ಹಿಂದೀ ಮಂದಿ: ದಕ್ಷಿಣಕ್ಕೊಂದು ಉತ್ತರದ ಕಿಟಕಿ
ಹಿಂದಿ-ಮಂದಿ

ಹಿಂದೀ ಮಂದಿ: ದಕ್ಷಿಣಕ್ಕೊಂದು ಉತ್ತರದ ಕಿಟಕಿ

ಶಿವನ ಶ್ರದ್ಧಾಳು ಕಾವಡಿಗಳ ಜೈ ಭಂ ಭಂ ಭೋಲೇ ಕಟ್ಟೊತ್ತಾಯ ಹಾಗೂ ಹರಿಯಾಣದ ಫರೀದಾಬಾದ್ ನ ಸರ್ಕಾರಿ ಶಾಲೆಯ ಅಟೆಂಡರ್ ಕೆಲಸದ ಕೊನೆಯ ದಿನ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಿದ್ದು ಈ ವಾರದ ಹಿಂದೀ ಮಂದಿ ವಿಶೇಷ.

ಡಿ ಉಮಾಪತಿ

ಪರಶಿವನ ಕಾವಡಿಗಳನ್ನು ಮಾಡುವ ಹರಿದ್ವಾರದ ಮುಸಲ್ಮಾನರು!

ಇಸವಿ 2014. ದೆಹಲಿಯ ಇವೇ ಬೇಸಿಗೆಯ ಧಗೆಯ ದಿನಗಳು. ಬಿಸಿಗಾಳಿಗೆ ತೇವಾಂಶ ಸೇರಿಕೊಂಡರೆ ಮೈಮನವೆಲ್ಲ ಅಂಟಂಟು. ಕೆಲಸ ಮುಗಿಸಿ ಮನೆಗೆ ಮರಳಲು ಕಚೇರಿಯಿಂದ ಹೊರಬಿದ್ದಾಗ ರಾತ್ರಿ ಹನ್ನೊಂದು ಸಮೀಪಿಸಿತ್ತು. ಎರಡು ಆಟೋ ಬದಲಿಸಿ ದಿಲ್ಲಿಯ ಗಡಿಯಾಚೆ ಅರ್ಧ ಕಿ.ಮೀ. ದೂರದಲ್ಲಿರುವ ಉತ್ತರಪ್ರದೇಶದಲ್ಲಿ ಇಳಿದು ಮನೆಯತ್ತ ನಡೆಯುತ್ತಿದ್ದ ನಿರ್ಜನ ನಡು ರಸ್ತೆಯಲ್ಲಿ ಟಾಟಾ ಸುಮೋ. ಕಾವಿ ಬಣ್ಣದ್ದು. ಒಳಗೆ ನಿಕ್ಕರು ಬನಿಯನ್ನುಗಳ ಧಡೂತಿಗಳು.

ಜೈ ಭಂ ಭಂ ಭೋಲೇ. . . ಜೈ ಭಂ ಭಂ ಭೋಲೇ. . ಏಕಾಏಕಿ ಕರ್ಕಶ ಕಂಠಗಳ ದನಿ ಏರಿತ್ತು. ತಿರುಗಿ ನೋಡದೆ ಮುಂದೆ ಹೆಜ್ಜೆ ಹಾಕಿದರೆ ಶಿವ ಜೈಕಾರಗಳ ಕರ್ಕಶತೆಗೆ ಸಿಟ್ಟು ಬೆರೆಯಿತೆಂಬ ಅನುಮಾನ. ಜೈಕಾರಗಳು ಸಮೀಪಿಸುತ್ತಿರುವ ಅನಿಸಿಕೆ. ಹಿಂತಿರುಗಿ ನೋಡಿದರೆ ಜೈ ಭಂ ಭಂ ಹೇಳುತ್ತ ಮೂವರು ನುಗ್ಗಿ ಬರುತ್ತಿದ್ದಾರೆ.

