ಹಿಂದೀ ಮಂದಿ: ದಕ್ಷಿಣಕ್ಕೊಂದು ಉತ್ತರದ ಕಿಟಕಿ
ಹಿಂದಿ-ಮಂದಿ

ಹಿಂದೀ ಮಂದಿ: ದಕ್ಷಿಣಕ್ಕೊಂದು ಉತ್ತರದ ಕಿಟಕಿ

ಗಾಳಿಪಟದ ದಾರದಿಂದ ಪಕ್ಷಿಗಳಿಗಲ್ಲದೇ ಮನುಷ್ಯರ ಪ್ರಾಣಕ್ಕೂ ಸಂಚಕಾರ ಹಾಗೂ ಒಡಿಶಾದಲ್ಲಿ ಗಿರಿಜನ ವ್ಯಕ್ತಿಯೊಬ್ಬನ ಹಾಗೂ ಕ್ಷತ್ರಿಯ ಕುಟುಂಬವೊಂದರ ಬಹಿಷ್ಕಾರದ ವಿವರ ಈ ವಾರದ ಹಿಂದಿ-ಮಂದಿ ವಿಶೇಷ.

ಡಿ ಉಮಾಪತಿ

ಕೊರಳು ಕತ್ತರಿಸುವ ‘ಮಾಂಝಾ’ ಎಂಬ ಮೃತ್ಯು ಸೂತ್ರ

ಗಾಳಿಪಟ ಹಾರಿಸಲು ಬಳಸುವ ‘ಮಾಂಝಾ’ ಎಂಬ ದಾರ ಉತ್ತರ ಭಾರತದಲ್ಲಿ ಹಕ್ಕಿ ಪಕ್ಷಿಗಳು ಮತ್ತು ಮನುಷ್ಯ ಪ್ರಾಣಗಳನ್ನು ತೆಗೆಯತೊಡಗಿ ವರ್ಷಗಳೇ ಉರುಳಿವೆ. ಈ ಅನಿಷ್ಟ ಇತ್ತೀಚೆಗೆ ಬೆಂಗಳೂರಿಗೂ ಕಾಲಿಟ್ಟಿದೆ. ಗಾಜಿನಪುಡಿ ಲೇಪಿಸಿ ತಯಾರಿಸಲಾಗುವ ಈ ನೈಲಾನ್ ದಾರ ಬಲು ಬಿಗಿ. ಕತ್ತಿಯಷ್ಟೇ ಹರಿತ. ಚೀನಾದಿಂದ ಆಮದಾಗುತ್ತಿದ್ದ ‘ಸಾವುನೋವಿನ’ ಈ ದಾರವನ್ನು ಇತ್ತೀಚೆಗೆ ಭಾರತದಲ್ಲೂ ತಯಾರಾಗತೊಡಗಿದೆ.

ಗುಜರಾತ್, ಬಿಹಾರ, ಝಾರ್ಖಂಡ, ಪಶ್ಚಿಮ ಬಂಗಾಳ, ರಾಜಸ್ತಾನ ಹಾಗೂ ದೆಹಲಿಗೆ ಮಕರ ಸಂಕ್ರಾಂತಿಯಂದು ಆರಂಭ ಆಗುವ ಗಾಳಿಪಟದ ಹಬ್ಬ ವರ್ಷವಿಡೀ ಮುಗಿಯದು. ಅಹ್ಮದಾಬಾದ್, ವಡೋದರ, ಸೂರತ್, ಜೈಪುರ, ಧನಬಾದ್, ದೆಹಲಿ, ಹೈದರಾಬಾದ್ ನ ಬಾನಂಗಳ ಗಾಳಿಪಟಗಳಿಂದ ಕಿಕ್ಕಿರಿಯುತ್ತದೆ.

