ಹಿಂದೀ ಮಂದಿ : ದಕ್ಷಿಣಕ್ಕೊಂದು ಉತ್ತರದ ಕಿಟಕಿ
ಹಿಂದಿ-ಮಂದಿ

ಹಿಂದೀ ಮಂದಿ : ದಕ್ಷಿಣಕ್ಕೊಂದು ಉತ್ತರದ ಕಿಟಕಿ

ಪಂಜಾಬಿನ ಬಠಿಂಡಾದಿಂದ ರಾಜಸ್ಥಾನದ ಬಿಕಾನೇರ್‌ಗೆ ಸಂಚರಿಸುವ ‘ಕ್ಯಾನ್ಸರ್ ಎಕ್ಸ್‌ಪ್ರೆಸ್‌’, ಗುಜರಾತಿನ ದಲಿತರ ಕುದುರೆ ಕತೆ, ಮಹಿಳೆಯರಿಗೆ ಬಾಗಿಲು ತೆರೆದ ಕೊಲ್ಕತ್ತಾ ಮಸೀದಿಗಳು ಈ ಬಾರಿಯ ‘ಹಿಂದೀ ಮಂದಿ’ ವಿಶೇಷ.

ಡಿ ಉಮಾಪತಿ

ಹೀಗೊಂದು ‘ಕ್ಯಾನ್ಸರ್ ಎಕ್ಸ್‌ಪ್ರೆಸ್’ನ ವ್ಯಥೆಯ ಕತೆ

ಪಂಜಾಬಿನ ಬಠಿಂಡಾದಿಂದ ರಾತ್ರಿ ಹೊರಟು 326 ಕಿಮೀ ಕ್ರಮಿಸಿದ ನಂತರ ಬೆಳಗಿನ ಜಾವ ರಾಜಸ್ಥಾನದ ಬಿಕಾನೇರ್ ತಲುಪುವ ರೈಲುಗಾಡಿಯ ಅಧಿಕೃತ ಹೆಸರು ಅಬೋಹರ್-ಜೋಧಪುರ್ ಎಕ್ಸ್ ಪ್ರೆಸ್. ಆದರೆ ಜನರು ‘ಕ್ಯಾನ್ಸರ್ ಎಕ್ಸ್‌ಪ್ರೆಸ್’ ಎಂದೇ ಕರೆಯುತ್ತಾರೆ. ಸಾವಿರಾರು ಮಂದಿ ಕ್ಯಾನ್ಸರ್ ರೋಗಿಗಳ ಸಾವು ಬದುಕುಗಳ ರೇಖೆ ಈ ರೈಲುಗಾಡಿ. ಉತ್ತರ ಭಾರತದಿಂದ ಸಾವಿರಾರು ಮಂದಿ ಕ್ಯಾನ್ಸರ್ ಚಿಕಿತ್ಸೆಗೆಂದು ಬಿಕಾನೇರ್‌ಗೆ ಬರುತ್ತಾರೆ. ಆದರೆ ಅತಿ ಹೆಚ್ಚು ಸಂಖ್ಯೆಯಲ್ಲಿ ಬರುವವರು ಕೃಷಿಭೂಮಿ ಪಂಜಾಬಿನ ಜನ. ಉಸಿರು ಉಳಿಸಿಕೊಳ್ಳುವ ಆಸೆ ಹೊತ್ತ ಕ್ಯಾನ್ಸರ್ ಪೀಡಿತರ ಮರಣದೊಂದಿಗೆ ಹೋರಾಡಲು ಆಚಾರ್ಯ ತುಳಸಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಮತ್ತು ಸಂಶೋಧನಾ ಕೇಂದ್ರದತ್ತ ಸಾಗುತ್ತಾರೆ. ಚಿಕಿತ್ಸೆಯ ವೆಚ್ಚ ಬಡ ಜೇಬುಗಳಿಗೂ ಎಟುಕುವ ಸರ್ಕಾರಿ ಆಸ್ಪತ್ರೆ ಅದು. ಹಣವುಳ್ಳವರು ದೆಹಲಿ, ಮುಂಬಯಿಗೆ ತೆರಳಿ ಚಿಕಿತ್ಸೆ ಪಡೆಯುತ್ತಾರೆ. ಚಂಡೀಗಢ ಮತ್ತು ಫರೀದಕೋಟ್ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ದುಬಾರಿ ಚಿಕಿತ್ಸೆ ಬಡರೈತರ ಕೈಗೆಟಕುವುದಿಲ್ಲ.