ಅರ್ಧರಾತ್ರಿಯ ಫಜೀತಿ ಅಮರಿತಲ್ಲ ಎಂದು ಗಕ್ಕನೆ ನಿಂತರೆ, ಸುತ್ತುವರೆದು ಕೆಕ್ಕರಿಸಿದವರ ಹಾವ ಭಾವ ಎರಡು ಬಾರಿಸಿದರೆ ನೋಡು ಎನ್ನುವಂತಿತ್ತು. ಮೂವರೂ ಒಬ್ಬರನ್ನು ಮತ್ತೊಬ್ಬರು ಮೀರಿಸುವಂತೆ ಗಂಟಲೇರಿಸಿ ಜೈ ಭಂ ಭಂ ಭೋಲೇ ಹೇಳ್ತಿದ್ರು. ಕೆಲ ಕ್ಷಣ ಏನೂ ತೋಚಲಿಲ್ಲ.

ಶಬರಿಮಲೆಗೆ ಹೋಗುವ ದೀಕ್ಷೆ ತೊಟ್ಟವರು ಶರಣಂ ಅಯ್ಯಪ್ಪ ಅಂದ್ರೆ ತಿರುಗಿ ಶರಣಂ ಅಯ್ಯಪ್ಪ ಎಂದು ಹೇಳುವ ಮಾದರಿಯಲ್ಲಿ ಇಲ್ಲಿ ಜೈ ಭಂ ಭಂ ಭೋಲೇ ಗೆ ಪ್ರತಿಯಾಗಿ ಜೈ ಭಂ ಭಂ ಭೋಲೇ ಹೇಳಬೇಕಿತ್ತು. ಅವರು ಕೆರಳಿದ್ದರು. ಸರಿರಾತ್ರಿ ನಿರ್ಜನ ರಸ್ತೆಯ ನಡುವೆ ಹೀಗೆ ಅಡ್ಡ ಹಾಕಿಕೊಂಡಿದ್ದರು. ಜೈಕಾರದ ಜೊತೆಗೆ ಸೆಟೆದ ಬಾಹುಗಳು. . . . ಬಿಗಿದಿದ್ದ ಮುಷ್ಠಿಗಳು. ಅರ್ಥ ಆಗಿತ್ತು. ದೇವರು ಎಂಬ ಪರಿಕಲ್ಪನೆಯನ್ನು ನಂಬದೆ ಇರುವವರ ಮನಸ್ಸುಗಳೂ ಮಾರು ಹೋಗುವ ಪರಿಕಲ್ಪನೆ ಮಸಣವಾಸಿ ಭೋಳೇ ಶಂಕರನದು. ಜೈಕಾರ ಹಾಕಲು ಏನಡ್ಡಿ. ಜೈ ಭಂ ಭಂ ಭೋಲೇ ಎಂದಾಗ ಏರಿ ಬರುತ್ತಿದ್ದ ಧಡೂತಿಗಳ ತಾಪ ತುಸು ತಣಿದಿತ್ತು. ಸಾರಿ, ನಿಮ್ಮ ನಿಮ್ಮಲ್ಲೇ ಮಾತಾಡಿಕೊಳ್ತಿದ್ದೀರೆಂದು ಭಾವಿಸಿದ್ದೆ. ನನ್ನನ್ನು ಮಾತಾಡಿಸ್ತಿದ್ದೀರೆಂದು ತಿಳಿಯಲಿಲ್ಲ ಎಂಬ ಸಮಜಾಯಿಷಿಯ ನಂತರವೂ ಅವರು ಹೊಗೆಯಾಡಿದ್ದರು. ಕಾಳಿಂದಿ ಕುಂಜಕ್ಕೆ ಹೋಗುವ ರಸ್ತೆ ಯಾವುದು ಭಂ ಭಂ ಭೋಲೇ ಎಂದು ಕೇಳಿದರು. ತಿಳಿದಷ್ಟು ಹೇಳಿದ ನಂತರ ವಾಹನದತ್ತ ತಿರುಗಿದರು. ಛೋಡ್ ದೇ ಯಾರ್. . . ಹಿಂದೂ ಲಗ್ತಾ ಹೈ ಎಂಬ ಮಾತುಗಳು. . .ಅಟ್ಟಹಾಸದ ನಗೆ ಬೆನ್ನ ಹಿಂದೆ ಕೇಳಿಬಂದವು.

