯಲ್ಲಿ ಜರುಗುವ ಒಟ್ಟು 3,848 ಸಾವುಗಳ ಪೈಕಿ 3,606 ಸಾವುಗಳು ನ್ಯಾಯಾಂಗ ಕಸ್ಟಡಿಯಲ್ಲೂ, 242 ಸಾವುಗಳು ಪೊಲೀಸ್ ಕಸ್ಟಡಿಯಲ್ಲೂ ಸಂಭವಿಸಿವೆ. ಆಯೋಗದ ಗಮನಕ್ಕೆ ತರಲಾದ ಕೇಸುಗಳಿಗೆ ಮಾತ್ರ ಈ ಅಂಕಿ ಅಂಶಗಳು ಸಂಬಂಧಪಟ್ಟಿವೆ. ಎಲ್ಲ ಸಾವುಗಳೂ ಚಿತ್ರಹಿಂಸೆಯಿಂದಲೇ ಜರುಗಿರಲಾರವು. ಆದರೆ ತೀವ್ರ ತನಿಖೆ ಮಾಡದೆ ಯಾವುದೇ ತೀರ್ಮಾನಕ್ಕೂ ಬರಲಾಗದು ಎಂದು ಆಯೋಗ ಹೇಳಿದೆ.

ಚಿತ್ರಹಿಂಸೆ ತಡೆ ವಿಧೇಯಕವನ್ನು ಕಾಯಿದೆಯಾಗಿಸಿ ಜಾರಿ ಮಾಡುವಂತೆ ಭಾರತೀಯ ಕಾನೂನು ಆಯೋಗ ಶಿಫಾರಸು ಮಾಡಿದೆ. ಈ ಸಂಬಂಧ ಸುಪ್ರೀಂ ಕೋರ್ಟು ಕಾಲ ಕಾಲಕ್ಕೆ ನೀಡಿರುವ ಮಹತ್ವದ ತೀರ್ಪುಗಳನ್ನೂ ಕಾನೂನು ಆಯೋಗ ಉಲ್ಲೇಖಿಸಿದೆ. ಈ ವಿಧೇಯಕ ಕಾಯಿದೆಯಾಗಿ ಜಾರಿಗೆ ಬಂದರೆ ಚಿತ್ರಹಿಂಸೆಯು ಅಪರಾಧ ಎನಿಸಿಕೊಳ್ಳುತ್ತದೆ. ಪೊಲೀಸರು ಪಾರಾಗುವುದನ್ನು ತಡೆಯುತ್ತದೆ. ಈಗಾಗಲೆ ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರವೂ ಕಸ್ಟಡಿ ಚಿತ್ರಹಿಂಸೆಯನ್ನು ತಡೆಯಲು ಅವಕಾಶಗಳಿವೆ. ಆದರೆ ಮೇಲೆ ಕಾಣಿಸಿರುವ ಕಾರಣಗಳಿಗಾಗಿ ಸಾಧ್ಯವಾಗುತ್ತಿಲ್ಲ ಎಂದು ಸಿ.ಎಚ್.ಆರ್.ಐ. ಅಧ್ಯಯನ ಹೇಳುತ್ತದೆ.

  ಹಸಿದ ಮಕ್ಕಳಿಗೆ ಉಪ್ಪು-ರೊಟ್ಟಿ, ಉಪ್ಪು-ಅನ್ನ!

<i>ಸಾಂದರ್ಭಿಕ ಚಿತ್ರ</i>
<i>ಸಾಂದರ್ಭಿಕ ಚಿತ್ರ</i>

ಉತ್ತರಪ್ರದೇಶದ ಮಿರ್ಜಾಪುರದ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟದ ತಟ್ಟೆಗಳು ಕಾಣತೊಡಗಿರುವುದು ಎರಡು ಒಣರೊಟ್ಟಿಗಳು ಮತ್ತು ಚಿಟಿಕೆ ಉಪ್ಪು ಮಾತ್ರ. ಸಾಲಾಗಿ ಕುಳಿತ ಶಾಲಾ ಮಕ್ಕಳ ಮುಂದಿನ ತಟ್ಟೆಗಳಿಗೆ ತಲಾ ಎರಡು ರೊಟ್ಟಿ ಹಾಕುವ ಕೈ ಒಂದಾದರೆ, ಹಿಂದೆಯೇ ಚಿಟಿಕೆ ಉಪ್ಪನ್ನು ಹಾಕುತ್ತ ಸಾಗುವುದು ಮತ್ತೊಂದು ಕೈ. ಈ ಕೈಗಳನ್ನೇ ನೋಡುತ್ತ, ಅವುಗಳು ನೀಡುವ ರೊಟ್ಟಿ ಉಪ್ಪನ್ನೇ ಪರಮ ಪ್ರಸಾದವೆಂದು ಪಡೆಯುವ ಹಸಿದ ಅಮಾಯಕ ಮಕ್ಕಳು. ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಇತ್ತೀಚೆಗೆ ವೈರಲ್ ಆಯಿತು. ಲಕ್ಷಗಳ ಸಂಖ್ಯೆಯಲ್ಲಿ ಹರಿದ್ವಾರಕ್ಕೆ ಹೋಗಿ ಹರಕೆ ತೀರಿಸಿ ಬರುವ ಶಿವಭಕ್ತ ಕಾವಡಿಯಾಗಳ ಮೇಲೆ ಹೆಲಿಕಾಪ್ಟರುಗಳ ಮೂಲಕ ಹೂವಿನ ಮಳೆ ಸುರಿಸುವ, ಅವರಿಗೆ ಮಾರ್ಗದುದ್ದಕ್ಕೂ ನೀರು ನೆರಳು ಭಕ್ಷ್ಯಗಳ ಏರ್ಪಾಡು ಮಾಡುವ ಉತ್ತರಪ್ರದೇಶದ ಸರ್ಕಾರ ಎಳೆಯ ಮಕ್ಕಳಿಗೆ ಉಪ್ಪು ರೊಟ್ಟಿ ನೀಡುವ ನಿರ್ಮಮ ನೀತಿ ತೀವ್ರ ಟೀಕೆಗೆ ಈಡಾಯಿತು.