ರಾತ್ರಿ ಈ ರೈಲುಗಾಡಿ ಏರಲು ಕನಿಷ್ಠ 70ರಿಂದ 100 ಮಂದಿ ಪ್ಲಾಟ್‌ಫಾರ್ಮ್ ಮೇಲೆ ಕಾದಿರುತ್ತಾರೆ. ದಕ್ಷಿಣ ಪಂಜಾಬಿನ ಮಾಲ್ವಾ ಸೀಮೆಯ (ಬಠಿಂಡಾ, ಫರೀದಕೋಟ್, ಮೋಗ, ಮುಕ್ತಸರ್, ಫಿರೋಜಪುರ್, ಸಂಗ್ರೂರ್ ಹಾಗೂ ಮನ್ಸಾ ಜಿಲ್ಲೆಗಳು) ಸಣ್ಣ ರೈತರು ಕೃಷಿ ಕೂಲಿಕಾರರು ಇವರು. ರೋಗಿಗಳಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ. ಅವರ ಸಹಾಯಕರು ರಿಯಾಯಿತಿ ದರದಲ್ಲಿ ಪಯಣಿಸಬಹುದು.

ಹಚ್ಚಹಸಿರನ್ನೇ ಹೊದ್ದು ಮಲಗಿರುವ ಹೊಲಗಳು ಹತ್ತಾರು ವರ್ಷ ಕಾಲ ಬೇಕಾಬಿಟ್ಟಿ ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರ ಸುರಿದ ನಂಜಿನ ಮಡುಗಳು. ದೇಶದ ಇತರೆಡೆ ಹೆಕ್ಟೇರಿಗೆ ಅರ್ಧ ಕೇಜಿ ಕೀಟನಾಶಕ ಬಳಸಿದರೆ, ಪಂಜಾಬಿನಲ್ಲಿ ಅದರ ಪ್ರಮಾಣ ಹತ್ತಿರ ಹತ್ತಿರ ಒಂದು ಕೇಜಿ. ರಸಗೊಬ್ಬರ ಬಳಕೆಯೂ ಅಷ್ಟೇ. ಹೆಕ್ಟೇರಿಗೆ 380 ಕೇಜಿ. ದೇಶದಲ್ಲೇ ಅತಿ ಹೆಚ್ಚು.ರಸಗೊಬ್ಬರ ಬಳಕೆಯ ರಾಷ್ಟ್ರೀಯ ಸರಾಸರಿ 131 ಕೇಜಿ. ವರ್ಷಗಳ ಹಿಂದೆ ಪಂಜಾಬಿನಲ್ಲಿ ಚುನಾವಣಾ ಪ್ರವಾಸ ಮಾಡಿದ್ದ ಈ ವರದಿಗಾರನಿಗೆ ಪಂಜಾಬಿನ ಹಸಿರು ಹೊಲಗಳು, ನಡುವೆ ತಲೆ ಎತ್ತಿದ್ದ ಬಂಗಲೆಗಳು, ಅವುಗಳ ತಾರಸಿಯ ಮೇಲೆ ಸಿಮೆಂಟಿನಲ್ಲಿ ರಚಿಸಿ ನಿಲ್ಲಿಸಿದ್ದ ದೊಡ್ಡ ದೊಡ್ಡ ಗರುಡ ಪಕ್ಷಿಗಳ ಪ್ರತಿಮೆಗಳು, ಸೂರ್ಯಾಸ್ತದ ಬಂಗಾರದ ಬೆಳಕಿನಲ್ಲಿ ಹೊಲಗಳ ಹಸಿರು ರಾಶಿ ಹೊನ್ನಿನ ಬಣ್ಣ ತಳೆಯುತ್ತಿದ್ದ ಸೊಬಗು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಆದರ ಜೊತೆಗೆ ಅಷ್ಟೇ ಕಟುವಾದ ವಾಕರಿಕೆ ತರಿಸಿ ರಪ್ಪನೆ ಬಾರಿಸುವ ಕಟು ದುರ್ನಾತ ನೆನೆದರೆ ಮೂಗು ಈಗಲೂ ಸಿಂಡರಿಸಿ ಸೊಟ್ಟಗಾಗುತ್ತದೆ.