ಈ ಸಾವಿನ ದಾರವು ಸ್ಕೂಟರು ಮತ್ತು ಬೈಕ್ ಸವಾರರಷ್ಟೇ ಅಲ್ಲದೆ ದಾರಿಹೋಕರ ಕುತ್ತಿಗೆಯನ್ನು ಕೊಯ್ದು ಸಾವು ನೋವುಗಳು ಸಂಭವಿಸುತ್ತಲೇ ಇವೆ. ಮೊನ್ನೆ ಮೊನ್ನೆ ದೆಹಲಿಯಲ್ಲಿ ಸ್ವಾತಂತ್ರ್ಯ ದಿನೋತ್ಸವ- ರಕ್ಷಾ ಬಂಧನದ ಇಂತಹುದೇ ಗಾಳಿಪಟದ ಸಂಭ್ರಮ 28 ವರ್ಷ ವಯಸ್ಸಿನ ಸ್ಕೂಟರು ಸವಾರನ ಪ್ರಾಣವನ್ನೇ ತೆಗೆಯಿತು. ಆತನ ಕತ್ತನ್ನು ಸೀಳಿದ್ದ ಮಾಂಝಾ ದಾರ ಆಹಾರ ಮತ್ತು ಉಸಿರಾಟದ ಕೊಳವೆಗಳನ್ನು ಕತ್ತರಿಸಿ ಹಾಕಿತ್ತು. ಆಸ್ಪತ್ರೆಗೆ ತಲುಪುವ ಹೊತ್ತಿಗೆ ಆತ ಶವವಾಗಿದ್ದ. ಈ ಎರಡು ದಿನಗಳಲ್ಲಿ ಮಾಂಝಾ ದಾರದಿಂದ ಗಾಯಗೊಂಡವರ ಲೆಕ್ಕ ಸಿಕ್ಕಿಲ್ಲ.

ಈ ಅಪಾಯಕಾರಿ ದಾರ ಆಗಸದಲ್ಲಿ ಹರಿದಾಗ ಮರ ಗಿಡಗಳು ಮತ್ತು ವಿದ್ಯುತ್ ತಂತಿಗಳಲ್ಲಿ ಸಿಕ್ಕಿ ಹಾಕಿಕೊಂಡು ತೂಗಿರುತ್ತದೆ. ಪಾಪದ ಪಕ್ಷಿಗಳ ಕಾಲುಗಳು, ರಕ್ಕೆಗಳಲ್ಲಿ ತೊಡರಿಕೊಂಡು ಸಿಕ್ಕಿ ಹಾಕಿಕೊಳ್ಳುತ್ತದೆ. ಗೊತ್ತಿಲ್ಲದೆ ರೆಕ್ಕೆ ಬಡಿದು ಹಾರಲು ಮುಂದಾದರೆ ಇನ್ನಷ್ಟು ಬಿಗಿದುಕೊಂಡು ಕಾಲು ರೆಕ್ಕೆಗಳ ಕತ್ತರಿಸುತ್ತದೆ. ಅವು ಕಡೆಗೆ ರಕ್ತಸ್ರಾವದಿಂದ ಸತ್ತೇ ಹೋಗುತ್ತವೆ. ಕಸದ ರಾಶಿ ಸೇರಿದ ಮಾಂಝಾ ಕೂಡ ಅದನ್ನು ಕೆದಕುವ ಪಕ್ಷಿ ಪ್ರಾಣಿಗಳಿಗೆ ಹಾನಿಕಾರಕ.

ದೆಹಲಿಯ ಚಾಂದನಿ ಚೌಕದ ಹಕ್ಕಿಪಕ್ಷಿ ದತ್ತಿ ಆಸ್ಪತ್ರೆ ಮೊನ್ನೆ ಆಗಸ್ಟ್ 13ರಿಂದ 15ರ ನಡುವಣ ಮೂರು ದಿನಗಳಲ್ಲಿ ಮಾಂಝಾ ದಾರದಿಂದ ಗಾಯಗೊಂಡ 700 ಪಕ್ಷಿಗಳಿಗೆ ಚಿಕಿತ್ಸೆ ನೀಡಿ ಕಾಪಾಡಿತು. ಚಿಕಿತ್ಸೆಯ ನಂತರವೂ ಮರಣಿಸಿದ ಹಕ್ಕಿಗಳು 200. ಇಂತಹ ಇತರೆ ಆಸ್ಪತ್ರೆಗಳ ಅಂಕಿ ಅಂಶಗಳು ಸುಲಭ ಲಭ್ಯವಿಲ್ಲ. ಆಸ್ಪತ್ರೆಗೆ ತಾರದೆ ಸತ್ತ ತಬ್ಬಲಿ ಪಕ್ಷಿಗಳ ಸಂಖ್ಯೆಯನ್ನು ಬಲ್ಲವರು ಯಾರು?