ಪ್ರತಿವರ್ಷ ಶ್ರಾವಣದಲ್ಲಿ ಶಿವನ ಲಕ್ಷಾಂತರ ಶ್ರದ್ಧಾಳುಗಳು ಹರಿದ್ವಾರ, ಗೋಮುಖ, ಗಂಗೋತ್ರಿಗೆ ಕಠಿಣ ಕಾಲುನಡಿಗೆ ಯಾತ್ರೆ ಮಾಡುತ್ತಾರೆ. ದಿಲ್ಲಿ, ಉತ್ತರಪ್ರದೇಶ, ಹರಿಯಾಣ, ರಾಜಸ್ತಾನ, ಪಂಜಾಬ್, ಬಿಹಾರ, ಜಾರ್ಖಂಡ, ಛತ್ತೀಸ್ ಗಢ ಹಾಗೂ ಮಧ್ಯಪ್ರದೇಶದಿಂದ ಕೂಡ ಹೊರಡುವ ಇವರನ್ನು ಕಾವಡಿಯಾಗಳು ಎನ್ನುತ್ತಾರೆ. ಹೆಗಲ ಮೇಲೆ ಕಾವಡಿ ಹೊತ್ತು ಹೊರಡುವ ಇವರು ವಾಪಸು ಬರುವಾಗ ಗಂಗೋತ್ರಿಯಿಂದ ಗಂಗೆಯ ನೀರಿನ ಬಿಂದಿಗೆಗಳನ್ನು ಕಾವಡಿಯ ಎರಡು ತುದಿಗಳಿಗೆ ಕಟ್ಟಿ ಹೆಗಲ ಮೇಲೆ ಹೊತ್ತು ತರುತ್ತಾರೆ. ತಮ್ಮ ಗ್ರಾಮಗಳು- ಊರುಗಳಲ್ಲಿನ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಶಿವನಿಗೆ ಗಂಗಾಜಲದ ಅಭಿಷೇಕ ಮಾಡಿದರೆ ಅವರ ಹರಕೆ ತೀರಿದಂತೆ.

ತೊಂಬತ್ತರ ದಶಕದ ತನಕ ಈ ಯಾತ್ರೆ ಬಹುತೇಕ ಸಾಧು ಸಂತರು ಮತ್ತು ವಯಸ್ಸು ಸಂದವರಿಗೆ ಸೀಮಿತ ಆಗಿತ್ತು. ಕ್ರಮೇಣ ಯುವಜನರ ಮನಸ್ಸು ಗೆದ್ದಿರುವ ಈ ಕಾಲ್ನಡಿಗೆ ಇದೀಗ ಬೈಸಿಕಲ್ಲುಗಳು, ಮೋಟರ್ ಸೈಕಲ್ಲುಗಳು, ಮಿನಿ ಟ್ರಕ್ಕುಗಳು, ಜೀಪುಗಳಿಗೆ ವರ್ಗ ಆಗಿದೆ. ಶ್ರಾವಣ ಮಾಸದಲ್ಲಿ ದಿಲ್ಲಿ ಯುಪಿ ಗಡಿ ಭಾಗಗಳಲ್ಲಿ ಹೆದ್ದಾರಿಗಳಲ್ಲಿ ವಾಹನ ಸಂಚಾರವನ್ನು ಬೇರೆ ರಸ್ತೆಗಳಿಗೆ ತಿರುಗಿಸಿ ಕಾವಡಿಯಾಗಳಿಗೆ ದಾರಿ ಮಾಡಲಾಗುತ್ತದೆ. ಶಾಲೆ ಕಾಲೇಜುಗಳಿಗೆ ದಿನಗಟ್ಟಲೆ ರಜೆ ನೀಡಲಾಗುತ್ತದೆ. ಮಾರ್ಗದುದ್ದಕ್ಕೆ ಅಲ್ಲಲ್ಲಿ ಬಹುದೊಡ್ಡ ಶಾಮಿಯಾನಾಗಳಲ್ಲಿ ವಸತಿ-ಭೋಜನ-ವೈದ್ಯಕೀಯ ವ್ಯವಸ್ಥೆಗಳಿರುವ ನೂರಾರು ಸುಸಜ್ಜಿತ ವಿಶ್ರಾಂತಿ ಬಿಡಾರಗಳು.