ಮಾಲ್ವಾ ಸೀಮೆಯ ಮುಖ್ಯ ಬೆಳೆ ಹತ್ತಿ. ರೋಗಗಳು ಹೆಚ್ಚು ಈ ಬೆಳೆಗೆ. ಕನಿಷ್ಠ ಪಕ್ಷ ಹದಿನೈದು ಬಗೆಯ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತಿದೆ. ಈ ಪೈಕಿ ಏಳು ಕ್ಯಾನ್ಸರ್ ಕಾರಕ. ಖಾಲಿ ಕೀಟನಾಶಕ ಡಬ್ಬಗಳಲ್ಲಿ ರೈತರು ನೀರು ಆಹಾರ ಸಂಗ್ರಹಿಸುವುದು ಉಂಟು. ಜೊತೆಗೆ ನಂಜಿನಿಂದ ಮಲಿನಗೊಂಡ ಜಲ. ಮೂರರಿಂದ ಐದು ಸಾವಿರ ಜನಸಂಖ್ಯೆ ಉಳ್ಳ ಪ್ರತಿ ಹಳ್ಳಿಯಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಕನಿಷ್ಠ 30 ಮಂದಿ. ಮಹಿಳೆಯರದೇ ದೊಡ್ಡ ಸಂಖ್ಯೆ. ಗರ್ಭಸಂಚಿ ಇಲ್ಲವೇ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚು. ಕ್ಯಾನ್ಸರ್ ಮಾತ್ರವಲ್ಲದೆ ಸಂತಾನೋತ್ಪತ್ತಿ ಸ್ವಾಸ್ಥ್ಯವೂ ಅಪಾಯಕ್ಕೆ ಸಿಲುಕಿದೆ. ವೀರ್ಯಾಣುಗಳು ತಗ್ಗುತ್ತಿವೆ, ಗರ್ಭಪಾತಗಳಾಗುತ್ತಿವೆ, ಅವಧಿಗೆ ಮುನ್ನವೇ ಹೆರಿಗೆಗಳಾಗುತ್ತಿವೆ. ಭಾರಿ ಇಳುವರಿಯ ಬಿತ್ತನೆ ಬೀಜ- ರಾಸಾಯನಿಕ ಗೊಬ್ಬರಗಳು- ಅತಿಯಾದ ಕೀಟನಾಶಕಗಳು- ಅಪಾರ ನೀರು ಬಳಕೆಯ 1970ರ ಹಸಿರು ಕ್ರಾಂತಿಗೆ ರೈತರು ತೆರುತ್ತಿರುವ ಬೆಲೆಯಿದು. ಮೂರು ವರ್ಷಗಳ ಹಿಂದಿನ ಅಂಕಿ ಅಂಶಗಳ ಪ್ರಕಾರ ಪಂಜಾಬಿನಲ್ಲಿ ನಿತ್ಯ 18 ಮಂದಿಯನ್ನು ಕ್ಯಾನ್ಸರ್ ಕಬಳಿಸುತ್ತಿದೆ. ಬೆಚ್ಚಿ ಬೀಳಿಸುವ ಸಂಖ್ಯೆ ಏರುಮುಖವೇ ವಿನಾ ಇಳಿವ ಸೂಚನೆಗಳಿಲ್ಲ.

