ಹಿಂದೀ ಮಂದಿ : ದಕ್ಷಿಣಕ್ಕೊಂದು ಉತ್ತರದ ಕಿಟಕಿ  
ಹಿಂದಿ-ಮಂದಿ

ಹಿಂದೀ ಮಂದಿ : ದಕ್ಷಿಣಕ್ಕೊಂದು ಉತ್ತರದ ಕಿಟಕಿ  

ಶ್ರೀಲಂಕೆಯಲ್ಲಿ ಸೀತಾಮಾತೆಗೆ ಮಂದಿರ ನಿರ್ಮಿಸುವ ಕುರಿತು ಮಧ್ಯಪ್ರದೇಶದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಜಟಾಪಟಿ ಜರುಗಿದೆ.  

ಡಿ ಉಮಾಪತಿ

ಸೀತೆಗೊಂದು ಮಂದಿರ- ಶ್ರೀಲಂಕೆಯಲ್ಲಿ!

ರಾಮಮಂದಿರ ನಿರ್ಮಾಣದ ಮಾತು ಕಳೆದ ಕೆಲವು ದಶಕಗಳಲ್ಲಿ ದೇಶದ ಸಾಮಾಜಿಕ-ರಾಜಕೀಯ ಚಿತ್ರವನ್ನೇ ಬದಲಿಸಿದ್ದು ಇತಿಹಾಸದ ಭಾಗ. ಇದೀಗ ಶ್ರೀಲಂಕೆಯಲ್ಲಿ ಸೀತಾಮಾತೆಗೆ ಮಂದಿರ ನಿರ್ಮಿಸುವ ಕುರಿತು ಮಧ್ಯಪ್ರದೇಶದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಜಟಾಪಟಿ ಜರುಗಿದೆ. ಬಿಜೆಪಿಯ ಶಿವರಾಜಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ನೀಡಿದ್ದ ಈ ಆಶ್ವಾಸನೆ ಕಾಗದದಿಂದ ಎದ್ದು ಕಾರ್ಯರೂಪಕ್ಕೆ ಇಳಿಯಲಿಲ್ಲ. 2001ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಶಿವರಾಜಸಿಂಗ್ ಶ್ರೀಲಂಕೆಗೆ ಭೇಟಿ ನೀಡಿದ್ದರು. ಸೀತಾಮಾತೆಯ ಮಂದಿರ ನಿರ್ಮಿಸುವುದಾಗಿ ಸಾರಿದ್ದರು. ಆರು ವರ್ಷಗಳ ನಂತರ ಆಯವ್ಯಯ ಮುಂಗಡಪತ್ರದಲ್ಲಿ ಈ ಉದ್ದೇಶಕ್ಕಾಗಿ ಒಂದು ಕೋಟಿ ರುಪಾಯಿ ಮೀಸಲಿರಿಸಿದರು. ಮುಂದೇನೂ ಜರುಗಲಿಲ್ಲ.