ಕಾವಡಿ ಯಾತ್ರೆಯ ಮೂಲವನ್ನು ಪುರಾಣಗಳ ಸಮುದ್ರ ಮಥನದಲ್ಲಿ ಗುರುತಿಸಲಾಗಿದೆ. ಅಮೃತಕ್ಕೆ ಮುನ್ನ ಹೊರಬಿದ್ದು ಜಗತ್ತನ್ನು ಸುಡಲಾರಂಭಿಸಿದ ಹಾಲಾಹಲವನ್ನು ಶಿವ ನುಂಗಿದ. ಹಾಲಾಹಲದ ನೇತ್ಯಾತ್ಮಕ ಊರ್ಜೆಯಿಂದ ನರಳಿದ. ತ್ರೇತಾಯುಗದಲ್ಲಿ ಶಿವಭಕ್ತ ರಾವಣ ಕಾವಡಿ ಬಳಸಿ ಗಂಗೆಯನ್ನು ತಂದು ಮಹಾದೇವನಿಗೆ ಅಭಿಷೇಕ ಮಾಡಿದ ನಂತರ ಹಾಲಾಹಲದ ಸಂಕಟ ತಣಿಯಿತಂತೆ.

1996ರಿಂದ ದೆಹಲಿಯ ಕಾವಡಿಯಾಗಳನ್ನು ನೋಡುತ್ತ ಬಂದಿದ್ದರೂ, ಅವರಲ್ಲಿ ಈ ಬಗೆಯ ಆಕ್ರಮಣಶೀಲ ಸ್ವಭಾವ ಕಂಡಿರಲಿಲ್ಲ. ರಾತ್ರಿ ಮೈಮೇಲೆ ಏರಿ ಬಂದು ಜೈ ಭಂ ಭೋಲೇ ಹೇಳಿಸಿ ಹಿಂದು ಲಗ್ತಾ ಹೈ. ಛೋಡ್ದೋ ಯಾರ್ ಎನ್ನುವ ಬಗೆಯ ಕಾವಡಿಯಾಗಳನ್ನು ಕಂಡದ್ದು 2014ರಲ್ಲೇ. ಕೋಮುವಾದದ ವಿಷ ಜನಮನದ ಈ ಅಮಾಯಕ ಧಾರ್ಮಿಕ ಶ್ರದ್ಧೆಯ ನರ ನಾಡಿಗಳಿಗೆ ಏರತೊಡಗಿತ್ತು....ಊರಿಗೆ ಬಂದದ್ದು ನೀರಿಗೆ ಬಾರದಿರುತ್ತದೆಯೇ? ನೀರಿಗೆ ಬೆರೆತದ್ದು ಶರೀರಕ್ಕೆ ಹರಿಯದಿರುತ್ತದೆಯೇ? ಮೈಗೆ ಹರಿದದ್ದು ಮಿದುಳಿಗೆ, ಮನಸ್ಸಿಗೆ ಇಳಿಯದಿರುತ್ತದೆಯೇ?

ವರ್ಷದಿಂದ ವರ್ಷಕ್ಕೆ ಇಂತಹ ಕೆಲ ಧಡೂತಿಗಳ ದುಂಡಾವರ್ತನೆ ಹೆಚ್ಚುತ್ತ ನಡೆಯಿತಾದರೆ, ಅತ್ತ ಉತ್ತರಪ್ರದೇಶದ ಮುಖ್ಯಮಂತ್ರಿ ಹುದ್ದೆಗೇರಿದ ಯೋಗಿ ಆದಿತ್ಯನಾಥರು ಕಾವಡಿಯಾಗಳ ಮೇಲೆ ಹೆಲಿಕಾಪ್ಟರುಗಳಿಂದ ಹೂಮಳೆ ಕರೆಯುವ ವ್ಯವಸ್ಥೆ ಮಾಡಿದರು.

ಕಾವಡಿಯಾಗಳು ಹೊರುವ ಕಾವಡಿಗಳು ಹರಿದ್ವಾರದ ಸನಿಹ ಪಂತದೀಪ್ ಎಂಬಲ್ಲಿ ತಯಾರಾಗುತ್ತವೆ. ಬೆಲೆ ನೂರು ರೂಪಾಯಿಯಿಂದ ಸಾವಿರಾರು ರೂಪಾಯಿವರೆಗೆ. ಹರಿದ್ವಾರದಲ್ಲಿ ಮಾರಾಟವಾಗುವ ನೂರಕ್ಕೆ 99ರಷ್ಟು ಕಾವಡಿಗಳನ್ನು ತಯಾರಿಸುತ್ತ ಬಂದಿರುವವರು ಮುಸಲ್ಮಾನರು ಹಾಗೂ ಹೀಗೆ ಮಾರುವ ಮುಸಲ್ಮಾನರ ಪೈಕಿ ಶೇ. 95ರಷ್ಟು ಮಂದಿ ಹರಿದ್ವಾರ ನಿವಾಸಿಗಳು. ಕಾವಡಿಗಳ ವಿನ್ಯಾಸ, ಅಲಂಕಾರಗಳೂ ಅವರವೇ. ರಾಮಲೀಲೆಯ ಹಬ್ಬದಲ್ಲಿ ಸುಡಲಾಗುವ ಮರಮಟ್ಟಿನ ರಾವಣನ ಪುತ್ಥಳಿಯನ್ನು ಮಾಡುವವರಲ್ಲೂ ಮುಸ್ಲಿಮರ ಸಂಖ್ಯೆ ಗಣನೀಯ. ಹಾಗೆಯೇ ರಾತ್ರಿಯೆಲ್ಲ ಜರುಗುವ ರಾಮಲೀಲಾ ಪ್ರಸಂಗಗಳಲ್ಲಿ ರಾಮನ ವೇಷ ಹಾಕುವ ಮುಸಲ್ಮಾನರದೂ ದೊಡ್ಡ ಸಂಖ್ಯೆ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಗತಿಯಿದು. ಮುಸಲ್ಮಾನರು ರಾಮಲೀಲಾಗಳಲ್ಲಿ ಪಾತ್ರ ಧರಿಸದಂತೆ ಇತ್ತೀಚಿನ ವರ್ಷಗಳಲ್ಲಿ ಪ್ರತಿಭಟಿಸುವವರ ಸಂಖ್ಯೆ ಹೆಚ್ಚತೊಡಗಿದೆ. ಈ ಬಾರಿ ಮುಸ್ಲಿಮರು ತಯಾರಿಸುವ ಕಾವಡಿಗಳನ್ನು ಖರೀದಿಸಕೂಡದೆಂದು ವಿಶ್ವಹಿಂದೂ ಪರಿಷತ್ತಿನ ಸಾಧ್ವಿ ಪ್ರಾಚಿ ಕರೆ ಕೊಟ್ಟಿದ್ದರು.

ಮೂರು ಪೀಳಿಗೆಗಳಿಂದ ಕಾವಡಿಗಳನ್ನು ತಯಾರಿಸುತ್ತ ಬಂದಿರುವ ಮುಸ್ಲಿಂ ಕುಟುಂಬಗಳಿಂದ ಹಿಂದೂ ಕುಟುಂಬಗಳು ಕಾವಡಿ ಮಾಡುವುದನ್ನು ಕಲಿತಿರುವುದೂ ಉಂಟು. ಕಾವಡಿ ಖರೀದಿಸುವವರು ಮಾರುವವರ ಜಾತಿಯನ್ನು ಧರ್ಮವನ್ನು ಕೇಳುವುದಿಲ್ಲ. ಚಿಂದಿ ಆಯ್ದು ಮಾರುವ ಈ ಕುಟುಂಬಗಳಿಗೆ ಕಾವಡಿ ಮಾರಿ ಬರುವ ಆದಾಯವೇ ವರ್ಷದ ಪ್ರಮುಖ ಆದಾಯ. ಧಾರ್ಮಿಕ ಪಾವಿತ್ರ್ಯದಲ್ಲಿ ಭಾಗಿಯಾದೆವೆಂಬ ಧನ್ಯತೆಯ ಭಾವ ಅವರದು. ಕಾವಡಿ ಮಾಡುವಾಗ ತಾವಾಗಿಯೇ ಮಾಂಸಾಹಾರ ತ್ಯಜಿಸಿರುತ್ತಾರೆ.