ಅಹ್ಮದಾಬಾದ್ 1989ರಿಂದ ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಹಬ್ಬವನ್ನು ಸಂಘಟಿಸುತ್ತಿದೆ. ಅದರ ರಾಜಕೀಯ ಬೆಂಬಲ ವರ್ಷದಿಂದ ವರ್ಷಕ್ಕೆ ಹಿಗ್ಗತೊಡಗಿದೆ. 2014ರ ಹಳೆಯ ಅಂಕಿ ಅಂಶದ ಪ್ರಕಾರವೇ ಗುಜರಾತಿನಲ್ಲಿ ಗಾಳಿಪಟ ಉದ್ಯಮದ ವಹಿವಾಟು 700 ಕೋಟಿ ರುಪಾಯಿಗಳನ್ನು ಮುಟ್ಟಿತ್ತು. ಅಹ್ಮದಾಬಾದಿನ 30 ಸಾವಿರ ಮಂದಿಗೆ ಉದ್ಯೋಗ ನೀಡಿತ್ತು.

ಪಂಜಾಬ್ ನಲ್ಲಿ ಬಸಂತ್ ಪಂಚಮಿ ಹಬ್ಬದಂದು ಗಾಳಿ ಪಟ ಉತ್ಸವ
ಪಂಜಾಬ್ ನಲ್ಲಿ ಬಸಂತ್ ಪಂಚಮಿ ಹಬ್ಬದಂದು ಗಾಳಿ ಪಟ ಉತ್ಸವ

ಗುಜರಾತಿನ ಉತ್ತರಾಯಣ ಗಾಳಿಪಟ ಸಂಭ್ರಮದ ನಂತರ ಅಹ್ಮದಾಬಾದ್ ನ ವಿದ್ಯುತ್ ತಂತಿಗಳು ಮತ್ತು ವಿದ್ಯುತ್ ಸಾಗಾಟ ಗೋಪುರಗಳಿಗೆ ಸಿಕ್ಕಿಹಾಕಿಕೊಂಡ ಗಾಳಿಪಟಗಳು ಮತ್ತು ಅವುಗಳ ಮಾಂಝಾ ದಾರವನ್ನು ಬಿಡಿಸುವ ಕೆಲಸ ವಾರಗಟ್ಟಲೆ ನಡೆಯುತ್ತದೆ. ಉತ್ತರಪ್ರದೇಶದ ವಲಸೆ ಕಾರ್ಮಿಕರಿಂದ ಈ ಕೆಲಸ ಮಾಡಿಸಲಾಗುತ್ತದೆ. 30-35 ಮೀಟರುಗಳ ಎತ್ತರದ ಗೋಪುರಗಳನ್ನು ಏರಿ ಪ್ರಾಣಾಪಾಯ ಲೆಕ್ಕಿಸದೆ ಮಾಡಬೇಕಿರುವ ಕಾರ್ಯವಿದು. ದಾರಗಳು ಮತ್ತು ಪಟಗಳನ್ನು ಹಾಗೆಯೇ ಬಿಟ್ಟರೆ ಶಾರ್ಟ್ ಸರ್ಕಿಟ್ ಮುಂತಾದ ಕಾರಣಗಳಿಗಾಗಿ ವಿದ್ಯುತ್ ವ್ಯತ್ಯಯ ತಪ್ಪದು.

2010ರ ಉತ್ತರಾಯಣದಲ್ಲಿ ಗುಜರಾತಿನಲ್ಲಿ ಐವರು ಅಸುನೀಗಿದರು. ನೂರಾರು ಪಕ್ಷಿಗಳು ಸತ್ತವು ಮತ್ತು ಗಾಯಗೊಂಡವು. ಹಕ್ಕಿಗಳ ಹಾರಾಟ ದಟ್ಟವಾಗಿರುವ ಬೆಳಗಿನ ಮತ್ತು ಸಂಜೆಯ ಸಮಯ ಗಾಳಿಪಟ ಹಾರಿಸದಂತೆ ಸರ್ಕಾರ ಸಾರ್ವಜನಿಕರಲ್ಲಿ ಮನವಿ ಮಾಡಿತು.