ಈ ಕುರಿತು ಶಿವರಾಜಸಿಂಗ್ ನಿಷ್ಕ್ರಿಯತೆಯನ್ನು ಟೀಕಿಸಿರುವ ಕಾಂಗ್ರೆಸ್ ಸರ್ಕಾರದ ಧಾರ್ಮಿಕ ದತ್ತಿ ಸಚಿವ ಪಿ.ಸಿ.ಶರ್ಮ, ಈ ಆಶ್ವಾಸನೆಯನ್ನು ತಮ್ಮ ಸರ್ಕಾರ ಈಡೇರಿಸಲಿದೆ ಎಂದಿದ್ದಾರೆ. ಲಂಕೆಯಲ್ಲಿ ಸೀತಾಮಾತಾ ಮಂದಿರ ನಿರ್ಮಾಣದ ಜಾಗದ ಸರ್ವೆ ಮತ್ತು ಮರುಮೌಲ್ಯಮಾಪನ ನಡೆಸುವ ಕಾಂಗ್ರೆಸ್ಸಿನ ನಿರ್ಧಾರವನ್ನು ಶಿವರಾಜಸಿಂಗ್ ಖಂಡಿಸಿದ್ದಾರೆ. ಸೀತಾಮಾತೆಯ ಅಪಹರಣ ನಡೆಯಿತೇ ಇಲ್ಲವೇ ಎಂಬುದನ್ನು ಕಂಡು ಹಿಡಿಯಲು ಕಮಲನಾಥ್ ಸರ್ಕಾರದ ಅಧಿಕಾರಿಗಳು ಶ್ರೀಲಂಕೆಯ ಪ್ರವಾಸ ಕೈಗೊಂಡಿದ್ದಾರೆ, ಇದಕ್ಕಿಂತ ಅಪಹಾಸ್ಯದ ಸಂಗತಿ ಮತ್ತೊಂದಿಲ್ಲ. ಸೀತಾಮಾತೆಯ ಅಪಹರಣದ ಜಗಜ್ಜಾಹೀರು ಸತ್ಯಸಂಗತಿಯ ತನಿಖೆಗೆ ಮುಂದಾಗಿರುವುದು ಕೋಟ್ಯಂತರ ಹಿಂದುಗಳ ಭಾವನೆಗೆ ಧಕ್ಕೆ ಉಂಟು ಮಾಡಿದೆ ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
ಮಂದಿರ ನಿರ್ಮಾಣಕ್ಕೆ ಅನುಮತಿಗಳು ದೊರತಿವೆ ಎಂದು 2016ರಲ್ಲಿ ಪ್ರಕಟಿಸಿದ್ದ ಶಿವರಾಜಸಿಂಗ್, ತಮ್ಮ ಸರ್ಕಾರದ ಅಧಿಕಾರಿಗಳ ತಂಡವನ್ನು ಸ್ಥಳ ಪರಿಶೀಲನೆಗೆಂದು ಲಂಕೆಗೆ ಕಳಿಸಿದ್ದರು. ಈ ತಂಡ ಅಲ್ಲಿನ ದಿವುರುಂಪೋಲ ಎಂಬ ಬೌದ್ಧ ವಿಹಾರವೊಂದಕ್ಕೆ ಭೇಟಿ ನೀಡಿ ವಾಪಸಾಗಿತ್ತು.
ದಿವುರುಂಪೋಲ ಎಂದರೆ ಸಿಂಹಳ ಭಾಷೆಯಲ್ಲಿ ಪ್ರತಿಜ್ಞೆಯ ತಾಣ ಎಂದು ಅರ್ಥ. ಸೀತೆ ಇಲ್ಲಿ ಅಗ್ನಿಪರೀಕ್ಷೆಗೆ ಗುರಿಯಾಗಿದ್ದಳಂತೆ. ಇಲ್ಲೊಂದು ಎತ್ತರದ ಕಟ್ಟೆಯಲ್ಲಿ ಅಶೋಕ ವೃಕ್ಷವಿದ್ದು, ಅದರ ಬುಡದಲ್ಲಿ ಆಕೆಯ ಆಭರಣಗಳನ್ನು ಹುಗಿಯಲಾಗಿದೆ ಎಂಬ ಪ್ರತೀತಿ ಉಂಟು. ಬೌದ್ಧ ವಿಹಾರದೊಳಗಿರುವ ಈ ತಾಣ ಲಂಕೆಯ ಹಿಂದುಗಳಿಗೆ ಪವಿತ್ರ ಧಾರ್ಮಿಕ ಸ್ಥಳ.