ಕುದುರೆ ಏರಿದ ದಲಿತರು ಮತ್ತು ಮೇಲ್ಜಾತಿಗಳ ಅಸಹನೆ

ಗುಜರಾತಿನ ಭಾವನಗರ ಜಿಲ್ಲೆಯ ಉಮರ್ಲಾ ತಾಲ್ಲೂಕಿನ ಟಿಂಬಿ ಗ್ರಾಮದ ಪ್ರದೀಪ್ ಕಾಲೂಭಾಯಿ ರಾಠೋಡ ಎಂಬ ದಲಿತ ಯುವಕನನ್ನು ಸ್ಥಳೀಯ ಕ್ಷತ್ರಿಯರು 2018ರ ಏಪ್ರಿಲ್ ನಲ್ಲಿ ಕೊಂದು ಹಾಕಿದ್ದರು. ಕೂಡದು ಎಂಬ ಕ್ಷತ್ರಿಯ ಆಣತಿಯನ್ನು ಉಲ್ಲಂಘಿಸಿ ಕುದುರೆ ಸವಾರಿ ಮಾಡಿದ್ದು ಪ್ರದೀಪನ ಅಪರಾಧ. ಟಿಂಬಿಯ ದಲಿತರ ಪೈಕಿ ತುಂಡು ಜಮೀನು ಹೊಂದಿದ್ದ ಕುಟುಂಬ ಕಾಲೂಬಾಯಿ ರಾಠೋಡನದು. ಕಿರಿಯ ಮಗ ಪ್ರದೀಪ ಕುದುರೆ ಬೇಡಿದ. ಸುತ್ತಮುತ್ತಲ ಸೀಮೆಯಲ್ಲಿ ದಲಿತರು ಕುದುರೆ ಏರುವುದು ಸಾಮಾಜಿಕವಾಗಿ ನಿಷಿದ್ಧ. ಮುದ್ದಿನ ಮಗ ಬಯಸಿದ್ದು ಇಲ್ಲವೆನ್ನಲಾರದಾದ ತಂದೆ. ಪ್ರದೀಪನ ಕುದುರೆ ಸವಾರಿ ಕ್ಷತ್ರಿಯರ ಕಣ್ಣುರಿಸಿತು. ಎಚ್ಚರಿಕೆ ನೀಡಿದರು. ಕುದುರೆ ಮಾರಿ ಮೋಟರ್ ಸೈಕಲ್ ಕೊಡಿಸುತ್ತೇನೆಂದ ತಂದೆಯ ಮಾತಿಗೆ ಮಗ ಒಪ್ಪದಾದ. ನಿರ್ವಾಹವಿಲ್ಲದೆ ತೆಪ್ಪಗಾದ ತಂದೆ. ಕೆಲವೇ ದಿನಗಳಲ್ಲಿ ಮಗನ ಹೆಣಕ್ಕೆ ಹೆಗಲು ಕೊಡಬೇಕಾಯಿತು.