2011ರ ಉತ್ತರಾಯಣ ಸಂದರ್ಭದ ಗಾಳಿಪಟದ ಮಾಂಝಾ ದಾರದ ಹುಚ್ಚಿಗೆ ಎಂಟು ಮಂದಿ ಬಲಿಯಾಗಿದ್ದರು. ಈ ಪೈಕಿ ನಾಲ್ಕು ವರ್ಷ ವಯಸ್ಸಿನ ಮಗುವೂ ಸೇರಿತ್ತು. 300 ಮಂದಿ ಗಾಯಗೊಂಡಿದ್ದರು. ಗಾಯಗೊಂಡ ಅಥವಾ ಸತ್ತು ಹೋದ ಹಕ್ಕಿಗಳ ಲೆಕ್ಕವನ್ನು ಯಾರೂ ಇಟ್ಟಿರಲಿಲ್ಲ. ಅದೇ ವರ್ಷ ಜೈಪುರದಲ್ಲಿ 16 ಮಂದಿ ಪ್ರಾಣ ಕಳೆದುಕೊಂಡರು. ಪಂಜಾಬಿನ ಲೂಧಿಯಾನ, ಜಗ್ರಾಂವ್, ಖನ್ನಾ ಜಿಲ್ಲೆಗಳಲ್ಲಿ ಗಾಳಿಪಟ ಹಾರಿಸುವುದನ್ನು ನಿಷೇಧಿಸಲಾಗಿತ್ತು.

ರಾಷ್ಟ್ರೀಯ ಹಸಿರು ನ್ಯಾಯಪೀಠವು ಈ ಆಪಾಯಕಾರಿ ದಾರದ ಮಾರಾಟವನ್ನು ಮೂರು ವರ್ಷಗಳ ಹಿಂದೆಯೇ ನಿಷೇಧಿಸಿತು. ಆದರೆ ಪರಿಣಾಮ ಶೂನ್ಯ. ಅಂಗಡಿಗಳಲ್ಲಿ ಸುಲಭಕ್ಕೆ ಕಣ್ಣಿಗೆ ಬೀಳದು. ಆದರೆ ಮುಕ್ತವಾಗಿ ಲಭಿಸುತ್ತಿದೆ. ಗಾಳಿಪಟ ಹಾರಿಸುವವರು ಮಾಂಝಾದ ಮೋಹಪಾಶದಿಂದ ಹೊರಬರಲು ತಯಾರಿಲ್ಲ. ಹತ್ತಿಯಿಂದ ಮಾಡಿದ ಸಾಧಾರಣ ದಾರದ ಮಾರಾಟ ಕಳೆದ ಜನವರಿ ಹೊತ್ತಿಗೆ ಶೇ.80ರಷ್ಟು ಕುಸಿದಿತ್ತು. ಗಾಜಿನಪುಡಿ ಲೇಪಿಸಿದ ಈ ಬಿಗಿ ನೈಲಾನ್ ದಾರದ ಬೆಲೆ ಸಾಧಾರಣ ಹತ್ತಿಯ ದಾರಕ್ಕಿಂತ ಬಲು ಅಗ್ಗ. ಚೈನೀಸ್ ಮಾಂಝಾ ಎಂದೇ ಹೆಸರುವಾಸಿ. ಗಾಳಿಪಟದ ಹಬ್ಬ ಕೇವಲ ಗಾಳಿಪಟ ಹಾರಿಸಿ ಉಲ್ಲಾಸಪಡುವುದಕ್ಕೆ ಸೀಮಿತ ಅಲ್ಲ. ಒಬ್ಬರ ಗಾಳಿಪಟವನ್ನು ಮತ್ತೊಬ್ಬರು ಮುಗಿಲಿನಿಂದ ನೆಲಕ್ಕೆ ಕೆಡಹುವ ಕೇಡಿನ ಪೈಪೋಟಿ. ಮುಗಿಲಿನಲ್ಲಿ ನಡೆಯುವ ಈ ಜಗಳದ ಸೂತ್ರ ಇಳೆಯ ಮೇಲೆ ನಿಂತು ಆಡಿಸುವ ಕೈಗಳಲ್ಲಿ ಕೇಂದ್ರಿತ. ಮತ್ತೊಂದು ಗಾಳಿಪಟ ಅಥವಾ ಅದರ ದಾರವನ್ನು ಮುಗಿಲಿನಲ್ಲೇ ಕತ್ತರಿಸಲು ಬಳಕೆಯಾಗುತ್ತದೆ ಗಾಜಿನಪುಡಿ ಲೇಪಿತ ನೈಲಾನ್ ದಾರ. ಗಾಳಿಪಟಗಳಿಗೂ ಲೋಹದ ಹರಿತ ತಂತಿ ಹೆಣೆಯುವ ಮತ್ತು ಸೂಜಿಗಲ್ಲು ಲೇಪಿಸುವ ಕೆಟ್ಟ ಪ್ರವೃತ್ತಿ ಶುರುವಾಗಿದೆ. ಈ ಪೈಪೋಟಿಯಲ್ಲಿ ಆಗಸದಲ್ಲೇ ಅತಂತ್ರವಾಗುವ ಗಾಳಿಪಟಗಳಿಗೆ ಲಗತ್ತಾದ ಇದೇ ದಾರ, ಅದೇ ಬಾನಿನ ಅಂಗಳದಲ್ಲಿ ಸ್ವಚ್ಛಂದವಾಗಿ ಹಾರುವ ಅಮಾಯಕ ಪಕ್ಷಿಗಳನ್ನು ಘಾಸಿಗೊಳಿಸಿ ನೆಲಕ್ಕೆ ಕೆಡವುತ್ತದೆ.