ದೆಹಲಿ ಸರಗಳ್ಳರ ‘ಪುರುಷಪ್ರೇಮ’

ಸರಗಳ್ಳತನ ದೇಶವ್ಯಾಪಿ. ಅದರ ರೀತಿ ನೀತಿಗಳು ಬೆಂಗಳೂರು, ದೆಹಲಿ, ಮುಂಬಯಿ, ಲಕ್ನೋ, ಪಟನಾ ಎಲ್ಲೆಡೆ ಒಂದೇ. ಆದರೆ ಇತ್ತೀಚಿನ ದಿನಗಳಲ್ಲಿ ದೆಹಲಿಯ ಸರಗಳ್ಳರು ಮಹಿಳೆಯರ ಬಿಟ್ಟು ಪುರುಷರ ಬೆನ್ನು ಹತ್ತಿದ್ದಾರೆ. ಹೆಣ್ಣುಮಕ್ಕಳು ಹೆಚ್ಚು ಹೆಚ್ಚು ಕೃತಕ ಆಭರಣ ಧರಿಸತೊಡಗಿರುವುದು ಸರಗಳ್ಳರಿಗೆ ಶನಿಸುದ್ದಿಯಂತೆ. ಬಿಳಿ ಬಂಗಾರ, ಪ್ಲ್ಯ್ಯಾಟಿನಂ, ವಜ್ರದ ಸರವನ್ನು ಮಹಿಳೆ ಧರಿಸಿದ್ದರೆ ಸರಗಳ್ಳರು ಗೊಂದಲಕ್ಕೆ ಬೀಳುತ್ತಾರಂತೆ. ಚಿನ್ನವಾದರೆ ಅಸಲಿಯೋ, ನಕಲಿಯೋ ಎಂದು ಗುರುತಿಸುವ ಪರಿಣತಿ ಅವರಿಗೆ ಬಂದುಬಿಟ್ಟಿದೆ ಎನ್ನುತ್ತಾರೆ ದೆಹಲಿ ಪೊಲೀಸರು.   ಅಸಲಿ ಬಂಗಾರದ ಸರಪಳಿಗಳಂತಹ ಸರಗಳು ಮತ್ತು ಕಡಗದಂತಹ ಉಂಗುರಗಳನ್ನು ಧರಿಸುವ ಪುರುಷರು ಇತ್ತೀಚಿನ ದಿನಗಳಲ್ಲಿ ಸರಗಳ್ಳರ ಅಚ್ಚುಮೆಚ್ಚು. ದೆಹಲಿಗೆ ಅಂಟಿಕೊಂಡಂತಿರುವ ನೋಯ್ಡಾ (ನ್ಯೂ ಓಕ್ಲಾ ಇಂಡಸ್ಟ್ರಿಯಲ್ ಡೆವೆಲಪ್ಮೆಂಟ್ ಏರಿಯಾ) ಉತ್ತರಪ್ರದೇಶಕ್ಕೆ ಸೇರಿದ ಜಿಲ್ಲೆ. ಅದರೆ ದೆಹಲಿಯದೇ ಭಾಗ ಎಂಬಷ್ಟು ರಾಜಧಾನಿಯೊಂದಿಗೆ ಹೊಕ್ಕು ಬಳಕೆ ಅದರದು. ಅಲ್ಲಿನ ಪೊಲೀಸರು ಇತ್ತೀಚೆಗೆ ಸರಗಳ್ಳರ ಗುಂಪೊಂದನ್ನು ಹಿಡಿದರು. ಸರಗಳ್ಳರ ‘ಪುರುಷಪ್ರೇಮ’ದ ಸಂಗತಿ ಈ ದಸ್ತಗಿರಿಯೊಂದಿಗೆ ಬೆಳಕಿಗೆ ಬಂದಿದೆ. ಸರಗಳ್ಳರ ಪ್ರಕಾರ ಗಂಡಸರು ನಕಲಿ ಚಿನ್ನ ಧರಿಸುವುದಿಲ್ಲ. ಹೀಗಾಗಿ ಕೇವಲ ಪುರುಷರನ್ನೇ ಬೆಂಬತ್ತುವ ಪ್ರತ್ಯೇಕ ಸರಗಳ್ಳ ಗುಂಪುಗಳು ತಲೆಯೆತ್ತಿವೆ. ಪುರುಷ ಮಿಕಗಳಿಗಾಗಿ ಹೊಂಚು ಹಾಕತೊಡಗಿವೆ. ವಿಶೇಷವಾಗಿ ದಕ್ಷಿಣ ಮತ್ತು ಪಶ್ಚಿಮ ದೆಹಲಿಯ ಪುರುಷರು ಸಂಪತ್ತು ಪ್ರದರ್ಶನಪ್ರಿಯರು. ಹೆಚ್ಚು ಒಡವೆ ಧರಿಸುತ್ತಾರೆ. ಈ ಎರಡೂ ಪ್ರದೇಶಗಳಲ್ಲಿ  ಸರಗಳ್ಳತನದ ಪ್ರಕರಣಗಳ ಸಂಖ್ಯೆ ಇತ್ತೀಚೆಗೆ ಮೇಲೆ ಜಿಗಿದಿದೆ. ಆದರೆ ಪುರುಷರು ಹಾಗಲ್ಲ. ಅವರು ಅಸಲಿ ಚಿನ್ನ ಬಿಟ್ಟು ಬೇರೇನೂ ಧರಿಸುವುದಿಲ್ಲ. ಮಹಿಳೆಯ ಸರಗಳಿಗಿಂತ ಪುರುಷರು ಧರಿಸುವ ಆಭರಣಗಳು ದಪ್ಪ ಮತ್ತು ಈ ಕಾರಣಕ್ಕಾಗಿ ತೂಕವೂ ಹೆಚ್ಚು. ಮಾರಿದರೆ ಹೆಚ್ಚು ಹಣ ಸಿಗುವುದು ಗ್ಯಾರಂಟಿ. ಪಸೋಂಡಾ ಎಂಬ ಹೆಸರಿನ ಗ್ಯಾಂಗ್ ಪುರುಷರ ಮೇಲೆ ಮಾತ್ರವೇ ದಾಳಿ ನಡೆಸುತ್ತದೆ. ಬೆಳಗಿನ ವಾಯುವಿಹಾರದ ಹಾದಿಗಳು, ವ್ಯಾಯಾಮಶಾಲೆಗಳ ಆಸುಪಾಸು,ಪಾರ್ಕುಗಳು ಹಾಗೂ ಚಹಾ ಅಂಗಡಿಗಳು ಪುರುಷ ಸರಗಳ್ಳತನದ ತಾಣಗಳು. ನಾನಾ ಕಾರಣಗಳಿಗಾಗಿ ಅಭರಣ ದೋಚಿಸಿಕೊಂಡ ಪುರುಷರು ಮಹಿಳೆಯರಂತೆ  ಪೊಲೀಸರಿಗೆ ದೂರು ಕೊಡುವುದಿಲ್ಲ ಎಂಬುದು ಸರಗಳ್ಳರ ಪುರುಷಪ್ರೇಮಕ್ಕೆ ಮತ್ತೊಂದು ಮುಖ್ಯ ಕಾರಣ.