ಆದರೆ ನಿಲ್ಲಿ, ಮಮತಾ ದೀದಿಯ ಪಶ್ಚಿಮ ಬಂಗಾಳದಿಂದಲೂ ಇಂತಹುದೇ ವರದಿ ಇಂದು ಪ್ರಕಟವಾಗಿದೆ. ಹೂಗ್ಲಿ ಜಿಲ್ಲೆಯ ಶಾಲೆಯೊಂದರಲ್ಲಿ ಮಕ್ಕಳಿಗೆ ಅನ್ನ ಮತ್ತು ಉಪ್ಪು ಬಡಿಸುವ ಮತ್ತೊಂದು ವಿಡಿಯೋ ಬೆಳಕಿಗೆ ಬಂದಿದ್ದು, ಇಬ್ಬರು ಶಿಕ್ಷಕರನ್ನು ಸರ್ಕಾರ ಅಮಾನತುಗೊಳಿಸಿದೆ.

ಈ ಘಟನೆಯ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆಯು ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ನಿಗದಿ ಮಾಡಿರುವ ಊಟದ ವಿವರಗಳ ಸುತ್ತೋಲೆಯನ್ನು ಶುಕ್ರವಾರ ಎಲ್ಲ ಜಿಲ್ಲಾಧಿಕಾರಿಗಳಿಗೆ ರವಾನಿಸಿದೆ. ಅನ್ನ, ದಾಲ್, ಆಲೂ ಮತ್ತು ತರಕಾರಿ ಸಾರನ್ನು ಸೋಮವಾರ ಬಡಿಸಬೇಕು. ಮಂಗಳವಾರದಂದು ಅನ್ನ ದಾಲ್, ಮೊಟ್ಟೆ ಅಥವಾ ಮೀನು ಸಾರು. ಅನ್ನ ದಾಲ್ ಮಿಶ್ರ ತರಕಾರಿ ಪಲ್ಯ ಬುಧವಾರದಂದು. ಅನ್ನ ಮೊಟ್ಟೆ ಅಥವಾ ಮೀನು ಸಾರು, ತರಕಾರಿ ಪಲ್ಯ ಗುರುವಾರ. ಅನ್ನ ದಾಲ್, ಆಲೂಗೆಡ್ಡೆ ಸಾರು ಶುಕ್ರವಾರದಂದು. ಅನ್ನ ದಾಲ್, ಸೋಯಾಬೀನ್ ಮತ್ತು ಆಲೂಗೆಡ್ಡೆ ಸಾರನ್ನು ಶನಿವಾರದಂದು ಬಡಿಸುವಂತೆ ಈ ಸುತ್ತೋಲೆಯಲ್ಲಿ ಪಟ್ಟಿ ಮಾಡಲಾಗಿದೆ. ಎಲ್ಲ ಶಾಲೆಗಳಿಗೂ ಭೇಟಿ ನೀಡಿ ಈ ಪಟ್ಟಿಯ ಪ್ರಕಾರವೇ ಊಟ ನೀಡಲಾಗುತ್ತಿದೆಯೇ ಎಂಬುದಾಗಿ ಪರಿಶೀಲಿಸುವಂತೆ ಶಿಕ್ಷಣ ಇಲಾಖೆಯ ಕೆಳ ಹಂತದ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.

ಸುತ್ತೋಲೆಯಲ್ಲಿರುವುದೆಲ್ಲ ತಟ್ಟೆಗಳಲ್ಲಿ ಕಾಣುವುದೇ ಅಥವಾ ಇದೊಂದು ಸುಂದರ ಮೃಗಜಲವೇ ಬಲ್ಲವರಾರು?

Click here Support Free Press and Independent Journalism

Pratidhvani
www.pratidhvani.com