ಗಾಳಿಪಟದ ಮಾಂಝಾ ಅಪರಾಧಿಗಳು ಐದು ವರ್ಷ ಜೈಲು ಮತ್ತು ಒಂದು ಲಕ್ಷ ರುಪಾಯಿ ದಂಡ ತೆರುವ ಕಾನೂನು ಉಂಟು. ಆದರೆ ಶಿಕ್ಷೆಗೊಳಗಾದ ಒಂದು ಪ್ರಕರಣವೂ ಈವರೆಗೆ ವರದಿಯಾಗಿಲ್ಲ.

ಆದಿವಾಸಿ ಸಾವಿನ ಒಂದು ಹೃದಯ ವಿದ್ರಾವಕ ಪ್ರಸಂಗ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಸಹಾಯಕ ಮತ್ತು ಅಮಾಯಕ ಆದಿವಾಸಿ ಜನಕೋಟಿಯನ್ನು ಭಾರತ ದೇಶದ ‘ನಾಗರಿಕ’ ವ್ಯವಸ್ಥೆ ಹಲವು ತೆರನಾಗಿ ಹರಿದು ಮುಕ್ಕುತ್ತಿದೆ. ಈ ಜನಸಮೂಹ ತನ್ನದೇ ಕಂದಾಚಾರ ಮತ್ತು ಅಮಾನವೀಯ ಸಂಪ್ರದಾಯಗಳಲ್ಲಿ ಸಿಕ್ಕಿ ನರಳುತ್ತಿರುವುದೂ ಹೌದು. ಒಡಿಶಾದ ಮಯೂರಭಂಜ್ ಜಿಲ್ಲೆಯಿಂದ ಇಂತಹ ಘಟನೆಯೊಂದು ಮೊನ್ನೆ ವರದಿಯಾಗಿದೆ. ಸಂಥಾಲ ಗಿರಿಜನ ಪಂಗಡಕ್ಕೆ ಸೇರಿದ ಕಾಂದ್ರಾ ಸೊರೇನ್ ತನ್ನ ಪತ್ನಿ ಪಾರ್ಬತಿಯ ಕಳೇಬರವನ್ನು ಸಾವಿನ ಮೂರು ದಿನಗಳ ನಂತರವೂ ಮಣ್ಣು ಮಾಡದೆ ಗುಡಿಸಲಲ್ಲೇ ಇರಿಸಿಕೊಳ್ಳಬೇಕಾಯಿತು. ಹಳ್ಳಿಯ ಸಂಥಾಲ ಸಮುದಾಯ ಪಾರ್ಬತಿಯ ಅಂತ್ಯ ಸಂಸ್ಕಾರವನ್ನು ಬಹಿಷ್ಕರಿಸಿತ್ತು. ಹಳೆಯ ದಂಡವೊಂದನ್ನು ಸಮುದಾಯಕ್ಕೆ ಪಾವತಿ ಮಾಡದೆ ಬಾಕಿ ಉಳಿಸಿಕೊಂಡದ್ದೇ ಕಾಂದ್ರಾ ಸೊರೇನ್ ನ ಅಪರಾಧ ಆಗಿತ್ತು. ಅಂತ್ಯಸಂಸ್ಕಾರಕ್ಕೆ ಯಾರೊಬ್ಬರೂ ನೆರವಾಗದಂತೆ ಸಮುದಾಯ ಫರ್ಮಾನು ಹೊರಡಿಸಿತ್ತು. ಒಂದು ಆಡು, ಮೂರು ಕೋಳಿ, ಹದಿನೈದು ಕೇಜಿ ಅಕ್ಕಿ ಹಾಗೂ ಎರಡು ಗಡಿಗೆ ಹೆಂಡದ ಹಳೆಯ ದಂಡ. ದಿನಗೂಲಿ ಮಾಡಿ ಹೊಟ್ಟೆ ಹೊರೆಯುವ ಕಾಂದ್ರಾ ಎಲ್ಲಿಂದ ಕೊಟ್ಟಾನು?

ಈ ದುಬಾರಿ ದಂಡ ಅವನ ತಲೆ ಮೇಲೆ ಬಿದ್ದದ್ದಾದರೂ ಎಂತು? ಕಾಂದ್ರಾನ ಅಪ್ಪ ದಶಕಗಳ ಹಿಂದೆ ತನ್ನ ಕುಲದ ಹೊರಗೆ ಲಗ್ನವಾಗಿದ್ದ. ಖುದ್ದು ಸೊರೇನ್ ಪಾರ್ಬತಿಯನ್ನು ವರಿಸಿದಾಗ ಬುಡಕಟ್ಟಿನ ಸಂಪ್ರದಾಯದ ಪ್ರಕಾರ ಹೆಣ್ಣಿನ ಮನೆಯವರಿಗೆ ಒಂದು ಆಕಳು ಅಥವಾ ಹೋರಿಯ ಉಡುಗೊರೆ ನೀಡಬೇಕಿತ್ತು. ಕಾಂದ್ರಾ ಮತ್ತು ಪಾರ್ಬತಿ ಪ್ರೇಮಿಸಿ ಮದುವೆಯಾಗಿದ್ದರು. ಉಡುಗೊರೆಯ ಸಂಪ್ರದಾಯ ಪಾಲಿಸಿರಲಿಲ್ಲ. ಆಕಳು ಇಲ್ಲವೇ ಹೋರಿ ನೀಡುವಷ್ಟು ಹಣಕಾಸಿನ ಶಕ್ತಿ ತನಗೆ ಇಲ್ಲವೆಂದು ಆಕೆಯ ತಂದೆ ತಾಯಿಗಳಲ್ಲಿ ಅಲವತ್ತುಕೊಂಡಿದ್ದ. ಮೊನ್ನೆ ಸ್ವಾತಂತ್ರ್ಯ ದಿನದ ಹಿಂದಿನ ದಿನ ಪಾರ್ಬತಿ ಅನಾರೋಗ್ಯದಿಂದ ಅಸುನೀಗಿದ್ದಳು. ಮುಂದೆ ಎಂದಾದರೊಂದು ದಿನ ದಂಡ ತೆರುವುದಾಗಿ ಕಾಂದ್ರಾ ಹೇಳಿದರೂ, ಬುಡಕಟ್ಟು ಬಂಧುಗಳ್ಯಾರೂ ನೆರವಿಗೆ ಬರಲಿಲ್ಲ. ಸುದ್ದಿ ತಿಳಿದ ಜಿಲ್ಲಾಡಳಿತ ಸ್ಥಳಕ್ಕೆ ಬಂದು ಪಾರ್ಬತಿಯ ಶವವನ್ನು ಅಂತ್ಯ ಸಂಸ್ಕಾರಕ್ಕೆಂದು ವಶಕ್ಕೆ ತೆಗೆದುಕೊಂಡಿತು.