ಈ ವರ್ಷ ಹರಿದ್ವಾರಕ್ಕೆ ಭೇಟಿ ನೀಡಿದ ಕಾವಡಿಯಾಗಳ ಸಂಖ್ಯೆ ಮೂರೂವರೆ ಕೋಟಿ ಎನ್ನುತ್ತವೆ ಸರ್ಕಾರಿ ಅಂಕಿ ಅಂಶಗಳು. ಕಳೆದ ವರ್ಷ ಈ ಸಂಖ್ಯೆ 2.8 ಕೋಟಿಯಷ್ಟಿತ್ತು.

ಇತ್ತೀಚಿನ ವರ್ಷಗಳಲ್ಲಿ ಕಾವಡಿಗಳಿಗೂ ಹಿಂದುತ್ವ ಮತ್ತು ದೇಶಭಕ್ತಿಯ ರಂಗೇರಿದೆ. ಕೇಸರಿ-ಬಿಳಿ-ಹಸಿರು ಅಲಂಕಾರ ಮಾಡಿಕೊಂಡಿರುತ್ತವೆ. ಕಾವಡಿಯಾಗಳು ಹೊಸ ದೇಶಭಕ್ತಿಯ ಪಾಠವನ್ನೂ ಹೇಳತೊಡಗಿದ್ದಾರೆ. ಮುಂಬರುವ ವರ್ಷಗಳಲ್ಲಿ ಇವರ ಮನಸುಗಳನ್ನು ಕದಡುವ ಪ್ರಯತ್ನ ಹೊಸ ಉತ್ಸಾಹದಿಂದ ಜರುಗುವಲ್ಲಿ ಅನುಮಾನವಿಲ್ಲ. ಕಾವಡಿಗಳನ್ನು ಮಾಡುವ ಮುಸಲ್ಮಾನರನ್ನು ಮೂಲೆ ಸೇರಿಸುವ ಹುನ್ನಾರ ಫಲಿಸಲಿದೆಯೇ....ಕಾದು ನೋಡಬೇಕಿದೆ.

ಹರಿಯಾಣದ ಕುದೇರಾಮ ಹೆಲಿಕಾಪ್ಟರು ಬಾಡಿಗೆ ಹಿಡಿದ ಪ್ರಸಂಗ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹರಿಯಾಣದ ಫರೀದಾಬಾದ್ ನೀಮ್ಕಾ ಗ್ರಾಮದಲ್ಲೊಂದು ಸರ್ಕಾರಿ ಶಾಲೆ. ಆಡು ಭಾಷೆಯಲ್ಲಿ ಜವಾನನೆಂದು ಕರೆಯಲಾಗುವ ಆ ಶಾಲೆಯ ಅಟೆಂಡರ್ ಹೆಸರು ಕುದೇರಾಮ. ನೆರೆಯ ಸಾದಪುರದ ನಿವಾಸಿ. ನೌಕರಿ ಸಲುವಾಗಿ ಸಾದಪುರದಿಂದ ನೀಮ್ಕಾ ನಡುವೆ ನಿತ್ಯ ಓಡಾಟ.

ನಲವತ್ತು ವರ್ಷಗಳ ಆಸೆಯೊಂದನ್ನು ಆಗಾಗ ಕುಟುಂಬದ ಸದಸ್ಯರೊಂದಿಗೆ ಹೇಳಿಕೊಂಡಿದ್ದ. ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ನಿವೃತ್ತಿಯ ದಿನ ನೀಮ್ಕಾದ ಶಾಲೆಯಿಂದ ಸಾದಪುರಕ್ಕೆ ಆಕಾಶಮಾರ್ಗವಾಗಿ ಹಿಂದಿರುಗಬೇಕು ಎಂಬ ಬಯಕೆಯದು. ಕಳೆದ ಮಾರ್ಚ್ ತಿಂಗಳಲ್ಲಿ ಸಾದಪುರದ ಸರಪಂಚನೂ ಆದ ತನ್ನ ತಮ್ಮನ ಕಿವಿಗೆ ಈ ವಿಷಯ ಹಾಕಿದ. ತನ್ನ ನಿವೃತ್ತಿಯನ್ನು ಮತ್ತು ತನ್ನ ಹೆಸರನ್ನು ಈ ಸೀಮೆಯ ಜನ ಬಹುಕಾಲ ನೆನಪಿಟ್ಟುಕೊಳ್ಳುವಂತಾಗಬೇಕು ಎಂದ.