ಪಂಜಾಬಿನ ದಲಿತರು ಮತ್ತು ‘ಶಾಮ್ಲಾಟ್’ ಜಮೀನು

ದೇಶದಲ್ಲೇ ಅತಿ ಹೆಚ್ಚು ದಲಿತರ ಜನಸಂಖ್ಯೆಯನ್ನು ಹೊಂದಿರುವ ರಾಜ್ಯ ಪಂಜಾಬ್. ಇಲ್ಲಿನ ಪರಿಶಿಷ್ಟ ಜಾತಿಗಳ ಶೇಕಡಾವಾರು ಪ್ರಮಾಣ 31.9. ಆದರೆ ಜಮೀನಿನ ಒಡೆತನದಿಂದ ಅವರು ಬಹು ದೂರ.  ಪಂಜಾಬಿನ ಹಳ್ಳಿ ಹಳ್ಳಿಗಳಲ್ಲಿ ನೂರಾರು ಇಲ್ಲವೇ ಸಾವಿರಾರು ಎಕರೆ ಸರ್ಕಾರಿ ಜಮೀನು ಉಂಟು. ಇಂತಹ ಜಮೀನನ್ನು ಸ್ಥಳೀಯ ಭಾಷೆಯಲ್ಲಿ ‘ಶಾಮ್ಲಾಟ್’ ಜಮೀನು ಎಂದೇ ಕರೆಯಲಾಗುತ್ತದೆ. ಬಹುಕಾಲದಿಂದ ಉಳುಮೆ ಮಾಡಲಾಗುತ್ತ ಬಂದಿರುವ ಈ ಜಮೀನನ್ನು ಪ್ರತಿ ವರ್ಷ ವರ್ಷದೊಪ್ಪತ್ತಿಗೆ ಹರಾಜು ಹಾಕಿ ಸಾವಿರಾರು ಕೋಟಿ ರುಪಾಯಿಯ ಆದಾಯ ಗಳಿಸುತ್ತಿದೆ ಅಲ್ಲಿನ ಸರ್ಕಾರ. ಆಯಾ ಗ್ರಾಮದಲ್ಲಿ ಸಂಗ್ರಹವಾಗುವ ಇಂತಹ ಆದಾಯವನ್ನು ಅದೇ ಗ್ರಾಮದ ಶಾಲೆ, ಆಸ್ಪತ್ರೆಗಳು, ರಸ್ತೆ, ಗಲ್ಲಿಗಳ ಅಭಿವೃದ್ಧಿಗೆಂದು ಬಳಸಲಾಗುತ್ತದೆ.
1961ರ ಪಂಜಾಬ್ ಗ್ರಾಮ ತೋಪು-ಗೋಮಾಳ ಜಮೀನು ನಿಯಂತ್ರಣ ಕಾಯಿದೆಯ ಪ್ರಕಾರ ಒಟ್ಟು 1.57 ಲಕ್ಷ ಎಕರೆಗಳಷ್ಟು ‘ಶಾಮ್ಲಾಟ್’ ಜಮೀನನ್ನು ರೈತರಿಗೆ ಉಳುಮೆ ಮಾಡಲು ನೀಡಲಾಗುತ್ತಿದೆ. ಮೂರನೆಯ ಒಂದರಷ್ಟು ಜಮೀನನ್ನು (53 ಸಾವಿರ ಎಕರೆಗಳು) ವಾರ್ಷಿಕ ಗುತ್ತಿಗೆಯ ಆಧಾರದ ಮೇಲೆ ದಲಿತರಿಗೆ ನೀಡಲಾಗುತ್ತಿದೆ. ವಾರ್ಷಿಕ ಹರಾಜಿನಲ್ಲಿ ‘ಡಮ್ಮಿ’ ದಲಿತರನ್ನು ಮುಂದಿಟ್ಟುಕೊಂಡು ಅವರ ಹೆಸರಿನಲ್ಲಿ ಈ ಜಮೀನಿನ ಬಹುಪಾಲನ್ನು ಬಲಿಷ್ಠ ಜಾತಿಗಳೇ ಪಡೆಯುತ್ತಿವೆ. ಸರ್ಕಾರಿ ನಿಗದಿ ಪಡಿಸಿರುವ ಹರಾಜು ದರಗಳನ್ನು ತೆರುವ ಸ್ಥಿತಿಯಲ್ಲೂ ದಲಿತರು ಇಲ್ಲ. ಆದರೆ ಬಲಿಷ್ಠ ಜಾತಿಗಳು ಸರ್ಕಾರಿ ದರಗಳಿಗಿಂತ ಹೆಚ್ಚಿನ ಹರಾಜು ದರ ಕೂಗಿ ಬಡ ದಲಿತರನ್ನು ವಂಚಿಸತೊಡಗಿವೆ.
ಸರ್ಕಾರ ನಿಗದಿ ಮಾಡಿರುವ ದುಬಾರಿ ಹರಾಜು ದರಗಳನ್ನು ಭೂಹೀನ ದಲಿತರು ಕಳೆದ ಕೆಲ ವರ್ಷಗಳಿಂದ ಪ್ರತಿಭಟಿಸಿದ್ದಾರೆ. ಜಮೀನನ್ನು ದಲಿತರಿಗೆ ಮೀಸಲಿರಿಸಿದ್ದರೆ, ನ್ಯಾಯಬದ್ಧ ದರಗಳಿಗೆ ಗುತ್ತಿಗೆ ನೀಡಬೇಕು. ಎಕರೆಗೆ ವರ್ಷಕ್ಕೆ 20 ಸಾವಿರ ರುಪಾಯಿಗಿಂತಲೂ ಹೆಚ್ಚು ದರವನ್ನು ನಾವು ನೀಡುವುದಾದರೂ ಹೇಗೆ? ಸರ್ಕಾರ ಜಮೀನುದಾರನಂತೆ ವರ್ತಿಸಿ ಲಾಭ ಗಳಿಸತೊಡಗಿರುವುದು ತಪ್ಪಲ್ಲವೇ ಎಂಬುದು ದಲಿತರ ಪ್ರಶ್ನೆ.
ಈ ಅನ್ಯಾಯದ ವಿರುದ್ಧ ಜಮೀನು ಪ್ರಾಪ್ತಿ ಸಂಘರ್ಷ ಸಮಿತಿಗಳು ಪಂಜಾಬಿನಾದ್ಯಂತ ತಲೆಯೆತ್ತಿದ್ದು, ನ್ಯಾಯಯುತ ಹರಾಜು ದರಗಳಿಗಾಗಿ ಹೋರಾಟ ನಡೆಸಿವೆ. ಮಾಳವ ಸೀಮೆಯಲ್ಲಿ ಆರಂಭ ಆಗಿರುವ ಈ ಹೋರಾಟ ಇತರೆ ಭಾಗಗಳಿಗೂ ಹರಡತೊಡಗಿದೆ.