ವಿವಾಹಗಳಲ್ಲಿ ಮಾಂಗಲ್ಯಧಾರಣೆಗೆ ಮುನ್ನ ಮದುಮಗ ಕುದುರೆಯೇರಿ ಮೆರವಣಿಗೆಯಲ್ಲಿ ಬರುವುದು ಉತ್ತರ ಭಾರತದಲ್ಲಿ ಹಳೆಯ ಪದ್ಧತಿ. ಈ ಪದ್ಥತಿಯಲ್ಲಿ ಅಡಗಿರುವ ಪುರುಷಾಧಿಪತ್ಯ ಬೇರೆಯದೇ ಚರ್ಚೆಯ ಸಂಗತಿ. ದಲಿತ ವಿವಾಹಗಳಲ್ಲಿ ಮದುಮಗ ಕುದುರೆ ಏರುವಂತಿಲ್ಲ. ಅಧಿಕಾರ-ಪ್ರತಿಷ್ಠೆ ಹಾಗೂ ಸಂಪತ್ತಿನ ಸಂಕೇತವಾದ ಕುದುರೆ ಸವಾರಿಯನ್ನು ದಲಿತ ಜಾತಿಗಳೊಂದಿಗೆ ಹಂಚಿಕೊಳ್ಳಲು ಮೇಲ್ಜಾತಿಗಳು ಈಗಲೂ ತಯಾರಿಲ್ಲ. ಉತ್ತರಪ್ರದೇಶ, ರಾಜಸ್ತಾನ, ಗುಜರಾತ್, ಹಿಮಾಚಲಪ್ರದೇಶ, ಮಧ್ಯಪ್ರದೇಶ ಈ ದಬ್ಬಾಳಿಕೆ ಮತ್ತು ಘರ್ಷಣೆಗೆ ಸಾಕ್ಷಿಯಾಗತೊಡಗಿವೆ. ಮಧ್ಯಪ್ರದೇಶವೊಂದರಲ್ಲೇ ದಲಿತ ವಿವಾಹಗಳಲ್ಲಿ ಕುದುರೆ ಸವಾರಿಯನ್ನು ತಡೆದ 38 ದೂರುಗಳು ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿವೆ. ಕಳೆದ ವರ್ಷ ಮೇಲ್ಜಾತಿಗಳು ಬೆದರಿಕೆಯ ನಂತರ ದಲಿತ ಯುವಕನೊಬ್ಬ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದ. ತನ್ನ ಮದುವೆಯಲ್ಲಿ ಕುದುರೆ ಏರಿ ದಿಬ್ಬಣ ಹೊರಡಲು ರಕ್ಷಣೆ ನೀಡಬೇಕೆಂಬುದು ಆತನ ಅಹವಾಲು. ನ್ಯಾಯಾಲಯ ಆತನ ಹಕ್ಕನ್ನು ಎತ್ತಿ ಹಿಡಿದ ನಂತರ ಪೊಲೀಸ್ ರಕ್ಷಣೆಯಲ್ಲಿ ಆತನ ಬಯಕೆಯಂತೆ ವಿವಾಹ ಜರುಗಿತು. ಕುದುರೆಯೇರಿದ ದಲಿತ ಮದುಮಕ್ಕಳು ಮೇಲ್ಜಾತಿಗಳ ಕಲ್ಲು ತೂರಾಟ ದಾಳಿಯಿಂದ ತಲೆಗೆ ಏಟು ತಗುಲದಂತೆ ಹೆಲ್ಮೆಟ್ ಧರಿಸುವ ಪ್ರಕರಣಗಳಿಗೆ ಲೆಕ್ಕವಿಲ್ಲ. ಪ್ರಬಲ ಜಾತಿಗಳ ನೂರಾರು ವರ್ಷಗಳ ಯಜಮಾನಿಕೆಯನ್ನು ಕೆಳಜಾತಿಗಳು ಈಗಲೂ ಪ್ರಶ್ನಿಸುವ ಸ್ಥಿತಿಯಲ್ಲಿ ಇಲ್ಲ. ಆದರೆ ದಲಿತ ಜಾತಿಗಳ ತಗ್ಗಿದ ತಲೆ ತುಸುವೇ ಮೇಲೇಳುವುದನ್ನೂ ಮೇಲ್ಜಾತಿಗಳು ಸಹಿಸುತ್ತಿಲ್ಲ. ಬೆದರಿಕೆ, ಸಾಮಾಜಿಕ ಬಹಿಷ್ಕಾರ, ನಗದು ರೂಪದ ಜುಲ್ಮಾನೆ, ದೈಹಿಕ ಹಲ್ಲೆ, ಹತ್ಯೆಯಂತಹ ನಾನಾ ಅಸ್ತ್ರಗಳು ಅವುಗಳ ಬತ್ತಳಿಕೆಯಿಂದ ಹೊರಬೀಳತೊಡಗಿವೆ. ಉತ್ತರ ಗುಜರಾತಿನ ಹಲವಾರು ಜಿಲ್ಲೆಗಳಲ್ಲಿ ಇತ್ತೀಚೆಗೆ ಉತ್ತರ ಗುಜರಾತಿನ ಹಲವು ಜಿಲ್ಲೆಗಳಲ್ಲಿ ಪಾಟೀದಾರರು, ಕ್ಷತ್ರಿಯರು ಮತ್ತಿತರೆ ಮೇಲ್ಜಾತಿಗಳವರು ದಲಿತರ ಕುದುರೆಸವಾರಿ ದಿಬ್ಬಣವನ್ನು ಅಡ್ಡಗಟ್ಟಿರುವ ಹತ್ತಾರು ಪ್ರಕರಣಗಳು ಜರುಗಿವೆ.