ನಿವೃತ್ತಿಯ ದಿನ ಮುಂಜಾನೆ ನೀಮ್ಕಾಗೆ ಎಂದಿನಂತೆ ಸೈಕಲ್ ತುಳಿದುಕೊಂಡು ಹೊರಟವನು ಸಂಜೆ ಹೆಲಿಕಾಪ್ಟರಿನಲ್ಲಿ ಮರಳಿ ಬಂದ. ವಿಮಾನ ಏರಬೇಕೆಂಬ ಎಳವೆಯ ಕನಸು ನನಸಾಗುವ ಸಂದರ್ಭ ಬದುಕಿನಲ್ಲಿ ಬರಲೇ ಇಲ್ಲ. ಅದಕ್ಕೆ ಬೇಕಾದ ಹಣವೂ ಇರಲಿಲ್ಲ. ಹೆಲಿಕಾಪ್ಟರ್ ಕನಸನ್ನು ಹೇಳಿಕೊಂಡಾಗ ನೆರೆಹೊರೆಯವರು, ಬಂಧುಬಳಗದವರು, ಗೆಳೆಯರು ತಮಾಷೆ ಮಾಡಿ ನಕ್ಕಿದ್ದರು. ಗಿಣಿಶಾಸ್ತ್ರ ಹೇಳುವವನೊಬ್ಬ ಈತನ ಕನಸು ನನಸಾಗುತ್ತದೆ ಎಂದಿದ್ದ.

ನಿವೃತ್ತಿಯ ದಿನ ಹೆಲಿಕಾಪ್ಟರನ್ನು ಬೆರಗಿನಿಂದ ನೋಡಿದ ಕುದೇರಾಮನಿಗೆ ಕಾಕ್ ಪಿಟ್ ನಲ್ಲಿ ಚಾಲಕಿಯ ಪಕ್ಕದ ಆಸನದಲ್ಲಿ ಕುಳಿತದ್ದು ಒಂದು ವಿಸ್ಮಯಕಾರಿ ಅನುಭವ. ಆತನ ಪತ್ನಿ ಮತ್ತು ಮಗಳು ಹಾಗೂ ಆಕೆಯ ಕೂಸನ್ನು ಹತ್ತಿಸಿಕೊಂಡು ಹದಿನೈದು ನಿಮಿಷ ಕಾಲ ಆಕಾಶದಲ್ಲಿ ಹಾರಾಡಿದ. ವಿಮಾನವೊಂದನ್ನು ಬಾಡಿಗೆ ಪಡೆಯುವ ಆತನ ಇರಾದೆಯನ್ನು ಕುಟುಂಬ ಒಪ್ಪಿರಲಿಲ್ಲ.

ಹಣದ ಪ್ರಶ್ನೆಯಲ್ಲ ಇದು, ನನ್ನ ನಲವತ್ತು ವರ್ಷಗಳ ಕನಸು. ಈ ಗಳಿಗೆಗಾಗಿ ಬದುಕಿಡೀ ಕಾದಿದ್ದೆ. ಈ ಸಂಗತಿಯನ್ನು ಸಾರ್ವಜನಿಕರಿಗೆ ಮನದಟ್ಟು ಮಾಡುವುದು ಆಗಲೇ ಇಲ್ಲ. ಒಂದು ಖುಷಿಯ ಹಾರಾಟಕ್ಕೆ ಇಷ್ಟೊಂದು ಹಣ ಯಾಕೆ ಚೆಲ್ಲುತ್ತಿದ್ದೀ ಎಂದು ಕೇಳವವರೇ ಎಲ್ಲರೂ ಎಂದಿದ್ದಾನೆ ಕುದೇರಾಮ.