ಬಿಸಿಯೂಟ ವಿವಾದ- ಮನೆಗೆ ಮೊಟ್ಟೆ ಸರಬರಾಜು

ಅಂಗನವಾಡಿ ಮಕ್ಕಳು ಮತ್ತು ಶಾಲಾಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ನೀಡಿಕೆಗೆ ಬಿಜೆಪಿ ಮತ್ತು ಕಬೀರಪಂಥಿಗಳ ವಿರೋಧವನ್ನು ಅಡಗಿಸಲು ಛತ್ತೀಸಗಢದ ಕಾಂಗ್ರೆಸ್ ಸರ್ಕಾರ ಹೊಸ ಉಪಾಯವೊಂದಕ್ಕೆ ಶರಣಾಗಿದೆ. ಅದೆಂದರೆ ಮೊಟ್ಟೆ ತಿನ್ನುವ ಮಕ್ಕಳ ಮನೆಗಳಿಗೇ ಮೊಟ್ಟೆ ಸರಬರಾಜು ಮಾಡುವುದು.
ಎಲ್ಲ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಮಿತಿಗಳ ಸಭೆ ಕರೆದು ಮೊಟ್ಟೆ ಹಂಚಿಕೆ ಕುರಿತು ಪೋಷಕರೊಂದಿಗೆ ಸಮಾಲೋಚಿಸಬೇಕು. ಬಹುಪಾಲು ಪೋಷಕರು ಶಾಲೆಯಲ್ಲಿ ಮೊಟ್ಟೆ ಹಂಚಿಕೆಗೆ ವಿರೋಧ ವ್ಯಕ್ತ ಮಾಡಿದಲ್ಲಿ, ಮೊಟ್ಟೆ ತಿನ್ನುವ ಮಕ್ಕಳನ್ನು ಗುರುತಿಸಿ ಅವರ ಮನೆಗಳಿಗೆ ಮೊಟ್ಟೆ ತಲುಪಿಸುವ ವ್ಯವಸ್ಥೆ ಆಗಬೇಕು ಎಂದು ಛತ್ತೀಸಗಢ ಸರ್ಕಾರ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದೆ.
ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಮೊಟ್ಟೆ ಇಲ್ಲವೇ ಹಾಲಿನಂತಹ ಪ್ರೊಟೀನುಯುಕ್ತ ಆಹಾರ ನೀಡಲಾಗುತ್ತಿದೆ. ಸಸ್ಯಾಹಾರಿ ಕುಟುಂಬಗಳ ಮಕ್ಕಳೂ ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದು, ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಾಗುತ್ತಿದೆ. ಮೊಟ್ಟೆ ಬೇಯಿಸಲು ಪ್ರತ್ಯೇಕ ವ್ಯವಸ್ಥೆ ಆಗತಕ್ಕದ್ದು. ಮೊಟ್ಟೆ ಬೇಡವೆನ್ನುವ ಮಕ್ಕಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಪ್ರತ್ಯೇಕವಾಗಿ ಕೂರಿಸಿ ಬಡಿಸಬೇಕು. ಅವರಿಗೆ ಸೋಯಾ ಹಾಲು ಇಲ್ಲವೇ ಬಾಳೆ ಹಣ್ಣಿನಂತಹ ಪರ್ಯಾಯ ಉಣಿಸನ್ನು ನೀಡತಕ್ಕದ್ದು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿಂದೆ 15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈ ಬಿಟ್ಟಿತ್ತು. ಕಳೆದ ಜನವರಿಯಲ್ಲಿ ಅಧಿಕಾರಕ್ಕೆ ಬಂದ ಭೂಪೇಶ್ ಭಾಗೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಕ್ಕಳಿಗೆ ಪುನಃ ಮೊಟ್ಟೆ ಬಡಿಸಲಾರಂಭಿಸಿತು. ಸಸ್ಯಾಹಾರಿ ಮಕ್ಕಳಿಗೆ ಬಾಳೆ ಹಣ್ಣಿನ ಆಯ್ಕೆ ನೀಡಲಾಯಿತು.
ರಾಜ್ಯದಲ್ಲಿ 14 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳ ಪೈಕಿ ಶೇ.37ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಬುಡಕಟ್ಟು ಜನಾಂಗಗಳಿಗೆ ಸೇರಿದ ಇದೇ ವಯಸ್ಸಿನ ಮಕ್ಕಳಲ್ಲಿ ಅಪೌಷ್ಟಿಕತೆಯ ಪ್ರಮಾಣ ಶೇ.44ರಷ್ಟು ಎಂದು ಅಧ್ಯಯನಗಳು ಹೇಳಿವೆ.
ಕೆಲ ವಾರಗಳ ಹಿಂದೆ ಸಂತ ಕಬೀರದಾಸನ ಅನುಯಾಯಿಗಳಾದ ಕಬೀರ ಪಂಥಿಗಳು ಮೊಟ್ಟೆ ನೀಡಿಕೆಯನ್ನು ವಿರೋಧಿಸಿದ್ದರು. ರಾಜ್ಯ ಬಿಜೆಪಿ ಈ ವಿರೋಧವನ್ನು ಬೆಂಬಲಿಸಿತ್ತು. ಸರ್ಕಾರವು ಮಕ್ಕಳನ್ನು ಬಲವಂತವಾಗಿ ಮಾಂಸಾಹಾರಿಗಳನ್ನಾಗಿ ಮಾಡುತ್ತಿದೆ ಎಂದು ಆಪಾದಿಸಿತ್ತು.
ಮೊಟ್ಟೆ ಬೇಡದ ಮಕ್ಕಳಿಗೆ ಹಾಲು ಹಣ್ಣು ನೀಡಲಿ, ಆದರೆ ಮೊಟ್ಟೆಯನ್ನು ನಿಲ್ಲಿಸಕೂಡದು ಎಂದು 30ಕ್ಕೂ ಹೆಚ್ಚು ಸ್ವಯಂಸೇವಾ ಸಂಸ್ಥೆಗಳು ರಾಜ್ಯ ಸರ್ಕಾರವನ್ನು ಆಗ್ರಹಪಡಿಸಿದ್ದವು.

Click here Support Free Press and Independent Journalism

Pratidhvani
www.pratidhvani.com