ಇಪ್ಪತ್ತು ದಿನಗಳ ಹಿಂದೆ ಉತ್ತರ ಗುಜರಾತಿನ ಮೊಡಾಸ ತಾಲ್ಲೂಕಿನ ಖಂಭೀಸರದಲ್ಲಿ ದಲಿತ ಮದುಮಗನ ಕುದುರೆ ಸವಾರಿ ದಿಬ್ಬಣದ ಹಾದಿಯನ್ನು ಪ್ರಬಲ ಜಾತಿಯಾದ ಪಾಟೀದಾರರು ಅಡ್ಡಗಟ್ಟಿದರು. ಮೆರವಣಿಗೆ ರಸ್ತೆಯಲ್ಲಿ ಅಡ್ಡ ಕುಳಿತು ದೇವರ ಪಟಗಳನ್ನಿಟ್ಟುಕೊಂಡು ಗಂಟೆ ಜಾಗಟೆ ಹಿಡಿದು ಭಜನೆ ಮಾಡಿದರು ಪಾಟೀದಾರರ ನೂರಾರು ಹೆಣ್ಣುಮಕ್ಕಳು. ಆ ರಸ್ತೆ ಬಿಟ್ಟು ಮತ್ತೊಂದು ರಸ್ತೆಗೆ ಹೋದರೆ ಅಲ್ಲಿಯೂ, ಆನಂತರದ ಮೂರನೆಯ ರಸ್ತೆಯಲ್ಲೂ ಇದೇ ತಂತ್ರ. ತಾಸುಗಟ್ಟಲೆ ಕುದುರೆ ಮೇಲೆ ಕಾದು ಕುಳಿತ ವರನ ಕಡೆಯವರ ಸಹನೆ ನಾಲ್ಕಾರು ತಾಸುಗಳ ನಂತರ ಕೆಟ್ಟಿತು. ಗಂಟಲೇರಿಸಿದರು. ಪಾಟೀದಾರರ ಕಡೆಯಿಂದ ಕಲ್ಲು ತೂರಾಟ. ದಿಬ್ಬಣ ಚೆದುರು ಚೆಲ್ಲಾಪಿಲ್ಲಿಯಾಯಿತು. ಮರುದಿನ ಪೊಲೀಸ್ ರಕ್ಷಣೆಯಲ್ಲಿ ಈ ವಿವಾಹ ಜರುಗಿತು. ಆದರೆ ಕಲ್ಲು ತೂರಾಟದಲ್ಲಿ ಸಾವು ನೋವು ಆಗದಿದ್ದರೂ ದಲಿತರು ಗಾಯಗೊಂಡರು. ಮದುಮಗ ಜಯೇಶನನ್ನು ಹೊತ್ತಿದ್ದ ‘ಯುವರಾಜ’ನೆಂಬ ಬಿಳಿಯ ಬಾಡಿಗೆ ಕುದುರೆಯ ತಲೆಗೆ ಬಿದ್ದ ಕಲ್ಲೇಟು ಎರಡು ಅಂಗುಲ ಆಳದ ಗಾಯ ಉಂಟು ಮಾಡಿತ್ತು. ಅಲಂಕಾರದ ಹೊದಿಕೆಯಡಿಯಲ್ಲಿ ತಾಸುಗಟ್ಟಲೆ ರಕ್ತ ಸೋರಿದ್ದು ಮಾಲೀಕನಿಗೆ ತಡವಾಗಿ ಗಮನಕ್ಕೆ ಬಂತು. ಚಿಕಿತ್ಸೆ ಫಲ ನೀಡಲಿಲ್ಲ. ನಾಲ್ಕು ವರ್ಷದ ‘ಯುವರಾಜ’ ಮೊನ್ನೆ ಸತ್ತು ಹೋದ.

ಈ ದೌರ್ಜನ್ಯಗಳನ್ನು ಪ್ರತಿಭಟಿಸಲು ರಾಜಕೋಟ್ ನಿಂದ 80 ಕಿ.ಮೀ.ದೂರದ ಧೊರಜಿಯಲ್ಲಿ ಸದ್ಯದಲ್ಲೇ ನಡೆಯಲಿರುವ ದಲಿತರ ಸಾಮೂಹಿಕ ವಿವಾಹಗಳಲ್ಲಿ ಹನ್ನೊಂದು ಮಂದಿ ಮದುಮಕ್ಕಳು ಕುದುರೆ ಏರಿ ದಿಬ್ಬಣದಲ್ಲಿ ಬರಲಿದ್ದಾರೆ.