ಕತ್ತು ಹಿಸುಕುವ ಉಕ್ಕಿನ ಹಸ್ತ- ಜಾತಿ ವ್ಯವಸ್ಥೆ

ಒಡಿಶಾದ ಹಳ್ಳಿಗಾಡಿನ ಮತ್ತೊಂದು ಅಮಾನವೀಯ ಘಟನೆ. ಮಲ್ಕನ್ ಗಿರಿಯ ನುವಾಗುಡ ಎಂಬ ಗ್ರಾಮ. 75 ವರ್ಷ ವಯಸ್ಸಿನ ವಿಧವೆ ಕಮಲಾ ಚಿತಾಲ್ ಸತ್ತಾಗ ಆಕೆಯನ್ನು ಮಣ್ಣು ಮಾಡಲು ಜಾತಿ ಬಂಧುಗಳ್ಯಾರೂ ಬರಲಿಲ್ಲ. ಕಾರಣವೇನೆಂದರೆ ಆಕೆಯ ಮಗ ಹೊಟ್ಟೆಪಾಡಿಗೆ ಪಾಯಿಖಾನೆ-ಕಕ್ಕಸು ಗುಂಡಿ ಸ್ವಚ್ಛ ಮಾಡುತ್ತಿದ್ದ, ಶವ ಸಂಸ್ಕಾರ ನೆರವೇರಿಸುತ್ತಿದ್ದ. ‘ಮೇಲ್ಜಾತಿ’ಯ ಕ್ಷತ್ರಿಯನಾಗಿ ಈ ‘ಅಪರಾಧ’ ಮಾಡಿದ ತಪ್ಪಿಗಾಗಿ ಹಳ್ಳಿಯ ಕ್ಷತ್ರಿಯರು ಕೋಪದಿಂದ ಕುದಿದು ಈ ಕುಟಂಬವನ್ನು ಬಹಿಷ್ಕರಿಸಿದರು.

ಸೊಸೆ ಮತ್ತು ಮೊಮ್ಮಗ ಅತ್ತು ಕರೆದು ಮಧ್ಯವರ್ತಿಗಳ ಮೂಲಕ ನಡೆದ ಚೌಕಾಶಿಯ ನಂತರ ಪುರಿಯ ಜಗನ್ನಾಥ ಮಂದಿರದಿಂದ ಸಾವಿರ ರುಪಾಯಿಯಷ್ಟು ಮಹಾಪ್ರಸಾದ ತಂದು ಹಂಚಿ ‘ಪಾಪ ತೊಳೆದುಕೊಂಡ’ ನಂತರವೇ ಕಮಲಾ ಚಿತಾಲ್ ಕಳೇಬರ ಸಂಸ್ಕಾರ ಕಂಡಿತು.ಮೂರು ಸಾವಿರ ರುಪಾಯಿಯ ದಂಡವನ್ನು ಒಂದು ಸಾವಿರಕ್ಕೆ ಇಳಿಸಲು ಕುಲಬಾಂಧವರು ಒಪ್ಪಿದ್ದರು.

ಆ ಹೊತ್ತಿಗಾಗಲೆ ಚಿತಾಲ್ ಕುಟುಂಬ ಬಹಿಷ್ಕಾರ ಎದುರಿಸಿ ಏಳು ವರ್ಷ ಕಳೆದಿತ್ತು. ಜೀವನೋಪಾಯಕ್ಕಾಗಿ ಪಾಯಿಖಾನೆ ತೊಳೆದ ಕಮಲಾಳ ಮಗ ಲಕ್ಷ್ಮಣ ಸತ್ತು ಹೋಗಿದ್ದ.

ಇಂತಹುದೇ ಪ್ರಕರಣವೊಂದರಲ್ಲಿ ಹಿಂದುಳಿದ ಜಾತಿಗೆ ಸೇರಿದ ಮಹಿಳೆಯೊಬ್ಬಳು ತೀರಿಕೊಂಡಾಗ ಆಕೆಯ ಶವವನ್ನು ಮಸಣಕ್ಕೆ ಹೊರಲು ಊರಿನವರು ಯಾರೂ ಬರಲಿಲ್ಲ. ಕಡೆಗೆ ಶವವನ್ನು ಮಂಚದ ಸಹಿತ ದಾರಿಯುದ್ದಕ್ಕೂ ದರದರ ಎಳೆದುಕೊಂಡು ಹೋಗಿ ಮಣ್ಣು ಮಾಡಿದವರು ಆಕೆಯ ಇಬ್ಬರು ಸಂಬಂಧಿಕರು. ಈ ಪ್ರಕರಣದಲ್ಲಿ ಬಹಿಷ್ಕಾರದ ಕಾರಣ- ಹಿಂದುಳಿದ ಜಾತಿಯ ಮಹಿಳೆಯು ಬುಡಕಟ್ಟು ಜನಾಂಗಕ್ಕೆ ಸೇರಿದ ಗಂಡಸನ್ನು ಮದುವೆ ಮಾಡಿಕೊಂಡಿದ್ದು!

Click here Support Free Press and Independent Journalism

Pratidhvani
www.pratidhvani.com