ಹೆಲಿಪ್ಯಾಡ್ ನಿರ್ಮಾಣ, ಅಗತ್ಯ ಅನುಮತಿಗಳು ಹಾಗೂ ಹೆಲಿಕಾಪ್ಟರ್ ಬಾಡಿಗೆಗೆ ಕುದೇರಾಮ ಸಂದಾಯ ಮಾಡಿದ ಹಣ 3.25 ಲಕ್ಷ ರುಪಾಯಿ. ಅಂದು ಊರವರು ಬಂಧು ಬಳಗವನ್ನೆಲ್ಲ ಊಟಕ್ಕೆ ಕರೆದಿದ್ದ. ಏಳು ಸಾವಿರ ಮಂದಿ ಅತಿಥಿಗಳ ಭೋಜನಕ್ಕೆ ಮಾಡಿದ ವೆಚ್ಚ ಮೂರೂವರೆ ಲಕ್ಷ ರುಪಾಯಿ.

ಈ ಕನಸು ನನಸು ಮಾಡಿಕೊಳ್ಳಲು ಕಾಸಿಗೆ ಕಾಸು ಕೂಡಿಡುತ್ತಿದ್ದ ನನ್ನ ಗಂಡ. ನನ್ನ ಜೊತೆ ಫೋಟೋ ತೆಗೆಸಿಕೊಳ್ಳಬೇಕೆಂಬ ಆಸೆಯನ್ನೂ ನೆರವೇರಿಸಿರಲಿಲ್ಲ. ಅಷ್ಟೊಂದು ನಾಚಿಕೆ ಸ್ವಭಾವದವನು. ಕುಟುಂಬದ ಮುಂದೆ ನನ್ನೊಡನೆ ಮುಖಕ್ಕೆ ಮುಖ ಕೊಟ್ಟು ಮಾತಾಡಿದವನೇ ಅಲ್ಲ ಎನ್ನುತ್ತಾಳೆ ಕುದೇರಾಮನ ಪತ್ನಿ ರಾಮಮತಿ ದೇವಿ.

ಹೆಲಿಕಾಪ್ಟರ್ ಪಯಣಕ್ಕೆ ಸರ್ಕಾರದಿಂದ ಹತ್ತಾರು ಬಗೆಯ ಅನುಮತಿಗಳನ್ನು ಪಡೆಯಬೇಕಿತ್ತು. ಅವುಗಳನ್ನು ಪಡೆಯಲು ನಾಲ್ಕು ತಿಂಗಳ ಕಾಲ ಕಂಬ ಕಂಬ ಸುತ್ತಿದೆವು. ನನ್ನ ಅಣ್ಣ ಜೀವಮಾನದ ಉದ್ದಕ್ಕೂ ತನಗಾಗಿ ಏನನ್ನು ಖರ್ಚು ಮಾಡಿಕೊಂಡವನಲ್ಲ. ಬೀಡಿ ಸಿಗರೇಟು ಸೇದಲಿಲ್ಲ, ಹೆಂಡ ಕುಡಿದವನಲ್ಲ ಎನ್ನುತ್ತಾನೆ ಕುದೇರಾಮನ ತಮ್ಮ ಶಿವಕುಮಾರ್.

ಆರಂಭದಲ್ಲಿ ನಗೆಯಾಡಿದ್ದ ಗ್ರಾಮಸ್ತರಿಗೆ ಕುದೇರಾಮ ಮತ್ತು ಆತನ ತಮ್ಮ ಹೆಲಿಕಾಪ್ಟರಿನಲ್ಲಿ ಬಂದಿಳಿದ ದಿನ ಐತಿಹಾಸಿಕ. ಖುಷಿಪಟ್ಟು ಸಂಭ್ರಮಿಸಿದರು.

ತಾಸಿಗೆ 90 ಸಾವಿರ ರುಪಾಯಿ ಬಾಡಿಗೆಯಂತೆ ಮೂರು ತಾಸಿನ ಹೆಲಿಕಾಪ್ಟರ್ ಹಾರಾಟ ಮತ್ತು ಹೆಲಿಪ್ಯಾಡ್ ನಿರ್ಮಾಣಕ್ಕೆ ತಾನು ಮೂರೂಕಾಲು ಲಕ್ಷ ರುಪಾಯಿ ವೆಚ್ಚ ಮಾಡಿದ ಕುರಿತು ಕುದೇರಾಮನಿಗೆ ಯಾವುದೇ ಅಳುಕಿನ ಭಾವನೆ ಇಲ್ಲ. ಆತನ ತಂದೆ ಕೂಲಿಯಾಳು.

Click here Support Free Press and Independent Journalism

Pratidhvani
www.pratidhvani.com