ಉಷ್ಣೋಗ್ರತೆಯಲ್ಲಿ ತತ್ತರಿಸಿದ ಉತ್ತರ

ಮೇ ಕಳೆದು ಜೂನ್ ಕಾಲಿಟ್ಟಿದೆ. ಉತ್ತರ ಭಾರತ ಉಷ್ಣೋಗ್ರತೆಯಲ್ಲಿ ತತ್ತರಿಸುತ್ತಿದೆ. ಡಿಗ್ರಿ ಸೆಂಟಿಗ್ರೇಡ್ ನಲವತ್ತೈದನ್ನು ದಾಟತೊಡಗಿದೆ. ದಿಲ್ಲಿಯ ಅಕ್ಕಪಕ್ಕದ ನೋಯ್ಡಾ, ಘಾಜಿಯಾಬಾದ್ ನಲ್ಲಿ 46 ಡಿಗ್ರಿ ಸೆಂಟಿಗ್ರೇಡು. ರಾಜಸ್ತಾನದ ಗಂಗಾನಗರದ ಚುರುವಿನಲ್ಲಿ 50.8 ಡಿಗ್ರಿ! ಉಷ್ಣಮಾರುತಗಳು (ಹೀಟ್ ವೇವ್) ಬೀಸತೊಡಗಿವೆಯೆಂದು ಘೋಷಿಸಿರುವ ಹವಾಮಾನ ಇಲಾಖೆ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜನರಿಗೆ ಸೂಚನೆ ನೀಡಿದೆ. ಚಳಿಗಾಲ ಮತ್ತು ಬೇಸಿಗೆ ಕಾಲ ಎರಡೂ ಅತಿರೇಕ ಇಲ್ಲಿ. ಶೀತಮಾರುತ ಮತ್ತು ಉಷ್ಣಮಾರುತಗಳ ಹೊಡೆತದಿಂದ ಉಳ್ಳವರು ಪಾರಾಗುತ್ತಾರೆ. ಸಂಕಟಕ್ಕೆ ಸಿಲುಕುವುದು ಕಷ್ಟ ಕೂಲಿ ಮಾಡಿ ದಿನ ನಿತ್ಯ ಬದುಕು ಸಾವಿನೊಂದಿಗೆ ಸೆಣಸಾಡುವ ದೀನ ದಲಿತ ಜನಸಮುದಾಯವೇ. ಪಾರಾಗುವ ಸಾಧನ ಸಂಪನ್ಮೂಲಗಳು ಅವರ ಬಳಿ ಇಲ್ಲ. ಅವರ ಸಾವು ನೋವುಗಳು ದಿನಪತ್ರಿಕೆಗಳ ಒಳಪುಟಗಳ ಯಾವುದೋ ಮೂಲೆಯಲ್ಲಿ ಸಣ್ಣ ಅಕ್ಷರದ ತಲೆಬರೆಹದ ಚುಟುಕು ಸುದ್ದಿಯಾಗುವುದು ವರ್ಷಂಪ್ರತಿಯ ವಾಡಿಕೆ.

ಧಗೆ ತಾಳಲಾರದೆ ಆಕಾಶದಲ್ಲಿ ಹಾರಾಡುವ ಪಕ್ಷಿಗಳು ನೆಲಕ್ಕೆ ಬಿದ್ದು ಪ್ರಾಣ ತೊರೆಯುವುದು ಇಲ್ಲಿ ಸರ್ವೇ ಸಾಮಾನ್ಯ. ದೆಹಲಿಯ ಪ್ರಾಣಿ ಸಂಗ್ರಹಾಲಯದಲ್ಲಿ ಬಿಸಿಲ ಝಳದಿಂದ ಖಗ- ಮೃಗಗಳನ್ನು ಕಾಪಾಡಲು ವಿಶೇಷ ಕಾಳಜಿ ವಹಿಸಲಾಗುತ್ತದೆ. ದಿನಕ್ಕೆ ಮೂರು ಬಾರಿ ಕೊಳವೆಯ ಮೂಲಕ ಸಾಮೂಹಿಕ ನೀರು ಸಿಂಪಡಿಕೆ ಸ್ನಾನ, ಗ್ಲೂಕೋಸ್, ಓ.ಆರ್.ಎಸ್. ನೀರು ಕುಡಿಸುವುದು, ಭಾರೀ ಕೂಲರ್ ಗಳು, ತೂಫಾನು ಫ್ಯಾನುಗಳ ಅಳವಡಿಕೆ, ಆನೆಗಳಿಗೆ ಮಣ್ಣು ರಾಡಿಯ ಸ್ನಾನ, ಶಾಖಾಹಾರಿಗಳಿಗೆ ಹಣ್ಣು, ಹಸಿರು ಹುಲ್ಲು, ಖಿಚಡಿಯಂತಹ ಲಘು ಆಹಾರ, ಮಾಂಸಾಹಾರಿಗಳಿಗೆ ತಗ್ಗಿದ ಪ್ರಮಾಣದಲ್ಲಿ ಕೆಂಪು ಮಾಂಸದ ಉಣಿಸು ಇತರೆ ಇತ್ಯಾದಿ.

ಮಹಿಳೆಯರಿಗೆ ಬಾಗಿಲು ತೆರೆದ ಮಸೀದಿಗಳು

ಕೊಲ್ಕತ್ತಾದ ಎರಡು ಐತಿಹಾಸಿಕ ಮಸೀದಿಗಳು ಮಹಿಳೆಯರ ಪ್ರಾರ್ಥನೆಗೆ ಬಾಗಿಲು ತೆರೆದಿವೆ. ನಾಖೋಡ ಮಸೀದಿ ಮತ್ತು ಟಿಪ್ಪು ಸುಲ್ತಾನ್ ಮಸೀದಿಗಳಲ್ಲಿ ಮಹಿಳೆಯರ ಪ್ರಾರ್ಥನೆಗೆಂದು ಪ್ರತ್ಯೇಕ ಹಜಾರಗಳು ಮತ್ತು ಕೈಕಾಲು ಮುಖ ತೊಳೆವ ಜಾಗಗಳು, ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಈ ಮೊದಲೂ ಮಹಿಳೆಯರು ಬಂದು ಮಸೀದಿಯ ಮೂಲೆಯೊಂದರಲ್ಲಿ ನಮಾಜು ಮಾಡುತ್ತಿದ್ದರು. ಈಗ ಪ್ರತ್ಯೇಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎನ್ನುತ್ತಾರೆ ನಾಖೋಡ ಮಸೀದಿಯ ಇಮಾಮ್ ಶಫೀಖ್ ಖಾಸ್ಮಿ. ಶರಿಯಾ ಪ್ರಕಾರ ‘ಪರ್ದಾ’ಗೆ ಅವಕಾಶವಿರುವಲ್ಲಿ ಮಹಿಳೆಯರು ನಮಾಜು ಸಲ್ಲಿಸಬಹುದು. ಪರ್ದಾ ಇಲ್ಲದಿರುವೆಡೆ ಅವಕಾಶ ಇಲ್ಲ. ಮಸೀದಿಗಳಲ್ಲಿ ಈವರೆಗೆ ಈ ಅವಕಾಶ ಇರಲಿಲ್ಲ. ಟಿಪ್ಪು ಸುಲ್ತಾನ್ ಮಸೀದಿಯನ್ನು ಆತನ ಕಿರಿಯ ಮಗ ಘುಲಾಂ ಮಹಮ್ಮದ್ 1842ರಲ್ಲಿ ಕಟ್ಟಿಸಿದ್ದ. ನಾಖೋಡ ಮಸೀದಿಯ ಅಡಿಗಲ್ಲಿರಿಸಿದ್ದು 1926ರಲ್ಲಿ.

Click here Support Free Press and Independent Journalism

Pratidhvani
www.pratidhvani.com